ರಾಜ್ಯದಲ್ಲಿ ನೀಟ್ ಪರೀಕ್ಷೆ ವ್ಯವಸ್ಥೆ ಕೊನೆಯಾಗಲಿ: ಆಮ್ ಆದ್ಮಿ ಪಾರ್ಟಿ ಆಗ್ರಹ

ಬೆಂಗಳೂರು: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ವ್ಯವಸ್ಥೆಯನ್ನು ಕೊನೆಗೊಳಿಸಲು ತಮಿಳುನಾಡು ಮಾದರಿಯಲ್ಲಿ ರಾಜ್ಯ ಸರ್ಕಾರ ಕೂಡ ಕೇಂದ್ರದ ಮೇಲೆ ಒತ್ತಡ ಹಾಕಬೇಕು ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಪ್ರಧಾನಕಾರ್ಯದರ್ಶಿ ಮೋಹನ್ ದಾಸರಿ ನೇತೃತ್ವದಲ್ಲಿ ಪಕ್ಷದ ನಾಯಕರು ಉನ್ನತ ಶಿಕ್ಷಣ ಡಾ. ಎಂ.ಸಿ. ಸುಧಾಕರ್ ಗೆ ಮನವಿ ಸಲ್ಲಿಸಿದರು.

ಮನವಿ ಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಮೋಹನ್ ದಾಸರಿ, ಈ ಬಾರಿ ನೀಟ್ ಪರೀಕ್ಷೆಯಲ್ಲಿ 67 ವಿದ್ಯಾರ್ಥಿಗಳು 720ಕ್ಕೆ 720 ಅಂಕ ಪಡೆದಿದ್ದಾರೆ. ಒಂದೇ ಪರೀಕ್ಷಾ ಕೇಂದ್ರದಲ್ಲಿ ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆದ 6 ರಿಂದ 7 ವಿದ್ಯಾರ್ಥಿಗಳು 720 ಅಂಕ ಪಡೆದಿರುವುದು ಅನುಮಾನಕ್ಕೆ ಕಾರಣವಾಗಿದೆ. ಇದರಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ ಎಂದರು. ವ್ಯವಸ್ಥೆ

ಇದನ್ನೂ ಓದಿ: ಖ್ಯಾತ ಸರೋದ್ ವಾದಕ ರಾಜೀವ್ ತಾರಾನಾಥ್ ನಿಧನ

ಪಿಯುಸಿಯಲ್ಲಿ ಜಸ್ಟ್ ಪಾಸಾದ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದಿದ್ದಾರೆ. ಈ ನೀಟ್ ಪರೀಕ್ಷೆ ನಮ್ಮ ರಾಜ್ಯಕ್ಕೆ ಉಪಯೋಗ ಆಗಲ್ಲ, ಕರ್ನಾಟಕ ಸಿಇಟಿ ಪರೀಕ್ಷೆಗೆ ದೇಶಾದ್ಯಂತ ಪ್ರಶಂಸೆ ಇತ್ತು, ಈಗ ಮತ್ತೆ ಸಿಇಟಿ ಪರೀಕ್ಷೆಯನ್ನು ವಾಪಸ್ ತರಬೇಕು. ನಮ್ಮದು ಒಕ್ಕೂಟ ವ್ಯವಸ್ಥೆ ಇಲ್ಲಿ ಒಂದು ದೇಶ ಒಂದು ಪರೀಕ್ಷೆಯನ್ನು ಮಾಡಲು ಸಾಧ್ಯವಿಲ್ಲ. ಯುಪಿ, ಜಾರ್ಖಂಡ್, ಹರಿಯಾಣ ಬಿಹಾರದಂತ ಉತ್ತರ ಭಾರತದ ರಾಜ್ಯಗಳಲ್ಲಿ ಎಂತಹದೇ ಪರೀಕ್ಷೆಯಾದರೂ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲಾಗುತ್ತದೆ. ನೀಟ್ ಪರೀಕ್ಷೆಯಿಂದ ಪ್ರಾಮಾಣಿಕವಾಗಿ ಓದುವ ರಾಜ್ಯದ ಮಕ್ಕಳಿಗೆ ಅನ್ಯಾಯವಾಗುತ್ತಿದೆ ಎಂದರು. ವ್ಯವಸ್ಥೆ

