ಎನ್‌ಕೌಂಟರ್‌ ರಾಜ್ಯ

ಜನರು ವಿಳಂಭ ನ್ಯಾಯದಿಂದ ರೋಸಿ ಹೋಗಿದ್ದರು. ಎಲ್ಲೆಲ್ಲೂ ಕೊಲೆ, ಅತ್ಯಾಚಾರ, ಕಳ್ಳತನ, ಮೋಸ ತಾಂಡವವಾಡುತಿತ್ತು. ಪೋಲೀಸರು ಯಾರನ್ನೇ ಹಿಡಿದು ಜೈಲಿಗೆ ಅಟ್ಟಿದರೂ ಅವರ ವಕೀಲರು ಅಂತವರ ಪರವಾಗಿ ನಿಂತು ನ್ಯಾಯಾಲಯದಿಂದ ಜಾಮೀನು ಸಿಗುವಂತೆ ಮಾಡುತ್ತಿದ್ದರು. ಆ ನಂತರವೂ ಆರೋಪಿಯ ಜೀವಿತಾವಧಿಯವರೆಗೂ ತೀರ್ಪು ಬರದಿರುವಂತೆ ನೋಡಿಕೊಳ್ಳುತ್ತಿದ್ದರು. ತೀರ್ಪು ಬಂದರೂ ಸಾಕ್ಷ್ಯಗಳ ಕೊರತೆಯಿಂದ ಅಪರಾಧ ಸಾಬೀತಾಗುತ್ತಿರಲಿಲ್ಲ. ಪೋಲೀಸರು ಕೆಲವೊಮ್ಮೆ ಎನ್‌ ಕೌಂಟರ್‌ ಮಾಡಿದಾಗ ಭಾರೀ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗುತಿತ್ತು. ಎನ್‌ಕೌಂಟರ್‌

-ಉದಯ ಗಾಂವಕಾರ

ಕೊನೆಗೂ ಜನರು ಒಂದು ತೀರ್ಮಾನಕ್ಕೆ ಬಂದರು- “ಮುಂದಿನ ಚುನಾವಣೆಯಲ್ಲಿ ಇದೇ ಪ್ರಮುಖ ವಿಷಯವಾಗಬೇಕು, ಯಾರು ಪೋಲೀಸರಿಗೆ ಪರಮಾಧಿಕಾರವನ್ನು ನೀಡುತ್ತಾರೋ ಅವರಿಗೇ ವೋಟು” ಎಂದು ಎಲ್ಲೆಲ್ಲೂ ಸಾರಿದರು. ಎಲ್ಲ ಪಕ್ಷಗಳೂ ತಾವು ಅಧಿಕಾರಕ್ಕೆ ಬಂದರೆ ಸಂವಿಧಾನಕ್ಕೆ ತಿದ್ದುಪಡಿ ತಂದು ಪೋಲೀಸರಿಗೆ ಸ್ಥಳದಲ್ಲೇ ನ್ಯಾಯ ಒದಗಿಸುವ ಅಧಿಕಾರ ನೀಡುವುದಾಗಿ ಘೋಷಿಸಿದವು. ಎನ್‌ಕೌಂಟರ್‌

ಚುನಾವಣೆ ನಡೆಯಿತು. ಗೆದ್ದ ಪಕ್ಷ ಕೆಲವೇ ದಿನಗಳಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸಿತು. ಚುನಾವಣೆಯ ಮೊದಲು ಎಲ್ಲ ಪಕ್ಷಗಳೂ ಇದನ್ನು ಘೋಷಿಸಿರುವುದರಿಂದ ಎರಡೂ ಸದನಗಳಲ್ಲಿ ಮಂಡನೆಯಾಗಿ ಮಸೂದೆ ಅಂಗೀಕಾರವಾಯಿತು. ರಾಷ್ಟ್ರಪತಿಗಳ ಅಂಕಿತವೂ ಬಿದ್ದು ಕಾನೂನು ಜಾರಿಯಾಯಿತು.

