ಮುಕ್ಕಣ್ಣ ಕರಿಗಾರ
ಪ್ರತಿದಿನ ಒಂದಿಲ್ಲ ಒಂದು ಬಗೆಯ ಕೋಮುದ್ವೇಷದ ಸಂಗತಿಗಳು ವರದಿಯಾಗುತ್ತಿವೆ. ಮುಸ್ಲಿಮರನ್ನು ಗುರಿಯಾಗಿರಿಸಿಕೊಂಡು ನಡೆಯುತ್ತಿರುವ ಕೋಮದ್ವೇಷ ಸಾರುವ ಘಟನೆಗಳು ಕರ್ನಾಟಕದ ಹೆಸರಿಗೆ, ಸರ್ವೋದಯ ಸಂಸ್ಕೃತಿಗೆ ಕಳಂಕ ತರುತ್ತಿವೆ. ಹಿಂದೂಪರ ಸಂಘಟನೆಗಳು, ವ್ಯಕ್ತಿಗಳು (ಕಾವಿಧಾರಿಗಳೂ ಸೇರಿ) ದಿನಕ್ಕೊಂದು ತರಹದ ರಾದ್ಧಾಂತ-ಗದ್ದಲ ಎಬ್ಬಿಸುತ್ತಿದ್ದಾರೆ. ಕರ್ನಾಟಕ ರಾಜ್ಯವನ್ನು ಗುತ್ತಿಗೆ ಹಿಡಿದವರಂತೆ.’ ಇದು ಸರಿಯಲ್ಲ’ ಎಂದು ಬುದ್ಧಿ ಹೇಳುವ ಧೈರ್ಯ ಅವರನ್ನು ನಿಯಂತ್ರಿಸಬೇಕಾದವರಲ್ಲಿ ಇಲ್ಲವೋ ಅಥವಾ ಮತ್ತೇನು ಕಾರಣವೋ ಗೊತ್ತಾಗುತ್ತಿಲ್ಲ.
ಕರ್ನಾಟಕವು ಸಂವಿಧಾನದ ಆಶಯ, ನಿರ್ದೇಶನಗಳಿಗೆ ಅನುಗುಣವಾಗಿ ನಡೆಯಬೇಕಾದ ಪ್ರಜಾಪ್ರಭುತ್ವ ಭಾರತದ ಒಂದು ರಾಜ್ಯವೇ ಹೊರತು ಯಾರದೇ ಖಾಸಗಿ ಆಸ್ತಿಯಲ್ಲ ; ಇಲ್ಲಿ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವ ಸರ್ಕಾರ ಇದೆಯೇ ಹೊರತು ಯಾರದೆ ಖಾಸಗಿ ಅಧಿಪತ್ಯ ನಡೆಯುತ್ತಿಲ್ಲ.
ಹಿಂದೂ ಧರ್ಮಕ್ಕೆ ಧಕ್ಕೆ ಬಂದಾಗ ಹೋರಾಡುವುದು, ಪ್ರತಿಭಟಿಸುವುದು ಹಿಂದು ಪರಸಂಘಟನೆಗಳ, ಮುಖಂಡರುಗಳ ಹಕ್ಕು ಇರಬಹುದು; ಆದರೆ ಜನರ ಶಾಂತಿ-ಸಹಬಾಳ್ವೆಯ ‘ತಿಳಿಕೊಳ’ ದಂತಹ ಸಮಷ್ಟಿಬಾಳನ್ನು ಕದಡುವ ಕೈಲಸಕ್ಕೆ ಕೈ ಹಾಕಬಾರದು. ಹಿಜಾಬ್ ವಿವಾದದಿಂದ ಆರಂಭವಾದ ಕೋಮುದ್ವೇಷದ ದಳ್ಳುರಿಗೆ ಬಡಮುಸ್ಲಿರು ಮತ್ತು ತಳಸಮುದಾಯದ ಜನತೆ, ದಲಿತರು ತತ್ತರಿಸುತ್ತಿದ್ದಾರೆ. ಮಾಂಸದ ವಿವಾದ ಒಬ್ಬರು ಎತ್ತಿದರೆ, ಮಾವಿನ ಹಣ್ಣಿನ ವಿಷಯ ಮತ್ತೊಬ್ಬರು ಎತ್ತುತ್ತಾರೆ. ಮುಸ್ಲಿಮರು ಮಾಡಿದ ಮೂರ್ತಿಗಳನ್ನೇ ಪೂಜಿಸಬಾರದು ಎಂದು ಇನ್ನೊಬ್ಬರು ಅಪ್ಪಣೆ ಕೊಡಿಸುತ್ತಾರೆ.
