ಬೆಂಗಳೂರು,ಜ 14 : ರಾಜ್ಯ ಸಚಿವ ಸಂಪುಟದಲ್ಲಿ ಬೆಂಗಳೂರು ಮತ್ತು ಬೆಳಗಾವಿ ಜಿಲ್ಲೆಯ ಸಚಿವರದ್ದೆ ಪಾರುಪತ್ಯ. ಸಚಿವ ಸಂಪುಟದ ಅರ್ಧ ಪಾಲು ಕೇವಲ ಈ ಎರಡು ಜಿಲ್ಲೆಗಳದ್ದೆ ಇದೆ. 12 ಜಿಲ್ಲೆಗಳಿಗೆ ಸಚಿವ ಸ್ಥಾನವೇ ಇಲ್ಲದ್ದೂ ಕೂಡ ಈಗ ಬೆಳಕಿಗೆ ಬಂದಿದೆ.
ನಿನ್ನೆ ಸಚಿವ ಸಂಪುಟ ವಿಸ್ತರಣೆಯ ನಂತರ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ಎದ್ದಿದೆ. ಎರಡು ಜಿಲ್ಲೆ, ಎರಡು ಪ್ರಭಲ ಜಾತಿಗಳದ್ದೆ ಸರಕಾರದಲ್ಲಿ ನಡೆಯುತ್ತಿದೆ ನಮ್ಮದು ಏನು ಇಲ್ಲ ಎಂಬ ಅಸಮಾಧಾನ ಬಿಜೆಪಿಯಲ್ಲಿ ಸ್ಪೋಟ ಗೊಳ್ಳುತ್ತಿದ್ದರೆ, ಅಸಮಾನತೆಯ ಸೂಚಕ ಇದು ಎಂದು ರಾಜಕೀಯ ಚಿಂತಕರು ವಿಶ್ಲೇಷಿಸುತ್ತಿದ್ದಾರೆ.
ಜಿಲ್ಲಾವಾರು ಸಚಿವರ ವಿವರ : ಶಿವಮೊಗ್ಗ- ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ. ಬೆಂಗಳೂರು ನಗರ- ಡಾ.ಸಿ.ಎನ್.ಅಶ್ವತ್ಥನಾರಾಯಣ, ಆರ್.ಅಶೋಕ್, ಎಸ್.ಸುರೇಶ್ ಕುಮಾರ್, ವಿ.ಸೋಮಣ್ಣ, ಕೆ.ಗೋಪಾಲಯ್ಯ, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್, ಅರವಿಂದ್ ಲಿಂಬಾವಳಿ. ಹಾವೇರಿ- ಬಸವರಾಜ ಬೊಮ್ಮಾಯಿ, ಬಿ.ಸಿ.ಪಾಟೀಲ್, ಎಸ್.ಶಂಕರ್. ಉಡುಪಿ- ಕೋಟ ಶ್ರೀನಿವಾಸ ಪೂಜಾರಿ. ದಕ್ಷಿಣ ಕನ್ನಡ- ಎಸ್.ಅಂಗಾರ. ತುಮಕೂರು- ಜೆ.ಸಿ.ಮಾಧುಸ್ವಾಮಿ, ಗದಗ- ಸಿ.ಸಿ.ಪಾಟೀಲ್. ಬೀದರ್- ಪ್ರಭು ಚವ್ಹಾಣ್. ಬೆಳಗಾವಿ- ಲಕ್ಷಣ್ ಸವದಿ, ಶಶಿಕಲಾ ಜೊಲ್ಲೆ, ರಮೇಶ್ ಜಾರಕಿಹೊಳಿ, ಉಮೇಶ್ ಕತ್ತಿ, ಶ್ರೀಮಂತ್ ಪಾಟೀಲ್. ಬಳ್ಳಾರಿ-ಆನಂದ್ ಸಿಂಗ್. ಧಾರವಾಡ- ಜಗದೀಶ್ ಶೆಟ್ಟರ್. ಚಿತ್ರದುರ್ಗ- ಬಿ.ಶ್ರೀರಾಮುಲು. ಚಿಕ್ಕಬಳ್ಳಾಪುರ- ಡಾ.ಕೆ.ಸುಧಾಕರ್. ಮಂಡ್ಯ-ನಾರಾಯಣಗೌಡ, ಉತ್ತರ ಕನ್ನಡ- ಶಿವರಾಮ್ ಹೆಬ್ಬಾರ್. ರಾಮನಗರ- ಸಿ.ಪಿ.ಯೋಗೇಶ್ವರ್. ಬಾಗಲಕೋಟೆ- ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ. ಬೆಂಗಳೂರು ಗ್ರಾಮಾಂತರ-ಎಂ.ಟಿ.ಬಿ ನಾಗರಾಜ್.
33 ಜನ ಸಚಿವರಲ್ಲಿ 7 ಜನ ಒಕ್ಕಲಿಗರು, 7 ಜನ ಲಿಂಗಾಯತರು ಇದ್ದಾರೆ. ಅಂದರೆ ಸಂಪುಟದ 49% ರಷ್ಟು ಎರಡು ಸಮುದಾಯದ ಶಾಸಕರಿದ್ದಾರೆ. 16% ವಿಧಾನ ಪರಿಷತ್ ಸದಸ್ಯರು ಸಚಿವರಾಗಿದ್ದಾರೆ. ಬೆಂಗಳೂರಿನಿಂದ 8 ಜನ, ಬೆಳಗಾವಿಯಿಂದ 5 ಜನ, ಹಾವೇರಿಯಿಂದ 3 ಜನ ಸಚಿವರಿದ್ದಾರೆ. 12 ಜನ ಕಾಂಗ್ರೆಸ್, ಜೆಡಿಎಸ್ ತೊರದು ಬಂದು ಸಚಿವರಾಗಿದ್ದಾರೆ. ಸಂಪುಟದಲ್ಲಿ ಅಸಮತೋಲನವನ್ನು ಈ ಅಂಕಿ ಅಂಶಗಳು ತೋರಿಸುತ್ತಿವೆ. ಈ ಬೆಳವಣಿಗೆಗಳು ಮೂಲ ಬಿಜೆಪಿ ಶಾಸಕರಿಗೆ ಚಡಪಡಿಕೆಯಾಗುತ್ತಿದೆ.
ಸಚಿವ ಸಂಪುಟ ಬರ್ತಿಯಾದರೂ 12 ಜಿಲ್ಲೆಗಳಿಗೆ ಪ್ರಾತಿನಿಧ್ಯವಿಲ್ಲ. ಆದರೆ ಏಳು ಶಾಸಕರಿರುವ ದಾವಣಗೆರೆ, ಕಲುಬರಗಿ, ಮಡಿಕೇರಿ, ಮೈಸೂರು, ಉಡುಪಿ, ಚಿಕ್ಕಮಗಳೂರು, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಿಗೆ ಈ ಬಾರಿಯೂ ನಿರಾಸೆ ಮೂಡಿದೆ.
ಸಂಪುಟ ವಿಸ್ತರಣೆ ನಡುವೆ 20 ಕ್ಕೂ ಹೆಚ್ಚು ಶಾಸಕರು ಅಸಮಾಧಾನ ಗೊಂಡಿದ್ದಾರೆ. ಫೆಬ್ರವರಿಯಲ್ಲಿ ಮತ್ತೆ ಸಂಪುಟ ವಿಸ್ತರಿಸುವ, ಪುನರಚಿಸುವ ಮಾತುಗಳು ಕೇಳಿ ಬರುತ್ತಿವೆ. ಏನಾ ಆದರೂ ಎರಡು ಜಿಲ್ಲೆ, ಎರಡು ಜಾತಿಗೆ ಮಾತ್ರ ಈ ಸರಕಾರ ಸೀಮಿತವಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.