-
ಚುನಾವಣಾ ಬಾಂಡ್ ನಿಂದ ಬಿಜೆಪಿಗೆ ಬಂದಿದ್ದು 6 ಸಾವಿರ ಕೋಟಿ ರೂ.!
-
ಯಾರಿಂದ ಎಷ್ಟೆಷ್ಟು ದೇಣಿಗೆ? ಮಾಹಿತಿ ಬಹಿರಂಗ
-
ಇ.ಡಿ , ಸಿಬಿಐ ದಾಳಿಯ ಬೆದರಿಕೆಯೊಡ್ಡಿ ಬಿಜೆಪಿಯಿಂದ ಹೆಚ್ಚು ದೇಣಿಗೆ ವಸೂಲಿ
ನವದೆಹಲಿ : ರಾಜಕೀಯವಾಗಿ ಭಾರಿ ಸದ್ದು ಮಾಡಿದ ಚುನಾವಣಾ ಬಾಂಡ್‌ಗಳ ಕುರಿತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಲ್ಲಿಕೆ ಮಾಡಿದ್ದ ದತ್ತಾಂಶಗಳ ವಿವರವನ್ನು ಕೇಂದ್ರ ಚುನಾವಣಾ ಆಯೋಗವು ಗುರುವಾರ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಇದರಲ್ಲಿ ದೇಶದ ಅತಿ ದೊಡ್ಡ ರಾಜಕೀಯ ಪಕ್ಷ ಬಿಜೆಪಿಗೆ ಪ್ರಮುಖ ಕಂಪನಿಗಳು ಟ್ರಸ್ಟ್ ಮೂಲಕ ದೇಣಿಗೆ ಸಂದಾಯವಾಗಿದೆ ಎಂದು ಅಂಕಿ ಅಂಶಗಳು ಹೇಳುತ್ತಿವೆ.
ಚುನಾವಣಾ ಬಾಂಡ್ ವಿವರ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ
ಪಿರಮಲ್ ಎಂಟ್ರಪ್ರೈಸಸ್, ಗ್ರಾಸಿಮ್ ಇಂಡಸ್ಟ್ರೀಸ್, ಸನ್ ಫಾರ್ಮಾ, ವರ್ಧಮಾನ್ ಟೆಕ್ಸ್‌ಟೈಲ್ಸ್, ಮುತ್ತೂಟ್ ಫೈನಾನ್ಸ್, ಅಪೋಲೊ ಟೈಯರ್ಸ್, ಭಾರ್ತಿ ಏರ್ಟೆಲ್, ಲಕ್ಷ್ಮಿ ನಿವಾಸ್ ಮಿತ್ತಲ್, ಮೇಘಾ ಎಂಜಿನಿಯರಿಂಗ್, ಟೊರೆಂಟ್ ಪವರ್, ವೇದಾಂತ ಲಿಮಿಟೆಡ್, ಸುಲಾ ವೈನ್, ಡಿಎಲ್‌ಎಫ್ ಕಮರ್ಷಿಯಲ್ ಡೆವಲಪರ್ಸ್, ವೆಲ್ಸಪನ್ ಸೇರಿದಂತೆ ಹಲವು ಕಂಪನಿಗಳು ಚುನಾವಣಾ ಬಾಂಡ್ ಖರೀದಿಸಿವೆ.
ಎಸ್‌ಬಿಐ ದತ್ತಾಂಶಗಳ ಪ್ರಕಾರ ಬಿಜೆಪಿ, ಕಾಂಗ್ರೆಸ್, ಎಐಎಡಿಎಂಕೆ, ಬಿಆರ್‌ಎಸ್, ಶಿವಸೇನೆ, ಟಿಡಿಪಿ, ವೈಎಸ್ಸಾರ್ ಕಾಂಗ್ರೆಸ್, ಡಿಎಂಕೆ, ಜೆಡಿಎಸ್, ಎನ್‌ಸಿಪಿ, ತೃಣಮೂಲ ಕಾಂಗ್ರೆಸ್, ಜೆಡಿಯು, ಆರ್‌ಜೆಡಿ, ಆಪ್, ಸಮಾಜವಾದಿ ಪಕ್ಷಗಳು ಚುನಾವಣಾ ಬಾಂಡ್‌ಗಳನ್ನು ನಗದೀಕರಿಸಿಕೊಂಡಿವೆ. ಬಿಜೆಪಿ 6 ಸಾವಿರ ಕೋಟಿ ರೂ ಹಣವನ್ನು ಚುನಾವಣಾ ಬಾಂಡ್ ಮೂಲಕ ಪಡೆದುಕೊಂಡಿದೆ.
