ಬೆಂಗಳೂರು: ಚುನಾವಣೆ ಹೊಸ್ತಿಲಲ್ಲಿ ದೇಶವಿರುವಾಗ ಮಧ್ಯಂತರ ಬಜೆಟ್ ಹೆಸರಿನಲ್ಲಿ ಮಂಡಿಸಿದ ಬಜೆಟ್ ಚುನಾವಣಾ ಪೂರ್ವ ಘೋಷಣೆಯಷ್ಟೇ ಆಗಿದ್ದು, ಮಹಿಳಾ ಸಬಲೀಕರಣದ ಯಶಸ್ವಿ ಎಂದು ಬಣ್ಣಿಸಿದರೂ ಬಜೆಟ್ ಮಹಿಳೆಯರು ಎದುರಿಸುತ್ತಿರುವ ತೀವ್ರ ಆರ್ಥಿಕ ಸಂಕಷ್ಟಕ್ಕೆ ಯಾವ ಪರಿಹಾರವನ್ನೂ ಸೂಚಿಸಿಲ್ಲ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (AIDWA) ಶುಕ್ರವಾರ ಅಭಿಪ್ರಾಯ ಪಟ್ಟಿದೆ. ಕುಸಿಯುತ್ತಿರುವ ವೇತನ ಸಹಿತ ಉದ್ಯೋಗಾವಕಾಶಗಳು ಮತ್ತು ಹೆಚ್ಚುತ್ತಿರುವ ಹಸಿವಿನ ಬಗ್ಗೆ ಯಾವ ಕಾಳಜಿಯೂ ಬಜೆಟ್‌ನಲ್ಲಿ ಕಂಡುಬರುತ್ತಿಲ್ಲ ಎಂದು ಸಂಘಟನೆಯು ಅಸಮಾಧಾನ ವ್ಯಕ್ತಪಡಿಸಿದೆ.
ಈ ಬಗ್ಗೆ ಜಂಟಿ ಹೇಳಿಕೆ ನೀಡಿರುವ AIDWA ಕರ್ನಾಟಕದ ಅಧ್ಯಕ್ಷರಾದ ಡಾ.ಮೀನಾಕ್ಷಿ ಬಾಳಿ ಮತ್ತು ಪ್ರಧಾನ ಕಾರ್ಯದರ್ಶಿ ದೇವಿ ಅವರು, “ವಿತ್ತಮಂತ್ರಿಗಳ ಪ್ರಕಾರ ಮಹಿಳೆಯರ ಸಬಲೀಕರಣವು ಫಲಶ್ರುತಿಯಲ್ಲಿ ಇದೆಯೇ ಹೊರತು ಬಂಡವಾಳ ತೊಡಗಿಸುವುದರಲ್ಲಿ ಇಲ್ಲ. ಹಾಗೆಂದೇ ಮಹಿಳೆಯರ ಪ್ರಗತಿಗೆ ಅಗತ್ಯವಾದ ಅನುದಾನಗಳನ್ನು ಬಜೆಟ್ ಮೂಲಕ ಕೊಡುವುದನ್ನು ಮುಖ್ಯವೆಂದು ಅವರು ಭಾವಿಸಿಯೇ ಇಲ್ಲ. ಸಾರ್ವಜನಿಕ ವಲಯಕ್ಕೆ ಪೂರಕವಾದ ಅನುದಾನ ನೀಡಿಯೇ ಇಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ದೇಶದ ಜನರನ್ನು ವಂಚಿಸುವ ಪ್ರಯತ್ನ’ – ಬಜೆಟ್ ಬಗ್ಗೆ ಪ್ರತಿಪಕ್ಷಗಳ ಪ್ರತಿಕ್ರಿಯೆ
“ನಾರಿಶಕ್ತಿಯ ವೃದ್ದಿ ಎಂದು ಘೋಷಣೆ ಮಾಡಿಕೊಳ್ಳುವ ಸರಕಾರ ಒಟ್ಟು ವೆಚ್ಚದ 5-6% ಮಾತ್ರ ಜೆಂಡರ್ ಬಜೆಟ್‌ಗೆ ಎಂದು ಮೀಸಲಿರಿಸಿದೆ. ಅಲ್ಲದೇ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಬಾಬತ್ತಿಗೆ 0.5% ಮಾತ್ರ ಮೀಸಲಿರಿಸಿದ್ದು, ಅದು ಕಳೆದ ಬಜೆಟ್ ನಷ್ಟೇ ಇದೆ” ಎಂದು AIDWA ಹೇಳಿದೆ.
