ಎಸ್ಮಾ ಜಾರಿಯಾದರೂ ಹೆದರಲ್ಲ-ಜೈಲಿಗೆ ಹೋಗಲು ಸಿದ್ಧ; ನಾಳೆಯಿಂದ ಸರ್ಕಾರಿ ನೌಕರರ ಮುಷ್ಕರ ಆರಂಭ

ಬೆಂಗಳೂರು : 7ನೇ ವೇತನ ಆಯೋಗ ವರದಿ ಜಾರಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ನಾಳೆ(ಮಾರ್ಚ್‌ 01)ಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದು, ಎಸ್ಮಾ ಜಾರಿಯಾದರೂ ಹೆದರುವುದಿಲ್ಲ. ಜೈಲಿಗೆ ಕಳುಹಿಸಿದರೂ ಮುಷ್ಕರ ನಡೆಯಲಿದೆ ಎಂದು ಸಂಘಟಕರು ಎಚ್ಚರಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ನಡೆಸಿದ ಸಭೆ ವಿಫಲವಾಗಿದೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ನಾಳೆಯಿಂದ ಮುಷ್ಕರ ಆರಂಭವಾಗಲಿದೆ. ಎಲ್ಲಾ ಸರ್ಕಾರಿ ಸೇವೆಗಳು ಏಕಕಾಲದಲ್ಲಿ ಬಂದ್ ಆಗುತ್ತವೆ ಎಂದರು.

ಇದನ್ನು ಓದಿ: ಎನ್‌ಪಿಎಸ್‌ ರದ್ದತಿಗೆ ಆಗ್ರಹಿಸಿ ಸರ್ಕಾರಿ ನೌಕರರ ಬೃಹತ್‌ ಪ್ರತಿಭಟನಾ ಪ್ರದರ್ಶನ ಆರಂಭ

ರಾಜ್ಯ ಬಜೆಟ್ಟಿನಲ್ಲಿ 7ನೇ ವೇತನ ಆಯೋಗ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಸರ್ಕಾರ ಯಾವುದೇ ಕ್ರಮಕೈಗೊಂಡರೂ ನಾವು ಸ್ವಾಗತಿಸುತ್ತೇವೆ. ಯಾವುದೇ ಸಂಧಾನಕ್ಕೆ ನಾವು ಬಗ್ಗುವುದಿಲ್ಲ. 10 ಲಕ್ಷ ಸರ್ಕಾರಿ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜೈಲಿಗೆ ಹೋಗಲೂ ಸಿದ್ಧರಿದ್ದೇವೆ. ಎಸ್ಮಾ ಜಾರಿ ಮಾಡಿದ ಸರ್ಕಾರಗಳು ಮತ್ತೆ ಅಧಿಕಾರಕ್ಕೆ ಬಂದಿಲ್ಲ. 7ನೇ ವೇತನ ಆಯೋಗ ವರದಿ ಜಾರಿಯಾದರೆ ಮಾತ್ರ ಮುಷ್ಕರ ಹಿಂದಕ್ಕೆ ಪಡೆಯಲಾಗುವುದು ಎಂದರು.

ಐದು ರಾಜ್ಯಗಳ ಮಾದರಿಯಂತೆ ಎನ್​ಪಿಎಸ್ ರದ್ದು ಮಾಡಿ, ಓಪಿಎಸ್ ಅನ್ನೇ ಜಾರಿಗೊಳಿಸಬೇಕೆಂದು ಆಗ್ರಹವಾಗಿದೆ. ಕಳೆದ ಒಂದು ವರ್ಷದಿಂದ ಮುಖ್ಯಮಂತ್ರಿಗಳು ವೇತನ ಪರಿಷ್ಕರಣೆ ಭರವಸೆ ನೀಡಿದರೆ ವಿನಃ ಅದರ ಬಗ್ಗೆ ಮಾತೇ ಆಡುತ್ತಿಲ್ಲ. ವೇತನ ಆಯೋಗ ಪರಿಶೀಲನೆ ಭರವಸೆ ನೀಡಿದೆ. ಆದರೆ, ಎಲ್ಲವೂ ಚರ್ಚೆ ಹಂತದಲ್ಲಿ ಇದೆ. ನಾವು ಪ್ರತಿಭಟನೆ ನಡೆಸುವ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಆದರೂ ನಮ್ಮ ಬೇಡಿಕೆ ಬಗ್ಗೆ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ ಎಂದರು.

ಇದನ್ನು ಓದಿ: ಬೇಡಿಕೆ ಈಡೇರಿಸುವ ಭರವಸೆ: ಸರಕಾರಿ ಎನ್‌ಪಿಎಸ್‌ ನೌಕರರ ಪ್ರತಿಭಟನೆ ತಾತ್ಕಾಲಿಕ ಅಂತ್ಯ

ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತುಗಳ ಬಳಕೆ ಬೆಲೆ ಹೆಚ್ಚಳ ಆಗಿದೆ. ಸರ್ಕಾರಿ ನೌಕರರ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ. ರಾಜ್ಯದ ಸರ್ಕಾರಿ ನೌಕರರಿಗೆ 12 ಸಾವಿರ ಕೋಟಿ ಖರ್ಚಾಗಲಿದೆ. ನಮಗೆ ಹೆಚ್ಚುವರಿ ಶೇ. 16ರಷ್ಟು ವೆಚ್ಚವಾಗಲಿದೆ. ಹೆಚ್ಚುವರಿ ತೆರಿಗೆ ಸಂಗ್ರಹದ ಮೂಲಕ ಜವಾಬ್ದಾರಿ ನಿಭಾಯಿಸಲಿ ಎಂದರು.

ಇಡೀ ದೇಶದಲ್ಲಿ ಕಡಿಮೆ ಕನಿಷ್ಟ ವೇತನ ಪಡೆಯುವವರು ಕರ್ನಾಟಕ ರಾಜ್ಯದವರು. ಬೇರೆ ರಾಜ್ಯಗಳಲ್ಲಿ ವೇತನ ಹೆಚ್ಚಾಗಿದೆ. ಇಂದು ಶೇಕಡಾ 39ರಷ್ಟು ಹುದ್ದೆ ಖಾಲಿ ಇದೆ. ಇಷ್ಟೆಲ್ಲ ಕೆಲಸ ಮಾಡಿ ಅಭಿವೃದ್ಧಿಯಲ್ಲಿ 5ನೇ ಸ್ಥಾನದಲ್ಲಿದ್ದೇವೆ.  ಎಲ್ಲಾ ಸಂಘಗಳಿಂದ ಈ ಹೋರಾಟ ಮಾಡುತ್ತಿದ್ದೇವೆ. ಸಾಮೂಹಿಕ ನಾಯಕತ್ವದಲ್ಲಿ ಹೋರಾಟ ನಡೆಯುತ್ತಿದೆ. ನಾಳೆಯಿಂದ ರಾಜ್ಯದ ಎಲ್ಲಾ ಸರ್ಕಾರಿ ನೌಕರರು ಯಾವುದೇ ಗೊಂದಲ ಇಲ್ಲದೆ ಅನಿರ್ದಿಷ್ಟಾವಧಿ ಗೈರಾಗಲಿದ್ದಾರೆ ಎಂದು ತಿಳಿಸಿದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *