ಸಂಸತ್ತಿನ ಮೊಟಕುಗೊಂಡ ಮಳೆಗಾಲದ ಅಧಿವೇಶನದ ಕೊನೆಯಲ್ಲಿ ಪಾಸು ಮಾಡಿದ ಮೂರು ಕಾರ್ಮಿಕ ಕಾನೂನುಗಳು ದೇಶದ ಕಾರ್ಮಿಕ ವರ್ಗದ ಮೇಲೆ ಒಂದು ಗಂಭೀರ ಆಕ್ರಮಣವಾಗಿದೆ. ಕೈಗಾರಿಕಾ ಸಂಬಂಧಗಳ ಸಂಹಿತೆ, ವೃತ್ತಿ ಸುರಕ್ಷಿತತೆ, ಆರೋಗ್ಯ ಮತ್ತು ದುಡಿಮೆಯ ಪರಿಸ್ಥಿತಿಗಳ ಸಂಹಿತೆ ಮತ್ತು ಸಾಮಾಜಿಕ ಭದ್ರತಾ ಸಂಹಿತೆ, ಈ ಮೂರರ ಜೊತೆಗೆ ಕಳೆದ ವರ್ಷ ಪಾಸಾದ ವೇತನಗಳ ಕುರಿತ ಸಂಹಿತೆ ಕಾರ್ಮಿಕರಿಗೆ ಸಂಬಂಧಪಟ್ಟ ನೂರಾರು ಕಾನೂನುಗಳನ್ನು ಸರಳೀಕರಿಸಲು ಮತ್ತು ಆಧುನೀಕರಿಸಲು ಎನ್ನಲಾಗುತ್ತಿದೆ. ಆದರೆ ಈ ಸಮಸ್ತ ಕಸರತ್ತು ನವ-ಉದಾರವಾದಿ ಸುಧಾರಣೆಗಳ ಒಂದು ಬಹಳ ಮಹತ್ವದ ಅಂಶವನ್ನು ಈಡೇರಿಸುವುದಕ್ಕಾಗಿ. ಅಂದರೆ, ಮನಬಂದಂತೆ ಕಾರ್ಮಿಕರನ್ನು ದುಡಿಸಿಕೊಳ್ಳುವ ಅಥವ ಕಿತ್ತುಹಾಕುವ ಹೈರ್ ಅಂಡ್ ಫೈರ್ ವ್ಯವಸ್ಥೆಯನ್ನು, ಶ್ರಮವನ್ನು ಮಾಲಕರಿಗೆ ಬೇಕಾದಂತೆ ಲಭ್ಯಗೊಳಿಸುವುದು ಮತ್ತು ಬಂಡವಾಳಶಾಹಿಗಳ ಗರಿಷ್ಟ ಲಾಭದ ಧಾವಂತದಲ್ಲಿ ಅಡ್ಡಿಯುಂಟು ಮಾಡುವ ಕಾರ್ಮಿಕರ ಎಲ್ಲ ರಕ್ಷಣೆಗಳನ್ನು ತೆಗೆದು ಹಾಕುವುದು.
ಹೊಸ ಕಾರ್ಮಿಕ ಕಾನೂನುಗಳು ಪ್ರಸಕ್ತ ಕಾರ್ಮಿಕ ಕಾನೂನುಗಳು ಕಾರ್ಮಿಕರಿಗೆ ಒದಗಿಸಿದ್ದ ಸೀಮಿತ ಹಕ್ಕುಗಳು ಮತ್ತು ರಕ್ಷಣೆಗಳನ್ನೂ ಶಿಥಿಲಗೊಳಿಸುತ್ತವೆ.
ಬಹುಪಾಲು ಕೈಗಾರಿಕಾ ಉದ್ದಿಮೆಗಳು ಈ ಕಾನೂನುಗಳ ವ್ಯಾಪ್ತಿಯಿಂದಲೇ ಹೊರಗೆ ಹೋಗುವ ರೀತಿಯಲ್ಲಿ ಇದಕ್ಕೆ ಅನ್ವಯವಾಗುವ ಕಾರ್ಖಾನೆಗಳ ಬಲವನ್ನು ಪರಿಷ್ಕರಿಸಲಾಗಿದೆ. ಈ ಮೊದಲು ವಿದ್ಯುಚ್ಛಕ್ಕಿ ಬಳಸುವ ಮತ್ತು ೧೦ಕ್ಕಿಂತ ಹೆಚ್ಚು ಕಾರ್ಮಿಕರಿದ್ದ ಹಾಗೂ ವಿದ್ಯುಚ್ಛಕ್ತಿ ಬಳಸದೇ ೨೦ ಕಾರ್ಮಿಕರಿಗಿಂತ ಹೆಚ್ಚು ಬಲವಿರುವ ಎಲ್ಲ ಕಾರ್ಖಾನೆಗಳಿಗೆ ಕಾರ್ಮಿಕ ಕಾನೂನುಗಳು ಅನ್ವಯವಾಗುತ್ತಿದ್ದವು. ಈಗ ಇದನ್ನು ಅನುಕ್ರಮವಾಗಿ ೨೦ ಮತ್ತು ೪೦ಕ್ಕೆ ಏರಿಸಲಾಗಿದೆ. ಒಂದೇ ಹೊಡೆತದಲ್ಲಿ ಕೈಗಾರಿಕಾ ಸಂಬಂಧಗಳ ಸಂಹಿತೆ ೭೦ಶೇ. ಕೈಗಾರಿಕಾ ಉದ್ದಿಮೆಗಳನ್ನು ಮತ್ತು ೭೪ಶೇ. ಕೈಗಾರಿಕಾ ಕಾರ್ಮಿಕರನ್ನು ‘ಹೈರ್ ಅಂಡ್ ಫೈರ್’ ವ್ಯವಸ್ಥೆಗೆ ಒಳಪಡಿಸಿದೆ. ಮೊದಲು ೧೦೦ಕ್ಕಿಂತ ಹೆಚ್ಚು ಕಾರ್ಮಿಕರಿದ್ದ ಉದ್ದಿಮೆಗಳು ತಮ್ಮ ಕಾರ್ಮಿಕರ ಲೇ ಆಫ್ ಮತ್ತು ರಿಟ್ರೆಂಚ್ಮೆಂಟ್ ಮಾಡಲು ರಾಜ್ಯ ಸರಕಾರದ ಅನುಮತಿಯನ್ನು ಪಡೆಯಬೇಕಾಗಿತ್ತು. ಈಗ ಈ ಕನಿಷ್ಟ ಮಿತಿಯನ್ನು ೩೦೦ಕ್ಕೆ ಏರಿಸಲಾಗಿದೆ. ಅಲ್ಲದೆ ಸರಕಾರ ಒಂದು ಅಧಿಸೂಚನೆಯ ಮೇರೆಗೆ ಅದನ್ನು ಇನ್ನೂ ಏರಿಸುವ ಅಧಿಕಾರವನ್ನು ಹೊಂದಿದೆ. ೩೦೦ಕ್ಕಿಂತ ಕಡಿಮೆ ಕಾರ್ಮಿಕರನ್ನು ದುಡಿಸಿಕೊಳ್ಳುವ ಕಾರ್ಖಾನೆಗಳು, ಉದ್ದಿಮೆಗಳು ಈಗ ‘ಸ್ಥಾಯೀ ಆದೇಶ’ಗಳನ್ನು ಹೊಂದಿರಬೇಕಾಗಿಲ್ಲ. ಇದು ಕಾರ್ಮಿಕರ ಸೇವಾಷರತ್ತುಗಳಿಗೆ ಸಂಬಂಧಪಟ್ಟಂತೆ ಮಾಲಕರನ್ನು ಕಾನೂನಾತ್ಮಕವಾಗಿ ಬದ್ಧಗೊಳಿಸುವ ಒಂದು ದಸ್ತಾವೇಜು. ಅಂದರೆ ಮಾಲಕರು ಇಂತಹ ಬದ್ಧತೆ ಹೊಂದಿರಬೇಕಾಗಿಲ್ಲ. ಈ ಶಾಸನಗಳಲ್ಲಿ ಗಂಭೀರ ದೋಷಗಳಿವೆ. ಏಕೆಂದರೆ ಇವು ಕಾರ್ಯಾಂಗಕ್ಕೆ ಅವನ್ನು ಮುರಿದು ಮೂಲ ಅಂಶಗಳನ್ನು ದುರ್ಬಲಗೊಳಿಸುವ ನಿಯಮಗಳನ್ನು ರೂಪಿಸಲು ಅವಕಾಶ ಕೊಡುತ್ತವೆ. ಉದಾಹರಣೆಗೆ, ಕೈಗಾರಿಕಾ ಸಂಬಂಧಗಳ ಸಂಹಿತೆಯಲ್ಲಿ ಸೂಕ್ತ ಸರಕಾರ ‘ಸಾರ್ವಜನಿಕ ಹಿತದೃಷ್ಟಿಯಿಂದ’ ಯಾವುದೇ ಕೈಗಾರಿಕಾ ಉದ್ದಿಮೆಗೆ ಈ ಸಂಹಿತೆಯ ಅಂಶಗಳಿಂದ ವಿನಾಯ್ತಿ ಕೊಡಬಹುದು. ಈ ಕರಾಳ ಅಂಶದ ಪೂರ್ವಚಿತ್ರವನ್ನು ಮಧ್ಯಪ್ರದೇಶದ ಬಿಜೆಪಿ ಸರಕಾರ ಕೊರೊನಾ ಅವಧಿಯಲ್ಲಿ ರಾಜ್ಯದಲ್ಲಿ ಹೊಸದಾಗಿ ಸ್ಥಾಪನೆಗೊಂಡ ಉದ್ದಿಮೆಗಳಿಗೆ ಎಲ್ಲ ಕಾರ್ಮಿಕ ಕಾನೂನುಗಳನ್ನು ಅಮಾನತುಗೊಳಿಸಿದ್ದಾಗ ಕಾಣ ಸಿಕ್ಕಿತ್ತು. ರಾಜ್ಯಗಳಿಗೆ ಹೀಗೆ ಕೊಟ್ಟಿರುವ ಶಾಸನಾತ್ಮಕ ಅಧಿಕಾರ ಪರಿಣಾವೆಂದರೆ ಕಾರ್ಮಿಕ ರಕ್ಷಣೆಯನ್ನು ಯಾರು ಹೆಚ್ಚು ದುರ್ಬಲಗೊಳಿಸುತ್ತಾರೆ ಎಂಬ ಸ್ಪರ್ಧೆ.
ಹೊಸ ಕಾರ್ಮಿಕ ಕಾನೂನುಗಳು ಶ್ರಮಶಕ್ತಿಯ ಅನೌಪಚಾರೀಕರಣ, ಕಾಂಟ್ರಾಕ್ಟೀಕರಣ ಮತ್ತು ಕ್ಯಾಶುವಲೀಕರಣಕ್ಕೆ ಉತ್ತೇಜನೆ ನೀಡುತ್ತವೆ. ‘ನಿಗದಿತ ಅವಧಿಯ ಉದ್ಯೋಗ’ (fixed term employment) ಎಂಬ ಹೆಸರಿನಿಂದ ಅಲ್ಪ ಕಾಲದ ಕೆಲಸದ ಹೊಸದೊಂದು ವಿಧವನ್ನು ಸೇರಿಸಲಾಗಿದೆ. ಇದು ಸೀಸನಲ್ ಕೆಲಸಗಳಿಗಾಗಿ ಎನ್ನಲಾಗಿದೆ. ಆದರೆ ಇಂತಹ ನಿಗದಿತ ಅವಧಿಯ ನವೀಕರಣಕ್ಕೆ ಮಿತಿ ಹಾಕಿಲ್ಲ. ಇದರಿಂದಾಗಿ ಇದೊಂದು ಯಾವುದೇ ಸಾಮಾಜಿಕ ಭದ್ರತೆಯ ಸೌಲಭ್ಯಗಳಿಲ್ಲದ ಕೆಲಸದ ಒಂದು ಶಾಶ್ವತ ವಿಧಾನವಾಗಲಿದೆ. ಈ ಮಸೂದೆಯ ಹಿಂದಿನ ಆವೃತ್ತಿಯಲ್ಲಿ ಕನಿಷ್ಟ ೨೦ ಕಾಂಟ್ರಾಕ್ಟ್ ಕಾರ್ಮಿಕರನ್ನು ದುಡಿಸಿಕೊಳ್ಳುವ ಸಂಸ್ಥೆಗಳಿಗೆ ಕಾಂಟ್ರಾಕ್ಟ್ ಕಲಮುಗಳು ಅನ್ವಯವಾಗುತ್ತವೆ ಎನ್ನಲಾಗಿತ್ತು. ಇದನ್ನು ಈಗ ಅಂಗೀಕರಿಸಿರುವ ಶಾಸನದಲ್ಲಿ ೫೦ಕ್ಕೆ ಏರಿಸಲಾಗಿದೆ. ಈ ಮೂಲಕ ಮೂರನೇ ಎರಡು ಇಂತಹ ಕಂಪನಿಗಳು ಕಾಂಟ್ರಾಕ್ಟ್ ಕಾನೂನಿನ ವ್ಯಾಪ್ತಿಗೇ ಬರುವುದಿಲ್ಲ.
