– ಸಂಧ್ಯಾ ಸೊರಬ
ಈಶ್ವರಪ್ಪಗೆ ಮತ್ತೆ ನೆನಪಾದ ರಾಯಣ್ಣ.. ಸಂಕಟ ಬಂದಾಗ ವೆಂಟಕರಮಣ ಎನ್ನುವಂತೆ ಇದೀಗ ಯಡಿಯೂರಪ್ಪ ವಿರುದ್ಧ ಹಿಂದೂತ್ವದ ಹೆಸರಿನಲ್ಲಿ ಬಂಡಾಯವೆದ್ದಿರುವ ಕೆ.ಎಸ್.ಈಶ್ವರಪ್ಪಗೆ ಇದೀಗ ಶಿವಮೊಗ್ಗದಲ್ಲಿ ಬೆಂಬಲದ ತೀರಾ ಅಗತ್ಯವಿದೆ. ಮೋದಿ ಹೆಸರಿನಲ್ಲಿ ಹಿಂದೂತ್ವ ನನ್ನದು ಎಂದು ಹೊರಟಿರುವ ಅವರು, ಮತ್ತೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ಗೆ ಜೀವ ನೀಡುವ ಸಿದ್ಧತೆ ನಡೆಯುತ್ತಿದೆ ಎನ್ನುವ ವಿಚಾರವೊಂದು ಮತ್ತೆ ಮುನ್ನಲೆಗೆ ಬಂದಿದೆ.
ಈ ಹಿಂದೆ ಕೂಡ ಶಿವಮೊಗ್ಗದಿಂದ ಕೆ.ಎಸ್.ಈಶ್ವರಪ್ಪಗೆ ಟಿಕೇಟ್ ಸಿಗುವುದಿಲ್ಲ ಎಂದು ಸುದ್ದಿಯಾಗುತ್ತಿದ್ದಂತೆಯೇ ಹುಟ್ಟಿಕೊಂಡಿದ್ದು, “ರಾಯಣ್ಣ ಬ್ರಿಗೇಡ್”. ಹಿಂದುಳಿದವರ ಮತಗಳನ್ನು ಸೆಳೆಯಬಹುದೆಂಬ ಲೆಕ್ಕಾಚಾರವೂ ಇತ್ತು. ರಾಯಣ್ಣ ಬ್ರಿಗೇಡ್ ಒಂದಿಷ್ಟು ಸುದ್ದಿಯೂ ಆಯಿತು. ಆಮೇಲೆ ಏನಾಯಿತು? ಎನ್ನುವುದು ಯಾರಿಗೂ ಗೊತ್ತೇ ಆಗಲಿಲ್ಲ. ಅವರಿಗೆ ಆಗ ಟಿಕೇಟ್ ಕೊಡಿಸಲಷ್ಟೇ ಸಕ್ಸಸ್ ಆಗಿದ್ದಂತಹ ರಾಯಣ್ಣ ಬ್ರಿಗೇಡ್ನ ಹೆಸರು ಹೇಳಲಿಚ್ಛಿಸದ ಸದಸ್ಯರೊಬ್ಬರು ಜನಶಕ್ತಿ ಮೀಡಿಯಾಕ್ಕೆ ಮಾತಾಡಿ “ ರಾಯಣ್ಣ ಬ್ರಿಗೇಡ್ನಿಂದ ಈಶ್ವರಪ್ಪಗೆ ಹೊರತಾಗಿ ಬೇರೆ ಯಾರಿಗೂ ಏನೂ ಉಪಯೋಗವಾಗಲಿಲ್ಲ.
ಬ್ರಿಗೇಡ್ ಅನ್ನು ಈಶ್ವರಪ್ಪ ತಮ್ಮ ಸ್ವಲಾಭಕ್ಕಾಗಿ ಸ್ವಂತ ರಾಜಕೀಯ ಹಿತಾಸಕ್ತಿಗಾಗಿ ಬಳಸಿಕೊಂಡಿದ್ದಾರೆಯೇ ಹೊರತು ಯಾರನ್ನೂ ಬ್ರಿಗೇಡ್ ಅಡಿ ಬೆಳೆಸಲಿಲ್ಲ. ಅಗತ್ಯವಿದ್ದಾಗ ಮಾತ್ರ ಬ್ರಿಗೇಡ್ ಬಗ್ಗೆ ಮಾತನಾಡುವ ಅವರು ನಿಜವಾಗಿಯೂ ಯಾರಿಗೇನೂ ಮಾಡಲೇ ಇಲ್ಲ.” ಬೇಕಾದಾಗ ಮಾತ್ರ ಅವರು ರಾಯಣ್ಣ ಬ್ರಿಗೇಡ್ ಎನ್ನುತ್ತಾರೆಯೇ ಹೊರತು ಇನ್ಯಾರಿಗೂ ಬ್ರಿಗೇಡ್ನಿಂದ ಲಾಭ ಮಾಡಿಕೊಡಲಿಲ್ಲ. ಮನಸೋಇಚ್ಛೆ ಬಂದಂತೆ ಮಾತನಾಡುತ್ತಾರೆ” ಎಂದಿದ್ದಾರೆ. ನಾವೆಲ್ಲ ಬ್ರಿಗೇಡ್ನಿಂದ ಹೊರಬಂದಿದ್ದೇವೆ. ಲಾಸ್ಟ್ ಟೈಮ್ ಆಗಿರುವಂತೆ ಈಗಾಗಲ್ಲ. ಯಾರೂ ಮತ ಹಾಕುವುದಿಲ್ಲ. ಇವರಿಗೆ ಬೇಕಾದಾಗ ಬ್ರಿಗೇಡ್ ಬೇಕು. ಬೇಕಾದಾಗ ಬೇಡ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿ : ಲೋಕಸಭಾ ಚುನಾವಣೆ : ರಾಜ್ಯಕ್ಕೆ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್ ಆಗಮನ
