ಲಂಡನ್: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಯೂರೋಕಪ್ ಫೈನಲ್ ಪ್ರವೇಶಿಸಿದ ಇಂಗ್ಲೇಂಡ್ ತಂಡವು ಡೆನ್ಮಾರ್ಕ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿದೆ. 1966ರ ಫಿಫಾ ವಿಶ್ವಕಪ್ ಗೆಲುವಿನ ಬಳಿಕ ಇಂಗ್ಲೆಂಡ್ ಕಾಣುತ್ತಿರುವ ಪ್ರತಿಷ್ಠಿತ ಫುಟ್‌ಬಾಲ್ ಕೂಟದ ಮೊದಲ ಫೈನಲ್ ಇದೆಂಬುದು ವಿಶೇಷ.
ವೆಂಬ್ಲೆಯಲ್ಲಿ ನಡೆದ ರೋಚಕ ಸೆಮಿಫೈನಲ್ ಪಂದ್ಯದ ಗೋಲುಗಳ ಅಂತರವನ್ನು 1-1 ರಂತೆ ಸಮಬಲ ಹೋರಾಟದ ನಂತರ ಉಭಯ ತಂಡಗಳಿಂದ ಆಕ್ರಮಣಕಾರಿ ಆಟ ಮೂಡಿಬಂದಿದ್ದರೂ ಗೋಲು ಗಳಿಸಲು ಸಾಧ್ಯವಾಗಿರಲಿಲ್ಲ. ನಂತರ ಹೆಚ್ಚುವರಿ ಸಮಯದಲ್ಲಿ ಸಿಕ್ಕ ಪೆನಾಲ್ಟಿ ಶೂಟೌಟ್ ಅನ್ನು ಇಂಗ್ಲೆಂಡ್ ನಾಯಕ ಹ್ಯಾರಿ ಕೇನ್ ಗೋಲಾಗಿ ಪರಿವರ್ತಿಸುವ ಮೂಲಕ 2-1 ಅಂತರದಿಂದ ರೋಚಕ ಜಯ ತಂದುಕೊಟ್ಟರು.
ಇದನ್ನು ಓದಿ: ಯೂರೋ ಕಪ್ ಫುಟ್ಬಾಲ್: ಸೆಮಿಫೈನಲ್ ಪ್ರವೇಶಿಸಿದ ಇಟಲಿ ಮತ್ತು ಸ್ಪೇನ್
ಪಂದ್ಯದ ಆರಂಭದ 30ನೇ ನಿಮಿಷದಲ್ಲಿ ಸಿಕ್ಕ ಫ್ರೀಕಿಕ್ ಅನ್ನು ಅದ್ಭುತ ಗೋಲ್ ಹೊಡೆಯುವ ಮೂಲಕ ಮಿಕೆಲ್ ಡಮ್ಸ್‌ಗಾರ್ಡ್ ಡೆನ್ಮಾರ್ಕ್ಗೆ ಆರಂಭಿಕ ಯಶಸ್ಸು ತಂದುಕೊಟ್ಟರು. ಇದಾದ ಬಳಿಕ ಸತತವಾಗಿ ಡೆನ್ಮಾರ್ಕ್ ಗೋಲಿನತ್ತ ಮುನ್ನುಗ್ಗುತ್ತಿದ್ದರೂ ಇಂಗ್ಲೆಂಡ್ ಆಟಗಾರರು ಸತತವಾಗಿ ತಡೆವೊಡ್ಡುತ್ತಿದ್ದರು.
ವಿರಾಮಕ್ಕೆ ಮುನ್ನ ಅಂದರೆ 39ನೇ ನಿಮಿಷದಲ್ಲಿ ಅತ್ಯುತ್ತಮ ಪಾಸ್‌ವೊಂದನ್ನು ಸೈಮನ್ ಕೇರ್ ಹೊಡೆದ ಗೋಲಿನಿಂದ ಉಬಯ ತಂಡಗಳು ಸಮಬಲವನ್ನು ಸಾಧಿಸಿತು. ಮೂರು ವರ್ಷಗಳ ಹಿಂದೆ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದಂತೆ ಇಲ್ಲೂ ಎದುರಾಗಿದ್ದ ಸೋಲಿನ ಅಪಾಯವನ್ನು ಡಮ್ಸ್‌ಗಾರ್ಡ್ ಯಶಸ್ವಿಯಾಗಿ ನಿವಾರಿಸಿದರು.