2018 ರಿಂದ ಈವರೆಗೂ 30 ಕಂತುಗಳಲ್ಲಿಒಟ್ಟು 16,518 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಎಸ್‌ಬಿಐ ವಿತರಿಸಿದೆ. ಕೇಂದ್ರ ಸರಕಾರ ಜಾರಿಗೆ ತಂದಿದ್ದ ಈ ಚುನಾವಣಾ ಬಾಂಡ್ ಯೋಜನೆಯನ್ನು ಫೆ.15ರಂದು ಸುಪ್ರೀಂಕೋರ್ಟ್ ರದ್ದುಪಡಿಸಿ ಮಹತ್ವದ ತೀರ್ಪು ನೀಡಿತ್ತು. ಇದು ‘ಅಸಾಂವಿಧಾನಿಕ’ ಎಂದಿದ್ದ ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಖರೀದಿಸಿದವರ ವಿವರಗಳನ್ನು ಚುನಾವಣಾ ಆಯೋಗಕ್ಕೆ ಒದಗಿಸಬೇಕು ಎಂದು ಎಸ್‌ಬಿಐಗೆ ಖಡಕ್ ನಿರ್ದೇಶನ ನೀಡಿತ್ತು. 2019 ರಲ್ಲಿ ಆಸೋಸಿಷಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ (ಎಡಿಆರ್) ಮತ್ತು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಚುನಾವಣಾ ಬಾಂಡ್ ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದವು.
ಬಿಜೆಪಿಗೆ ಹೆಚ್ಚು : ಕಾರ್ಪೊರೇಟ್ ಕಂಪನಿಗಳು ಚುನಾವಣಾ ಬಾಂಡ್ ಖರೀದಿಸಿ ಬಿಜೆಪಿಗೆ ನೀಡಿದ್ದು ಹೆಚ್ಚು ಎಂಬ ಅಂಶ ಬಯಲಾಗಿದೆ. ಆ ವಿವರಗಳು ಈ ಕೆಳಗಿನಂತಿವೆ.
ಪ್ರೂಡೆಂಟ್ ಎಲೆಕ್ಟ್ರಾಲ್ ಟ್ರಸ್ಟ್ 2013ರಿಂದ ₹2,255 ಕೋಟಿಯಷ್ಟು ಮೊತ್ತವನ್ನು ಬಿಜೆಪಿಗೆ ನೀಡಿದೆ. ಇದರ ಪಾಲು ಶೇ 75ರಷ್ಟು. ಇದು ಕಾಂಗ್ರೆಸ್‌ಗೆ ಸಲ್ಲಿಕೆಯಾದ ₹167 ಕೋಟಿಗೆ ಹೋಲಿಸಿದರೆ ಹತ್ತು ಪಟ್ಟು ಹೆಚ್ಚು.
ಭಾರ್ತಿ ಏರ್‌ಟೆಲ್ ಕಂಪನಿಯು 2022ರ ಜ. 13ರಂದು ₹25 ಕೋಟಿಯನ್ನು ಹಾಗೂ 2021ರ ಮಾರ್ಚ್ 25ರಂದು ₹15 ಕೋಟಿ ನೀಡಿದೆ. ಈ ಮೊತ್ತವನ್ನು ಬಿಜೆಪಿಗೆ ಚೆಕ್ ರೂಪದಲ್ಲಿ ಟ್ರಸ್ಟ್ ನೀಡಿದೆ.
ಕಳೆದು 2 ವರ್ಷಗಳಲ್ಲಿ ಡಿಎಲ್‌ಎಫ್ ಸಮೂಹ ₹20.1 ಕೋಟಿ, ಆರ್ಸಲ್ ಮಿತ್ತಲ್ ₹20 ಕೋಟಿ ಹಾಗೂ ಜಿಎಂಆರ್ ಸಮೂಹದಿಂದ ₹20 ಕೋಟಿ ಬಿಜೆಪಿಗೆ ಸಲ್ಲಿಕೆಯಾಗಿದೆ. ಹೀಗೆ ಒಟ್ಟು ಪ್ರೂಡೆಂಟ್‌ನಿಂದ ಈ ಅವಧಿಯಲ್ಲಿ ಬಿಜೆಪಿಗೆ ₹220 ಕೋಟಿ ಸಲ್ಲಿಕೆಯಾಗಿದೆ ಎಂದು ವರದಿಯಾಗಿದೆ.