ಈಗ ಇವುಗಳ ಸಾಲಿಗೆ ಸೇರಿದೆ ಬೆಂಗಳೂರು ಕರಗ ಉತ್ಸವ. ಕರಗ ಉತ್ಸವ ಮಸ್ತಾನಸಾಬ್ ದರ್ಗಾಕ್ಕೆ ಹೋಗಬಾರದು ಎಂದು ಕೆಲವರು ಆಕ್ಷೇಪಿಸಿದ್ದಾರೆ. ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡರುಗಳೇ ಅಣ್ಣಮ್ಮ ದೇವಿ ದೇವಸ್ಥಾನಕ್ಕೆ ಬಂದು ‘ದೇವಿಯ ಕರಗ ಉತ್ಸವ ದರ್ಗಾಕ್ಕೆ ಬರಲಿ’ ಎಂದು ಮನವಿಮಾಡಿ ಭಾವೈಕ್ಯತೆಯನ್ನು ಮೆರೆದಿದ್ದಾರೆ, ಧಾರ್ಮಿಕ ಸಹಿಷ್ಣುತೆಯನ್ನು ಎತ್ತಿಹಿಡಿದಿದ್ದಾರೆ. ಬೆಂಗಳೂರು ಕರಗ ಉತ್ಸವಕ್ಕೆ ಅದರದ್ದೇ ಆದ ಐತಿಹಾಸಿಕ ಮಹತ್ವ ಇದೆ. ಸುಮಾರು ಮುನ್ನೂರು ವರ್ಷಗಳಿಂದಲೂ ನಡೆದುಕೊಂಡು ಬರುತ್ತಿರುವ ಕರಗ ಉತ್ಸವ ಬೆಂಗಳೂರಿನ ಸರ್ವಧರ್ಮ ಸಹಿಷ್ಣು ಸಂಸ್ಕೃತಿಯ ಪ್ರತೀಕವಾಗಿ ಆಚರಿಸಲ್ಪಡುತ್ತಿದೆ. ಬೆಂಗಳೂರನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡರು ಕರಗ ಉತ್ಸವಕ್ಕೆ ವಿಶೇಷ ಮಹತ್ವ ನೀಡಿ ಎಲ್ಲ ಜಾತಿ- ಜನಾಂಗದವರು ಒಂದಾಗಿ ಕರಗ ಉತ್ಸವವನ್ನು ಆಚರಿಸುವ ಏರ್ಪಾಟು ಮಾಡಿದ್ದರು. ಮೂರು ಶತಮಾನಗಳಿಂದ ನಡೆದುಕೊಂಡು ಬಂದಿರುವ ಕರಗ ಸಾಂಸ್ಕೃತಿಕ ಉತ್ಸವದ ದಾರಿ ಬದಲಿಸಲು ಫರ್ಮಾನು ಹೊರಡಿಸುವ ಅಧಿಕಾರ ಹಿಂದೂಪರ ಸಂಘಟನೆಗಳಿಗೆ ಕೊಟ್ಟವರು ಯಾರು? ಈ ದೇಶದ ಯಾರೇ ಆಗಿರಲಿ, ಅವರು ಎಷ್ಟೇ ದೊಡ್ಡವರಾಗಿರಲಿ ಸಂವಿಧಾನದ ಆಶಯಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ನೆಲದ ಕಾನೂನಿಗಿಂತ ಯಾರೂ ದೊಡ್ಡವರಿಲ್ಲ.
ಭಾರತದ ಪ್ರಜೆಗಳೆಲ್ಲರಿಗೂ ಅವರವರ ಇಷ್ಟಾನುಸಾರ ಬದುಕುವ, ಗೌರವದಿಂದ ಜೀವಿಸುವ ಹಕ್ಕನ್ನು ನೀಡಿದೆ ನಮ್ಮ ಸಂವಿಧಾನ. ಸಂವಿಧಾನಕ್ಕಿಂತ ದೊಡ್ಡವರು, ನೆಲದ ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಸಂವಿಧಾನದ ಆಶಯಕ್ಕೆ ಧಕ್ಕೆ ಬಂದಾಗ ಸುಮ್ಮನೆ ಕೂಡಬಾರದು; ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ವರ್ತಿಸುವವರನ್ನು ನಿಗ್ರಹಿಸುವುದು ಸಂವಿಧಾನ ಬದ್ಧ ವ್ಯವಸ್ಥೆಗಳಲ್ಲಿರುವವರ ಸಾಂವಿಧಾನಿಕ ಜವಾಬ್ದಾರಿ.