ಆದರೆ ಇದೀಗ ಪೆನಾಲ್ಟಿ ನೀಡಲಾದ ತೀರ್ಪಿನ ಬಗ್ಗೆ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ. 103ನೇ ನಿಮಿಷದಲ್ಲಿ ಡೆನ್ಮಾರ್ಕ್ ಡಿಫೆಂಡರ್ ಜೊವಾಕಿಮ್ ಮಾಹ್ಲೆ ಅವರನ್ನು ಎದುರಿಸಿದ ರಹೀಮ್ ಸ್ಟರ್ಲಿಂಗ್ ಸಮತೋಲನ ಕಳೆದುಕೊಂಡು ಬಿದ್ದರು. ಇತ್ತ ಫೀಲ್ಡ್ ರೆಫರಿ ಪೆನಾಲ್ಟಿ ನೀಡಿದರು. ಆ ಬಳಿಕ ವಿಡಿಯೋ ರೆಫರಿ ಪರಿಶೀಲಿಸಿ ಕೂಡ ಪೆನಾಲ್ಟಿ ನೀಡಿದ್ದರು. ಆದರೆ ವಿಡಿಯೋದಲ್ಲಿ ಡೆನ್ಮಾರ್ಕ್ ಆಟಗಾರರ ತಪ್ಪಿನಿಂದಾಗಿ ಸ್ಟರ್ಲಿಂಗ್ ಬಿದ್ದಿರಲಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಇದಾಗ್ಯೂ ಪೆನಾಲ್ಟಿ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ. ಹೀಗೆ ಸಿಕ್ಕ ಅವಕಾಶದಲ್ಲಿ ಗೋಲು ದಾಖಲಿಸಿ ಇಂಗ್ಲೆಂಡ್ ಜಯ ಸಾಧಿಸಿದೆ ಎಂಬುದು ಡೆನ್ಮಾರ್ಕ್ ಅಭಿಮಾನಿಗಳ ವಾದ.
ಪಂದ್ಯದ ನಂತರ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಕೇನ್ “ಇತಿಹಾಸದಲ್ಲಿ ಮೊದಲ ಬಾರಿಗೆ ನಾವು ಯೂರೋಪಿಯನ್ ಫೈನಲ್ ತಲುಪಿದ್ದೇವೆ. ವೆಂಬ್ಲೆಯಲ್ಲಿ ಇದು ನನ್ನ ಜೀವನದ ಸ್ಮರಣೀಯ ಕ್ಷಣಗಳಲ್ಲೊಂದು” ಎಂದು ಹೇಳಿದರು.
ಇದನ್ನು ಓದಿ: ಯೂರೋ 2020: ಚಾಂಪಿಯನ್ ಪಟ್ಟ ಕಳೆದುಕೊಂಡ ಫ್ರಾನ್ಸ್-ರೋಚಕ ಜಯ ಸಾಧಿಸಿದ ಸ್ವಿಟ್ಜರ್‌ಲ್ಯಾಂಡ್
ಇನ್ನು 1992ರಲ್ಲಿ ಕಪ್ ಗೆದ್ದ ಬಳಿಕ ಮತ್ತೊಮ್ಮೆ ಫೈನಲ್ ಪ್ರವೇಶಿಸುವ ಡೆನ್ಮಾರ್ಕ್ ತಂಡ ಕನಸು ಭಗ್ನಗೊಂಡಿತು. ಮೊದಲ ಪಂದ್ಯದಲ್ಲೇ ಫಿನ್ಲೆಂಡ್ ವಿರುದ್ಧದ ಪಂದ್ಯದ ಬಳಿ ಸ್ಟಾರ್ ಮಿಡ್‌ಫೀಲ್ಡರ್ ಆಟಗಾರ ಕ್ರಿಸ್ಟಿಯನ್ ಎರಿಕ್ಸನ್ ಹೃದಯಾಘಾತಕ್ಕೆ ಒಳಗಾದದ್ದು ತಂಡಕ್ಕೆ ಆಘಾತ ನೀಡಿತ್ತು.
ರವಿವಾರ ಮಧ್ಯರಾತ್ರಿ ಬಳಿಕ ಇದೇ ಅಂಗಳದಲ್ಲಿ ನಡೆಯುವ ಪಂದ್ಯದಲ್ಲಿ ಇಂಗ್ಲೆಂಡ್-ಇಟಲಿ ಮುಖಾಮುಖೀ ಆಗಲಿವೆ. ಇಟಲಿಗೆ ಇದು 4ನೇ ಫೈನಲ್. 1968ರಲ್ಲಿ ಯುಗೋಸ್ಲಾವಿಯಾವನ್ನು ಮಣಿಸಿ ತನ್ನ ಏಕೈಕ ಯೂರೋ ಕಪ್ ಎತ್ತಿದೆ. 2000 ಮತ್ತು 2012ರಲ್ಲಿ ರನ್ನರ್ ಅಪ್‌ಗೆ ತೃಪ್ತಿಪಟ್ಟಿದ್ದವು.