ಮೂರು ಕೃಷಿ ಸಂಬಂಧಿ ಕಾನೂನುಗಳನ್ನು ಯೇನಕೇನ ಪ್ರಕಾರೇಣ ಪಾಸು ಮಾಡಿಸಿಕೊಂಡ ನಂತರ ಪ್ರತಿಪಕ್ಷಗಳಿಲ್ಲದ ಸದನಗಳಲ್ಲಿ ಚರ್ಚೆಯೆಂಬ ತಮಾಷೆಯ ನಂತರ ಮೂರು ಮಹತ್ವದ ಕಾರ್ಮಿಕ ಕಾನೂನುಗಳನ್ನು ಮೋದಿ ಸರಕಾರ ಪಾಸು ಮಾಡಿಸಿಕೊಂಡಿದೆ. ಈ ಶಾಸನಗಳು ಒಂದು ವರ್ಗ ದಾಳಿಯಾಗಿವೆ. ‘ನ್ಯೂ ಇಂಡಿಯ’ ಎಂಬ ಆಳ್ವಿಕೆ ದೊಡ್ಡ ಬಂಡವಾಳಶಾಹಿಗಳು ಮತ್ತು ಅಂತರಾಷ್ಟ್ರೀಯ ಹಣಕಾಸು ಬಂಡವಾಳದ ಕೈಂಕರ್ಯ ನಡೆಸಲು ಸಂಪೂರ್ಣವಾಗಿ ಕಟಿಬದ್ಧವಾಗಿರುವಂತದ್ದು ಎಂಬ ವಾಸ್ತವತೆಯನ್ನು ಇದು ಬಯಲಿಗೆ ತಂದಿದೆ. ಸನ್ನಿವೇಶ ಒಂದು ಬಲಿಷ್ಟ ಕಾರ್ಮಿಕ -ರೈತ ಐಕ್ಯತೆಯನ್ನು ಕಟ್ಟಬೇಕಾದ ಅಗತ್ಯವನ್ನು ತೋರಿಸುತ್ತದೆ. ಕಾರ್ಮಿಕರು ಮತ್ತು ರೈತರ ಹೋರಾಟಗಳನ್ನು ತೀವ್ರಗೊಳಿಸುವ ಮತ್ತು ವಿಸ್ತರಿಸುವ ಮೂಲಕ ಎಡ ಮತ್ತು ಪ್ರಜಾಪ್ರಭುತ್ವವಾದಿ ಶಕ್ತಿಗಳ ಸಾಧ್ಯವಾದಷ್ಟು ವ್ಯಾಪಕವಾದ ಐಕ್ಯತೆಯನ್ನು ಬೆಸೆಯಲು ಸಾಧ್ಯವಿದೆ.
