ಎಲೆಕ್ಟ್ರಾಲ್ ಬಾಂಡ್ | ಅತ್ಯಂತ ಹೆಚ್ಚು ಲಾಭ ಪಡೆದ ಬಿಜೆಪಿ; ಪ್ರಜ್ಞಾಪೂರ್ವಕ ನಿರಾಕರಿಸಿದ ಏಕೈಕ ಮುಖ್ಯವಾಹಿನಿ ಪಕ್ಷ ಸಿಪಿಐ(ಎಂ)

ನವದೆಹಲಿ: ಎಲೆಕ್ಟ್ರಾಲ್ ಬಾಂಡ್ ಬಗ್ಗೆ ಸುಪ್ರೀಂಕೋರ್ಟ್‌ ಗುರುವಾರ ಮಹತ್ವದ ತೀರ್ಪು ನೀಡಿದ್ದು, ಯೋಜನೆಯು ಅಸಾಂವಿಧಾನಿಕ ಎಂದು ಹೇಳಿ ಅದನ್ನು ರದ್ದುಗೊಳಿಸಿದೆ. ಅದಾಗ್ಯೂ, ಕೇಂದ್ರದ ಮೋದಿ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆಯಿಂದ ಅವರದೇ ಪಕ್ಷವಾದ ಬಿಜೆಪಿ ಹೆಚ್ಚಿನ ಲಾಭಗಳಿಸಿದೆ ಎಂದು ವರದಿಗಳು ಉಲ್ಲೇಖಿಸಿವೆ. ಅದಾಗ್ಯೂ, ವಿವಾದಿತ ಚುನಾವಣಾ ಬಾಂಡ್‌ಗಳನ್ನು ನಿರಾಕರಿಸಿದ ಏಕೈಕ ಮುಖ್ಯವಾಹಿನಿಯ ರಾಜಕೀಯ ಪಕ್ಷವೆಂದರೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್‌ವಾದಿ (ಸಿಪಿಐ-ಎಂ) ಮಾತ್ರವಾಗಿದೆ. ಅಲ್ಲದೆ, ಈ ಯೋಜನೆಯ ವಿರುದ್ಧದ ಅರ್ಜಿದಾರರಲ್ಲಿ ಸಿಪಿಐ(ಎಂ) ಕೂಡಾ ಒಂದಾಗಿದೆ.

ಆರ್‌ಟಿಐ ಮಾಹಿತಿಗಳ ಪ್ರಕಾರ 2018ರ ಮಾರ್ಚ್‌ನಿಂದ 2023ರ ಮಾರ್ಚ್‌ ನಡುವೆ ಒಟ್ಟು 12,008 ಕೋಟಿ ರೂಪಾಯಿ ಚುನಾವಣಾ ಬಾಂಡ್‌ಗಳನ್ನು 25 ಹಂತಗಳಲ್ಲಿ ಮಾರಾಟ ಮಾಡಲಾಗಿದೆ. ಅದರ ಮೇಲೆ 2023ರ ಏಪ್ರಿಲ್‌ನಿಂದ 2024ರ ಜನವರಿ ವರಗೆ ಇನ್ನೂ ಐದು ಹಂತಗಳಲ್ಲಿ 4509 ಕೋಟಿ ರೂಪಾಯಿ ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳನ್ನು ಮಾರಾಟ ಮಾಡಲಾಗಿದೆ. ಆದರೆ, ಈ ಅವಧಿಯಲ್ಲಿ ಪ್ರತಿಯೊಂದು ಪಕ್ಷಗಳು ಎಷ್ಟು ಹಣವನ್ನು ಸ್ವೀಕರಿಸಿದೆ ಎಂಬುದು ಇನ್ನಷ್ಟೆ ಪ್ರಕಟವಾಗಬೇಕಿದೆ.

ಇದನ್ನೂ ಓದಿ: ನೇಜಾರು ಹತ್ಯಾಕಾಂಡ | ಆರೋಪಿ ವಿರುದ್ಧ 2,250 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

2017 ಮತ್ತು 2023ರ ಮಾರ್ಚ್ ನಡುವೆ ಆಡಳಿತಾರೂಢ ಬಿಜೆಪಿಯು ಅತ್ಯಧಿಕ ಮೊತ್ತವನ್ನು ಎಲೆಕ್ಟ್ರಾಲ್ ಬಾಂಡ್‌ಗಳಿಂದ ಗಳಿಸಿದೆ ಎಂದು ವರದಿಗಳು ಹೇಳಿವೆ. ಈ ವೇಳೆ ಮಾರಾಟ ಮಾಡಲಾದ ಒಟ್ಟು 6570 ಕೋಟಿ ರೂಪಾಯಿಗಳ ಎಲೆಕ್ಟೋರಲ್ ಬಾಂಡ್‌ಗಳು ಅಥವಾ ಮಾರಾಟ ಮಾಡಲಾಡಲಾದ ಒಟ್ಟು ಬಾಂಡ್‌ಗಳಲ್ಲಿ 54% ವನ್ನು ಬಿಜೆಪಿ ಸ್ವೀಕರಿಸಿದೆ ಎಂದು ತಿಳಿದು ಬಂದಿದೆ. ಇದರಲ್ಲಿ ಕಾಂಗ್ರೆಸ್ ಪಕ್ಷವು ಒಟ್ಟು 1123 ಕೋಟಿ ರೂಪಾಯಿಗಳನ್ನು ಅಥವಾ ಮಾರಾಟವಾದ ಒಟ್ಟು ಎಲೆಕ್ಟೋರಲ್ ಬಾಂಡ್‌ಗಳಲ್ಲಿ 9% ಅನ್ನು ಪಡೆದಿದೆ. ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ 1092 ಕೋಟಿ ರೂಪಾಯಿ ಗಳಿಸುವ ಮೂಲಕ ಕಾಂಗ್ರೆಸ್‌ಗೆ ಸನಿಹದಲ್ಲೆ ಇದೆ.

