ಉತ್ತರಕನ್ನಡ: ಆಗಸ್ಟ್ 2 ಶನಿವಾರ ರಾತ್ರಿ ಜಿಲ್ಲೆಯ ಕಾರವಾರ ತಾಲೂಕಿನ ನಂದನಗದ್ದಾದಲ್ಲಿ ದೇವರ ಮನೆಯಲ್ಲಿ ಹಚ್ಚಿದ ದೀಪದಿಂದ ಸಂಪೂರ್ಣ ಮನೆಯೇ ಸುಟ್ಟು ಭಸ್ಮವಾದ ಘಟನೆ ನಡೆದಿದೆ. ಶಾಂತರಾಮ ದತ್ತ ದೇಸಾಯಿ ಎಂಬವರಿಗೆ ಸೇರಿದ ಮನೆಯಲ್ಲಿ ಅಗ್ನಿ ಅವಘಡ ನಡೆದಿದೆ.
ಬೆಂಕಿಯ ತೀವ್ರತೆಗೆ ಸಂಪೂರ್ಣ ಮನೆ ಧಗಧಗಿಸಿ ಹೊತ್ತಿ ಉರಿದು ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳು ಕರಗಿ ಭಸ್ಮವಾಗಿವೆ.
ಇದನ್ನೂ ಓದಿ: ಸೆಪ್ಟೆಂಬರ್ 9ರಂದು ಉಪರಾಷ್ಟ್ರಪತಿ ಚುನಾವಣೆ; ಅಭ್ಯರ್ಥಿಗಳು ಯಾರ್ಯಾರು?
ಮೂಲಗಳ ಪ್ರಕಾರ, ಶಾಂತರಾಮ ದೇಸಾಯಿ ಶನಿವಾರ ಸಂಜೆ ದೇವರ ಪೂಜೆಗಾಗಿ ದೀಪ ಹಚ್ಚಿ ಮನೆಯಿಂದ ಹೊರಗೆ ತೆರಳಿದ್ದರು. ಈ ವೇಳೆ ದೀಪದಿಂದ ಉಂಟಾದ ಬೆಂಕಿಯ ಕಿಡಿ ಹತ್ತಿಕೊಂಡು ಕೆಲವೇ ಕ್ಷಣಗಳಲ್ಲಿ ಇಡೀ ಮನೆಗೆ ವ್ಯಾಪಿಸಿದೆ. ಮನೆಯಲ್ಲಿದ್ದ ಪೀಠೋಪಕರಣಗಳು, ದುಬಾರಿ ವಸ್ತುಗಳು, ದಾಖಲೆಗಳು ಸೇರಿದಂತೆ ಎಲ್ಲವೂ ಬೆಂಕಿಯ ಜ್ವಾಲೆಗೆ ಆಹುತಿಯಾಗಿವೆ. ನೆರೆಹೊರೆಯವರು ಬೆಂಕಿಯನ್ನು ಗಮನಿಸಿ ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಕಾರವಾರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಕ್ಷಣ ಧಾವಿಸಿ ಬೆಂಕಿಯನ್ನು ನಂದಿಸುವ ಪ್ರಯತ್ನ ನಡೆಸಿದರು. ಆದರೆ, ಅಷ್ಟರಲ್ಲಾಗಲೇ ಬೆಂಕಿಯ ತೀವ್ರತೆಯಿಂದಾಗಿ ಮನೆಯ ಒಳಗಿನ ಬಹುತೇಕ ವಸ್ತುಗಳು ಸುಟ್ಟುಹೋಗಿದ್ದವು. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ದೇಸಾಯಿ ಕುಟುಂಬಕ್ಕೆ ಭಾರೀ ಆರ್ಥಿಕ ನಷ್ಟವಾಗಿದೆ.
ಕಾರವಾರ ನಗರ ಠಾಣೆಯ ಪೊಲೀಸರು ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಬೆಂಕಿಗೆ ದೇವರ ದೀಪವೇ ಕಾರಣ ಎಂದು ತಿಳಿದುಬಂದಿದೆ.
ಇದನ್ನೂ ನೋಡಿ: ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳ ಬಗ್ಗೆ ಮಾತನಾಡುವುದು ತಪ್ಪೆ? ಯಾಕೆ ಅಪಪ್ರಚಾರ ಮಾಡ್ತೀರಿ? Janashakthi Media
