ಕಲಬುರಗಿ: ಶಾಲಾ ವಾಹನದ ಮೇಲೆ ವಿದ್ಯುತ್‌ ತಂತಿ ಬಿದ್ದು ಮಹಿಳೆಗೆ ಗಾಯ

ಕಲಬುರಗಿ: ಬುದ್ಧಿಮಾಂದ್ಯ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಶಾಲಾ ವಾಹನದ ಮೇಲೆ ವಿದ್ಯುತ್‌ ತಂತಿ ಕಡಿದು ಬಿದ್ದು ಮಹಿಳೆಯೊಬ್ಬರು ಗಾಯಗೊಂಡಿರುವ ಘಟನೆ ಕಲಬುರಗಿಯಲ್ಲಿ ಸೋಮವಾರ ನಡೆದಿದೆ.

ವಿದ್ಯುತ್ ಶಾಕ್‌ನಿಂದಾಗಿ ಭಾಗಶ್ರೀ ರವೀಂದ್ರ ಎಂಬುವವರ ಹೊಟ್ಟೆ, ಕೈ ಮತ್ತು ಕಾಲಿಗೆ ಸುಟ್ಟ ಗಾಯಗಳಾಗಿವೆ. ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಟೇಷನ್ ಬಜಾರ್ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ : ಸಿ.ಟಿ. ರವಿ ಬಳಸಿದ ಅಶ್ಲೀಲ ಪದಗಳ ವೀಡಿಯೋವನ್ನು ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್

ಪರಿವರ್ತನಾ ಶಾಲಾ ವಾಹನದಲ್ಲಿ ಸುಮಾರು 14 ಬುದ್ಧಿಮಾಂದ್ಯ ಮಕ್ಕಳನ್ನು ಶಾಲಾ ತರಗತಿಗೆ ಕರೆದೊಯ್ಯಲಾಗುತ್ತಿತ್ತು. ಹಳೇ ಜೇವರ್ಗಿ ಕ್ರಾಸ್ ಸಮೀಪದಲ್ಲಿ ಮಕ್ಕಳನ್ನು ಹತ್ತಿಸಿಕೊಳ್ಳಲು ನಿಂತಿದ್ದ ವಾಹನದ ಮೇಲೆ ವಿದ್ಯುತ್ ತಂತಿ ಕಡಿದು ಬಿದ್ದಿತ್ತು. ಈ ಬಗ್ಗೆ ಅರಿವಿಲ್ಲದೆ ಭಾಗ್ಯಶ್ರೀ ಅವರು ತಮ್ಮ ಪುತ್ರ ಆಯುಷ್‌ನನ್ನು ಶಾಲಾ ವಾಹನದಲ್ಲಿ ಹತ್ತಿಸಿದ್ದರು. ನೆಲದ ಮೇಲೆ ನಿಂತು ವಾಹನಕ್ಕೆ ಕೈ ತಾಗಿಸಿದ್ದರಿಂದ ಭೂಸಂಪರ್ಕದಿಂದಾಗಿ (ಅರ್ಥಿಂಗ್‌) ಮಹಿಳೆಗೆ ವಿದ್ಯುತ್ ಶಾಕ್ ತಗುಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿದ್ಯುತ್‌ ಶಾಕ್‌ನಿಂದ ಕೆಳಗೆ ಬಿದ್ದ ಭಾಗ್ಯಶ್ರೀ ಅವರ ಮೈ ಮೇಲೆ ಬೆಂಕಿ ಕಾಣಿಸಿಕೊಂಡು ಹೊಟ್ಟೆ, ಕೈ ಮತ್ತು ಕಾಲಿಗೆ ಸುಟ್ಟ ಗಾಯಗಳಾದವು. ಸಹಾಯಕ್ಕೆ ಬರುವಂತೆ ಚೀರಾಡಿದರು. ಕೆಲವರು ದಿಕ್ಕಾಪಾಲಾಗಿ ಓಡಿದರು. ವಾಹನದಲ್ಲಿದ್ದ ಮಕ್ಕಳೂ ಆತಂಕಕ್ಕೆ ಒಳಗಾಗಿ ರೋಧಿಸಿದರು. ಸ್ಥಳೀಯರು ಬಂದು ಮಹಿಳೆಯನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದರು. ಮಕ್ಕಳನ್ನು ಸಮಾಧಾನಪಡಿಸಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

ಶಾಸಕ ಅಲ್ಲಮಪ್ರಭು ಪಾಟೀಲ, ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆಗೆ ದಾಖಲಾದ ಮಹಿಳೆಯ ಆರೋಗ್ಯವನ್ನು ವಿಚಾರಿಸಿ, ಧೈರ್ಯ ತುಂಬಿದರು.

ಇದನ್ನೂ ನೋಡಿ : ಸದನದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಆಕ್ಷೇಪಾರ್ಹ ಪದಬಳಸಿದ ಸಿಟಿ ರವಿ Janashakthi Media

Donate Janashakthi Media

Leave a Reply

Your email address will not be published. Required fields are marked *