ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಡಿಸೆಂಬರ್ 10ರಂದು ಮತದಾನ ನಡೆಯಲಿದೆ. ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯ ತನಕ ಮತದಾನ ನಡೆಯಲಿದೆ. ಡಿಸೆಂಬರ್ 14 ರಂದು ಫಲಿತಾಂಶ ಹೊರಬೀಳಲಿದೆ.
ಇಂದು ಕೇಂದ್ರ ಚುನಾವಣಾ ಆಯೋಗವು 25 ಸ್ಥಾನಗಳ ಚುನಾವಣೆಗೆ ವೇಳಾಪಟ್ಟಿಯನ್ನು ಘೋಷಿಸದೆ. ನವೆಂಬರ್ 16ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ನವೆಂಬರ್ 23 ಕೊನೆಯ ದಿನವಾಗಿದೆ.
ಇದನ್ನು ಓದಿ: 75 ಸದಸ್ಯ ಬಲದ ವಿಧಾನ ಪರಿಷತ್ನ 25 ಸದಸ್ಯರ ಅಧಿಕಾರಾವಧಿ ಹೊಸ ವರ್ಷದ ಆರಂಭದಲ್ಲಿ ಅಂತ್ಯ
ನಾಮಪತ್ರಗಳ ಪರಿಶೀಲನೆ ನವೆಂಬರ್ 24ರಂದು ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ನವೆಂಬರ್ 26 ಕೊನೆಯ ದಿನವಾಗಿದೆ. ಡಿಸೆಂಬರ್ 10ರಂದು ಮತದಾನ ನಡೆಯಲಿದೆ. ಡಿಸೆಂಬರ್ 14ರ ಮಂಗಳವಾರ ಮತ ಎಣಿಕೆ ನಡೆಯಲಿದ್ದು, ಡಿಸೆಂಬರ್ 16ಕ್ಕೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಚುನಾವಣೆ ನಡೆಯುವ ಜಿಲ್ಲೆಗಳು: ವಿಧಾನ ಪರಿಷತ್ತಿಗೆ ವಿವಿಧ ಜಿಲ್ಲೆಗಳಿಂದ ಆಯ್ಕೆಯಾದ 25 ಸದಸ್ಯರ ಅವಧಿಯು 2022ರ ಜನವರಿ 05ರಂದು ಪೂರ್ಣಗೊಳ್ಳಲಿದೆ. ಆ ಸ್ಥಾನಗಳನ್ನು ಭರ್ತಿ ಮಾಡಲು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಬೀದರ್ 1, ಕಲಬುರಗಿ 1, ವಿಜಯಪುರ 2, ಬೆಳಗಾವಿ 2, ಉತ್ತರ ಕನ್ನಡ 1, ಧಾರವಾಡ 2, ರಾಯಚೂರು 1, ಬಳ್ಳಾರಿ 1, ಚಿತ್ರದುರ್ಗ 1, ಶಿವಮೊಗ್ಗ 1, ದಕ್ಷಿಣ ಕನ್ನಡ 2, ಚಿಕ್ಕಮಗಳೂರು 1, ಹಾಸನ 1, ತುಮಕೂರು 1, ಮಂಡ್ಯ 1, ಬೆಂಗಳೂರು 1, ಬೆಂಗಳೂರು ಗ್ರಾಮಾಂತರ 1, ಕೋಲಾರ 1, ಕೊಡಗು 1, ಮೈಸೂರು 2 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.