ಬೆಂಗಳೂರು: ಕೆಳಮನೆಯಿಂದ ಮೇಲ್ಮನೆಗೆ ಆಯ್ಕೆಯಾಗುವ ಸದಸ್ಯರ ಅವಧಿ ಜೂನ್ 17 ಕ್ಕೆ ಮುಗಿಯಲಿದ್ದು, 12 ಸದಸ್ಯರ ಆಯ್ಕೆಗೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಜೂನ್ 13 ರಂದು ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ವಿಧಾನಸಭೆ
ಮೇ 27 ರಂದು ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಲಿದ್ದು, ಜೂ. 13 ರಂದು ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದೆ. ಜೂ.4 ಕ್ಕೆ ನಾಮಪತ್ರ ಪರಿಶೀಲನೆ 6 ಕ್ಕೆ ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಜೂನ್ 13 ರಂದು ಚುನಾವಣೆಗೆ ಬೆಳಿಗ್ಗೆ 9 ರಿಂದ 4 ರವರೆಗೆ ಮತದಾನ ನಡೆಯಲಿದ್ದು, ಅದೇ ದಿನ ಸಂಜೆ 5 ಕ್ಕೆ ಮತ ಎಣಿಕೆ ನಡೆಯಲಿದೆ. ಜೂನ್ 15 ಕ್ಕೆ ಚುನಾವಣಾ ಅವಧಿ ಅಂತ್ಯವಾಗಲಿದೆ.
ಅರವಿಂದ್ ಕುಮಾರ್ ಅರಳಿ, ಎನ್.ಎಸ್. ಬೋಸರಾಜು, ಕೆ. ಗೋವಿಂದರಾಜು, ಡಾ. ತೇಜಸ್ವಿನಿಗೌಡ, ಮುನಿರಾಜು ಗೌಡ ಪಿ. ಎಂ, ಕೆ.ಪಿ.ನಂಜುಂಡಿ ವಿಶ್ವಕರ್ಮ, ಬಿ.ಎಂ. ಫಾರೂಖ್, ರಘುನಾಥ್ ರಾವ್ ಮಲ್ಕಾಪುರೆ, ಎನ್.ರವಿಕುಮಾರ್, ಎಸ್. ರುದ್ರೇಗೌಡ, ಕೆ.ಹರೀಶ್‌ಕುಮಾರ್ ಸದಸ್ಯರ ಅವಧಿ ಜೂನ್ 17 ಕ್ಕೆ ಅಂತ್ಯವಾಗಲಿದೆ. ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನದ ಅವಧಿ 2028ರ ಜೂನ್ 14ರವರೆಗೂ ಇದ್ದು, ಆ ಸ್ಥಾನದ ಭರ್ತಿಗೂ ಈಗ ಉಪ ಚುನಾವಣೆ ನಡೆಯಲಿದೆ. ಸಚಿವ ಎನ್.ಎಸ್.ಬೋಸರಾಜ್, ಸಿಎಂ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜ್, ಅರವಿಂದ ಕುಮಾರ್ ಅರಳಿ ಮತ್ತು ಕೆ. ಹರೀಶ್ ಕುಮಾರ್ ಜೂನ್ 17ಕ್ಕೆ ನಿವೃತ್ತರಾಗುತ್ತಿದ್ದಾರೆ.
ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರದ 6 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಕಾರ್ಯ ಮುಗಿದು, ನಾಮಪತ್ರ ಹಿಂದಕ್ಕೆ ಪಡೆಯಲು ಇಂದು ಸೋಮವಾರ ಕೊನೆಯ ದಿನವಾಗಿದೆ. ಇದೀಗ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ತೆರವಾಗುವ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ.
ಇದನ್ನುಓದಿ : ಹೆಚ್. ಡಿ.ರೇವಣ್ಣಗೆ ಜಾಮೀನು ಮಂಜೂರು
ಎಂದಿನಂತೆಯೇ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿಪಕ್ಷ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಪೈಪೋಟಿ ಇದಾಗಿದ್ದು, ಕಾಂಗ್ರೆಸ್ ಪಕ್ಷದ ಏಳು ಸ್ಥಾನಗಳಲ್ಲಿ ಮೊದಲನೇ ಆಯ್ಕೆಯಾಗಿ ಯತೀಂದ್ರ ಸಿದ್ದರಾಮಯ್ಯ ಅವರನ್ನು ಪರಿಗಣಿಸುವ ಸಾಧ್ಯತೆ ಇದೆ. ನಿರೀಕ್ಷೆಯಂತೆ ಮತ್ತೊಮ್ಮೆ ಆಯ್ಕೆಗಾಗಿ ಗೋವಿಂದರಾಜ್ ಮತ್ತು ಬೋಸರಾಜು ವರಿಷ್ಠರ ಮನವೊಲಿಸಿ ಮತ್ತೊಂದು ಅವಧಿಗೆ ಮುಂದುವರೆಯಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.ಅಲ್ಲದೇ ಬೋಸರಾಜು ಹಾಲಿ ಸಂಪುಟದ ಸಚಿವರೂ ಆಗಿದ್ದಾರೆ.
