ಇಎಲ್‍ಐ – ಸಾರ್ವಜನಿಕ ನಿಧಿಯಿಂದ ಉದ್ಯಮಿಗಳಿಗೆ ಸಬ್ಸಿಡಿ ಒದಗಿಸುವ ಮತ್ತೊಂದು ವಂಚಕ ಯೋಜನೆ

ಮೋಸದ ಯೋಜನೆಗಳು ಮತ್ತು ವಂಚಕ ನೀತಿಗಳನ್ನು ತಿರಸ್ಕರಿಸಿ – ಸಿಐಟಿಯು
ನವದೆಹಲಿ: ಜುಲೈ 1ರಂದು  ಕೇಂದ್ರ ಮಂತ್ರಿಮಂಡಲ 99446 ಕೋಟಿ ರೂ.ಗಳನ್ನು ‘ಇಎಲ್‍ಐ’ ಎಂಬ, ಅಂದರೆ ಉದ್ಯೋಗಕ್ಕೆ ತಳುಕು ಹಾಕಿದ ಪ್ರೋತ್ಸಾಹನೆ ಎಂದು ಹೆಸರಿಸಿದ ಯೋಜನೆಗೆ ಮಂಜೂರು ಮಾಡಿದೆ ಎಂದು ವರದಿಯಾಗಿದೆ. ಇದು ಉದ್ದಿಮೆ ಮಾಲಕರಿಗೆ ಸಾರ್ವಜನಿಕ ನಿಧಿಯನ್ನು ವರ್ಗಾಯಿಸುವ ಮೋದಿ ನೇತೃತ್ವದ ಸರ್ಕಾರದ ಮತ್ತೊಂದು ವಂಚಕ ಯೋಜನೆ ಎಂದು  ಕೇಂದ್ರೀಯ ಕಾರ್ಮಿಕ ಸಂಘಟನೆ ಸಿಐಟಿಯು ಟೀಕಿಸಿದೆ. ಸಾರ್ವಜನಿಕ

ಇದು ಈ ಮೊದಲು ಉದ್ಯೋಗ ಸೃಷ್ಟಿಸುವ ಹೆಸರಿನಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದ ರೂ.1.97 ಲಕ್ಷ ಕೋಟಿ ಪಿಎಲ್‍ಐ , ಅಂದರೆ ಉತ್ಪಾದನೆಗೆ ತಳುಕು ಹಾಕಿದ  ಪ್ರೋತ್ಸಾಹಕ ಯೋಜನೆ ಮತ್ತು ರೂ.76000 ಕೋಟಿ ಗಳ ಕೇಪೆಕ್ಸ್ , ಅಂದರೆ ಬಂಡವಾಳ ವೆಚ್ಚ ಪ್ರೋತ್ಸಾಹಕ ಯೋಜನೆಯ ಸಾಲಿಗೆ ಸೇರಿರುವ ಯೋಜನೆ.

ಇಎಲ್‍ಐ ಯೋಜನೆಯನ್ನು 2020 ರಲ್ಲಿ ಉತ್ಪಾದನಾ ವಲಯದ 14 ಉದ್ದಿಮೆಗಳಿಗೆ ಪ್ರಾರಂಭಿಸಲಾಯಿತು ಮತ್ತು ನಂತರ 60 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಮತ್ತು ದೇಶದ ಜಿಡಿಪಿಯಲ್ಲಿ  ಉತ್ಪಾದನಾ ವಲಯದ ಪಾಲನ್ನು 15.4% ದಿಂದ 25% ಕ್ಕೆ ಹೆಚ್ಚಿಸಲಾಗುವುದು ಎಂಬ ದಾವೆಯೊಂದಿಗೆ ಒಟ್ಟು 17 ಕೈಗಾರಿಕೆಗಳಿಗೆ ವಿಸ್ತರಿಸಲಾಯಿತು.

ಇದನ್ನೂ ಓದಿ: ನಕಲಿ ಕೀ ಬಳಸಿ 133 ಮನೆಗಳ್ಳತನ ಮಾಡಿದ್ದ ಆರೋಪಿ ಬಂಧನ

ಆದರೆ ಸೃಷ್ಟಿಯಾದ  ಉದ್ಯೋಗಗಳ ಸಂಖ್ಯೆ 7 ಲಕ್ಷವನ್ನು ಸಹ ದಾಟಿಲ್ಲ. 2025 ರಲ್ಲಿ ಜಿಡಿಪಿಯಲ್ಲಿ ಉತ್ಪಾದನಾ ವಲಯದ ಕೊಡುಗೆಯ ಪ್ರಮಾಣ ಏರುವ ಬದಲು 14.2% ಕ್ಕೆ ಇಳಿದಿದೆ. ಇದಲ್ಲದೆ, ಯೋಜನೆಯ ಕುರಿತು ಸಂಸತ್ತಿಗೆ ಸರ್ಕಾರ ನೀಡಿದ ಉತ್ತರದ ಪ್ರಕಾರವೇ, ಈ ಯೋಜನೆಯ ಹೆಸರಲ್ಲಿ ಮೋದಿ ಸರಕಾರ ರೂ.1.97 ಲಕ್ಷ ಕೋಟಿಗಳನ್ನು ವೆಚ್ಚ ಮಾಡಿದ್ದರೂ, ಈ ಯೋಜನೆಯ ಪ್ರಯೋಜನ ಪಡೆದ ಉದ್ಯಮಿಗಳು ಮಾಡಿರುವ ಹೆಚ್ಚುವರಿ ಹೂಡಿಕೆ ರೂ.1.76 ಲಕ್ಷ ಕೋಟಿಗಳಷ್ಟು ಮಾತ್ರ!

ಅದೇ ರೀತಿ, ಕೆಪೆಕ್ಸ್ ಪ್ರೋತ್ಸಾಹಕದ ಅಡಿಯಲ್ಲಿ  ಗುಜರಾತ್‌ನ ಸಾನಂದ್ ಎಂಬಲ್ಲಿ ಪ್ರತಿಯೊಂದು  ಉದ್ಯೋಗ ಸೃಷ್ಟಿಗೆ ಸುಮಾರು ರೂ.3.25 ಕೋಟಿ ಯಂತೆ ಸಬ್ಸಿಡಿಯನ್ನು ಅಮೆರಿಕನ್ ಮೈಕ್ರಾನ್, ಟಾಟಾ ಸಮೂಹ, ಮುರ್ಗೆಪ್ಪ ಸಮೂಹ ಮತ್ತು  ಜಪಾನೀ ಹಾಗೂ  ಮತ್ತು ತೈವಾನೀ ಕಂಪನಿಗಳಿಗೆ ಸೆಮಿಕಂಡಕ್ಟರ್ ಸ್ಥಾವರಗಳನ್ನು ಸ್ಥಾಪಿಸಲು ಸರಕಾರ ಒದಗಿಸಿದೆ.

ಈ ಪ್ರೋತ್ಸಾಹಕ ಯೋಜನೆಗಳು ಸಾಮಾನ್ಯ ಜನರ ಮೇಲೆ ವಿಧಿಸುತ್ತಿರುವ ಜಿಎಸ್‍ಟಿ ಹೆಸರಲ್ಲಿ ಸಂಗ್ರಹಿಸಲಾದ ಸಾರ್ವಜನಿಕ ನಿಧಿಯನ್ನು ದೇಶೀ ಮತ್ತು ವಿದೇಶಿ ಕಾರ್ಪೊರೇಟ್‌ಗಳ ಹೂಡಿಕೆ ವೆಚ್ಚ, ಉತ್ಪಾದನಾ ವೆಚ್ಚಗಳಿಗೆ ಸಬ್ಸಿಡಿ ಒದಗಿಸುವ ಯೋಜನೆಗಳಾಗಿ ಮಾರ್ಪಟ್ಟಿವೆ ಎಂದು ಸಿಐಟಿಯು ಹೇಳಿದೆ. ಈಗ ಉದ್ಯೋಗ ಸೃಷ್ಟಿಸುವ ಹೆಸರಿನಲ್ಲಿ ಅಂಗೀಕರಿಸಲ್ಪಟ್ಟ ಇತ್ತೀಚಿನ ಇಎಲ್‍ಐ ಯೋಜನೆಯು, ಸಾರ್ವಜನಿಕ ನಿಧಿಯಿಂದ ಶ್ರಮ ವೆಚ್ಚ ಮತ್ತು ಭವಿಷ್ಯ ನಿಧಿ ಮತ್ತು ಇತರೆ ಕಾಯ್ದೆಯಡಿ ಮಾಲಕರ  ಶಾಸನಬದ್ಧ ಹೊಣೆಗಾರಿಕೆಗಳನ್ನು ನಿಭಾಯಿಸಲು ಸಬ್ಸಿಡಿಗಳನ್ನು ಒದಗಿಸುತ್ತದೆ.

ಗ್ರಾಮೀಣ ಬಡವರಿಗೆ ಉದ್ಯೋಗ ಕಲ್ಪಿಸಲೆಂದು ತಂದಿರುವ ಮನರೇಗ ಮತ್ತು  ಇತರ ಯೋಜನೆಗಳಿಗೆ ಬಜೆಟ್ ಹಂಚಿಕೆಯನ್ನು ವರ್ಷದಿಂದ ವರ್ಷಕ್ಕೆ ತೀವ್ರವಾಗಿ ಕಡಿತಗೊಳಿಸಲಾಗುತ್ತಿದ್ದರೂ, ಉದ್ದಿಮೆಗಳ ಮಾಲಕರಿಗೆ ಧಾರಾಳವಾಗಿ ಇಂತಹ ಕೋಟ್ಯಂತರ ರೂಪಾಯಿಗಳ  ಸಬ್ಸಿಡಿಗಳನ್ನು ಒದಗಿಸಲಾಗುತ್ತಿದೆ ಎಂದು ಸಿಐಟಿಯು ಖೇದ ವ್ಯಕ್ತಪಡಿಸಿದೆ.

