ಹೊಸದಿಲ್ಲಿ: 2022-23 ಹಣಕಾಸು ವರ್ಷದಲ್ಲಿ ಚುನಾವಣಾ ಟ್ರಸ್ಟ್‌ಗಳಿಂದ ವಿತರಣೆಯಾದ ಒಟ್ಟು ನಿಧಿಯಲ್ಲಿ 70.69% ಅಂದರೆ 259.08 ಕೋಟಿಯಷ್ಟು ಮೊತ್ತವನ್ನು ಬಿಜೆಪಿ ಪಡೆದುಕೊಂಡಿದ್ದು ಅತೀ ದೊಡ್ಡ ಫಲಾನುಭ ಪಕ್ಷವಾಗಿ ಹೊರಹೊಮ್ಮಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ನಡೆಸಿದ ಸಮಗ್ರ ವಿಶ್ಲೇಷಣೆಯಲ್ಲಿ ತಿಳಿದು ಬಂದಿದೆ. ವಿಶ್ಲೇಷಣೆಯು ರಾಜಕೀಯ ನಿಧಿಯ ಆರ್ಥಿಕ ಭೂಮಿಕೆಯ ಮೇಲೆ ಬೆಳಕು ಚೆಲ್ಲಿದ್ದು, ಇದರಲ್ಲಿ ಬಿಜೆಪಿ ಪ್ರಾಬಲ್ಯ ಮೆರೆದಿದೆ.
ಈ ನಿಧಿಯಲ್ಲಿ 2ನೇ ಅತೀ ದೊಡ್ಡ ಪಾಲನ್ನು ಭಾರತ್ ರಾಷ್ಟ್ರ ಸಮಿತಿ (BRS) ಪಡೆದುಕೊಂಡಿದೆ ಎಂದು ದಿ ಹಿಂದೂ ಪತ್ರಿಕೆ ಹೇಳಿದೆ. ಭಾರತ್ ರಾಷ್ಟ್ರ ಸಮಿತಿ ಒಟ್ಟು ದೇಣಿಗೆಯ 90 ಕೋಟಿ ಅಥವಾ 24.56% ಅನ್ನು ಪಡೆದುಕೊಂಡಿದೆ ವಿಶ್ಲೇಷಣೆಯು ಹೇಳಿದ್ದು, ವೈಎಸ್‌ಆರ್ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ ಮತ್ತು ಕಾಂಗ್ರೆಸ್ ಒಟ್ಟು 17.40 ಕೋಟಿ ರೂ.ಗಳನ್ನು ಪಡೆದಿದೆ ಎಂದು ಅದು ಉಲ್ಲೇಖಿಸಿದೆ.
ಇದನ್ನೂ ಓದಿ: ವೈಎಸ್‌ಆರ್ ತೆಲಂಗಾಣ ಪಕ್ಷದ ಮುಖ್ಯಸ್ಥೆ ಶರ್ಮಿಳಾ ಕಾಂಗ್ರೆಸ್ ಸೇರ್ಪಡೆ
ನಿಗದಿತ ಹಣಕಾಸು ವರ್ಷದಲ್ಲಿ ಐದು ಎಲೆಕ್ಟೋರಲ್ ಟ್ರಸ್ಟ್‌ಗಳು ಒಟ್ಟಾರೆಯಾಗಿ 366.49 ಕೋಟಿ ರೂಪಾಯಿಗಳನ್ನು ಪಡೆದಿವೆ ಎಂದು ಎಡಿಆರ್‌ನ ವಿಶ್ಲೇಷಣೆ ಹೇಳಿದೆ. 18 ಅನುಮೋದಿತ ಚುನಾವಣಾ ಟ್ರಸ್ಟ್‌ಗಳಲ್ಲಿ ಐದು ಮಾತ್ರ ಟ್ರಸ್ಟ್‌ಗಳು ಮಾತ್ರ ಕಾರ್ಪೊರೇಟ್‌ಗಳು ಮತ್ತು ವ್ಯಕ್ತಿಗಳಿಂದ ಪಡೆದ ದೇಣಿಗೆಗಳನ್ನು ಬಹಿರಂಗಪಡಿಸಿವೆ.
2013 ರಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಸರ್ಕಾರವು ಪರಿಚಯಿಸಿದ ಚುನಾವಣಾ ಟ್ರಸ್ಟ್‌ಗಳು ಚುನಾವಣಾ ಬಾಂಡ್‌ಗಳ ಯೋಜನೆಯಂತೆಯೇ ಕಾರ್ಯನಿರ್ವಹಿಸುತ್ತವೆ. ಇದು ಕಾರ್ಪೋರೇಟ್‌ಗಳು ಮತ್ತು ವ್ಯಕ್ತಿಗಳಿಂದ ರಾಜಕೀಯ ದೇಣಿಗೆಗಳನ್ನು ಪಡೆಯುವ ದಾರಿಯನ್ನು ಸುಗಮಗೊಳಿಸುತ್ತವೆ. ಆದರೆ ಚುನಾವಣಾ ಬಾಂಡ್‌ಗಳಿಗಿಂತ ಇದು ಭಿನ್ನವಾಗಿದ್ದು, ಚುನಾವಣಾ ಆಯೋಗಕ್ಕೆ (EC) ವಾರ್ಷಿಕ ವರದಿಗಳನ್ನು ಸಲ್ಲಿಸಲು ಚುನಾವಣಾ ಟ್ರಸ್ಟ್‌ಗಳಿಗೆ ಕಡ್ಡಾಯಗೊಳಿಸಲಾಗಿದೆ. ಇದು ವ್ಯಕ್ತಿಗಳು ಮತ್ತು ಕಂಪನಿಗಳು ನೀಡಿದ ದೇಣಿಗೆಗಳನ್ನು ವಿವರಿಸುತ್ತದೆ ಮತ್ತು ಧನಸಹಾಯ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ.
2022-23ರ ಅವಧಿಯಲ್ಲಿ, ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಯಲ್ಲಿ ನೋಂದಾಯಿಸಲಾದ 18 ಚುನಾವಣಾ ಟ್ರಸ್ಟ್‌ಗಳಲ್ಲಿ 13 ಟ್ರಸ್ಟ್‌ಗಳು ಚುನಾವಣಾ ಆಯೋಗಕ್ಕೆ ತಮ್ಮ ದೇಣಿಗೆಯ ವಿವರಗಳನ್ನು ಸಲ್ಲಿಸಿವೆ. ಐದು ಟ್ರಸ್ಟ್‌ಗಳು ವಿವಿಧ ಕಾರ್ಪೊರೇಟ್ ಸಂಸ್ಥೆಗಳಿಂದ ಕೊಡುಗೆಗಳನ್ನು ಪಡೆದಿವೆ ಎಂದು ಎಡಿಆರ್ ವರದಿ ಬಹಿರಂಗಪಡಿಸಿದೆ.
ವಿಡಿಯೊ ನೋಡಿ: ಬರಗಾಲದಿಂದ ರೈತರು ಕಂಗಾಲು : ರಾಮ ಭಜನೆಯಲ್ಲಿ ಕೇಂದ್ರ ಸರ್ಕಾರ, ನಿದ್ದೆಗೆ ಜಾರಿದ ರಾಜ್ಯ ಸರ್ಕಾರ