ಎಂಡೋಸಲ್ಫಾನ್ ಚಿಕಿತ್ಸೆ ವೆಚ್ಚ ಭರಿಸಲು ಭಿಕ್ಷೆ ಎತ್ತಲು ತೀರ್ಮಾನ

  •  ನೀಲಿ ಕಾರ್ಡ್  ಸೌಲಭ್ಯವನ್ನೂ ಇಲಾಖೆ ಈವರೆಗೂ ನೀಡಿಲ್ಲ. 

ಪುತ್ತೂರು: ತನ್ನ ವಯಸ್ಸಿನ ಮಕ್ಕಳೊಂದಿಗೆ ಬಾಲ್ಯದ ಸಿಹಿಕ್ಷಣಗಳನ್ನ ಸವಿಯಬೇಕಾದ ಬಾಲಕನೋರ್ವನಿಗೆ ಭಾಗ್ಯವಿಲ್ಲ. ತಲೆ ತಿರುಗಿ ಬೀಳದೆ, ಕೋಮಾಕ್ಕೆ ಜಾರದೆ ಸೇಫ್ ಆಗಿ ಇರುತ್ತೇನೆ ಎನ್ನುವ ಗ್ಯಾರೆಂಟಿಯಿಲ್ಲ

ಇದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಲ್ನಾಡು ನಿವಾಸಿ ಕೃಷ್ಣಪ್ಪ ಗೌಡರ ಪುತ್ರ ಗಗನ್ ಸದ್ಯದ ಪರಿಸ್ಥಿತಿ. ಗೇರು ತೋಪುಗಳಿಗೆ ಕಾಡುವ ಟಿ ಸೊಳ್ಳೆಗಳನ್ನು ನಿಯಂತ್ರಿಸಲು ಹೆಲಿಕಾಪ್ಟರ್ಮೂಲಕ ಎಗ್ಗಿಲ್ಲದೆ ಸಿಂಪಡಿಸಿದ ಎಂಡೋಸಲ್ಫಾನ್ ಎನ್ನುವ ವಿಷದ ದುಷ್ಪರಿಣಾಮ ಇದೀಗ ಬಾಲಕ ಆರೋಗ್ಯದ ಮೇಲೆ ಕಾಣಿಸಿಕೊಂಡಿದೆ.

ಬಲ್ನಾಡು ಪರಿಸರದಲ್ಲಿ ಸರಿ ಸುಮಾರು 20 ವರ್ಷಗಳ ಹಿಂದೆ ಹೆಲಿಕಾಪ್ಟರ್ ಮೂಲಕ ಎಂಡೋಸಲ್ಫಾನ್ ಎಂಬ ಕ್ರಿಮಿನಾಶಕವನ್ನ ಸಿಂಪಡಿಸಲಾಗಿತ್ತು. ಇದರ ದುಷ್ಪರಿಣಾಮ ಇದೀಗ 9 ವರ್ಷ ಪ್ರಾಯದ ಗಗನ್​ನಲ್ಲಿ ಕಾಣಿಸಿಕೊಂಡಿದೆ. ಹುಟ್ಟಿ 49 ದಿನವಾಗುತ್ತಲೇ ಅಸ್ತಮಾ ಕಾಯಿಲೆಯಿಂದ ಬಳಲಲಾರಂಭಿಸಿದ್ದ ಗಗನ್​ಗೆ ಸೂಕ್ತ ಚಿಕಿತ್ಸೆ ನೀಡಲಾಗಿತ್ತು. ಆ ಬಳಿಕ ಗಗನ್ ಮಧುಮೇಹ ಕಾಯಿಲೆಗೂ ತುತ್ತಾಗಿದ್ದ. ಇದೀಗ ದಿನಕ್ಕೆ ಮೂರು ಬಾರಿ ಇನ್ಸುಲಿನ್ ತೆಗೆದುಕೊಳ್ಳಬೇಕಾದ ಸ್ಥಿತಿಯಲ್ಲಿದ್ದಾನೆ.