ಕಾರ್ಮಿಕರ ಸುರಕ್ಷಿತತೆ ಮತ್ತು ಕೆಲಸದ ಪರಿಸ್ಥಿತಿಗಳ ಪ್ರಶ್ನೆಗಳನ್ನು ನಿಭಾಸುವ ಗಂಭೀರ ಪ್ರಯತ್ನವೇನಿಲ್ಲ. ಕೋವಿಡ್ ಮಹಾಸೋಂಕಿನ ಅವಧಿಯಲ್ಲಿಯೇ ೩೦ ಕೈಗಾರಿಕಾ ಅಪಘಾತಗಳು ಸಂಭವಿಸಿವೆ, ಇದರಲ್ಲಿ ೭೫ ಕಾರ್ಮಿಕರು ಪ್ರಾಣ ಕಳದುಕೊಂಡಿದ್ದಾರೆ, ನೂರಾರು ಜನ ಗಾಯಗೊಂಡಿದ್ದಾರೆ. ಸುರಕ್ಷಿತತೆಯ ಮಾನದಂಡಗಳು ಮತ್ತು ಗರಿಷ್ಟ ಕೆಲಸದ ಗಂಟೆಗಳನ್ನು ಕುರಿತಾದ ‘ವೃತ್ತಿ ಸುರಕ್ಷಿತತೆ, ಆರೋಗ್ಯ ಮತ್ತು ದುಡಿಮೆಯ ಪರಿಸ್ಥಿತಿಗಳ ಸಂಹಿತೆ’ ಸಣ್ಣ ಉದ್ದಿಮೆಗಳನ್ನೆಲ್ಲವನ್ನೂ ತನ್ನ ವ್ಯಾಪ್ತಿಯಿಂದ ಹೊರಗಿಟ್ಟಿದೆ. ಅಲ್ಲದೆ ಸುರಕ್ಷಿತತೆಯ ಮಾನಕಗಳ ಮತ್ತು ವಿವಿಧ ಸಾಮಾಜಿಕ ಭದ್ರತಾ ಸ್ಕೀಮುಗಳ ಅನ್ವಯದ ಮಿತಿಗಳನ್ನು ನಿಯಮಗಳ ಮೂಲಕ ನಿರ್ದಿಷ್ಟ ಪಡಿಸಬಹುದು, ಇಲ್ಲವೇ ಆ ಅಧಿಕಾರವನ್ನು ರಾಜ್ಯ ಸರಕಾಗಳಿಗೆ ನೀಡಲಾಗಿದೆ.
ಸಂಘಟಿಸುವ ಹಕ್ಕು ಮತ್ತು ಸಂಘ ಕಟ್ಟಿಕೊಳ್ಳುವ ಹಕ್ಕು ಕೂಡ ಕೈಗಾರಿಕಾ ಸಂಬಂಧಗಳ ಸಂಹಿತೆಗೆ ಒಳಪಟ್ಟಿದೆ. ಯೂನಿಯನ್ಗಳ ಮಾನ್ಯತೆಗೆ ಮಾನದಂಡಗಳಿಲ್ಲ; ಮಾನ್ಯತೆ ನೀಡಲು ಗುಪ್ತ ಮತದಾನ ನಡೆಸಬೇಕು ಎಂಬ ದೀರ್ಘಕಾಲದ ಬೇಡಿಕೆಯನ್ನು ನಿರ್ಲಕ್ಷಿಸಲಾಗಿದೆ. ಸಾಮೂಹಿಕ ಚೌಕಾಸಿಯ ಪ್ರಕ್ರಿಯೆಯನ್ನು ನಿರ್ದಿಷ್ಟಪಡಿಸಲಾಗಿಲ್ಲ. ಸ್ಥಾಯೀ ಆದೇಶಗಳು ಇರುವುದಿಲ್ಲ ಎಂದರೆ, ಅದರರ್ಥ, ಒಂದು ಸಂಸ್ಥೆಯೊಳಗೆ ಒಂದೇ ರೀತಿಯ ದುಡಿಮೆಯ ಪರಿಸ್ಥಿತಿಗಳಿರುವುದಿಲ್ಲ, ಬಹಳಷ್ಟು ಕಾರ್ಮಿಕರು ಕಾಂಟ್ರಾಕ್ಟ್ ಅಥವ ನಿಗದಿತ ಅವಧಿಯವರಾಗಿರುತ್ತಾರೆ. ಇದು ಕಾರ್ಮಿಕ ಸಂಘಗಳ ಕಾರ್ಯನಿರ್ವಹಣೆಗೆ ತೊಂದರೆಯುಂಟು ಮಾಡುತ್ತದೆ.
