ವಿಜಯಪುರದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಘಟಕ ಸ್ಥಾಪನೆ: ಎಂ ಬಿ ಪಾಟೀಲ

ವಿಜಯಪುರ: ಇಲ್ಲಿನ ಹೊರವಲಯದ ಇಟ್ಟಂಗಿಹಾಳ ಬಳಿ 10 ಎಕರೆ ಜಾಗದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕೆ ಘಟಕ ಆರಂಭಿಸಲಾಗುವುದು. ಇದರಿಂದ 400 ಮಂದಿಗೆ ಉದ್ಯೋಗ ಸಿಗಲಿದೆ. ಜತೆಗೆ ಬೆಂಗಳೂರಿನಲ್ಲೂ ಕೆಎಸ್ಡಿಎಲ್ ಕಾರ್ಖಾನೆ ವಿಸ್ತರಣೆ ಮತ್ತು ಆಧುನೀಕರಣ ನಡೆಯುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ ಶನಿವಾರ ಹೇಳಿದ್ದಾರೆ.

ಇಲ್ಲಿ ಕೆಎಸ್ಡಿಎಲ್ ಏರ್ಪಡಿಸಿರುವ ಸಾಬೂನು ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇದಕ್ಕೂ ಮೊದಲು ನಾಗಠಾಣ ಶಾಸಕ ವಿಠಲ ಕಟಕದೊಂಡ ಅವರು ಮಾತನಾಡಿ, ವಿಜಯಪುರದಲ್ಲಿ ಕೂಡ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕಾ ಘಟಕ ಆರಂಭಿಸಬೇಕು ಎಂದು ಮನವಿ ಮಾಡಿದ್ದರು.

ಇದಕ್ಕೆ ಕೂಡಲೇ ಸ್ಪಂದಿಸಿದ ಸಚಿವರು, ತಮ್ಮ ಯೋಜನೆಯನ್ನು ಪ್ರಕಟಿಸಿದರು. ಶಾಸಕ ಬಸವರಾಜ ಯತ್ನಾಳ ಕೂಡ ಸಚಿವರು ಇದುವರೆಗೆ ತೆಗೆದುಕೊಂಡಿರುವ ಉಪಕ್ರಮಗಳ ಬಗ್ಗೆ ಮುಕ್ತ ಪ್ರಶಂಸೆ ವ್ಯಕ್ತಪಡಿಸಿದರು.

ಇದನ್ನ ಓದಿ: ಕಮಿಷನರ್ ಅನುಪಮ್ ಅಗ್ರವಾಲ್ ಅಮಾನತಿಗೆ ಒತ್ತಾಯಿಸಿ ಮುಖ್ಯಮಂತ್ರಿಗೆ ಭಿತ್ತಿಪತ್ರ ಪ್ರದರ್ಶಿಸಿ ಘೇರಾವ್ ಹಾಕಲು ಪ್ರಯತ್ನ: ಡಿವೈಎಫ್ಐ ಕಾರ್ಯಕರ್ತರ ಬಂಧನ

ವಿಜಯಪುರದ ಸಾಬೂನು ಘಟಕದಿಂದ ಉತ್ತರ ಕರ್ನಾಟಕ ಕ್ಕೆ ಮಾತ್ರವಲ್ಲದೆ, ಮಹಾರಾಷ್ಟ್ರ ಕ್ಕೂ ಇಲ್ಲಿಂದಲೇ ಸರಬರಾಜು ಮಾಡುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಕೆಎಸ್ಡಿಎಲ್ ಮೊದಲು ನಷ್ಟದಲ್ಲಿತ್ತು. ಈಗ ಮೂರು ಪಾಳಿಯಲ್ಲಿ ಕೆಲಸ ನಡೆಯುತ್ತಿದ್ದು, ಸಂಸ್ಥೆಯು ಲಾಭದ ಹಳಿಗೆ ಬಂದಿದೆ. ಜತೆಗೆ ತಾವು ಸಚಿವರಾದ ಮೇಲೆ ಗುಣಮಟ್ಟದ 20 ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ. ಬರುವ ದಿನಗಳಲ್ಲಿ ಸಂಸ್ಥೆಯ ಗತವೈಭವ ಮರುಕಳಿಸುವಂತೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕಿರಾಣಿ ಅಂಗಡಿ, ವಿಮಾನ ನಿಲ್ದಾಣ, ವಿದೇಶಗಳ ಮಳಿಗೆ ಹೀಗೆ ಎಲ್ಲ ಕಡೆಯೂ ಮೈಸೂರು ಸ್ಯಾಂಡಲ್ ಸೋಪ್ ಮತ್ತು ಸಂಸ್ಥೆಯ ಇತರ ಉತ್ಪನ್ನಗಳು ದೊರೆಯುವಂತೆ ಮಾಡಲಾಗುತ್ತಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಜ್ಯದ ವಿಶಿಷ್ಟ ಉತ್ಪನ್ನಗಳ ಮಾರಾಟಕ್ಕೆಂದೇ ಕಲಾಲೋಕ ಮಳಿಗೆ ಸ್ಥಾಪಿಸಲಾಗಿದೆ. ಸಂಸ್ಥೆಯ ಅಧ್ಯಕ್ಷ ಸಿ ಎಸ್ ನಾಡಗೌಡ ಕೂಡ ಸಂಸ್ಥೆಯ ಏಳ್ಗೆಗೆ ಶ್ರಮಿಸುತ್ತಿದ್ದಾರೆ ಎಂದು ಅವರು ನುಡಿದಿದ್ದಾರೆ.

ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕ‌ ನಿರ್ದೇಶಕ ಪಿ ಕೆ ಎಂ ಪ್ರಶಾಂತ್, ಜಿಲ್ಲಾಧಿಕಾರಿ ಭೂಪಾಲನ್, ಎಸ್ಪಿ ಲಕ್ಷ್ಮಣ ನಿಂಬರಗಿ, ಜಿಪಂ ಸಿಇಒ ಋಷಿ ಆನಂದ್ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ನೋಡಿ: ಮುಖ್ಯಮಂತ್ರಿಗೆ ಘೇರಾವ್ : DYFI ಕಾರ್ಯಕರ್ತರ ಬಂಧನ Janashakthi Media

Donate Janashakthi Media

Leave a Reply

Your email address will not be published. Required fields are marked *