ಎರಡನೇ ದಿನದ ಮುಷ್ಕರ-ಬೃಹತ್‌ ಪ್ರತಿಭಟನೆ; ಕೇಂದ್ರದ ವಿರುದ್ಧ ಆಕ್ರೋಶ

ಉಡುಪಿ: ಕೇಂದ್ರ ಸರಕಾರದ ಕಾರ್ಮಿಕ, ರೈತ ಹಾಗೂ ಜನ ವಿರೋಧಿ ನೀತಿಗಳನ್ನು ಖಂಡಿಸಿ ಅಖಿಲ ಭಾರತ ಮುಷ್ಕರದ ಪ್ರಯುಕ್ತ ಎರಡನೇ ದಿನವಾದ ಇಂದು(ಮಾ.29) ಉಡುಪಿ ಜಿಲ್ಲಾ ಕಾರ್ಮಿಕ ಸಂಘಗಳ ಜಂಟಿ ವೇದಿಕೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ಮಣಿಪಾಲದ ಸಿಂಡಿಕೇಟ್ ಸರ್ಕಲ್‌ನಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಬ್ಯಾಂಕ್, ವಿಮಾ ನೌಕರರು, ಕಟ್ಟಡ, ಹೆಂಚು, ಬೀಡಿ, ಕೃಷಿಕೂಲಿ ಕಾರ್ಮಿಕರು, ಅಂಗನವಾಡಿ, ಬಿಸಿಯೂಟ ನೌಕರರು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದು, ಕೇಂದ್ರ ಸರಕಾರದ ನೀತಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಕಾರ್ಮಿಕರ ಕಾನೂನುಗಳನ್ನು ತಿದ್ದುಪಡಿ ಮಾಡುವ ಬದಲು ವಿವಿಧ ಕಾರ್ಮಿಕ ರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿಗಳನ್ನು ರಚಿಸಿ ಅನುದಾನ ಒದಗಿಸುವ ಕಾರ್ಯ ಕೇಂದ್ರ ಸರಕಾರ ಮಾಡಬೇಕು. ದಿನಕ್ಕೆ 18 ಗಂಟೆಗಳ ಕಾಲ ದುಡಿದರೂ ಆಟೋ ಚಾಲಕರಿಗೆ ಜೀವನ ಸಾಗಿಸಲು ಬೇಕಾದ ವೇತನ ಸಿಗುತ್ತಿಲ್ಲ. ಇದು ಬಂಡವಾಳಶಾಹಿ ಸರಕಾರ. ಬಿಜೆಪಿ ಜೊತೆ ಇರುವವರಿಗೆ ಹಣ ಮಾಡಿಕೊಡುವ ದಂಧೆಯನ್ನು ಈ ಸರಕಾರ ಮಾಡುತ್ತಿದೆ ಎಂದು ಆರೋಪಿಸಿದರು.

ಇದನ್ನು ಓದಿ: ಮಾರ್ಚ್‌ 28ರಂದು ದೇಶವ್ಯಾಪಿ ಮೊದಲ ದಿನದ ಮುಷ್ಕರಕ್ಕೆ ಕಾರ್ಮಿಕ ವರ್ಗದ ಅದ್ಭುತ ಸ್ಪಂದನೆ

ಎಐಐಬಿಇಎಯ ವಿದ್ಯಾನಾಯಕ್ ಮಾತನಾಡಿ, ಸರಕಾರ ಬ್ಯಾಂಕ್‌ಗಳನ್ನು ವಿಲೀನಮಾಡಿ, ಮುಂದೆ ಖಾಸಗಿಯವರ ಕೈಗೆ ಒಪ್ಪಿಸಲು ಹುನ್ನಾರ ನಡೆಸುತ್ತಿದೆ. ಇಂದು ಬ್ಯಾಂಕ್ ನೌಕರರು ಒತ್ತಡದಿಂದ ಕೆಲಸ ಮಾಡುವ ಪರಿಸ್ಥಿತಿಯನ್ನು ಸರಕಾರ ನಿರ್ಮಿಸಿದೆ. ನೌಕರರು ಒಂದೊಂದೆ ಸೌಲಭ್ಯಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಿದರೆ ಮುಂದೆ ಅದು ಸಾಮಾನ್ಯ ಜನರ ಕೈಗೆ ಎಟುಕದ ರೀತಿಯಲ್ಲಿ ಇರುತ್ತದೆ ಎಂದು ದೂರಿದರು.