ತಮಿಳುನಾಡು ನಿವೃತ್ತ ಹೈಕೋರ್ಟ್ ಜಡ್ಜ್ ನೇತೃತ್ವದಲ್ಲಿ ಸಮಿತಿ ಮಾಡಿ, ಸಮಿತಿಯ ಶಿಫಾರಸ್ಸುಗಳನ್ನು ಇಟ್ಟುಕೊಂಡು ನೀಟ್ ನಮ್ಮ ರಾಜ್ಯಕ್ಕೆ ಅವಶ್ಯಕತೆ ಇಲ್ಲ ಎಂದು ಕಾನೂನಾತ್ಮಕವಾಗಿ ಹೋರಾಟ ಮಾಡುತ್ತಿದೆ. ರಾಜ್ಯ ಸರ್ಕಾರ ಕೂಡ ತಜ್ಞರ ಸಮಿತಿಯನ್ನು ರಚಿಸಿ ನೀಟ್‌ ಆಧಾರಿತ ಪ್ರವೇಶ ಪ್ರಕ್ರಿಯೆಯ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಬೇಕು. ನೀಟ್‌ನಿಂದ ವಿನಾಯಿತಿ ನೀಡುವ ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಬೇಕು. ಕಾನೂನು ಹಾಗೂ ಶಾಸನಾತ್ಮಕವಾಗಿ ನೀಟ್ ತೊಡಕನ್ನು ರಾಜ್ಯ ಸರ್ಕಾರ ನಿವಾರಣೆ ಮಾಡಬೇಕು. ಮೊದಲ ವರ್ಷದ ವೈದ್ಯಕೀಯ ಕೋರ್ಸ್‌ಗಳಿಗೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಡೆಯುವ ಅಂಕವನ್ನು ಅಥವಾ ಸಿಇಟಿ ಪರೀಕ್ಷೆಯಲ್ಲಿ ಪಡೆಯುವ ಅಂಕವನ್ನು ಮಾನದಂಡವಾಗಿ ಪರಿಗಣಿಸುವಂತಾಗಬೇಕು. ಈ ಮೂಲಕ ಲಕ್ಷಾಂತರ ಅಭ್ಯರ್ಥಿಗಳ ವೈದ್ಯಕೀಯ ಕನಸು ನೆರವೇರಿಸುವ ನಿಟ್ಟಿನಲ್ಲಿ ನೆರವಾಗಬೇಕು ಎಂದು ಮೋಹನ್ ದಾಸರಿ ಒತ್ತಾಯಿಸಿದರು.

ಅಶೋಕ್ ಮೃತ್ಯುಂಜಯ ಮಾತನಾಡಿ, ಪ್ರಾಮಾಣಿಕವಾಗಿ ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಭವಿಷ್ಯ ಇಂದು ಅತಂತ್ರವಾಗಿದೆ. ಪಿಯುಸಿಯಲ್ಲಿ 15-20 ಅಂಕ ಪಡೆದವರು, ನೀಟ್ ಪರೀಕ್ಷೆಯಲ್ಲಿ 720 ಅಂಕ ಪಡೆದಿದ್ದಾರೆ. ನೀಟ್ ಹಗರಣ, ಭ್ರಷ್ಟಾಚಾರದಿಂದ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಸೀಟು ಪಡೆಯಬೇಕೆನ್ನುವ ರಾಜ್ಯದ ವಿದ್ಯಾರ್ಥಿಗಳಿಗೆ ಭಾರಿ ಅನ್ಯಾಯವಾಗುತ್ತಿದೆ. ರಾಜ್ಯದ ಮಕ್ಕಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು, ರಾಜ್ಯದ್ದೇ ಆದ ಪರೀಕ್ಷೆ ಬೇಕು, ಆದ್ದರಿಂದ ಸರ್ಕಾರ ನ್ಯಾಯಾಲಯಕ್ಕೆ ಮನವಿ ಮಾಡಿ, ರಾಜ್ಯಕ್ಕೆ ನೀಟ್ ಬೇಡ ಎಂದು ಮನವರಿಕೆ ಮಾಡಿಕೊಡಲಿ. ನೀಟ್ ಪರೀಕ್ಷೆಯಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಕೊನೆಗಾಣಿಸಲಿ ಎಂದರು.

ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ನಾವು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡುತ್ತೇವೆ. ಸಮಸ್ಯೆ ಬಗೆಹರಿಯದೇ ಇದ್ದರೆ, ಹೋರಾಟ ಮಾಡುತ್ತೇವೆ. ನೀಟ್ ಅಕ್ರಮ ಖಂಡಿಸಿ ಇದೇ ಶುಕ್ರವಾರ ಪಕ್ಷದ ಯುವ ಘಟಕದ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಪಕ್ಷದ ಮುಖಂಡರುಗಳಾದ ಜಗದೀಶ ಬಾಬು, ಅನಿಲ್ ನಾಚಪ್ಪ ಮತ್ತು ಚಂದನ್ ಶೆಟ್ಟಿ ಉಪಸ್ಥಿತರಿದ್ದರು.

ಇದನ್ನೂ ನೋಡಿ: ಚುನಾವಣಾ ಫಲಿತಾಂಶ : ಬಿಜೆಪಿಯ ಗರ್ವಭಂಗವೇ? ಕಾಂಗ್ರೆಸ್ ಗೆ ಶಾಪ ವಿಮೋಚನೆಯೇ? Janashakthi Media

Donate Janashakthi Media

Leave a Reply

Your email address will not be published. Required fields are marked *