ಭೀಮಾ ಕೋರೆಗಾಂವ್ ಮತ್ತು ಎಲ್ಗಾರ್ ಪರಿಷತ್ ಪ್ರಕರಣ ಆರೋಪಿ ಸ್ಟಾನ್ ಸ್ವಾಮಿ ನಿಧನ

ಮುಂಬೈ: ಎಲ್ಗರ್ ಪರಿಷತ್ ಪ್ರಕರಣದಲ್ಲಿ ಭಯೋತ್ಪಾದನಾ ವಿರೋಧಿ ಕಾನೂನಿನಡಿಯಲ್ಲಿ ಬಂಧಿಸಲ್ಪಟ್ಟಿದ್ದ ಹೋರಾಟಗಾರ ಸ್ಟಾನ್ ಸ್ವಾಮಿ ಅವರು ಇಂದು ದೀರ್ಘಕಾಲದ ಅನಾರೋಗ್ಯದ ನಂತರ ಇಂದು ಮಧ್ಯಾಹ್ನ 1.30ಕ್ಕೆ ನಿಧನರಾಗಿದ್ದಾರೆ.

ಮುಂಬೈನ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 84 ವರ್ಷದ ಸ್ಟಾನ್ ಸ್ವಾಮಿ ಉಸಿರಾಟದ ಸಮಸ್ಯೆ ಹೆಚ್ಚಾಗಿದ್ದರಿಂದ ನೆನ್ನೆ ಭಾನುವಾರ ಅವರಿಗೆ ವೆಂಟಿಲೇಟರ್ ಅಳವಡಿಸಿ ಕೃತಕ ಉಸಿರಾಟ ಅಳವಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ನಿಧನರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನು ಓದಿ: ರಾಷ್ಟ್ರದ್ರೋಹ ಕಾನೂನು ವಜಾಗೊಳಿಸುವ ಸುವರ್ಣಾವಕಾಶ ಕಳೆದುಕೊಂಡ ಸುಪ್ರೀಂ ಕೋರ್ಟ್‌: ನ್ಯಾ. ನಾಗಮೋಹನ್‌ ದಾಸ್‌

ಭೀಮಾ ಕೋರೆಗಾಂವ್ ಪ್ರಕರಣ ಹಾಗೂ ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಬಂಧಿಸಲ್ಪಟ್ಟ 84 ವರ್ಷದ ಪಾದ್ರಿ ಹಾಗೂ ಬುಡಕಟ್ಟು ಹಕ್ಕುಗಳ ಹೋರಾಟಗಾರೂ ಆಗಿರುವ ಸ್ಟಾನ್ ಸ್ವಾಮಿ ಅವರ ತೀವ್ರ ಅನಾರೋಗ್ಯದಿಂದ ಬಳಲಿದ್ದ ಅವರನ್ನು ಬಾಂಬೆ ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ಮೇ 30 ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿತ್ತು.

ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಫಾದರ್ ಸ್ಟಾನ್ ಸ್ವಾಮಿ ಅವರಿಗೆ ಕೋವಿಡ್‌ ದೃಢಪಟಿರುವುದು ಪತ್ತೆಯಾದ ನಂತರ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಶನಿವಾರ ಮಧ್ಯರಾತ್ರಿಯಿಂದ ಅವರ ಆರೋಗ್ಯದಲ್ಲಿ ತೀವ್ರವಾಗಿ ಗಂಭೀರವಾಗಿತ್ತು.

ಸ್ಟಾನ್ ಸ್ವಾಮಿ ಪರ ವಕೀಲ ಮಿಹಿರ್ ದೇಸಾಯಿ ಅವರು “ಶನಿವಾರ ಮಧ್ಯರಾತ್ರಿಯ ನಂತರ ಸ್ಟಾನ್‌ ಸ್ವಾಮಿಯ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿತ್ತು. ವೆಂಟಿಲೇಟರ್‌ನಲ್ಲಿ ಇರಿಸಿ ಅವರನ್ನು ಆರೈಕೆ ಮಾಡಲಾಗಿತ್ತು. ಆಮ್ಲಜನಕದ ಮಟ್ಟವು ಏರಿಳಿತಗೊಂಡಿರುವುದರಿಂದ ಅವರಿಗೆ ಉಸಿರಾಡಲು ತೊಂದರೆ ಎದುರಾಗಿದ್ದವುʼʼ ಎಂದು ಮಾಧ್ಯಮಗಳೊಂದಿಗೆ ತಿಳಿಸಿದ್ದರು.

ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದ ಎನ್ಐಎ ವಿಶೇಷ ನ್ಯಾಯಾಲಯ ಸ್ಟಾನ್‌ ಸ್ವಾಮಿ ಅವರ ಜಾಮೀನು ನಿರಾಕರಿಸಿದ ನಂತರ ಅವರು ಜಾಮೀನುಗಾಗಿ ಬಾಂಬೆ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದರು. ವೈದ್ಯಕೀಯ ಕಾರಣಗಳಿಗಾಗಿ ತಾತ್ಕಾಲಿಕ ಜಾಮೀನು ನೀಡಬೇಕೆಂದು ಸ್ವಾಮಿ ಅವರು ಅರ್ಜಿಯಲ್ಲಿ ಸಲ್ಲಿಸಿದ್ದರು. ಹಿಂದಿನ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯವು ಆಸ್ಪತ್ರೆಗೆ ದಾಖಲಿಸುವಂತೆ ಆದೇಶಿಸಿತ್ತು. ಆದರೆ ಆಸ್ಪತ್ರೆಗೆ ದಾಖಲಾಗಲು ಸ್ಪಷ್ಟವಾಗಿ ನಿರಾಕರಿಸಿದ್ದ ಅವರು ತಮ್ಮನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಕೋರಿದ್ದರು.

ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ಪಾರ್ಕಿನ್ಸನ್ ಕಾಯಿಲೆ ಸೇರಿದಂತೆ ಅವರ ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಕೋವಿಡ್‌ ಸಾಂಕ್ರಾಮಿಕ ರೋಗದ ಕಾರಣದಿಂದ ಸ್ವಾಮಿ ಮಧ್ಯಂತರ ಜಾಮೀನು ಕೋರಿದ್ದರು. ಅರ್ಜಿ ವಿಚಾರಣೆ ನಡೆಸುವ ಸಂದರ್ಭ ನ್ಯಾಯಮೂರ್ತಿಗಳಾದ ಎಸ್ ಜೆ ಕತವಲ್ಲ ಹಾಗೂ ಎಸ್ ಪಿ ತವಡೆ ಪೀಠದ ಮುಂದೆ ಸ್ಟಾನ್‌ ಸ್ವಾಮಿ ತಲೋಜ ಜೈಲಿನಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು.

ಸ್ಟಾನ್‌ ಸ್ವಾಮಿಯನ್ನು ಕಳೆದ ವರ್ಷ 2020ರ ಅಕ್ಟೋಬರ್ 8 ರಂದು ರಾಂಚಿಯಿಂದ ಬಂಧಿಸಲಾಗಿತ್ತು. ಮರುದಿನ ಮುಂಬೈಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಚಾರಣೆ ಅಂಗವಾಗಿ ಬಂಧನದಲ್ಲಿ ಇರಿಸಿತ್ತು.

ಆರೋಗ್ಯದ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರಕ್ಕೆ ಮಾನವ ಹಕ್ಕು ಆಯೋಗ ನೋಟೀಸ್ ನೀಡಿತ್ತು

ಈ ಹಿಂದೆ ಎಲ್ಗಾರ್ ಪರಿಷತ್ ಕಾರ್ಯಕ್ರಮ ಹಾಗೂ ನಂತರದ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿಗಳಲ್ಲೊಬ್ಬರಾದ ಫಾದರ್ ಸ್ಟ್ಯಾನ್ ಸ್ವಾಮಿ ಅವರ ಆರೋಗ್ಯ ಸ್ಥಿತಿ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರಕ್ಕೆ ಮಾನವ ಹಕ್ಕು ಆಯೋಗ ನೋಟೀಸ್ ನೀಡಿತ್ತು. ಮಹಾರಾಷ್ಟ್ರದ ತಲೋಜಾ ಕೇಂದ್ರ  ಕಾರಾಗೃಹದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಸ್ಟಾನ್ ಸ್ವಾಮಿ ಅವರನ್ನ ಕೆಲ ವಾರಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರವೂ ಅವರು ಆರೋಗ್ಯದಲ್ಲಿ ತೀವ್ರವಾಗಿ ಏರುಪೇರಾಗಿತ್ತು.

ಆದರೆ, ನ್ಯಾಯಾಂಗ ಬಂಧನಕ್ಕೂ  ಮುನ್ನ ಆರೋಗ್ಯವಾಗಿದ್ದ ಸ್ಟ್ಯಾನ್ ಸ್ವಾಮಿ ಅವರ ಸ್ಥಿತಿ ಈ ಮಟ್ಟಕ್ಕೆ ತಲುಪಿರುವ ವಿಚಾರವನ್ನು ಕೆಲ ಸಂಘಟನೆಗಳು ಬಾಂಬೆ ಹೈಕೋರ್ಟ್ ಹಾಗೂ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಗಮನಕ್ಕೆ ತಂದಿದ್ದವು.

Donate Janashakthi Media

Leave a Reply

Your email address will not be published. Required fields are marked *