ಕೇಂದ್ರ ಸಚಿವ ಸಂಪುಟವು ಮಂಜೂರು ಮಾಡಿರುವ 99446 ಕೋಟಿ ರೂ. 20024-25ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ರೂ. 2 ಲಕ್ಷ ಕೋಟಿ ಇಎಲ್‍ಐ ಯೋಜನೆಯ ಭಾಗವಾಗಿದೆ. ಶ್ರಮ ವೆಚ್ಚಗಳು ಮತ್ತು ಭವಿಷ್ಯನಿಧಿ ಮುಂತಾದ ಮಾಲಕರ ಬಾಧ್ಯತೆಗಳನ್ನು ಪೂರೈಸಲು ನೀಡುವ ಈ ಸಬ್ಸಿಡಿ ಸೃಷ್ಟಿಸುವ ಉದ್ಯೋಗಗಳು ಶಿಥಿಲ ಮತ್ತು ಅನಿಶ್ಚಿತ ಸ್ವರೂಪದವುಗಳು.  ಇದನ್ನು ಆಗಲೇ ಕಾರ್ಮಿಕ ಸಂಘಗಗಳ ಜಂಟಿ ವೇದಿಕೆ ವಿರೋಧಿಸಿತ್ತು.

ಆ ವೇಳೆಗೆ ಈ ಹಿಂದಿನ ಪಿಎಲ್‍ಐ ಮತ್ತು ಕೆಪೆಕ್ಸ್ ಪ್ರೋತ್ಸಾಹಕಗಳಿಂದ ಸೃಷ್ಟಿಯಾದ ಉದ್ಯೋಗಗಳು ಮತ್ತು ಈಡೇರಿದ ಗುರಿಗಳ ವಿವರಗಳನ್ನು ದೇಶದ ಮುಂದಿಡಿ ಎಂದು ಕೇಂದ್ರೀಯ ಕಾರ್ಮಿಕ ಸಂಘಗಳು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರಿಗೆ ಪತ್ರ ಬರೆದಿದ್ದವು. ಆದರೆ ಆ ಬಗ್ಗೆ ಸುಮ್ಮನಿರುವುದೇ ವಾಸಿ ಎಂದು ಬಗೆದಂತಿರುವ ಮೋದಿ ನೇತೃತ್ವದ ಸರ್ಕಾರ  ಈಗ ಉದ್ಯೋಗ ಸೃಷ್ಟಿಸುವ ಹೆಸರಿನಲ್ಲಿ ಈ ಯೋಜನೆಯನ್ನು ಮಂಜೂರು ಮಾಡಿದೆ.

ಅದ್ದರಿಂದ ಇದು ಕೂಡ  ಸಾರ್ವಜನಿಕ ಹಣವನ್ನು ಉದ್ಯಮಿಗಳ  ವರ್ಗಕ್ಕೆ ಮತ್ತು ಆಳುವವರ ಬಂಟರಿಗೆ ವರ್ಗಾಯಿಸುವ ಮತ್ತೊಂದು ಮೋಸದ ಮಾರ್ಗದ ಎಂಬುದು ಸ್ಪಷ್ಟ ಎಂದು ಸಿಐಟಿಯು ತೀವ್ರವಾಗಿ ಟೀಕಿಸಿದೆ.

ಇಂತಹ ಮೋಸದ ಯೋಜನೆಗಳನ್ನು ತಿರಸ್ಕರಿಸಲು ಮತ್ತು ಇಂತಹ ವಂಚಕ ನೀತಿಗಳ ವಿರುದ್ಧ ಹಾಗೂ ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಲು ಆಗ್ರಹಿಸಿರುವ ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆಯ 2025 ರ ಜುಲೈ 9 ರ ಸಾರ್ವತ್ರಿಕ ಮುಷ್ಕರ ಕರೆಯನ್ನು ಯಶಸ್ವಿಗೊಳಿಸಬೇಕು ಎಂದು ಸಿಐಟಿಯು ಸಮಸ್ತ ದುಡಿಯುವ ಜನತೆಗೆ ಕರೆ ನೀಡಿದೆ.

ಇದನ್ನೂ ನೋಡಿ: ಅಶ್ರಫ್ ಗುಂಪು ಹತ್ಯೆ : PUCL, APCR, AILAJ ಸತ್ಯಶೋಧನಾ ವರದಿಯಲ್ಲಿ ಆಘಾತಕಾರಿ ಅಂಶಗಳು Janashakthi Media

Donate Janashakthi Media

Leave a Reply

Your email address will not be published. Required fields are marked *