ಈ ಸಂದರ್ಭದಲ್ಲಿ ವಿಮಾ ನೌಕರರ ಸಂಘಟನೆಯ ಪ್ರಭಾಕರ ಬಿ.ಕುಂದರ್, ಅಂಗನವಾಡಿ ನೌಕರರ ಸಂಘದ ಸುಶೀಲಾ ನಾಡ, ಹೆಂಚು ಕಾರ್ಮಿಕರ ಸಂಘದ ಎಚ್.ನರಸಿಂಹ, ಎಐಟಿಯುಸಿಯ ಶೇಖರ್, ಬ್ಯಾಂಕ್ ಎಂಪ್ಲಾಯಿಸ್ ಪೆಡರೇಶನ್ ಆಫ್ ಇಂಡಿಯಾದ ರವೀಂದ್ರ, ಕರ್ಣಾಟಕ ಬ್ಯಾಂಕ್ ಆಫೀಸರ್ ಅಸೋಸಿಯೇಶನ್ ರವಿಶಂಕರ್ ಮಾತನಾಡಿದರು.

ಪ್ರತಿಭಟನೆಯಲ್ಲಿ ಎಐಟಿಯುಸಿಯ ಸಂಜೀವ ಶೇರೆಗಾರ್, ಸಿಐಟಿಯುನ ವಿಶ್ವನಾಥ್ ರೈ, ಬಾಲಕೃಷ್ಣ ಶೆಟ್ಟಿ, ಕವಿರಾಜ್, ವಿಮಾ ನೌಕರರ ಸಂಘದ ವಿಶ್ವನಾಥ್, ಬಿಸಿಯೂಟ ನೌಕರರ ಸಂಘದ ಸುನಾಂದ, ಮುಖಂಡರಾದ ಬಲ್ಕೀಸ್, ಮಹಾಬಲ ವಡೇರಹೋಬಳಿ, ವೆಂಕಟೇಶ್ ಕೋಣಿ, ಶೇಖರ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಮಿಕ ಸಂಘಗಳ ಜಂಟಿ ವೇದಿಕೆಯ ಕೆ.ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶಿಧರ್ ಗೊಲ್ಲ ವಂದಿಸಿದರು. ಬಳಿಕ ವಿವಿಧ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗೆ ಸಲ್ಲಿಸಿದರು.

ಕಲಬುರಗಿಯಲ್ಲಿ ಕಾರ್ಮಿಕರಿಂದ ಪ್ರತಿಭಟನಾ ಮೆರವಣಿಗೆ

ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಕರೆಯ ಮೇರೆಗೆ ನಡೆಯುತ್ತಿರುವ ರಾಷ್ಟ್ರವ್ಯಾಪಿ ಮುಷ್ಕರ ಬೆಂಬಲಿಸಿ ಕಾರ್ಮಿಕರು ಕಲಬುರಗಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಗರದ ಕೇಂದ್ರ ಬಸ್ ನಿಲ್ದಾಣದಿಂದ ಆರಂಭವಾದ ಮೆರವಣಿಗೆ ಎಸ್‌ವಿಪಿ ವೃತ್ತ, ಡಿಸಿ ಕಚೇರಿ ಮಾರ್ಗವಾಗಿ ಜಗತ್ ವೃತ್ತದಲ್ಲಿ ಸಮಾವೇಶಗೊಂಡಿತು.

ಮೆರವಣಿಗೆಯುದಕ್ಕೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಕೇಂದ್ರ ಸರ್ಕಾರ ಒಂದು ಕಡೆ ಕಾರ್ಪೋರೇಟ್ ಕಂಪನಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಅಡುಗೆ ಅನಿಲ ದರ, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡುವ ಮೂಲಕ ಬಡ ಹಾಗೂ ಕೂಲಿ ಕಾರ್ಮಿಕರ ಬದುಕಿಗೆ ಬರೆ ಎಳೆಯುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಬೆಲೆ ಏರಿಕೆ ನಿಯಂತ್ರಣ, ಕನಿಷ್ಟ ವೇತನ ಜಾರಿ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ, ಸಾರ್ವಜನಿಕ ವಲಯದ ಖಾಸಗೀಕರಣ ತಡೆಯುವುದು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಈಡೆರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

Donate Janashakthi Media

Leave a Reply

Your email address will not be published. Required fields are marked *