ಒಂದು ಹೆಚ್ಚು ಗಂಭೀರ ದಾಳಿಯೆಂದರೆ, ಮುಷ್ಕರದ ಹಕ್ಕಿನ ಮೇಲೆ ಸುಮಾರಾಗಿ ನಿರ್ಬಂಧವನ್ನೇ ಹಾಕಲಾಗಿದೆ. ಕೈಗಾರಿಕಾ ಸಂಬಂಧಗಳ ಸಂಹಿತೆಯಲ್ಲಿ ೧೪ ದಿನಗಳ ನೋಟೀಸು ಕೊಡಬೇಕು ಎಂದು ಹೇಳಲಾಗಿದೆ(ಅದೇ ವೇಳೆಗೆ, ೬೦ ದಿನಗಳ ಮೊದಲು ಮುಷ್ಕರದ ನೋಟೀಸು ಕೊಡಬೇಕು ಎಂದೂ ಹೇಳಲಾಗಿದೆ). ಇದರಲ್ಲಿ ರಾಜಿ-ಸಂಧಾನದ ಕಲಾಪಗಳೂ ತಂತಾನೇ ನುಸುಳುತ್ತವೆ. ಈ ಅವಧಿಯಲ್ಲಿ ಮುಷ್ಕರಕ್ಕೆ ಅನುಮತಿ ಇರುವುದಿಲ್ಲ. ರಾಜಿ-ಸಂಧಾನ ಕಲಾಪಗಳು ಮುಗಿದ ಒಂದು ವಾರದ ನಂತರವಷ್ಟೇ ಮುಷ್ಕರ ನಡೆಸಬಹುದು. ಇನ್ನೊಂದು ಅಂಶವಿದೆ. ಮೂರು ತಿಂಗಳ ನ್ಯಾಯನಿರ್ಣಯ ಕಲಾಪಗಳ ವೇಳೆಯಲ್ಲಿ ಮುಷ್ಕರ ನಡೆಸುವಂತಿಲ್ಲ. ಅಗತ್ಯ ಸೇವೆಗಳಲ್ಲಿರುವ ಕಾರ್ಮಿಕರು ಮುಷ್ಕರಕ್ಕೆ ಆರು ವಾರಗಳ ನೋಟೀಸು ಕೊಡಬೇಕು.
ಇಂತಹ ಷರತ್ತುಗಳ ಗೊಂದಲದ ಗೂಡಿನಿಂದ ಮೂಡಿಬರುವ ಸಂಗತಿಯೆಂದರೆ, ಮುಷ್ಕರದ ನೋಟೀಸು ಕೊಟ್ಟ ಮೇಲೆ ರಾಜಿಸಂಧಾನ/ನ್ಯಾಯನಿರ್ಣಯದ ದೀರ್ಘಕಾಲ ಎಳೆಯುವ ಘಟ್ಟದವರೆಗೆ ಮುಷ್ಕರ ನಡೆಸುವಂತಿಲ್ಲ.