ಚಿತ್ರ ಕೃಪೆ: ದಿ ನ್ಯೂಸ್ ಮಿನಿಟ್

ಪ್ರಾದೇಶಿಕ ಪಕ್ಷಗಳ ಪೈಕಿ ಟಿಆರ್‌ಎಸ್ 2017-18 ಮತ್ತು 2022-23ರ ನಡುವೆ 912 ಕೋಟಿ ರೂ. ಪಡೆದಿದೆ. ವಿಶೇಷವೇನೆಂದರೆ ತೆಲಂಗಾಣ ವಿಧಾನಸಭೆ ಚುನಾವಣೆಗೆ ತಿಂಗಳುಗಳ ಮೊದಲು 2022-2023ರ ಹಣಕಾಸು ವರ್ಷದಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ಕೆ. ಚಂದ್ರಶೇಖರ್ ರಾವ್ ಅವರ ಬಿಆರ್‌ಎಸ್‌ 50% ಕ್ಕಿಂತ ಹೆಚ್ಚು ದೇಣಿಗೆಗಳನ್ನು ಸ್ವೀಕರಿಸಿದೆ. ಅದಾಗ್ಯೂ, ಸತತ ಎರಡು ಅವಧಿಗೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಆರ್‌ಎಸ್‌ 2023ರ ಡಿಸೆಂಬರ್ ವೇಳೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಸೋತಿದೆ.

ಇದನ್ನೂ ಓದಿ:ಚುನಾವಣಾ ಬಾಂಡ್‌ಗಳು ರದ್ದು | ಯೋಜನೆ ಅಸಂವಿಧಾನಿಕ ಎಂದ ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ಅಷ್ಟೆ ಅಲ್ಲದೆ, ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಬಿಜೆಡಿ 774 ಕೋಟಿ ಗಳಿಸಿದರೆ, ಡಿಎಂಕೆ 616 ಕೋಟಿ, ವೈಎಸ್‌ಆರ್‌ಸಿಪಿ 381 ಕೋಟಿ, ಟಿಡಿಪಿ 146 ಕೋಟಿ, ಎಎಪಿ 84 ಕೋಟಿ ರೂ.ಗಳನ್ನು ಚುನಾವಣಾ ಬಾಂಡ್‌ಗಳ ಮೂಲಕ ಪಡೆದಿವೆ. ಪ್ರಜ್ಞಾಪೂರ್ವಕವಾಗಿ ಚುನಾವಣಾ ಬಾಂಡ್‌ಗಳನ್ನು ನಿರಾಕರಿಸಿದ ಏಕೈಕ ಮುಖ್ಯವಾಹಿನಿಯ ರಾಜಕೀಯ ಪಕ್ಷವೆಂದರೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಎಂಬುದು ಗಮನಿಸಬೇಕಾದ ಅಂಶವಾಗಿದೆ.

ಪಕ್ಷವಾರು ಅಂಕಿಅಂಶಗಳನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಂಗ್ರಹಿಸಿದೆ. ಚುನಾವಣಾ ಬಾಂಡ್‌ಗಳನ್ನು ಪ್ರಶ್ನಿಸಿದ ನಾಲ್ಕು ಅರ್ಜಿದಾರರಲ್ಲಿ ಎಡಿಆರ್‌ ಕೂಡಾ ಒಂದಾಗಿದೆ.

ಫೆಬ್ರವರಿ 15 ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಮಾರ್ಚ್ 13 ರೊಳಗೆ ದೇಣಿಗೆ ವಿವರಗಳನ್ನು ಪ್ರಕಟಿಸಲು ಚುನಾವಣಾ ಬಾಂಡ್‌ಗಳನ್ನು ನೀಡುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗೆ ಆದೇಶಿಸಿದೆ. ಎನ್‌ಕ್ಯಾಶ್ ಮಾಡದ ಎಲ್ಲಾ ಎಲೆಕ್ಟೋರಲ್ ಬಾಂಡ್‌ಗಳನ್ನು ಸಹ ಹಿಂತಿರುಗಿಸಬೇಕು ಎಂದು ಅದು ಹೇಳಿದೆ.

ವಿಡಿಯೊ ನೋಡಿ: ರಾಮನಿಗೆ ಭವ್ಯ ಮಂದಿರ, ಶ್ರಮಿಕರಿಗೆ ಟೆಂಟ್ – ನಾಗೇಶ ಹೆಗಡೆ ವಿಶ್ಲೇಷಣೆ Janashakthi Media

Donate Janashakthi Media

Leave a Reply

Your email address will not be published. Required fields are marked *