ಉಕ್ಕು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಆರ್ಸಲ್ ಮಿತ್ತಲ್ ನಿಪ್ಪಾನ್ ಸ್ಟೀಲ್, ಟೆಲಿಕಾಂ ಕಂಪನಿ ಭಾರ್ತಿ ಏರ್ಟೆಲ್, ನಿರ್ಮಾಣ ಕಂಪನಿ ಜಿಎಂಆರ್ ಹಾಗೂ ಇಂಧನ ಉತ್ಪಾದನಾ ಕಂಪನಿ ಪಕ್ಷಕ್ಕೆ ನೇರವಾಗಿ ಹಣ ನೀಡಿಲ್ಲ. ಹೀಗಾಗಿ ಇವುಗಳ ಹೆಸರು ದಾನಿಗಳ ಪಟ್ಟಿಯಲ್ಲಿಲ್ಲ. ಆದರೆ ಈ ಕಂಪನಿಗಳು ನೀಡಿದ ದೇಣಿಗೆಯನ್ನು ಪ್ರೂಡೆಂಟ್ ಟ್ರಸ್ಟ್ ವಿತರಿಸಿದೆ.
ದೇಶದಲ್ಲಿರುವ ಪ್ರಮುಖ 18 ಎಲೆಕ್ಟ್ರಾಲ್ ಟ್ರಸ್ಟ್‌ಗಳಲ್ಲಿ ಪ್ರೂಡೆಂಟ್ ಕೂಡಾ ಒಂದು. ಹಾಗೆಯೇ ಒಂದಕ್ಕಿಂತ ಹೆಚ್ಚು ಕಾರ್ಪೊರೇಟ್ ಕಂಪನಿಗಳಿಂದ ದೇಣಿಗೆ ಪಡೆಯುವ ಹಕ್ಕು ಹೊಂದಿರುವ 4 ಪ್ರಮುಖ ಟ್ರಸ್ಟ್‌ಗಳಲ್ಲಿ ಪ್ರೂಡೆಂಟ್ ಕೂಡಾ ಒಂದು.
ಟಾಪ್ 10 ದೇಣಿಗೆದಾರರು
ಅತಿ ಹೆಚ್ಚು ದೇಣಿಗೆ ಪಡೆದ ಪಕ್ಷಗಳು
ಹಣಕ್ಕಾಗಿ ಸರ್ಕಾರಿ ಸಂಸ್ಥೆಗಳ ದುರ್ಬಳಿಕೆ :ಚುನಾವಣಾ ಬಾಂಡ್ ಪಡೆಯುವದಕ್ಕಾಗಿ ಬಿಜೆಪಿ ಈಡಿ ದಾಳಿಯನ್ನು ಬಳಸಿಕೊಂಡಿದೆ ಎಂಬುದು ಸ್ಪಷ್ಟವಾಗುತ್ತಿದೆ. 2019ರಿಂದ ಜನವರಿ 2024ರವರೆಗೆ ಚುನಾವಣಾ ಬಾಂಡ್‌ಗಳನ್ನು ಖರೀದಿಸಿರುವ 30 ದೇಣಿಗೆದಾರ ಕಂಪೆನಿಗಳ ಪೈಕಿ 14 ಕಂಪೆನಿಗಳು ಈಡಿ ದಾಳಿಗೆ ಒಳಗಾಗಿವೆ.
ಈಡಿ ದಾಳಿಗೊಳಗಾದ ನಂತರ ಫ್ಯೂಚರ್ ಗೇಮಿಂಗ್ ಆ್ಯಂಡ್ ಹೋಟೆಲ್ ಸರ್ವಿಸಸ್ ಸಂಸ್ಥೆ ಅಕ್ಟೋಬರ್ 27, 2020ರಿಂದ ಅಕ್ಟೋಬರ್ 5, 2023ರ ನಡುವೆ ಒಟ್ಟು ರೂ. 1,368 ಕೋಟಿ ರೂಪಾಯಿಯನ್ನು ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡಿದೆ.ಮೇಘಾ ಎಂಜಿನಿಯರಿಂಗ್ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ರೂ. 966 ಕೋಟಿ ದೇಣಿಗೆಯನ್ನು ನೀಡಿದೆ. ಆಂಧ್ರಪ್ರದೇಶದ ಉದ್ಯಮಿ ಕೃಷ್ಣಾ ರೆಡ್ಡಿ ಒಡೆತನದ ಈ ಸಂಸ್ಥೆಯ ಮೇಲೆ ಹೈದರಾಬಾದ್ ಹಾಗೂ ಇನ್ನಿತರ ನಗರಗಳಲ್ಲಿನ ಅದರ ಕಚೇರಿಗಳ ಮೇಲೆ ಅಕ್ಟೋಬರ್ 2019ರಲ್ಲಿ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿತ್ತು.
