ಬೆಂಗಳೂರು: ನೆನ್ನೆ ಸೋಮವಾರ, ಬಹು ನಿರೀಕ್ಷಿತ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಯ ಮೀಸಲು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮೇ ಅಂತ್ಯದೊಳಗೆ ಅಧಿಸೂಚನೆ ಪ್ರಕಟಿಸಲಾಗುವುದು ಎಂಬ ರಾಜ್ಯ ಸರ್ಕಾರದ ಮುಚ್ಚಳಿಕೆಯನ್ನು ಆಧರಿಸಿ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ಇತ್ಯರ್ಥಪಡಿಸಿದೆ. ಬೆಂಗಳೂರು
ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ನೀಡಿರುವ ವಾಗ್ದಾನದಂತೆ ನಡೆದುಕೊಂಡರೆ ಜೂನ್ – ಜುಲೈ ಅಥವಾ ಆಗಸ್ಟ್‌ನಲ್ಲಿ ರಾಜ್ಯದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಬೆಂಗಳೂರು
ನಿಗದಿತ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಮೀಸಲಾತಿ ಪ್ರಕಟಿಸಲು ವಿಫಲವಾಗಿದ್ದ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ಜೊತೆಗೆ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಿಸಲು ಏಕಸದಸ್ಯ ಪೀಠದ ಆದೇಶ ಪಾಲಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು 2023ರಲ್ಲಿ ಸಲ್ಲಿಸಲಾದ ಎರಡು ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ಎಂ ಐ ಅರುಣ್ ಅವರ ನೇತೃತ್ವದ ವಿಭಾಗೀಯ ಪೀಠ ಇತ್ಯರ್ಥಪಡಿಸಿತು.
ಇದನ್ನೂ ಓದಿ: ಸತ್ತ ವ್ಯಕ್ತಿ ಎದ್ದು ಕೂರುವುದು ಹೇಗೆ?
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ರಾಜ್ಯ ಚುನಾವಣಾ ಆಯೋಗಕ್ಕೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪಟ್ಟಿಯನ್ನು ಹೆಚ್ಚೆಂದರೆ ಮೇ ಅಂತ್ಯದೊಳಗೆ ನೀಡಲಾಗುವುದು. ಈ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಳ್ಳಬಹುದಾಗಿದ್ದು, ಈ ಸಂಬಂಧ ಅಫಿಡವಿಟ್ ಸಲ್ಲಿಸಲಾಗುವುದು. ಮೇನಲ್ಲಿ ಮೀಸಲಾತಿ ಪಟ್ಟಿ ಒದಗಿಸುತ್ತೇವೆ. ಆಯೋಗವು ಜೂನ್, ಜುಲೈ, ಆಗಸ್ಟ್‌ನಲ್ಲಿ ಚುನಾವಣೆ ನಡೆಸಬಹುದು. ಕ್ಷೇತ್ರ ಪುನರ್ ವಿಂಗಡಣೆಯಾಗದಿದ್ದರಿಂದ ನಾವು ಕಾಲಾವಕಾಶ ಪಡೆದುಕೊಂಡಿದ್ದೆವು” ಎಂದರು. ಬೆಂಗಳೂರು
ರಾಜ್ಯ ಚುನಾವಣಾ ಆಯೋಗವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರು “ಏಕಸದಸ್ಯ ಪೀಠದ ಆದೇಶದಂತೆ ಮೀಸಲಾತಿ ಪಟ್ಟಿಯನ್ನು ಒದಿಗಿಸದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು. ಈಗ ಸರ್ಕಾರವು ಮೇ ಅಂತ್ಯದ ವೇಳೆಗೆ ಕ್ಷೇತ್ರಗಳ ಮೀಸಲಾತಿ ಪಟ್ಟಿ ಅಧಿಸೂಚನೆ ಪ್ರಕಟಿಸುವ ವಾಗ್ದಾನ ನೀಡಿರುವುದನ್ನು ನ್ಯಾಯಾಲಯ ದಾಖಲು ಮಾಡಿಕೊಳ್ಳಬೇಕು. ಮೀಸಲಾತಿ ಪಟ್ಟಿ ದೊರೆತ ಬಳಿಕ ಅಂತಿಮವಾಗಿ ರಾಜ್ಯ ಚುನಾವಣಾ ಆಯೋಗವು ಚುನಾವಣೆಯ ದಿನಾಂಕವನ್ನು ನಿಗದಿಪಡಿಸಲಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಅಫಿಡವಿಟ್ ಸಲ್ಲಿಸಬೇಕು. ವಾಗ್ದಾನಕ್ಕೆ ತಕ್ಕಂತೆ ನಡೆಯದಿದ್ದರೆ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಂದುವರಿಸುವ ಸ್ವಾತಂತ್ರ್ಯವನ್ನು ಆಯೋಗಕ್ಕೆ ನೀಡಬೇಕು” ಎಂದರು.