ಇದನ್ನೂ ಓದಿ: ಉತ್ತರ ಪ್ರದೇಶ| ಯುವತಿ ಮೇಲೆ ಎಂಟು ಜನರು ಸಾಮೂಹಿಕ ಅತ್ಯಾಚಾರ

ಆ ಕಾನೂನಿನ ಪ್ರಕಾರ ಕಳ್ಳತನ ಮಾಡಿದಾಗ ಸಿಕ್ಕಿಬಿದ್ದನೆಂದರೆ ವಿಚಾರಣೆಯಿಲ್ಲದೆ ಜೈಲು. ಕೊಲೆ, ಅತ್ಯಾಚಾರದ ಆರೋಪ ಬಂದರೆ ಅಂತವರಿಗೆ ತಕ್ಷಣವೇ ಗುಂಡೇಟು. ಇದನ್ನು ಎನ್ ಕೌಂಟರ್ ಎಂದು ಕರೆಯಬೇಕೋ ಮರಣದಂಡನೆ ಎಂದು ಕರೆಯಬೇಕೋ ಎಂಬ ಕುರಿತು ಮಾತ್ರ ಸಾರ್ವಜನಿಕ ಚರ್ಚೆ ನಡೆಯಿತು. ಕೊನೆಗೂ ಸಾರ್ವಜನಿಕ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಎನ್‌ಕೌಂಟರ್ ಎಂಬ ಪದವನ್ನೇ ಉಳಿಸಿಕೊಳ್ಳಲು ತೀರ್ಮಾನಿಸಲಾಯಿತು. ಎನ್‌ಕೌಂಟರ್‌

ಈಗ ಇನ್ನೊಂದು ಸಂದಿಗ್ಧ ಎದುರಾಯಿತು. ಹೊಸ ಪ್ರಕರಣಗಳಲ್ಲಿ ಇದೇ ನ್ಯಾಯದ ಪ್ರಕಾರ ಕ್ರಮಕೈಗೊಳ್ಳಲು ಸಮಸ್ಯೆ ಇರಲಿಲ್ಲ. ಈಗಾಗಲೇ ಆಗಿಹೋಗಿರುವ ಅಪರಾಧಗಳ ವಿಷಯದಲ್ಲಿ ಹೇಗೆ ನ್ಯಾಯ ನೀಡುವುದು ಎಂಬುದು ಕಾನೂನು ಪಂಡಿತರಿಗೆ ತಲೆನೋವಾಗಿ ಪರಿಣಮಿಸಿತು. ಕೊನೆಗೆ ಪುನಃ ಜನಮತವನ್ನು ಆಧರಿಸಿ ಜನರು ಯಾರನ್ನು ಅಪರಾಧಿ ಎಂದು ತೀರ್ಮಾನಿಸುತ್ತಾರೋ ಅವರಿಗೆ ಅವರ ಅಪರಾಧಕ್ಕೆ ತಕ್ಕಂತೆ ಶಿಕ್ಷೆ ನಿಗದಿ ಮಾಡಲು ಮತ್ತೊಂದು ತಿದ್ದುಪಡಿ ಮಸೂದೆಯನ್ನು ಮಂಡಿಸಿ, ಜಾರಿ ಮಾಡಲಾಯಿತು. ಎನ್‌ಕೌಂಟರ್‌

ಜೈಲುಗಳು ಭರ್ತಿಯಾದವು. ಜೈಲುಗಳು ಸಾಲದಾಗ ಹೊಸ್ಟೆಲುಗಳನ್ನು ಜೈಲುಗಳಾಗಿ ಪರಿವರ್ತಿಸಲಾಯಿತು. ಆ ನಂತರ ಶಾಲೆಗಳೂ ಜೈಲುಗಳಾದವು. ನ್ಯಾಯಾಲಯಗಳಿಗೆ ಕೆಲಸವಿಲ್ಲದ್ದರಿಂದ ಅವುಗಳನ್ನು ಜೈಲುಗಳೆಂದು ಮರುನಾಮಕರಣ ಮಾಡಲಾಯಿತು. ಜೈಲಿನಲ್ಲಿ ದಟ್ಟಣೆ ಹೆಚ್ಚಿ ಅಲ್ಲಿಯೂ ಜಗಳ, ಕೊಲೆಗಳು ನಡೆದವು. ಜೈಲಿನಲ್ಲಿ ನಡೆದ ಕೊಲೆಗಳ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಹೇಳಲು ಸಾಧ್ಯವಿಲ್ಲದಿರುವುದರಿಂದ ಅವರಿಗೆ ಎನಕೌಂಟರ್ ಶಿಕ್ಷೆ ಕೊಡಲು ಸಾಧ್ಯವಿರಲಿಲ್ಲ.

