ಬೆಂಗಳೂರು: ನಗರದಲ್ಲಿ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO)ಯ ನೌಕರರೇ ನಡೆಸುತ್ತಿದ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿನ ಹಣ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದ್ದೂ, ಸೊಸೈಟಿ ಖಾತೆಯಿಂದ 70 ಕೋಟಿ ರೂಪಾಯಿಗಿಂತ ಹೆಚ್ಚು ಹಣ ಮಾಯವಾಗಿರುವುದಾಗಿ ತಿಳಿದುಬಂದಿದೆ. ಈ ಪ್ರಕರಣವು ಇದೀಗ ದೊಡ್ಡ ಆರ್ಥಿಕ ದಂಧೆಯ ಶಂಕೆಗೆ ಕಾರಣವಾಗಿದೆ.
ರಿಚ್ಮಂಡ್ ಸರ್ಕಲ್ ಬಳಿಯ ಇಪಿಎಫ್‌ಒ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಪಿಎಫ್‌ಒ ಎಂಪ್ಲಾಯೀಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ನೂರಾರು ನೌಕರರು ತಮ್ಮ ತಿಂಗಳ ಆದಾಯದ ಒಂದು ಭಾಗವನ್ನು ಭವಿಷ್ಯ ಉದ್ದೇಶದಿಂದ ಠೇವಣಿ ಇಡುತ್ತಿದ್ದರು. ಆದರೆ ಇದೀಗ ಆ ಸೊಸೈಟಿ ಅಕೌಂಟ್‌ನಲ್ಲಿದ್ದ ಹಣ ನಾಪತ್ತೆಯಾಗಿದ್ದು, ನೌಕರರ ಜೀವಮಾನ ಇಡೀ ದುಡಿದ ಹಣ ಸಂಗ್ರಹವೇ ಇಲ್ಲದೆ ಭವಿಷ್ಯದ ಬಗ್ಗೆ ಚಿಂತೆ ಆರಂಭವಾಗಿದೆ.
70 ಕೋಟಿ ನಾಪತ್ತೆ, ಸಿಇಒ, ಅಕೌಂಟೆಂಟ್ ವಿರುದ್ಧ ದೂರು
ಈ ಪ್ರಕರಣದಲ್ಲಿ ಸೊಸೈಟಿ ಸಿಇಒ ಗೋಪಿ ಹಾಗೂ ಅಕೌಂಟೆಂಟ್ ಜಗದೀಶ್ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳ ಮೇಲೆ ದೊಡ್ಡ ಮಟ್ಟದ ಹಣದ ದುರುಪಯೋಗ ಮತ್ತು ವಂಚನೆಯ ಆರೋಪ ಇದ್ದು, ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸೊಸೈಟಿಯಲ್ಲಿ ಸುಮಾರು 300 ಮಂದಿ ಸದಸ್ಯರಿದ್ದು, ಇವರಲ್ಲಿ ಹಲವರು ದಶಕಗಳ ಕಾಲ ತಮ್ಮ ದುಡಿಮೆ ಹಣವನ್ನು ಠೇವಣಿ ಇಟ್ಟಿದ್ದರು. ಇದೀಗ ಖಾತೆ ಶೂನ್ಯವಾಗಿದೆ ಎಂಬ ಸುದ್ದಿ ತಿಳಿದ ತಕ್ಷಣ ನೌಕರರಲ್ಲಿ ಆಕ್ರೋಶ ಮತ್ತು ಆತಂಕ ಹರಡಿದೆ.
ಇದನ್ನೂ ಓದಿ: ನಿರಂಜನ ಎಂದರೆ ಚಿರಸ್ಮರಣೆ, ಮೃತ್ಯಂಜಯ ಮಾತ್ರವಲ್ಲ; ಆಧುನಿಕ ಮನಸ್ಸಿನ ಪ್ರಯೋಗಶೀಲ ಸಾಹಿತಿ – ಪ್ರೊ. ರಾಜೇಂದ್ರ ಚೆನ್ನಿ.
