ಬೆಂಗಳೂರು: ನಮ್ಮ ಮೆಟ್ರೋ ರೈಲು ಮೈಸೂರು ರಸ್ತೆ-ಕೆಂಗೇರಿ ವಿಸ್ತರಿತ ಮಾರ್ಗದ ಸಂಚಾರಕ್ಕೆ ಆಗಸ್ಟ್ 29 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಚಾಲನೆ ನೀಡುವುದರೊಂದಿಗೆ ವಾಣಿಜ್ಯ ಸಂಚಾರ ಆರಂಭಗೊಳ್ಳಲಿದೆ.
ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಅವರು ಆಗಸ್ಟ್ 29ರ ಭಾನುವಾರ ಮಧ್ಯಾಹ್ನ 12ಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಕೇಂದ್ರ ಸಚಿವರು ಮೈಸೂರು ರಸ್ತೆ-ಕೆಂಗೇರಿ ಮೆಟ್ರೋಗೆ ಚಾಲನೆ ನೀಡಲಿದ್ದಾರೆ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ಆತಂಕಪಡುವ ಅಗತ್ಯವಿಲ್ಲ-ಮಕ್ಕಳು ಶಾಲೆಗೆ ಬನ್ನಿ: ಸಿಎಂ ಬಸವರಾಜ ಬೊಮ್ಮಾಯಿ
ಮೈಸೂರು ರಸ್ತೆ-ಕೆಂಗೇರಿ ತನಕ ಮೆಟ್ರೋ ಕಾಮಗಾರಿ ಸಂಪೂರ್ಣ ಪೂರ್ಣಗೊಂಡಿದೆ. ರೈಲ್ವೆ ಸುರಕ್ಷತಾ ಆಯುಕ್ತ ಅಭಯ್ ಕುಮಾರ್ ರೈ ಆಗಸ್ಟ್ 11-12 ರಂದು ಸುರಕ್ಷತಾ ಪರೀಕ್ಷೆ ನಡೆಸಿ ಸುರಕ್ಷತಾ ಪ್ರಮಾಣಪತ್ರ ನೀಡಿರುವ ಹಿನ್ನೆಲೆಯಲ್ಲಿ ಪ್ರಯಾಣಿಕ ಬಳಕೆಗೆ ಈ ಮಾರ್ಗ ಮುಕ್ತವಾಗಲಿದೆ.
ನೇರಳೆ ಮಾರ್ಗದ ವಿಸ್ತರಿತ ಮಾರ್ಗದಿಂದ ಮೆಟ್ರೋ ರೈಲು ಸಂಚರಿಸಿಲಿದ್ದು ಇದರಿಂದ 75 ಸಾವಿರಕ್ಕೂ ಅಧಿಕ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ. ರಾಜರಾಜೇಶ್ವರಿನಗರ ಸೇರಿದಂತೆ ಸುತ್ತಮತ್ತಲಿನ ಬಡಾವಣೆಗಳ ಜನರಿಗೆ ಅನುಕೂಲವಾಗಲಿದೆ.
ಒಟ್ಟು 7.53 ಕಿ.ಮೀ ಉದ್ದದ 6 ಎತ್ತರಿಸಿದ ನಿಲ್ದಾಣ ಇರುವ ಈ ಮಾರ್ಗವನ್ನು 1,560 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಈ ವಿಸ್ತರಿತ ಮಾರ್ಗದಲ್ಲಿ ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನ ಭಾರತಿ, ಪಟ್ಟಣಗೆರೆ, ಮೈಲಸಂದ್ರ ಮತ್ತು ಕೆಂಗೇರಿ ಬಸ್ ನಿಲ್ದಾಣ ಸೇರಿದಂತೆ ಒಟ್ಟು ಆರು ಮೆಟ್ರೋ ನಿಲ್ದಾಣಗಳು ಬರುತ್ತವೆ. ಸದ್ಯ ನೇರಳೆ ಮಾರ್ಗದಲ್ಲಿ ಮೈಸೂರು ರಸ್ತೆ(ನಾಯಂಡನಹಳ್ಳಿ) ಯಿಂದ ಬೈಯ್ಯಪ್ಪನಹಳ್ಳಿವರೆಗೆ ಮೆಟ್ರೋ ಸಂಚಾರ ಇದೆ.