ಹೊಸ ಕಾನೂನು ಬಂದು ಜೈಲಿನಲ್ಲಿರುವ ಅಪರಾಧಿಗಳು ತಪ್ಪು ಮಾಡಿದರೆ ಕೈದಿಗಳ ಅಭಿಪ್ರಾಯ ಪಡೆದು ಹೊಸ ಶಿಕ್ಷೆ ನೀಡಲು ಅನುವು ಮಾಡಿಕೊಡಲಾಯಿತು.
ಇತ್ತ ಊರುಗಳಲ್ಲಿ, ನಗರಗಳಲ್ಲಿ ಯಾರ ಮೇಲೆ ಅತ್ಯಾಚಾರ, ಕೊಲೆ ಆರೋಪ ಬಂದರೂ ಎನ್ ಕೌಂಟರ್ ಶಿಕ್ಷೆಗೆ ಒಳಪಡಿಸಲಾಯಿತು. ಜನರ ಸಂಖ್ಯೆ ತುಂಬಾ ಕಡಿಮೆಯಾಯಿತು. ರಾಜಕಾರಣಿಗಳು, ಮಠಾದೀಶರು, ಮುಲ್ಲಾಗಳು, ಪಾದ್ರಿಗಳು, ದೇವಮಾನವರು, ಧರ್ಮಾಧಿಕಾರಿಗಳು, ಉನ್ನತ ಆಫೀಸರುಗಳು, ಗುಮಾಸ್ತರು, ಶಿಕ್ಷಕರು, ವೈದ್ಯರು.. ಹೀಗೆ ಎನ್ ಕೌಂಟರ್ ಪಟ್ಟಿಯಲ್ಲಿ ಸೇರಿಕೊಂಡರು.

ಸರ್ಕಾರದ ಎಲ್ಲ ಇಲಾಖೆಗಳನ್ನು ಮುಚ್ಚಿ ಪೋಲೀಸ್ ಇಲಾಖೆಯನ್ನು ಮಾತ್ರ ಇಟ್ಟುಕೊಳ್ಳಲಾಯಿತು. ಪೋಲೀಸರ ಸಂಖ್ಯೆ ವಿಪರೀತ ಹೆಚ್ಚಿದರೂ ಅವರ ಕಾರ್ಯಬಾಹುಳ್ಯ ಕಡಿಮೆಯಾಗಲಿಲ್ಲ. ದಿನವೂ ಒಂದೊಂದು ಠಾಣೆಯವರೂ ಹತ್ತಾರು ಎನ್ ಕೌಂಟರ್ ಮಾಡಬೇಕಿತ್ತು. ಅವರ ನಡುವೆಯೇ ಜಗಳಗಳು ನಡೆಯಲಾರಂಭವಾಯಿತು. ಅಲ್ಲಿಯೂ ಕೊಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಿದವು. ಪೋಲೀಸರು ಪೋಲೀಸರನ್ನೇ ಎನ್ ಕೌಂಟರ್ ಮಾಡಬೇಕಾದ ಸ್ಥಿತಿ ಬಂತು.

ಒಂದು ದಿನ ಕೊನೆಗೂ ಬಂತು. ಕೊನೆಯ ಪೋಲೀಸ್ ಅಧಿಕಾರಿ ಉಳಿದುಕೊಂಡ. ತನ್ನ ಪಿಸ್ತೂಲನ್ನು ಒಮ್ಮೆ ನೋಡಿದ. ಗುರಿಯಿಡಲು ಯಾರೂ ಉಳಿದಿರಲಿಲ್ಲ.

ಢಂ.

ಇದನ್ನೂ ನೋಡಿ: ವಚನಾನುಭವ – 26 |ಅಂಬಿಗರ ಚೌಡಯ್ಯನ ವಚನ ; ಹರಿ ಹರಿಯೆಂದು ಹೊಡವಡುವಿರಿ. ನಿಮ್ಮ ನಡೆಯಲ್ಲಾ ಅನಾಚಾರ Janashakthi Media

Donate Janashakthi Media

Leave a Reply

Your email address will not be published. Required fields are marked *