ಆರೋಗ್ಯ ಇಲಾಖೆ ಈತನನ್ನು ಎಂಡೋ (ಸಲ್ಫಾನ್) ಸಂತ್ರಸ್ತ ಪಟ್ಟಿಗೆ ಸೇರಿಸಿಕೊಂಡಿದ್ದು, ಇಲಾಖೆಯಿಂದ ವಿತರಣೆಯಾಗುವ ನೀಲಿ ಕಾರ್ಡನ್ನು ಕೂಡಾ ನೀಡಿದೆ. ಆದರೆ ಕಾರ್ಡ್ ಮೂಲಕ ನೀಡಬೇಕಾದ ಯಾವುದೇ ಸೌಲಭ್ಯವನ್ನೂ ಇಲಾಖೆ ಈವರೆಗೂ ನೀಡಿಲ್ಲ. ಕೂಲಿ ಕಾರ್ಮಿಕನಾಗಿ ದುಡಿಯುತ್ತಿರುವ ಗಗನ್ ತಂದೆ ಕೃಷ್ಣಪ್ಪ ಗೌಡ ಮಗನ ಆರೋಗ್ಯ ಕಾಪಾಡಿಕೊಳ್ಳಲು ಸಾಲ ಸುಳಿಗೆ ಸಿಲುಕಿದ್ದಾರೆ. ಮಗನ ಚಿಕಿತ್ಸೆಗೆ ಹಣ ಒದಗಿಸಲಾಗದ ಕೃಷ್ಣಪ್ಪ ಗೌಡ ಇದೀಗ ಬೀದಿ ಬೀದಿ ಅಲೆದು ಹಣ ಒಟ್ಟುಗೂಡಿಸಲು ತೀರ್ಮಾನಿಸಿದ್ದಾರೆ. ಮಗನ ಚಿಕಿತ್ಸೆಗೆ ನೆರವು ನೀಡುವಂತೆ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ, ಸ್ಥಳೀಯ ಶಾಸಕ ಸೇರಿದಂತೆ ಹಲವರಿಗೆ ಮನವಿ ಮಾಡಿದ್ದರೂ, ಈವರೆಗೆ ಯಾವುದೇ ನೆರವು ಲಭ್ಯವಾದ ಕಾರಣ ಕೃಷ್ಣಪ್ಪ ಗೌಡ ಈ ತೀರ್ಮಾನಕ್ಕೆ ಬಂದಿದ್ದಾರೆ.

ಎಂಡೋ ಸಲ್ಫಾನ್ ಸಂತ್ರಸ್ತರ ಪಟ್ಟಿಯಲ್ಲಿ 25 ಶೇಕಡಾ ಸಂತ್ರಸ್ತನಾಗಿರುವ ಗಗನ್​ಗೂ ಉಚಿತ ಚಿಕಿತ್ಸೆ ಪಡೆಯುವ ಅವಕಾಶವಿದ್ದರೂ, ಈ ಅವಕಾಶವನ್ನು ನಿರಾಕರಿಸಲಾಗಿದೆ. ಇದು ಕೇವಲ ಗಗನ್ ಕುಟುಂಬದ ಸಮಸ್ಯೆಯಲ್ಲ, ಜಿಲ್ಲೆಯಲ್ಲಿ ಹಲವಾರು ಕುಟುಂಬಗಳು ಉಚಿತ ಚಿಕಿತ್ಸೆ ಹಾಗೂ ಸರಕಾರದ ಸೌಲಭ್ಯಗಳಿಂದ ವಂಚಿತವಾಗಿವೆ. ಆರೋಗ್ಯ ಇಲಾಖೆಯ ಈ ರೀತಿಯ ಬೇಜಾವಾಬ್ದಾರಿ ಬಗ್ಗೆ ಮಾನವಹಕ್ಕು ಆಯೋಗ ಹಾಗೂ ಮಕ್ಕಳ ಹಕ್ಕು ಆಯೋಗದ ಕದ ತಟ್ಟಲು ಹೋರಾಟಗಾರರು ತೀರ್ಮಾನಿಸಿದ್ದಾರೆ.
 
ಎಂಡೋಸಲ್ಫಾನ್ ಎಂಬುದು ದಶಕಕ್ಕೆ ಮೊದಲು ಇದ್ದ ಕೀಟನಾಶಕ. ಇದು ವಿಷಕಾರಿಯಾಗಿದ್ದು ಮಾನವನಿಗೆ ಹಾಗೂ ಪರಿಸರಕ್ಕೆ ಹಾನಿಕಾರಿ ಆಗುತ್ತದೆಂಬುದು ಸಾಬೀತಾಗಿ 2011ರಲ್ಲಿ ನಿಷೇಧಿಸಲಾಗಿದೆ. ಆದರೆ, ಅಷ್ಟರಲ್ಲಾಗಲೇ ಇದರ ಬಳಕೆಯಾಗಿದ್ದ ಪ್ರದೇಶಗಳಲ್ಲಿ ಇದರ ದುಷ್ಪರಿಣಾಮವನ್ನು ಜನರು ಈಗಲೂ ಅನುಭವಿಸುತ್ತಿದ್ದಾರೆ. ಕೇರಳದ ಕಾಸರಗೋಡು ಹಾಗೂ ನಮ್ಮ ಮಂಗಳೂರಿನಲ್ಲಿ ಹೆಚ್ಚು ಪೀಡನೆಯಾಗಿದೆ. ದಕ್ಷಿಣಕನ್ನಡ, ಉತ್ತರಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸುಮಾರು 7 ಸಾವಿರದಷ್ಟು ಸಂಖ್ಯೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿರುವುದನ್ನು ಗುರುತಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *