ಮೊದಲ ಪಂದ್ಯದಲ್ಲಿ ಗಮನ ಸೆಳೆದ ಇಶಾನ್ ಕಿಶನ್
ಅಹ್ಮದಾಬಾದ್: ಎರಡನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ ಭಾರತ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಇಂಗ್ಲೆಂಡ್ ನೀಡಿದ 165 ರನ್ಗಳ ಟಾರ್ಗೆಟ್ನ್ನು 17.5 ಓವರ್ನಲ್ಲಿ ಚೇಸ್ ಮಾಡುವ ಗೆಲುವಿನ ನಗೆ ಬೀರಿತು. ಇದಕ್ಕೂ ಮುನ್ನ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಸರ್ಮಥಿಸುವಂತೆ ಮೊದಲ ಓವರ್ ಬೌಲಿಂಗ್ ಮಾಡಿದ ಭುವನೇಶ್ವರ್ ಕುಮಾರ್ ಮೂರನೇ ಎಸೆತದಲ್ಲಿ ಜೋಸ್ ಬಟ್ಲರ್ನ್ನು ಎಲ್ಬಿಡಬ್ಲ್ಯೂ ಮಾಡಿ ಶೂನ್ಯದೊಂದಿಗೆ ಪೆವಿಲಿಯನ್ಗೆ ಕಳುಹಿಸಿದರು.
ಪವರ್ಪ್ಲೇನಲ್ಲಿ 44 ರನ್ ಕಲೆಹಾಕಿದ ಜೇಸನ್ ರಾಯ್-ಡೇವಿಡ್ ಮಲಾನ್ ಜೋಡಿ, ಇಂಗ್ಲೆಂಡ್ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದರು. ದೊಡ್ಡ ಮೊತ್ತ ಪೇರಿಸುವ ನಿರೀಕ್ಷೆಯನ್ನು ಹುಟ್ಟಿಸಿ ಭಾರತಕ್ಕೆ ಭಯ ಹುಟ್ಟಿಸಿದ್ದರು. ಪವರ್ ಪ್ಲೇ ಬಳಿಕ ಕೊಂಚ ಹಿಡಿತ ಸಾಧಿಸಿದ ಟೀಮ್ ಇಂಡಿಯಾ ಸ್ಪಿನ್ನರ್ ಯಜ್ವೇಂದ್ರ ಚಹಲ್ ಹಾಗೂ ಮಧ್ಯಮ ವೇಗಿ ಹಾರ್ದಿಕ್ ಪಾಂಡ್ಯ ರನ್ ಗತಿಯನ್ನು ನಿಯಂತ್ರಿಸಿದರು.
ಕೊನೆಯ ಓವರ್ಗಳಲ್ಲಿ ಟೀಮ್ ಇಂಡಿಯಾ ಬೌಲರುಗಳ ಪರಾಕ್ರಮದ ಮುಂದೆ ಮಂಡಿಯೂರಿದ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ಅಂತಿಮವಾಗಿ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್ಗಳನ್ನು ಕಲೆಹಾಕಿತು. ಟೀಮ್ ಇಂಡಿಯಾ ಪರ ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್ ತಲಾ 2 ವಿಕೆಟ್ ಪಡೆದರೆ, ಚಹಲ್ ಹಾಗೂ ಭುವನೇಶ್ವರ್ ಕುಮಾರ್ ಒಂದು ವಿಕೆಟ್ ಪಡೆದರು.
ಈ ಸ್ಪರ್ಧಾತ್ಮಕ ಸವಾಲು ಬೆನ್ನತ್ತಿರುವ ಟೀಮ್ ಇಂಡಿಯಾ ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಭಾರತ ಓಪನರ್ ಕೆಎಲ್ ರಾಹುಲ್ (0) ಮೊದಲ ಓವರ್ನ ಕೊನೆಯ ಎಸೆತದಲ್ಲಿ ಕೀಪರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಮತ್ತೊಂದೆಡೆ ಆರಂಭಿಕನಾಗಿ ಚೊಚ್ಚಲ ಪಂದ್ಯದಲ್ಲಿ ಕಣಕ್ಕಿಳಿದ ಇಶಾನ್ ಕಿಶನ್ ಜೋಫ್ರಾ ಆರ್ಚರ್ ಎಸೆದ 2ನೇ ಓವರ್ನ ಮೊದಲ ಎಸೆತದಲ್ಲಿ ಫೋರ್ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ರನ್ ಖಾತೆ ತೆರೆದರು.
ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ 10 ರನ್ಗಳಿಸಿದ್ದ ವೇಳೆ ಜೀವದಾನ ಲಭಿಸಿತು. ಕ್ರಿಸ್ ಜೋರ್ಡನ್ ಎಸೆತದಲ್ಲಿ ಚೆಂಡು ಕೊಹ್ಲಿ ಬ್ಯಾಟ್ ಸವರಿ ಲೆಗ್ ಸೈಡ್ನತ್ತ ಸಾಗಿತು. ಆದರೆ ಚೆಂಡನ್ನು ಗುರುತಿಸುವಲ್ಲಿ ಎಡವಿದ ವಿಕೆಟ್ ಕೀಪರ್ ಜೋಸ್ ಬಟ್ಲರ್ ಕ್ಯಾಚ್ ಡ್ರಾಪ್ ಮಾಡಿದರು. ಚೆಂಡು ಫೈನ್ ಲೆಗ್ ಮೂಲಕ ಬೌಂಡರಿಗೆ ತಲುಪಿತು. ಪವರ್ಪ್ಲೇನಲ್ಲಿ ನಾಯಕನ ಜೊತೆಗೂಡಿದ ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಮೊದಲ 6 ಓವರ್ನಲ್ಲಿ ಟೀಮ್ ಇಂಡಿಯಾ ಮೊತ್ತವು 50 ಕ್ಕೆ ಬಂದು ನಿಂತಿತು. ಪವರ್ಪ್ಲೇ ಬಳಿಕ ಸ್ಪೋಟಕ ಬ್ಯಾಟಿಂಗ್ ಮುಂದುವರೆಸಿದ ಇಶಾನ್ ಕಿಶನ್ಗೆ 41 ರನ್ಗಳಿಸಿದ್ದ ವೇಳೆ ಜೀವದಾನ ಲಭಿಸಿತು. ಆದಿಲ್ ರಶೀದ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಕಿಶನ್ ಬೆನ್ ಸ್ಟೋಕ್ಸ್ಗೆ ಕ್ಯಾಚ್ ನೀಡಿದ್ದರು. ಆದರೆ ಚೆಂಡನ್ನು ಕೈಚೆಲ್ಲಿದ ಸ್ಟೋಕ್ಸ್ ಕಿಶನ್ಗೆ ಚೊಚ್ಚಲ ಪಂದ್ಯದಲ್ಲೇ ಜೀವದಾನ ನೀಡಿದರು.
ಈ ಜೀವದಾನವನ್ನು ಸದುಪಯೋಗಪಡಿಸಿಕೊಂಡ ಇಶಾನ್ ಕಿಶನ್ ಆದಿಲ್ ರಶೀದ್ ಓವರ್ನಲ್ಲಿ ಸತತ 2 ಸಿಕ್ಸರ್ ಸಿಡಿಸುವ ಮೂಲಕ 28 ಎಸೆತಗಳಲ್ಲಿ ತಮ್ಮ ಚೊಚ್ಚಲ ಅರ್ಧಶತಕ ಪೂರೈಸಿದರು. ಆದರೆ ಇದರ ಬೆನ್ನಲ್ಲೇ ರಶೀದ್ ಓವರ್ನಲ್ಲೇ ಎಬಿಡಬ್ಲ್ಯೂ ಆಗಿ ವಿಕೆಟ್ ಒಪ್ಪಿಸಿದರು.
ತಮ್ಮ ಚೊಚ್ಚಲ ಪಂದ್ಯದಲ್ಲಿ 32 ಎಸೆತಗಳನ್ನು ಎದುರಿಸಿದ ಇಶಾನ್ ಕಿಶನ್ 4 ಭರ್ಜರಿ ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 56 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದರು. ಅಷ್ಟರಲ್ಲಾಗಲೇ ಭಾರತ ಮೊತ್ತ 10 ಓವರ್ನಲ್ಲಿ 94 ಕ್ಕೆ ತಲುಪಿತ್ತು.
ಕಿಶನ್ ಬಳಿಕ ಕ್ರೀಸ್ಗಿಳಿದ ರಿಷಭ್ ಪಂತ್ ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 13 ಎಸೆತಗಳನ್ನು ಎದುರಿಸಿದ ಪಂತ್ 2 ಸಿಕ್ಸ್ ಹಾಗೂ 2 ಬೌಂಡರಿಗಳೊಂದಿಗೆ 26 ರನ್ಗಳಿಸಿ ಜೋರ್ಡನ್ಗೆ ವಿಕೆಟ್ ಒಪ್ಪಿಸಿದರು. ಇನ್ನೊಂದೆಡೆ ನಾಯಕನ ಆಟವಾಡಿದ ವಿರಾಟ್ ಕೊಹ್ಲಿ ಟಾಮ್ ಕರ್ರನ್ ಎಸೆತದಲ್ಲಿ ಭರ್ಜಿ ಸಿಕ್ಸರ್ ಸಿಡಿಸುವ ಮೂಲಕ 35 ಎಸೆತಗಳಲ್ಲಿ ಅರ್ಧಶತಕ ಪೈರೈಸಿದರು. ಅಲ್ಲದೆ 15 ಓವರ್ಗಳಲ್ಲಿ ತಂಡದ ಮೊತ್ತವನ್ನು 143 ಕ್ಕೆ ತಂದು ನಿಲ್ಲಿಸಿದರು.
18ನೇ ಓವರ್ನ 5 ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ (73 ರನ್, 49 ಎಸೆತ) ಭಾರತಕ್ಕೆ 7 ವಿಕೆಟ್ಗಳ ಭರ್ಜರಿ ತಂದುಕೊಟ್ಟರು. ಈ ಸೂಪರ್ ಸಿಕ್ಸ್ನೊಂದಿಗೆ ಟಿ20 ಕ್ರಿಕೆಟ್ನಲ್ಲಿ 3 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಕೊಹ್ಲಿ ತಮ್ಮದಾಗಿಸಿಕೊಂಡರು.
ಈ ಗೆಲುವಿನೊಂದಿಗೆ ಐದು ಪಂದ್ಯಗಳ ಸರಣಿಯು 1-1 ರ ಸಮಬಲವಾಗಿದ್ದು, 3ನೇ ಟಿ20 ಪಂದ್ಯವು ಮಾರ್ಚ್ 16 ರಂದು ನಡೆಯಲಿದೆ.