ಹಾಲ್ದಿಯಾ ಎನರ್ಜಿ ಲಿಮಿಟೆಡ್ ರೂ. 377 ಕೋಟಿ ದೇಣಿಗೆ ನೀಡಿದೆ. ಈ ಸಂಸ್ಥೆಯ ಮೇಲೆ ಮಾರ್ಚ್ 2020ರಲ್ಲಿ ಕೇಂದ್ರ ತನಿಖಾ ಸಂಸ್ಥೆ ದಾಳಿ ನಡೆಸಿತ್ತು.ವೇದಾಂತ ಲಿಮಿಟೆಡ್ ರೂ. 400 ಕೋಟಿ ದೇಣಿಗೆ ನೀಡಿದೆ. ಈ ಸಂಸ್ಥೆಯ ಮೇಲೆ ಅಕ್ರಮ ಹಣ ವರ್ಗಾವಣೆ ಆರೋಪದಡಿ ಆಗಸ್ಟ್ 2022ರಲ್ಲಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು.ಯಶೋಧಾ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ರೂ. 162 ಕೋಟಿ ದೇಣಿಗೆ ನೀಡಿದೆ. ಈ ಸಂಸ್ಥೆಯ ಮೇಲೆ ಡಿಸೆಂಬರ್ 2020ರಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು.
ಡಿಎಲ್‌ಎಫ್ ಕಮರ್ಷಿಯಲ್ ಡೆವಲಪರ್ಸ್ ಲಿಮಿಟೆಡ್ ರೂ. 130 ಕೋಟಿ ದೇಣಿಗೆ ನೀಡಿದೆ. ಈ ಸಂಸ್ಥೆಯ ಮೇಲೆ ಜನವರಿ 2019ರಲ್ಲಿ ಕೇಂದ್ರ ತನಿಖಾ ಸಂಸ್ಥೆ ದಾಳಿ ನಡೆಸಿತ್ತು. ನವೆಂಬರ್ 2023ರಲ್ಲಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು.
ಜಿಂದಾಲ್ ಸ್ಟೀಲ್ ಆ್ಯಂಡ್ ಪವರ್ ಲಿಮಿಟೆಡ್ ರೂ. 123 ಕೋಟಿ ದೇಣಿಗೆ ನೀಡಿದೆ. ಈ ಸಂಸ್ಥೆಯ ಮೇಲೆ ಎಪ್ರಿಲ್ 2022ರಲ್ಲಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ಚೆನ್ನೈ ಗ್ರೀನ್‌ವುಡ್ಸ್ ಪ್ರೈವೇಟ್ ಲಿಮಿಟೆಡ್ ರೂ. 105 ಕೋಟಿ ದೇಣಿಗೆ ನೀಡಿದೆ. ಈ ಸಂಸ್ಥೆಯ ಮೇಲೆ ಜುಲೈ 2021ರಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು.
ನಾನು ತಿನ್ನಲ್ಲ, ಬೇರೆಯವರಿಗೂ ತಿನ್ನಲು ಬಿಡುವುದಿಲ್ಲ ಎಂದಿದ್ದ ಪ್ರಧಾನಿ ಮೋದಿಯವರು ಚುನಾವಣಾ ಬಾಂಡ್ ಮೂಲಕ ಬಿಜೆಪಿಗೆ ದೊಡ್ಡ ಮೊತ್ತದ ಹಣವನ್ನೆ ತಿನ್ನಿಸಿದ್ದಾರೆ. ಚುನಾವಣಾ ಸಮಯದಲ್ಲಿ ಇದು ಬಿಜೆಪಿಗೆ ದೊಡ್ಡ ಹೊಡೆತ ಬೀಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ವಿಡಿಯೋ ನೋಡಿ:ಚುನಾವಣಾ ಬಾಂಡ್ ಮೂಲಕ ಖಾವೋ, ಖಾನೆ ಮಾಡಿದ ಬಿಜೆಪಿ – ಗುರುರಾಜ ದೇಸಾಯಿ