ಗಜೇಂದ್ರಗಡ: ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲತೆಯ ದೃಷ್ಟಿಯಿಂದ ಎಲ್ಲಾ ಹಳ್ಳಿಗಳಿಗೂ ಸರ್ಕಾರಿ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್‌ಎಫ್‌ಐ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಎಸ್‌ಎಫ್‌ಐ ಗಜೇಂದ್ರಗಡ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ನಗರದ ಸಾರಿಗೆ ಡಿಪೋ ಮುಂದೆ ಪ್ರತಿಭಟನೆ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ರಾಜ್ಯ ಮುಖಂಡ ಗಣೇಶ ರಾಠೋಡ್ ಮಾತನಾಡಿ, ರಾಜ್ಯದ ಎಲ್ಲಾ ಹಳ್ಳಿಗಳಿಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ಬೇಕೆಂದು ಎಸ್‌ಎಫ್‌ಐ ರಾಜ್ಯವ್ಯಾಪಿ ಹೋರಾಟ ಮಾಡುತ್ತಲೇ ಇದೆ. ಆದರೂ, ಸರ್ಕಾರದ ನಿರ್ಲಕ್ಷ್ಯ ಮತ್ತು ಇಲಾಖೆಯ ನಿರ್ಲಕ್ಷ್ಯದಿಂದ ಸಮಸ್ಯೆ ಹಾಗೆ ಉಳಿದಿದೆ ಎಂದರು.
ಎಸ್‌ಎಫ್‌ಐ ತಾಲ್ಲೂಕು ಮುಖಂಡ ಚಂದ್ರು ರಾಠೋಡ್ ಮಾತನಾಡಿ, ಕುಷ್ಟಗಿಯಿಂದ ಗಜೇಂದ್ರಗಡ ತನಕ ಬರುವ ಎಲ್ಲಾ ಹಳ್ಳಿಗಳ ನಿಲ್ದಾಣದಲ್ಲಿ ಬಸ್ಸು ನಿಲ್ಲಿಸಿದರೆ ಅದು ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತದೆ ಮತ್ತು ಹಳ್ಳಿಗಳಲ್ಲಿ ಹೆಚ್ಚು ವಿದ್ಯಾರ್ಥಿಗಳು ಇರುವ ಕಡೆ ಬಸ್ಸುಗಳನ್ನು ಬಳಸಬೇಕೆಂದು ಒತ್ತಾಯಿಸಿದರು.
ಹೋರಾಟದ ಸ್ಥಳಕ್ಕೆ ಡಿಪೋ ವಿಭಾಗ ಮಟ್ಟದ ಸಾರಿಗೆ ವ್ಯವಸ್ಥಾಪಕರು ಬಂದು ಮನವಿ ಸ್ವೀಕರಿಸಿ ಸೋಮವಾರದೊಳಗೆ ಬಸ್ಸುಗಳನ್ನು ಬಿಡಲಾಗುವುದು ಎಂದು ಭರವಸೆ ನೀಡಿದರು. ಸೋಮವಾರ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸದಿದ್ದರೆ, ಬಸ್ಸುಗಳನ್ನು ತಡೆದು ಹೋರಾಟ ಮಾಡುತ್ತವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡರಾದ ಆನಂದ, ಬಸವರಾಜ್, ವಿನಯ್, ಶಿವಶರಣ, ಮಲ್ಲಿಕಾರ್ಜುನ ಸೂಡಿ, ಶಿಲ್ಪಾ, ರೇಣುಕಾ, ಬಸಯ್ಯ, ರೇಖಾ, ನೇತ್ರಾವತಿ, ಪವಿತ್ರಾ, ದೀಪಾ, ಲಕ್ಷ್ಮೀ, ಸಂಗನಗೌಡ, ಕಾರ್ತಿಕ, ಪ್ರವೀಣ, ಕಳಕೇಶ, ಅನೀಲ್, ಅಮರೇಶ, ಗುರುಕಿರಣ್, ಮುಂಜುನಾಥ, ಶಿವಾನಂದ, ಸುರೇಂದ್ರ ನೂರಾರು ವಿದ್ಯಾರ್ಥಿಗಳು ಹಾಜರಾಗಿದ್ದರು.