ದೇವಸ್ಥಾನಗಳು, ಮಸೀದಿಗಳು, ಚರ್ಚ್‌ಗಳು, ಮಠ-ಪೀಠಗಳು ಅವುಗಳ ಕ್ಷೇತ್ರವ್ಯಾಪ್ತಿಯಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ಕೈಗೊಳ್ಳಲು ಹಕ್ಕು, ಸ್ವಾತಂತ್ರ್ಯವನ್ನುಳ್ಳ ಧಾರ್ಮಿಕ ಸಂಸ್ಥೆಗಳೇ ಹೊರತು ನಾವು ಒಪ್ಪಿಕೊಂಡ ಸಂವಿಧಾನವನ್ನು ಧಿಕ್ಕರಿಸುವ ಪರಮಾಧಿಕಾರ ಆ ಯಾವ ಧಾರ್ಮಿಕ ಸಂಸ್ಥೆಗಳಿಗೂ ಇಲ್ಲ. ಪೌರಪ್ರಜ್ಞೆ ಇಲ್ಲದ, ಸಂವಿಧಾನವನ್ನು ಗೌರವಿಸದ ಜನರು ಮಾತ್ರ ಮನಸ್ಸಿಗೆ ಬಂದಂತೆ ಮಾತನಾಡಬಹುದು, ವರ್ತಿಸಬಹುದು.
ಭಾರತವು ಜಾತ್ಯಾತೀತ ರಾಷ್ಟ್ರ. ಇಲ್ಲಿ ಯಾವುದೇ ಧರ್ಮದ ಮುಖಂಡ, ಧರ್ಮಪರ ಸಂಘಟನೆಗಳು ‘ಇದನ್ನು ಮಾಡಿ, ಇದನ್ನು ಮಾಡಲೇಬೇಕು’ ಎಂದು ಆದೇಶಿಸುವಂತಿಲ್ಲ, ಜನರ ಬದುಕುವ ಹಕ್ಕನ್ನು, ಆಯ್ಕೆಯ ಸ್ವಾತಂತ್ರ್ಯವನ್ನು ನಿರ್ಬಂಧಿಸುವಂತಿಲ್ಲ. ಹಾಗಿದ್ದರೂ ಹಿಂದೂ ದೇವಸ್ಥಾನಗಳ ಜಾತ್ರೆ- ಉತ್ಸವಗಳ ಸಂದರ್ಭದಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ನಿರ್ಬಂಧಿಸಲಾಯಿತು. ಮುಸ್ಲಿಮರು ಮಾರುವ ಮಾವಿನ ಹಣ್ಣುಗಳನ್ನು ತಿನ್ನಬಾರದು ಎಂದರು. ಮುಸ್ಲಿಮರು ಮಾಡಿದ ಮೂರ್ತಿಗಳನ್ನು ಪೂಜಿಸಬಾರದು ಎಂದರು. ಇಂತಹ ಸ್ವೇಚ್ಛೆಯ ಮಾತುಗಳಿಗೆ ಕಾನೂನಿನ ಮಾನ್ಯತೆ ಇದೆಯೆ ? ಇದು ನಮ್ಮ ಸಂವಿಧಾನವು ಕೊಡಮಾಡಿದ ಮುಸ್ಲಿಮರ ‘ ಬದುಕುವ ಹಕ್ಕಿ’ ನೊಂದಿಗೆ ಚೆಲ್ಲಾಟವಾಡುವ ಪ್ರವೃತ್ತಿಯಲ್ಲವೆ ? ಸಂವಿಧಾನಬಾಹಿರ ಕೃತ್ಯಗಳಿಗೆ ಮೌನ ಸಮ್ಮತಿ ಏಕೆ?