ವಿಧಾನಸಭೆಯಲ್ಲಿನ ಬಲಾಬಲದ ಪ್ರಕಾರ, ಮೊದಲ 11 ಸ್ಥಾನಗಳಲ್ಲಿ ಏಳು ಕಾಂಗ್ರೆಸ್ ಪಾಲಾಗಲಿವೆ. ಬಿಜೆಪಿಗೆ ಮೂರು, ಜೆಡಿಎಸ್‌ಗೆ ಒಂದು ಸ್ಥಾನ ದೊರಕಲಿವೆ. ಶೆಟ್ಟರ್ ಪ್ರತಿನಿಧಿಸುತ್ತಿದ್ದ ಸ್ಥಾನ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಹೋಗುವ ಸಾಧ್ಯತೆಯಿದೆ.ರಮೇಶ್ ಬಾಬು, ವಿನಯ್ ಕಾರ್ತಿಕ್, ವಿಜಯ್ ಕೆ. ಮುಳುಗುಂದ್, ಪಿ.ವಿ. ಮೋಹನ್, ಬಿ.ವಿ. ಶ್ರೀನಿವಾಸ್, ಸೂರಜ್ ಹೆಗ್ಡೆ, ವಕೀಲ ಸಿ.ಎಸ್. ದ್ವಾರಕಾನಾಥ್ ಅವರು ವಿಧಾನಸಭೆಯಿಂದ ವಿಧಾನ ಪರಿಷತ್ ಪ್ರವೇಶಿಸುವ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.
ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಪುಷ್ಪಾ ಅಮರನಾಥ್, ಕವಿತಾ ರೆಡ್ಡಿ, ಆರತಿ ಕೃಷ್ಣ, ಮಹದೇವಪುರದ ಕಮಲಾಕ್ಷಿ ರಾಜಣ್ಣ ಮಹಿಳಾ ಕೋಟಾದಡಿ ಆಕಾಂಕ್ಷಿಗಳು.ಜೆಡಿಎಸ್ ಸದಸ್ಯ ಬಿ.ಎಂ.ಫಾರೂಕ್ ಜೂನ್ 17 ಕ್ಕೆ ನಿವೃತ್ತರಾಗುತ್ತಾರೆ. ಪಕ್ಷಕ್ಕೆ ಒಂದೇ ಸ್ಥಾನ ದೊರಕಲಿದ್ದು, ದೇವೇಗೌಡ ಕುಟುಂಬಕ್ಕೆ ನಿಕಟರಾಗಿರುವ ಕಾರಣ ಅವರೇ ಮತ್ತೆ ಪುನರಾಯ್ಕೆಯಾಗುವರು ಎನ್ನಲಾಗಿದೆ. ಈ ನಡುವೆ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಸ್ಪರ್ಧಿಸಿ ಸೋತಿರುವ ಟಿ.ಎನ್. ಜವರಾಯಿಗೌಡ ಮತ್ತು ರಾಜ್ಯಸಭೆಯ ಮಾಜಿ ಸದಸ್ಯ ಡಿ.ಕುಪೇಂದ್ರ ರೆಡ್ಡಿ ಸಹ ಜೆಡಿಎಸ್‌ನಿಂದ ಮೇಲ್ಮನೆಗೆ ಆಯ್ಕೆ ಬಯಸಿದ್ದಾರೆ.
ಬಿಜೆಪಿಯಲ್ಲಿ ಆರು ಸದಸ್ಯರ ಅವಧಿ ಮುಗಿಯುತ್ತಿದೆ. ನಾಲ್ವರು ಮಾತ್ರ ಪಕ್ಷದಲ್ಲಿದ್ದಾರೆ. ರಘುನಾಥ್ ರಾವ್ ಮಲ್ಕಾಪೂರೆ, ಎನ್. ರವಿಕುಮಾರ್, ಎಸ್. ರುದ್ರೇಗೌಡ, ಪಿ.ಎ.ಮುನಿರಾಜುಗೌಡ ನಿವೃತ್ತ ರಾಗುತ್ತಿದ್ದಾರೆ. ಈ ಪೈಕಿ ರವಿಕುಮಾರ್ ಅವರಿಗೆ ಮತ್ತೊಂದು ಅವಧಿಗೆ ಅವಕಾಶ ದೊರಕುವ ಸಾಧ್ಯತೆ ಇದೆ. ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಸಿ.ಟಿ. ರವಿ, ಜೆ.ಸಿ.ಮಾಧುಸ್ವಾಮಿ ಅವರನ್ನು ಮೇಲ್ಮನೆಗೆ ಕರೆತರುವ ಪ್ರಯತ್ನ ಪಕ್ಷದಲ್ಲಿ ನಡೆದಿದೆ. ಹೊಸಬರಿಗೂ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದನ್ನು ನೋಡಿ : ಪ್ರಜ್ವಲ್ ಲೈಂಗಿಕ ಹತ್ಯಾಕಾಂಡ : ವಿಶೇಷ ನ್ಯಾಯಾಲಯ ಸ್ಥಾಪನೆ ಅಗತ್ಯ – ಹೈಕೋರ್ಟ್ ವಕೀಲ Janashakthi Media