ರಾಜ್ಯ ಸರ್ಕಾರ ಮತ್ತು ಆಯೋಗದ ವಾದ-ಪ್ರತಿವಾದವನ್ನು ದಾಖಲಿಸಿದ ಪೀಠವು ಮೀಸಲಾತಿ ಪಟ್ಟಿ ನೀಡುವ ಮುಚ್ಚಳಿಕೆಯಂತೆ ನಡೆಯದಿದ್ದರೆ ಆಯೋಗವು ನ್ಯಾಯಾಂಗ ನಿಂದನೆ ಅರ್ಜಿ ಮುಂದುವರಿಸುವ ಸ್ವಾತಂತ್ರ್ಯ ಹೊಂದಿದೆ ಎಂದು ಎಲ್ಲಾ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಇತ್ಯರ್ಥಪಡಿಸಿತು.
ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ 12 ವಾರಗಳಲ್ಲಿ ಮೀಸಲಾತಿ ಪ್ರಕಟಿಸಲಾಗುವುದು ಎಂದು ರಾಜ್ಯ ಸರ್ಕಾರವು 2023ರ ಡಿಸೆಂಬರ್ 19ಕ್ಕೆ ನ್ಯಾಯಾಲಯಕ್ಕೆ ಭರವಸೆ ಕೊಟ್ಟಿತ್ತು. ಅದನ್ನು ಪಾಲಿಸಿಲ್ಲ ಎಂದು ರಾಜ್ಯ ಚುನಾವಣಾ ಆಯೋಗವು ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು.
ಇದಕ್ಕೂ ಮುನ್ನ, ರಾಜ್ಯದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸುವ ನಿಟ್ಟಿನಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ ಮತ್ತು ಹಿಂದುಳಿದ ವರ್ಗಗಳೂ ಸೇರಿದಂತೆ ಇತರೆ ಸಮುದಾಯಗಳಿಗೆ ಕಾಲಮಿತಿಯಲ್ಲಿ ಮೀಸಲಾತಿ ನಿಗದಿಪಡಿಸಲು ವಿಫಲವಾಗಿದ್ದ ರಾಜ್ಯ ಸರ್ಕಾರಕ್ಕೆ 2020ರ ಡಿಸೆಂಬರ್‌ನಲ್ಲಿ ₹5 ಲಕ್ಷ ದಂಡ ವಿಧಿಸಿತ್ತು.
2021ರ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಅವಧಿ ಪೂರ್ಣಗೊಂಡ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಸಿದ್ದತೆ ಆರಂಭಿಸಿದ್ದ ಚುನಾವಣಾ ಆಯೋಗವು ಕ್ಷೇತ್ರ ಪುನರ್‌ವಿಂಗಡಣೆ ಮಾಡಿ ಮತದಾರರ ಅಂತಿಮ ಪಟ್ಟಿ ಸಹ ಪ್ರಕಟಿಸಿತ್ತು. ಮೀಸಲಾತಿ ಕರಡು ಸಹ ಪ್ರಕಟಿಸಲಾಗಿತ್ತು. ಇನ್ನೇನು ದಿನಾಂಕ ಘೋಷಣೆ ಮಾಡಬೇಕೆನ್ನುವಷ್ಟರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ಅಧಿಕಾರವನ್ನು ಚುನಾವಣಾ ಆಯೋಗದಿಂದ ಹಿಂಪಡೆದಿದ್ದ ಸರ್ಕಾರವು ಅದನ್ನು ಪ್ರತ್ಯೇಕವಾಗಿ ಸೀಮಾ ನಿರ್ಣಯ ಆಯೋಗ ರಚಿಸಿ ಅದಕ್ಕೆ ಹೊಣೆ ನೀಡಿತ್ತು. ಅದನ್ನು ಚುನಾವಣಾ ಆಯೋಗವು ಪ್ರಶ್ನಿಸಿತ್ತು.
ಇದನ್ನೂ ನೋಡಿ: ಡಾ. ಬಂಜಗೆರೆಯವರ ಸಾಂಸ್ಕೃತಿಕ ಅಧ್ಯಯನದಲ್ಲಿ ಜನರ ದನಿ ಕಾಣುತ್ತದೆ – ಡಾ. ರವಿಕುಮಾರ್ ಬಾಗಿ Janashakthi Media