ಬೆಂಗಳೂರು: ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದು, ರಾಜ್ಯದಿಂದ 25 ಸಂಸದರು ಆಯ್ಕೆಯಾಗಿದ್ದು ಇಲ್ಲಿ ರಾಜಾರೋಷವಾಗಿ ಮಾತನಾಡುವ ಸಂಸದರು ಮೋದಿ ಮುಂದೆ ಮೌನಕ್ಕೆ ಶರಣಾಗುತ್ತಾರೆ. ರಾಜ್ಯಕ್ಕೆ ಬರಬೇಕಾದ ಪಾಲು ತರಲು ಹೋರಾಟ ಮಾಡುತ್ತಿಲ್ಲ. ಹೀಗಿರುವಾಗ ಜನ ಇವರಿಗೆ ಯಾಕೆ ಆಶೀರ್ವಾದ ಮಾಡುತ್ತಾರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು ಕಿಡಿಕಾರಿದ್ದಾರೆ.
‘ಮಾಜಿ ಪ್ರಧಾನಿ ರಾಜೀವ್ ಗಾಂಧಿ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಹುಟ್ಟುಹಬ್ಬ ಕಾರ್ಯಕ್ರಮವನ್ನು ಅಂಬೇಡ್ಕರ್ ಭವನದಲ್ಲಿ ಆಯೋಜಿಸಲು ಅನುಮತಿ ನಿರಾಕರಿಸಿ ಮುಖ್ಯ ಕಾರ್ಯದರ್ಶಿ ಪತ್ರ ಬರೆಯುತ್ತಾರೆ. ಆದರೆ ಸಾವಿರಾರು ಜನ ಸೇರಿಸಿ ಜನಾಶೀರ್ವಾದ ಯಾತ್ರೆ ಮಾಡಲು ಅನುಮತಿ ನೀಡುತ್ತಾರೆ. ಕೋವಿಡ್ ಮೂರನೇ ಅಲೆ ಬಂದರೆ, ಅದರಿಂದ ಅನಾಹುತ ಆದರೆ ಅದಕ್ಕೆಲ್ಲ ಈ ನಾಲ್ಕು ಜನ ಕೇಂದ್ರ ಸಚಿವರೇ ಹೊಣೆಗಾರರು’ ಎಂದು ಟೀಕಿಸಿದರು.
ಹಬ್ಬ, ಜಾತ್ರೆ, ಜಾಥಾಗಳಿಗೆ ನಿರ್ಬಂಧ ಹೇರಿರುವ ಸಂದರ್ಭದಲ್ಲಿಯೇ ಬಿಜೆಪಿಯಿಂದ ಜನಾಶೀರ್ವಾದ ಯಾತ್ರೆ ನಡೆಯಲು ಅನುಮತಿ ನೀಡಲಾಗಿದೆಯೇ? ಅಭಿವೃದ್ಧಿ ಬಗ್ಗೆ ಗಮನಹರಿಸಬೇಕಾದ ಕೇಂದ್ರ ಸಚಿವರು ಯಾವುದೇ ಕೆಲಸ ಮಾಡದೇ ಜನರ ಆಶೀರ್ವಾದ ಪಡೆಯಲು ಮುಂದಾಗಿರುವುದು ದುರಂತ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ರಾಜ್ಯಕ್ಕೆ ನಿರಂತರ ಅನ್ಯಾಯ ಮಾಡುತ್ತಿದ್ದು, ಅವರು ಜನಾಶೀರ್ವಾದ ಯಾತ್ರೆ ಬದಲು ಜನರ ಕ್ಷಮೆ ಕೋರುವ ಯಾತ್ರೆ ನಡೆಸಬೇಕು’ ಎಂದರು.
‘ಕೋವಿಡ್ 2ನೇ ಅಲೆಯ ದುಸ್ಥಿತಿಯಿಂದಾಗಿ ಜನರಿಗೆ ನರಕ ನೂಕಿದೆ. ಕೇಂದ್ರದ ಮಲತಾಯಿ ಧೋರಣೆ, ರಾಜ್ಯಕ್ಕೆ ಬರಬೇಕಾದ ಅನುದಾನ ತರಲು ವಿಫಲತೆ. 2019ರಿಂದ ಆಗುತ್ತಿರುವ ನೆರೆ ಪರಿಹಾರ ನೀಡದಿರುವುದು, ಜಿಎಸ್‌ಟಿ ಪಾಲು 13 ಸಾವಿರ ಕೋಟಿ ನೀಡದಿರುವುದಕ್ಕೆ, ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆಗೆ ಬಿಜೆಪಿ ನಾಯಕರು ರಾಜ್ಯದ ಜನರ ಮುಂದೆ ಕ್ಷಮೆ ಕೋರಬೇಕು. ಇಲ್ಲದಿದ್ದರೆ ಜನ ಬಿಜೆಪಿ ವಿರುದ್ಧ ಆಕ್ರೋಶದ ಯಾತ್ರೆ ನಡೆಸುತ್ತಾರೆ’ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗರೆಡ್ಡಿ, ಕೆಪಿಸಿಸಿ ಮಾಧ್ಯಮ ವಿಭಾಗದ ಸಂಚಾಲಕರಾದ ರಾಮಚಂದ್ರಪ್ಪ, ಸಲೀಂ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಫಿವುಲ್ಲಾ, ವಕ್ತಾರರಾದ ಬಸವರಾಜು, ಮನೋಹರ್ ಮತ್ತಿತರರು ಹಾಜರಿದ್ದರು.