ಮೋದಿ ಸರಕಾರ ಈ ಮೂರು ಕಾರ್ಮಿಕ-ವಿರೋಧಿ ಮಸೂದೆಗಳನ್ನು ಮಹಾಸೋಂಕಿನ ಅವಧಿಯಲ್ಲಿ ಸಂಸತ್ತಿನ ಬಾಯಿ ಕಟ್ಟಿ ಹಾಕಿ ತುರುಕಿಸಿದೆ. ಈ ಅಧಿವೇಶನದಲ್ಲಿ ಮಂಡಿಸಿದ ಮೂರು ಮಸೂದೆಗಳು ೨೦೧೯ರಲ್ಲಿ ಸಂಸತ್ತಿನಲ್ಲಿ ಮಂಡಿಸಿದ ಮಸೂದೆಗಳಿಗಿಂತ ಭಿನ್ನವಾಗಿದ್ದವು. ಅವು ಸ್ಥಾಯಿ ಸಮಿತಿಯ ಮೂಲಕ ಹಾದು ಬಂದಿದ್ದವು. ಆದರೆ ಇವಕ್ಕೆ ಲೇಆಫ್, ರಿಟ್ರೆಂಚ್ಮೆಂಟ್ಗಳಿಗೆ ಕನಿಷ್ಟ ಕಾರ್ಮಿಕ ಬಲವನ್ನು ೩೦೦ಕ್ಕೆ ಏರಿಸುವುದು ಮುಂತಾದ ಹೊಸ ಅಂಶಗಳನ್ನು ಸೇರಿಸಲಾಯಿತು. ಇಂತಹ ದೀರ್ಘ ಕಾಲ ಪರಿಣಾಮ ಬೀರುವಂತಹ ಮಸೂದೆಗಳನ್ನು ಸ್ಥಾಯಿ ಸಮಿತಿಗಳಲ್ಲಿ ತಪಾಸಣೆ ಇಲ್ಲದೆ, ಪ್ರತಿಪಕ್ಷಗಳು ಇಲ್ಲದ ಸದನಗಳಲ್ಲಿ ಚರ್ಚೆಯೆಂಬ ತಮಾಷೆ ನಡೆಸಿ ಅಂಗೀಕರಿಸಲಾಗಿದೆ.
ಈ ಶಾಸನಗಳು ಒಂದು ವರ್ಗ ದಾಳಿಯಾಗಿವೆ. ‘ನ್ಯೂ ಇಂಡಿಯ’ ಎಂಬ ಆಳ್ವಿಕೆ ದೊಡ್ಡ ಬಂಡವಾಳಶಾಹಿಗಳು ಮತ್ತು ಅಂತರಾಷ್ಟ್ರೀಯ ಹಣಕಾಸು ಬಂಡವಾಳದ ಕೈಂಕರ್ಯ ನಡೆಸಲು ಸಂಪೂರ್ಣವಾಗಿ ಕಟಿಬದ್ಧವಾಗಿರುವಂತದ್ದು ಎಂಬ ವಾಸ್ತವತೆಯನ್ನು ಇದು ಬಯಲಿಗೆ ತಂದಿದೆ. ಮೂರು ಕಾರ್ಮಿಕ ಶಾಸನಗಳು ಮತ್ತು ಮೂರು ಕೃಷಿ ಸಂಬಂಧಿ ಕಾನೂನುಗಳು ಕಾರ್ಮಿಕರು ಮತ್ತು ರೈತರ ಮೇಲಿನ ದುಷ್ಟ ದಾಳಿಗಳು. ಕಾರ್ಮಿಕ ವರ್ಗ ಈ ಭೀಷಣ ದಾಳಿಯನ್ನು ಐಕ್ಯ ಮತ್ತು ನಿರಂತರ ಪ್ರತಿರೋಧದ ಮೂಲಕ ಎದುರಿಸಲು ಸಿದ್ಧಗೊಳ್ಳುತ್ತಿದೆ. ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಪ್ರತಿಭಟನೆಗಳ ಕರೆಗಳಿಗೆ ಉತ್ತಮ ಸ್ಪಂದನ ದೊರೆಯುತ್ತಿದೆ. ಇದು ಆರಂಭವಷ್ಟೇ. ಸನ್ನಿವೇಶ ಒಂದು ಬಲಿಷ್ಟ ಕಾರ್ಮಿಕ-ರೈತ ಐಕ್ಯತೆಯನ್ನು ಕಟ್ಟಬೇಕಾದ ಅಗತ್ಯವನ್ನು ತೋರಿಸುತ್ತದೆ. ಕಾರ್ಮಿಕರು ಮತ್ತು ರೈತರ ಹೋರಾಟಗಳನ್ನು ತೀವ್ರಗೊಳಿಸುವ ಮತ್ತು ವಿಸ್ತರಿಸುವ ಮೂಲಕ ಎಡ ಮತ್ತು ಪ್ರಜಾಪ್ರಭುತ್ವವಾದಿ ಶಕ್ತಿಗಳ ಸಾಧ್ಯವಾದಷ್ಟು ವ್ಯಾಪಕವಾದ ಐಕ್ಯತೆಯನ್ನು ಬೆಸೆಯಲು ಸಾಧ್ಯವಿದೆ.