ಮುಂಬೈ : ಪ್ರಧಾನಿ ನರೇಂದ್ರ ಮೋದಿ ಇವಿಎಂ, ಇ.ಡಿ., ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆ ಇಲ್ಲದೇ ಚುನಾವಣೆ ಗೆಲ್ಲಲಾರರು. ಮೋದಿ ಅಧಿಕಾರಕ್ಕಾಗಿ ಹವಣಿಸುವ ಮುಖವಾಡ. ಅವರೊಬ್ಬ 56 ಇಂಚಿನ ಎದೆ ಇಲ್ಲದ ಪೊಳ್ಳು ಮನುಷ್ಯ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಭಾರತ್ ಜೋಡೋ ನ್ಯಾಯ್ ಯಾತ್ರೆ ಮುಕ್ತಾಯದ ಅಂಗವಾಗಿ ಹಮ್ಮಿಕೊಂಡಿದ್ದ ಇಂಡಿಯಾ ಮೈತ್ರಿಕೂಟದ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ರಾಹುಲ್, ‘ಭ್ರಷ್ಟಾಚಾರದ ವಿಷಯದಲ್ಲಿ ಮೋದಿ ಏಕಸ್ವಾಮ್ಯ ಹೊಂದಿದ್ದಾರೆ. ‘ಮತ ಯಂತ್ರಗಳನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರಕ್ಕೆ ಬರಲು ಸಜ್ಜಾಗಿದ್ದಾರೆ. ಅವರ ‘ಇವಿಎಂ’ನಲ್ಲೇ ಅವರ ಆತ್ಮ ಅಡಗಿದೆ’ ಎಂದು ಕುಟುಕಿದ್ದಾರೆ.
ಇದನ್ನೂ ಓದಿ : ಫ್ಯಾಕ್ಟ್-ಚೆಕ್ : “ನಶೆಯ ಅಮಲಿನಲ್ಲಿ ರಾಹುಲ್ ಗಾಂಧೀ ತೂರಿದ್ದು ನಿಜವೇ?
ದೇಶದ ಸಂವಿಧಾನವನ್ನು ಬದಲಿಸುವ ಧೈರ್ಯ ಬಿಜೆಪಿ ನಾಯಕರಿಗೆ ಇಲ್ಲ. ಆದರೂ ಅವರು ಬರೀ ಗದ್ದಲ ಮಾಡುತ್ತಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆ ಬಗ್ಗೆ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ. ಅಲ್ಲದೆ ಸತ್ಯ ಹಾಗೂ ಜನರ ಬೆಂಬಲ ತಮ್ಮ ಪರವಾಗಿ ಇದೆ ಎಂದೂ ಹೇಳಿದ್ದಾರೆ.
ಮಣಿಪುರದಿಂದ ಆರಂಭವಾಗಿದ್ದ ‘ಭಾರತ್ ಜೋಡೋ ನ್ಯಾಯ ಯಾತ್ರೆ’ ಸಮಾರೋಪದ ಅಂಗವಾಗಿ ಮುಂಬೈನ ಮಣಿ ಭವನ (ಮುಂಬೈನ ಮಹಾತ್ಮ ಗಾಂಧಿ ನಿವಾಸ)ದಿಂದ ಆಗಸ್ಟ್ ಕ್ರಾಂತಿ ಮೈದಾನ (1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿ ಆರಂಭವಾದ ಸ್ಥಳ)ದವರೆಗೆ ‘ನ್ಯಾಯ ಸಂಕಲ್ಪ ಪಾದಯಾತ್ರೆ’ಯನ್ನು ರಾಹುಲ್ ಗಾಂಧಿ ಭಾನುವಾರ ನಡೆಸಿದರು. ಈ ವೇಳೆ ಸಂವಿಧಾನ ಬದಲಿಸುವ ಬಿಜೆಪಿ ನಾಯಕನ ಹೇಳಿಕೆಗೆ ತಿರುಗೇಟು ಕೊಟ್ಟರು.