ಇತ್ತೀಚೆಗೆ ಖ್ಯಾತ ಸಾಹಿತಿ ಕುಂ ವೀರಭದ್ರಪ್ಪನವರು’ ನಾನು ಹಿಂದೂ ಅಲ್ಲ ಎಂದು ಘೋಷಿಸುತ್ತೇನೆ. ನಾನು ಲಿಂಗಾಯತ, ಬಸವಣ್ಣನವರ ಅನುಯಾಯಿ’ ಎಂದು ಘೋಷಿಸಿದರು. ಕೆಲವರು ಕುಂವೀ ಅವರನ್ನು ಟೀಕಿಸಿದರು. ಆದರೆ ಕುಂವೀ ಅವರ ಘೋಷಣೆ ಹಿಂದೂಪರ ಸಂಘಟನೆಗಳ ಕಣ್ಣುಗಳನ್ನು ತೆರೆಸಬೇಕು. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಒಬ್ಬರಲ್ಲ, ಸಾವಿರಾರು ಜನ ಕುಂಬಾರ ವೀರಭದ್ರಪ್ಪನವರು ಎದ್ದು ಬರುತ್ತಾರೆ.
‘ಬಸವ ಸಂಸ್ಕೃತಿ’ ಎದ್ದು ಮೆರೆಯಬೇಕಾದ ನಾಡಿನಲ್ಲಿ ನಡೆಯುತ್ತಿರುವ ಕಳವಳಕಾರಿ ಪ್ರಸಂಗಳು ನಾಡಿಗೆ ಶೋಭೆಯಲ್ಲ. ಕರ್ನಾಟಕದ ಶೂದ್ರರು, ಕೆಳವರ್ಗದ ಜನರು, ದಲಿತರು ಹಿಂದೂ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿಲ್ಲ ಎನ್ನುವುದು ನೆನಪಿರಬೇಕು. (ಈ ಜಾತಿಗಳ ಕೆಲವರು ಹಿಂದೂಪರ ಸಂಘಟನೆಗಳಲ್ಲಿರಬಹುದು; ಅಷ್ಟರಿಂದಲೇ ಅವರೆಲ್ಲರ ಬೆಂಬಲ ತಮಗಿದೆ ಎಂದು ಭಾವಿಸಬಾರದು) ದಲಿತರಂತೂ ತಮ್ಮ ಸ್ವಂತಿಕೆಯನ್ನು ಎತ್ತಿಹಿಡಿಯುತ್ತಿದ್ದಾರೆ. ಡಾ.ಬಿ ಆರ್ ಅಂಬೇಡ್ಕರ್ ಅವರ ಆದರ್ಶದದ ಪಥದಲ್ಲಿ ನಡೆಯುತ್ತ. ದಲಿತರು, ತಳಸಮುದಾಯಗಳ ಜನತೆ ನಿತ್ಯ ಕಂಡು ಕೇಳುತ್ತಿರುವ ಕೋಮುದ್ವೇಷದ ವಿದ್ಯಮಾನಗಳಿಗೆ ಬೇಸರಿಸಿಕೊಂಡಿದ್ದಾರೆ. ಅವರೆಲ್ಲ ಹಿಂದೂ ಸಂಸ್ಕೃತಿಯಿಂದ ದೂರವಾದರೆ ಏನು ಮಾಡುತ್ತೀರಿ ? ಮತ- ಧರ್ಮಗಳು ಜನರನ್ನು ಒಂದು ಗೂಡಿಸಬೇಕೇ ಹೊರತು ಬೇರ್ಪಡಿಸಬಾರದು.
