ಬೆಂಗಳೂರು: ಸಿಲಿಕಾನ್ ವ್ಯಾಲಿ, ಭಾರತದ ಸ್ಟಾರ್ಟ್‌ಅಪ್ ರಾಜಧಾನಿ, ಹಸಿರು ನಗರಿ, ಐಟಿ ನಗರಿ ಎಂದೆಲ್ಲಾ ಕರೆಸಿಕೊಳ್ಳುವ ಬೆಂಗಳೂರು, ಇದರ ಜೊತೆಗೆ ಬೆಂಗಳೂರಿನ ಟ್ರಾಫಿಕ್ ಕೂಡ ಆಗಾಗ್ಗೆ ಸದ್ದು ಮಾಡುತ್ತಿರುತ್ತದೆ. ಇದೀಗ ಬೆಂಗಳೂರು ಟ್ರಾಫಿಕ್ ಮತ್ತೊಂದು ಹಂತಕ್ಕೆ ಹೋಗಿದೆ. ರೈಲಿಗೂ ಕೂಡ ಇದೀಗ ಬೆಂಗಳೂರು ಟ್ರಾಫಿಕ್ ಬಿಸಿ ತಟ್ಟಿದ್ದು, ಸದ್ಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ರೈಲಿಗೂ
ಸುಧೀರ್ ಚಕ್ರವರ್ತಿ ಎನ್ನುವ ಇನ್‌ಸ್ಟಾಗ್ರಾಮ್ ಬಳಕೆದಾರರು, ರೈಲ್ವೆ ಕ್ರಾಸಿಂಗ್ ಮೇಲೆ ವಾಹನಗಳು ಸಾಲಾಗಿ ನಿಂತ ಪರಿಣಾಮ ರೈಲು ಕೂಡ ಟ್ರಾಫಿಕ್‌ನಲ್ಲಿ ಸಿಲುಕಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಟ್ರಾಫಿಕ್‌ನಿಂದ ರೈಲಿಗೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದು, ಈ ವಿಡಿಯೋ ಭಾರಿ ವೈರಲ್ ಆಗಿದೆ.
ಬೆಂಗಳೂರಿನ ಮುನ್ನೇಕೊಳಾಲದ ರೈಲ್ವೆ ಕ್ರಾಸಿಂಗ್ ಬಳಿ ಹೆಚ್ಚಿನ ಟ್ರಾಫಿಕ್ ಉಂಟಾಗಿದ್ದರಿಂದ ಈ ಘಟನೆ ನಡೆದಿದೆ. ರೈಲ್ವೆ ಕ್ರಾಸಿಂಗ್ ಮುಚ್ಚದ ಕಾರಣ, ವಾಹನಗಳು ರೈಲ್ವೆ ಹಳಿ ಮೇಲೆ ನಿಂತುಕೊಂಡಿದ್ದವು, ಆ ಸಮಯದಲ್ಲಿ ಅಲ್ಲಿಗೆ ಬಂದ ರೈಲು ಕೂಡ ಅನಿವಾರ್ಯವಾಗಿ ವಾಹನಗಳು ಮುಂದೆ ಸಾಗುವವರೆಗೂ ನಿಲ್ಲಬೇಕಾಯಿತು.
ಇದನ್ನು ಓದಿ : ಮಹಾಲಕ್ಷ್ಮೀ ಕೊಲೆ ಪ್ರಕರಣ: ಹಲವರ ಬೆರಳಚ್ಚು ಗುರುತು ಪತ್ತೆ
ಕೆಲ ಸಮಯದ ನಂತರ ವಾಹನಗಳು ರೈಲ್ವೆ ಕ್ರಾಸಿಂಗ್‌ನಿಂದ ತೆರವಾದ ಮೇಲೆ ರೈಲು ಅಲ್ಲಿಂದ ಮುಂದೆ ಸಾಗಿದೆ. ಇದು ಬೆಂಗಳೂರು ನಗರದಲ್ಲಿ ವಾಹನ ಸವಾರರು ಅನುಭವಿಸುತ್ತಿರುವ ಟ್ರಾಫಿಕ್ ಸಮಸ್ಯೆಗೆ ಸಾಕ್ಷಿ.
ಸುಧೀರ್ ಚಕ್ರವರ್ತಿ ಹಂಚಿಕೊಂಡಿರುವ ವಿಡಿಯೋ ಒಂದೇ ದಿನದಲ್ಲಿ 1 ಮಿಲಿಯನ್‌ಗೂ ಹೆಚ್ಚಿನ ವೀಕ್ಷಣೆ ಕಂಡಿದ್ದು, 60 ಸಾವಿರ ಮಂದಿ ವಿಡಿಯೋ ಲೈಕ್ ಮಾಡಿದ್ದಾರೆ. ಇದಕ್ಕೆ ತರಹೇವಾರಿ ಕಾಮೆಂಟ್‌ಗಳು ಕೂಡ ಬಂದಿದ್ದು, ಹಲವರು ಬೆಂಗಳೂರು ಟ್ರಾಫಿಕ್ ಬಗ್ಗೆ ತಮಾಷೆ ಮಾಡಿದ್ದಾರೆ.
ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದು, ಲೋಕೋ ಪೈಲಟ್‌ಗೆ ರೈಲು ಯಾಕೆ ತಡವಾಯಿತು ಎಂದು ಕೇಳಿದರೆ ಅವರು ಬೆಂಗಳೂರು ಟ್ರಾಫಿಕ್ ಎಂದು ಉತ್ತರ ಕೊಡುತ್ತಾರೆ ಎಂದು ತಮಾಷೆಯಾಗಿ ಹೇಳಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿದ್ದು, ರೈಲು ಟ್ರಾಫಿಕ್‌ನಲ್ಲಿ ಸಿಲುಕಿದ್ದು ಆಗಿದೆ, ಇನ್ನು ವಿಮಾನ ನಿಲ್ದಾಣದ ರನ್‌ವೇ ಒಂದು ಬಾಕಿ ಇದೆ ಎಂದಿದ್ದಾರೆ.
ಈಗ ಲೋಕೋಪೈಲಟ್ ಟ್ರಾಫಿಕ್ ಕಡಿಮೆ ಇರುವು ರೈಲು ಮಾರ್ಗಕ್ಕೆ ಗೂಗಲ್ ಮ್ಯಾಪ್‌ನಲ್ಲಿ ಹುಡುಕಾಟ ನಡೆಸುತ್ತಿರಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮುನ್ನೇಕೊಳಾಲ ರೈಲ್ವೆ ಕ್ರಾಸಿಂಗ್ ಪ್ರದೇಶದಲ್ಲಿ ದಿನೇ ದಿನೇ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಬಳಕೆದಾರರು ಆಗ್ರಹಿಸಿದ್ದಾರೆ.
ಇದನ್ನು ನೋಡಿ : ವೈರಲ್ ವಿಡಿಯೋ | ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಲುಕಿದ ರೈಲು!