ನವದೆಹಲಿ: ರಾಜ್ಯದ ನಾಲ್ಕು ರಾಜ್ಯಸಭಾ ಸ್ಥಾನಗಳು ಒಳಗೊಂಡು, ರಾಜ್ಯಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್, ಕಾಂಗ್ರೆಸ್ ನ ಆಸ್ಕರ್ ಫರ್ನಾಂಡೀಸ್, ಕೆಸಿ ರಾಮಮೂರ್ತಿ, ಜೈ ರಾಮ್ ರಮೇಶ್ ಅವರಿಂದ ತೆರವಾಗಲಿರುವ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಕರ್ನಾಟಕದ ವಿಧಾನಪರಿಷತ್ ಚುನಾವಣೆಗೆ ದಿನಾಂಕ ಪ್ರಕಟವಾದ ಬೆನ್ನಲ್ಲೇ ಇದೀಗ ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕರ್ನಾಟಕ ಅಷ್ಟೇ ಅಲ್ಲದೆ, ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸಗಢ, ಮಧ್ಯಪ್ರದೇಶ, ತಮಿಳುನಾಡು, ಒಡಿಶಾ, ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ, ಬಿಹಾರ, ಜಾರ್ಖಂಡ್ ಮತ್ತು ಹರಿಯಾಣದ ಖಾಲಿ ಸ್ಥಾನಗಳಿಗೂ ಜೂನ್ 10 ರಂದು ಚುನಾವಣೆ ನಡೆಯಲಿದೆ.
15 ರಾಜ್ಯಗಳ 57 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಉತ್ತರಪ್ರದೇಶದಿಂದ 11 ಸಂಸದರು ನಿವೃತ್ತಿಗೊಳ್ಳಲಿದ್ದಾರೆ.
ಕರ್ನಾಟಕದಿಂದ ರಾಜ್ಯಸಭೆ ಆಯ್ಕೆಯಾಗಿದ್ದ ಕೆ ಸಿ ರಾಮಮೂರ್ತಿ, ಜೈರಾಂ ರಮೇಶ್, ಆಸ್ಕರ್ ಫರ್ನಾಂಡಿಸ್, ನಿರ್ಮಲಾ ಸೀತಾರಾಮನ್ ಅವರ ಅವಧಿ ಇದೇ ಜೂನ್ 30ರಂದು ಮುಗಿಯಲಿದೆ.
57 ಸ್ಥಾನಗಳ ಪೈಕಿ ಬಿಜೆಪಿ 23 ಸ್ಥಾನಗಳ ಪಾಲಾಗಲಿದ್ದು, 8 ಸ್ಥಾನಗಳು ಕಾಂಗ್ರೆಸ್ ಪಕ್ಷ ಗಳಿಸುವ ಸಾಧ್ಯತೆ ಇದೆ. ಉಳಿದವು ಬಿಜೆಪಿ ಮತ್ತು ಇತರ ಪಕ್ಷಗಳ ನಡುವೆ ಹಂಚಿಹೋಗಿವೆ. ಈ ಹಂತದ ನಂತರ ಎಂ ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಮತ್ತು ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದ ಬಲ ಹೆಚ್ಚಾಗಲಿದೆ.
ಮೇ 24ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತದೆ. ಮೇ 31ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಜೂನ್ 01ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.
ಜೂನ್ 03ರಂದು ನಾಮಪತ್ರಗಳನ್ನು ವಾಪಾಸ್ ಪಡೆಯಲು ಕೊನೆಯ ದಿನವಾಗಿದೆ. ಜೂನ್ 10 ರಂದು ಮತದಾನ ಬೆಳಿಗ್ಗೆ 9 ಗಂಟೆಯಿಂದ 4 ಗಂಟೆಯವರೆಗೆ ನಡೆಯಲಿದ್ದು, ಅಂದೇ ಸಂಜೆ 5 ಗಂಟೆಗೆ ಮತಎಣಿಕೆ ನಡೆಯಲಿದೆ.
ಇನ್ನೂ ಕರ್ನಾಟಕದ 2 ಪದವೀಧರ ಹಾಗೂ 2 ಶಿಕ್ಷಕರ ಕ್ಷೇತ್ರಗಳ ಸ್ಥಾನಗಳಿ ಚುನಾವಣೆಗೆ ದಿನಾಂಕ ಪ್ರಕಟವಾಗಿದೆ. ವಾಯುವ್ಯ ಪದವೀಧರ ಕ್ಷೇತ್ರದ ನಿರಾಣಿ ಹನುಮಂತಪ್ಪ ರುದ್ರಪ್ಪ, ದಕ್ಷಿಣ ಪದವೀಧರ ಕ್ಷೇತ್ರದ ಕೆ.ಟಿ ಶ್ರೀಕಂಠೇಗೌಡ ಅವರ ಅವಧಿ ಜುಲೈ 4ಕ್ಕೆ ಮುಗಿಯಲಿದೆ. ಈ ಸ್ಥಾನಗಳಿಗೆ ಜೂನ್ 13ರಂದು ಚುನಾವಣೆ ನಡೆಯಲಿದೆ.
ಮೇ 26 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಮೇ 27ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಮೇ 30ಕ್ಕೆ ನಾಮಪತ್ರ ವಾಪಾಸ್ ಪಡೆಯಲು ಕೊನೆಯ ದಿನ. ಜೂನ್ 13ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಜೂ.15 ಫಲಿತಾಂಶ ಪ್ರಕಟವಾಗಲಿದೆ.