ಹಿಂದೂಗಳಿಗೆ ಹೇಗೆ ಬದುಕುವ ಹಕ್ಕು ಇದೆಯೋ ಹಾಗೆಯೇ ಮುಸ್ಲಿಮರಿಗೂ ಬದುಕುವ ಹಕ್ಕು ಇದೆ. ಕೇವಲ ಮುಸ್ಲಿಮರನ್ನೇ ಗುರಿಯಾಗಿಸಿಕೊಂಡು ಕೆಲವರು ನಡೆಸುತ್ತಿರುವ ಸಂವಿಧಾನ ಬಾಹಿರ ಕೃತ್ಯಗಳು ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮವನ್ನುಂಟು ಮಾಡುತ್ತವೆ. ಸದ್ಯದ ಮೋಜನ್ನು ನೋಡಿ ಆನಂದಿಸುವವರು ಮುಂದೆ ಹಿಂದೂ ಮುಸ್ಲಿಮರು ಬದ್ಧವೈರಿಗಳು ಎಂಬಂತಹ ಸಾಮಾಜಿಕ ವಾತಾವರಣದ ನಿರ್ಮಾಣಕ್ಕೆ ಕಾರಣರಾಗುವುದಲ್ಲದೆ ಭಾವೈಕ್ಯತೆಗೆ ಹೆಸರಾಗಿ ಹಿಂದೂ ಮುಸ್ಲಿಮರು ಪರಸ್ಪರ ಸಹೋದರರಂತೆ ಸಹಬಾಳ್ವೆಯನ್ನು ನಡೆಸುತ್ತಿರುವ ಗ್ರಾಮೀಣ ಪ್ರದೇಶದ ಹಿಂದೂ ಮುಸ್ಲಿಮರು ನಿತ್ಯಕಚ್ಚಾಡುವ ಸಾಮಾಜಿಕ ಸಂಘರ್ಷದ ವಾತಾವರಣ ನಿರ್ಮಾಣವಾಗಲು ಕಾರಣೀಭೂತರಾಗುತ್ತಾರೆ. ಕೆಲವು ನಗರ, ಪಟ್ಟಣಗಳಿಗೆ ಸೀಮಿತವಾಗಿರುವ ಕೋಮುದ್ವೇಷದ ವಿಷಗಾಳಿ ಗ್ರಾಮೀಣ ಪ್ರದೇಶಕ್ಕೂ ಹರಡಿ ಮುಗ್ಧ ಹಳ್ಳಿಗರ ಮೈ ಮನಸ್ಸುಗಳನ್ನು ಹೊಕ್ಕು ಕಾಡಿ ಬೀರದಿರಲಿ ವಿನಾಶಕಾರಿ ವಿಷಪ್ರಭಾವ.
ಹೊಟ್ಟೆ ತುಂಬಿದವರು, ತಿಂದ ಅನ್ನವನ್ನು ಜೀರ್ಣಿಸಿಕೊಳ್ಳಲಾಗದವರು ಹಸಿವಿನಿಂದ ಬಳಲುತ್ತಿರುವವರ ಹೊಟ್ಟೆಗಳೊಂದಿಗೆ ಆಟ ಆಡಬಾರದು. ಹಸಿವು, ಬಡತನ, ದಾರಿದ್ರ್ಯ ನಮ್ಮ ಮೂಲಸಮಸ್ಯೆಗಳು, ಅವುಗಳ ನಿರ್ಮೂಲನಕ್ಕೆ ಪ್ರಯತ್ನಿಸಬೇಕಾದದ್ದು ಎಲ್ಲರ ಕರ್ತವ್ಯ. ಹಸಿವಿಗೆ ಧರ್ಮವಿಲ್ಲ, ಬಡತನಕ್ಕೆ ಜಾತಿ ಇಲ್ಲ. ಅಸಹಾಯಕರು ಅಮಾಯಕರು ಆದ ಜನಕೋಟಿಯಲ್ಲಿ ಹಿಂದೂಗಳು ಇದ್ದಾರೆ, ಮುಸ್ಲಿಮರೂ ಇದ್ದಾರೆ. ದುರ್ಬಲರು, ನಿರ್ಗತಿಕರು, ದುಡಿಯುವವರಿಗೆ ಬಲ-ಬೆಂಬಲ ನೀಡುವುದು ಇಂದಿನ ತುರ್ತು ಅಗತ್ಯ.