“ಮಗನ ಮದುವೆ ಇದೆ ಸರ್, ನಾನು ಏನು ಮಾಡಲಿ? ಎಂದು ಹಣ ಠೇವಣಿ ಇಟ್ಟಿದ್ದ ನೌಕರರಲ್ಲಿ ಒಬ್ಬರು ಅಳುತ್ತಾ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. “ನನ್ನ ಮಗನ ಮದುವೆ ಇದೆ ಸರ್. ಸೊಸೈಟಿಯಲ್ಲಿ 25 ಲಕ್ಷ ರೂಪಾಯಿ ಠೇವಣಿ ಇಟ್ಟಿದ್ದೆ. ಆ ಹಣದಿಂದ ಮದುವೆ ವ್ಯವಸ್ಥೆ ಮಾಡಬೇಕಿತ್ತು. ಆದರೆ ಸೊಸೈಟಿ ಅಕೌಂಟ್‌ನಲ್ಲಿ ದುಡ್ಡೇ ಇಲ್ಲ ಅಂತ ಗೊತ್ತಾಯ್ತು. ಈಗ ಮದುವೆ ಹೇಗೆ ಮಾಡಲಿ? ನಮ್ಮ ಬದುಕು ಮುಗಿದಂತಾಗಿದೆ ಎಂದು ಕಣ್ಣೀರಿಟ್ಟರು.
ಇಂತಹ ಹಲವಾರು ನೌಕರರು ತಮ್ಮ ಮಕ್ಕಳ ಶಿಕ್ಷಣ, ಮನೆ ಸಾಲ, ಮತ್ತು ವೈದ್ಯಕೀಯ ವೆಚ್ಚಗಳಿಗಾಗಿ ಸೊಸೈಟಿಯ ಮೇಲೆ ಭರವಸೆ ಇಟ್ಟು ಹಣ ಇಟ್ಟಿದ್ದರು. ಆದರೆ ಹಣ ನಾಪತ್ತೆಯಾಗಿರುವ ಸುದ್ದಿ ಕೇಳಿ ಎಲ್ಲರೂ ಆಘಾತದಲ್ಲಿದ್ದಾರೆ.
ಪೊಲೀಸರ ತನಿಖೆ ಪ್ರಾರಂಭ
ದೂರು ದಾಖಲಿಸಿಕೊಂಡಿರುವ ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ಬ್ಯಾಂಕ್ ಖಾತೆ ವಿವರಗಳು, ಟ್ರಾನ್ಸಕ್ಷನ್ ದಾಖಲೆಗಳು ಹಾಗೂ ಸೊಸೈಟಿ ಆಡಳಿತ ಮಂಡಳಿಯ ಚಟುವಟಿಕೆಗಳ ಪರಿಶೀಲನೆ ನಡೆಯುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಕೆಲವು ಖಾತೆಗಳಿಂದ ಹಣವನ್ನು ಅನಧಿಕೃತವಾಗಿ ವರ್ಗಾಯಿಸಿರುವುದು ಬಹಿರಂಗವಾಗಿದೆ ಎಂಬ ಮಾಹಿತಿ ದೊರೆತಿದೆ.
ನೌಕರರೇ ನೌಕರರನ್ನೇ ವಂಚಿಸಿದ್ದಾರೆ ಎಂಬ ವಾದಗಳು ಎದ್ದಿವೆ. ಸರ್ಕಾರಿ ನೌಕರರಿಗೆ ಸುರಕ್ಷಿತವಾದ ಹೂಡಿಕೆ ಸ್ಥಳವೆಂದು ಕಂಡಿದ್ದ ಈ ಸೊಸೈಟಿ ಈಗ ಆ ನೌಕರರ ಬದುಕಿನ ನಂಬಿಕೆಯನ್ನು ಕಳೆದುಕೊಂಡಿದೆ. ಹಲವು ವರ್ಷಗಳ ವಿಶ್ವಾಸ, ಶ್ರಮದ ಸಂಗ್ರಹ ಒಂದು ಕ್ಷಣದಲ್ಲಿ ನಾಶವಾಗಿದೆ.
ಇದನ್ನೂ ನೋಡಿ: ಶಿಕ್ಷಣ ಇಲ್ಲದ ಪ್ರಜಾಪ್ರಭುತ್ವದಿಂದ ಸಮಾನತೆ ಅಸಾಧ್ಯ: ಕಿರಣ್ ಗಾಜನೂರು Janashakthi Media