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ನ ಮುಖಂಡ ಆಗಿದ್ದಂತಹ ಮುಕುಡಪ್ಪರನ್ನು ಜನಶಕ್ತಿ ಮೀಡಿಯಾ ಮಾತನಾಡಿಸಿದಾಗ, “ಸಂಗೊಳ್ಳಿ ರಾಯಣ್ಣ ಬ್ರಿಗೇಡ್ 2013 ರಲ್ಲಿಯೇ ಮುಗಿದು ಹೋಗಿದೆ. ಸಂಘಟನೆಯಾಗಿಬಿಡಬಹುದೆಂಬ ಭಯದಿಂದ ಯಡಿಯೂರಪ್ಪ, ಅಮಿತ್ ಷಾಗೆ ಹೋಗಿ ಹೇಳಿದ್ದರು. ಅಮಿತ್ ಷಾ ನನ್ನನ್ನು ಈಶ್ವರಪ್ಪ ಜೊತೆ ಕರೆಯಿಸಿಕೊಂಡಿದ್ದರು. ಅವರ ಸೂಚನೆಯಂತೆ ಬಳಿಕ ಬ್ರಿಗೇಡ್ ಅನ್ನು ನಿಲ್ಲಿಸಿದೆವು. ಈಶ್ವರಪ್ಪಗೆ ಟಿಕೇಟ್ ಸಿಕ್ಕಿತು. ಈಗ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹೆಸರು ಇಲ್ಲ. ಬೇರೆ ಹೆಸರಿನಲ್ಲಿ ನಾವೆಲ್ಲ ಇದ್ದೇವೆ. ಈಶ್ವರಪ್ಪ ಪರವಾಗಿ ಕೆಲಸ ಮಾಡುತ್ತಿದ್ದೇವೆ” ಎಂದರು. ಮೋದಿ ಹಿಂದುತ್ವ ಎಂದು ಅವರು ಹೋರಾಟ ಮಾಡುತ್ತಿದ್ದಾರೆ ಎಂದರು.
ಗಮನಾರ್ಹ ಮಾತೊಂದನು ಮುಕುಡಪ್ಪ ಹೇಳಿದ್ದು ಏನೆಂದರೆ, ಹಿಂದೆ ಬಿಜೆಪಿ ಪಕ್ಷವೆಂದರೆ, ಅದು ಕೇವಲ ಬ್ರಾಹ್ಮಣರ ಪಕ್ಷವೆಂದಿತ್ತು. ಹಿಂದುಳಿದ ದಲಿತ ಮತಗಳನ್ನು ಬಿಜೆಪಿಯತ್ತ ಸೆಳೆಯಲು ಬ್ರಿಗೇಡ್ ಪರೋಕ್ಷವಾಗಿ ಕೆಲಸ ಮಾಡಿದೆ. ಮುಸ್ಲಿಂ ಮತಗಳು ನಮಗೆ ಅಗತ್ಯವಿರಲಿಲ್ಲ ಎಂದರು.
ಒಟ್ಟಾರೆಯಾಗಿ ನೋಡುವುದಾದರೆ,ಅವರಿಗೆ ಟಿಕೇಟ್ ತಪ್ಪಿದಾಗಲೆಲ್ಲಾ, ಯಾವುದಾದರೋಂದು ಹಿಡನ್ ಅಜೆಂಡಾವನ್ನು ಇಟ್ಟುಕೊಂಡು ಒಂದೊಂದು ಸಂಘಟನೆಯ ಹೆಸರಿನಲ್ಲಿ ಮತಗಳನ್ನು ಒಡೆಯಲು ಚುನಾವಣಾ ಕಣಕ್ಕೆ ಧುಮುಕಿರುವುದು. ಅವರಿಗೆ ಟಿಕೇಟ್ ಕೊಡಲು ಬೆನ್ನಿಗೆ ನಿಂತಿದ್ದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಈಗ ಇನ್ನೊಂದು ಹೆಸರಿನಲ್ಲಿ ಮುನ್ನಲೆಗೆ ಬಂದಿದೆ. ಮೋದಿ ಹಿಂದೂತ್ವ ಎಂಬ ಶಾಲು ಈಶ್ವರಪ್ಪ ಸೇರಿದಂತೆ ಅವರ ಬೆಂಬಲಿಗರ ಕೊರಳಲ್ಲಿ ಅಲ್ಲಲ್ಲಿ ರಾರಾಜಿಸುತ್ತಿದೆ. ಸ್ವಾರ್ಥಕ್ಕಾಗಿ ಇಂತಹ ಸಂಘಟನೆಗಳು ರಾಜಕೀಯ ಲಾಭಕ್ಕಾಗಿ ಇನ್ಯಾರದ್ದೋ ಲಾಭಕ್ಕಾಗಿ ಯಾವುದ್ಯಾವುದೋ ಹೆಸರಿನಲ್ಲಿ ಮರುಜೀವ ಪಡೆಯುತ್ತಿರುವುದು ವಿಪರ್ಯಾಸವೇ ಸರಿ.
ಇದನ್ನು ನೋಡಿ : 2024ರ ಚುನಾವಣೆಯಲ್ಲಿಎಡಪಕ್ಷಗಳ ಪಾತ್ರವೇನು? Janashakthi Media