ಭಾರತದ ಸಂವಿಧಾನವನ್ನು ಗೌರವಿಸುವುದು, ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆದುಕೊಳ್ಳುವುದು ಭಾರತೀಯರೆಲ್ಲರ ಕರ್ತವ್ಯ, ಜವಾಬ್ದಾರಿ. ಮುಸ್ಲಿಮರು, ಕ್ರಿಶ್ಚಿಯನ್ನರನ್ನು ಹೊರತುಪಡಿಸಿದ ಆಖಂಡ ಭಾರತ ಕಟ್ಟಲು ಸಾಧ್ಯವಿಲ್ಲ; ಕೋಮುದ್ವೇಷದ ವಿಷಬೀಜಗಳನ್ನು ಬಿತ್ತುತ್ತ ಭಾರತದ ಸಾರ್ವಭೌಮತ್ವವನ್ನು ಎತ್ತಿಹಿಡಿಯಲು ಸಾಧ್ಯವಿಲ್ಲ. ಭಾರತದಲ್ಲಿ ವಾಸಿಸುತ್ತಿರುವವರೆಲ್ಲರೂ ಜಾತಿ ಮತ ಧರ್ಮಗಳಾಚೆ ಸಮಾನ ಹಕ್ಕು ಅವಕಾಶಗಳುಳ್ಳ ಭಾರತೀಯರು ಎನ್ನುವ ಭಾರತೀಯತೆಯ ಭಾವನೆ ಬಲಗೊಳ್ಳುವ ತನಕ ಪ್ರಕಾಶಿಸದು ಭಾರತದ ಪ್ರಜಾಪ್ರಭುತ್ವ. ಮುಸ್ಲಿಮರು, ಕ್ರಿಶ್ಚಿಯನ್ನರು ಸೇರಿದಂತೆ ಈ ದೇಶದಲ್ಲಿ ವಾಸಿಸುತ್ತಿರುವವರೆಲ್ಲರೂ ಭದ್ರತೆಯ ಭಾವವನ್ನನುಭವಿಸುವವರೆಗೆ ಆತಂಕ, ಅಭದ್ರತೆಯಲ್ಲಿಯೇ ಇರುತ್ತದೆ ವಿಶ್ವಕ್ಕೆ ಗುರುವಾಗಬೇಕಿದ್ದ ಸರ್ವಧರ್ಮ ಸಮನ್ವಯ ಸಂಸ್ಕೃತಿಯ ನಮ್ಮ ಪ್ರಜಾಪ್ರಭುತ್ವ. ಭಾರತೀಯರೆಲ್ಲರೂ ಸಂವಿಧಾನಕ್ಕೆ ನಿಷ್ಠರಾಗಿರಬೇಕಾದ, ಸಂವಿಧಾನಕ್ಕೆ ಮಾತ್ರ ತಮ್ಮ ನಿಷ್ಠೆಯನ್ನು ಘೋಷಿಸಬೇಕಾದ ಕಾಲ ಇದು.
ವರ್ಣವ್ಯವಸ್ಥೆಯ ಸಾಮಾಜಿಕ ಶೋಷಣೆ- ಅಸಮಾನತೆಗಳ ವಿರುದ್ಧ ಪ್ರತಿಭಟಿಸಿ ‘ಸರ್ವರ ಕರಸ್ಥಲಗಳಿಗೆ ಚುಳುಕಾದ ಪರಶಿವ ಸ್ವರೂಪಿ ಇಷ್ಟಲಿಂಗವನ್ನಿತ್ತು ಕುಲಹದಿನೆಂಟು ಜಾತಿಗಳನ್ನುದ್ಧರಿಸಿದ ವಿಶ್ವಬಂಧು, ಮನುಕುಲದ ಕಲ್ಯಾಣದ ಮಹಾನ್ ದ್ರಷ್ಟಾರ ಬಸವಣ್ಣನವರ ವಚನ ಒಂದನ್ನು ಉದ್ಧರಿಸುವ ಮೂಲಕ,ಈ ನಾಡಿನಲ್ಲಿ ಬೆಳೆಯಬೇಕಾದದ್ದು ಸರ್ವರನ್ನುತಿಯ’ ಬಸವ ಸಂಸ್ಕೃತಿ’ ಯೇ ಹೊರತು ಸ್ವಧರ್ಮೀಯರು- ಅನ್ಯ ಧರ್ಮೀಯರು ಎನ್ನುವ ಭಿನ್ನ ಭಾವನೆಯಲ್ಲ, ಸಂವಿಧಾನ ವಿರೋಧಿ ನಡೆಯಲ್ಲ ಎನ್ನುವುದನ್ನು ಪ್ರಜ್ಞಾವಂತರೆಲ್ಲರ ಗಮನಕ್ಕೆ ತರಬಯಸುವೆ ;
ʻಇವನಾರವ, ಇವನಾರವ, ಇವನಾರವ?’ ನೆಂದೆನಿಸದಿರಯ್ಯಾ,
ʻಇವ ನಮ್ಮವ, ಇವ ನಮ್ಮವ, ಇವ ನಮ್ಮವ” ನೆಂದೆನಿಸಯ್ಯಾ,
ಕೂಡಲ ಸಂಗಮದೇವಾ,
ನಿಮ್ಮ ಮನೆಯ ಮಗನೆನಿಸಯ್ಯಾ.