ಸಂಸತ್ತಿನ ಪ್ರಸಕ್ತ ಅಧಿವೇಶನದಲ್ಲಿ ವಿದ್ಯುತ್ ತಿದ್ದುಪಡಿ ಮಸೂದೆ, 2021ನ್ನು ಕೇಂದ್ರ ಸರಕಾರ ಮಂಡಿಸಬೇಕೆಂದಿದೆ. ಹಾಗೇನಾದರೂ ಮಾಡಿದರೆ ಆದಿನ ವಿದ್ಯುತ್ ವಲಯದ 15 ಲಕ್ಷ ಇಂಜಿನಿಯರುಗಳು, ನೌಕರರು ಮತ್ತು ಕಾರ್ಮಿಕರು ಮುಷ್ಕರ ನಡೆಸುತ್ತಾರೆ ಎಂದು ಅಖಿಲ ಭಾರತ ವಿದ್ಯುತ್ ಇಂಜಿನಿಯರುಗಳ ಒಕ್ಕೂಟ (ಎಐಪಿಇಎಫ್) ಹೇಳಿಕೆ ನೀಡಿದೆ.
ಈ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಿ ಪಾಸು ಮಾಡಿಸಿಕೊಳ್ಳುವ ನಡೆಯ ವಿರುದ್ಧ ಎಚ್ಚರದಿಂದಿರಬೇಕು ಎಂದು ವಿದ್ಯುತ್ ನೌಕರರರು ಮತ್ತು ಇಂಜಿನಿಯರುಗಳ ರಾಷ್ಟ್ರೀಯ ಸಮನ್ವಯ ಸಮಿತಿ (ಎನ್‍ಸಿಸಿಇಇಇ) ಈ ಮೊದಲೇ ಕರೆ ನೀಡಿತ್ತು.
ಭಾರತದ ಬಡವರು ಮತ್ತು ಗ್ರಾಮೀಣ ಜನಗಳ ವಿದ್ಯುತ್ ಪಡೆಯುವ ಹಕ್ಕನ್ನು ಮೊಟಕುಗೊಳಿಸುವ ಈ ಮಸೂದೆಯ ಬಗ್ಗೆ ಕೇಂದ್ರ ಸರಕಾರ ಹಟಮಾರಿ ನಿಲುವು ತಳೆದಿದೆ. ಇಂತಹ ಸನ್ನಿವೇಶದಲ್ಲಿ, ರಾಷ್ಟ್ರೀಯ ಸಮನ್ವಯ ಸಮಿತಿ ದೇಶಾದ್ಯಂತ ಬೃಹತ್ ಪ್ರಮಾಣದಲ್ಲಿ ಪ್ರತಿಭಟನಾ ಮತಪ್ರದರ್ಶನ ನಡೆಸಲು ನಿರ್ಧರಿಸಿದೆ ಎಂದು ಎಐಪಿಇಎಫ್ ಅಧ್ಯಕ್ಷ ಶೈಲೇಂದ್ರ ದುಬೆ ಹೇಳಿದ್ದಾರೆ.
ಈ ಮಸೂದೆಯನ್ನು ಹಿಂತೆಗೆದುಕೊಳ್ಳಬೇಕು ಎಂಬುದು ಸಂಯುಕ್ತ ಕಿಸಾನ್ ಮೋರ್ಚಾದ ಆರು ಬೇಡಿಕೆಗಳಲ್ಲಿ ಒಂದು ಎಂಬುದನ್ನು ಇಲ್ಲಿ ಗಮನಿಸಬಹುದು.