ಗ್ರಾಮೀಣ ಭಾರತದ ಮಹಿಳೆಯರ ಸಂಕಷ್ಟಕ್ಕೆ ನೆರವಾಗಿರುವ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜೆಯ ಕಾಯ್ದೆಯ ಕುರಿತು ಚಕಾರವೆತ್ತಿಲ್ಲದ ವಿತ್ತ ಮಂತ್ರಿಗಳ ಚಿತ್ತ ಎತ್ತ ಇದೆ ಎಂಬುದು ಸ್ಪಷ್ಟವಾಗಿದ್ದು, ವರ್ಷದಿಂಧ ವರ್ಷಕ್ಕೆ ಕಡಿತ ಮಾಡುತ್ತ ಆ ಯೋಜನೆಯನ್ನೇ ಮುಗಿಸಿಬಿಡುವ ಸಂಚು ಎದ್ದು ಕಾಣುತ್ತಿದೆ ಎಂದು AIDWA ಅನುಮಾನ ವ್ಯಕ್ತಪಡಿಸಿದೆ.
2023-24ರ ಪರಿಷ್ಕೃತ ಬಜೆಟ್‌ನಷ್ಟೇ 2024-25ಕ್ಕೆ ಮೀಸಲಿಟ್ಟಿದ್ದಾರೆ ಮತ್ತು ಅದು 2022-23 ರ ನಿಜವಾದ ವೆಚ್ಚಕ್ಕಿಂತ ಕಡಿಮೆಯೇ ಇದೆ. ಇದರಲ್ಲಿ ಈಗಾಗಲೇ ಮಾಡಿದ ಕೆಲಸಕ್ಕೆ ಕೊಡಬೇಕಾದ ಬಾಕಿಯೂ ಸೇರಿದೆ. ಕೆಲಸವನ್ನು ಬಯಸಿದ 56 ಮಿಲಿಯನ್ ಕುಟುಂಬಗಳಲ್ಲಿ 1% ಜನರಿಗೆ ಕೂಡಾ 100 ದಿನಗಳ ಕೆಲಸ ದೊರೆತಿಲ್ಲ ಎಂಬವುದು ಗಮನಿಸಬೇಕಾದ ಸಂಗತಿಯಾಗಿದೆ. ಆದರೆ ಅದೇ ವೇಳೆಗೆ 5.48 ಕೋಟಿ ಮನ್ ರೇಗಾ ಕೆಲಸಗಾರರ ಜಾಬ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಸಂಘಟನೆ ಹೇಳಿದೆ.
ಇದನ್ನೂ ಓದಿ: ಚುನಾವಣೆ ಗೆಲ್ಲಲು ಬಿಜೆಪಿ ಎಲ್ಲರನ್ನೂ ಜೈಲಿಗೆ ಹಾಕುತ್ತಿದೆ; ಎನ್‌ಆರ್‌ಸಿಗೆ ಅವಕಾಶ ನೀಡಲ್ಲ – ಮಮತಾ ಬ್ಯಾನರ್ಜಿ
80 ಕೋಟಿ ಜನರಿಗೆ ಉಚಿತ ಧಾನ್ಯ ಕೊಡುತ್ತಿರುವುದಾಗಿ ಹೇಳಿಕೊಳ್ಳುತ್ತಿರುವ ಮೋದಿ ಸರಕಾರ ಹಸಿದವರ ಬಗ್ಗೆ ಯಾವ ಕರುಣೆಯನ್ನೂ ಹೊಂದಿಲ್ಲ. ಆಹಾರ ಸಬ್ಸಿಡಿಗೆ ಕಳೆದ ಸಾಲಿನ ವೆಚ್ಚಕ್ಕಿಂತ 25% ಕಡಿಮೆ ಮೀಸಲಿಡಲಾಗಿದೆ. ಅಪೌಷ್ಟಿಕತೆಯ ಪ್ರಮಾಣವನ್ನು ತಗ್ಗಿಸಲು ಮತ್ತು ಅಂಗನವಾಡಿ ಸಕ್ಷಮ ಪೋಷಣ್ ಅಭಿಯಾನವನ್ನು ಯಶಸ್ವಿಗೊಳಿಸಲು ಗಮನ ಕೊಡುವ ಬದಲು ಕಳೆದ ಬಜೆಟ್‌ಗೆ ಹೋಲಿಸಿದರೆ 1.5% ಕಡಿತ ಮಾಡಲಾಗಿದೆ. ಇದು ಈ ವಿಭಾಗವನ್ನು ಕಾರ್ಪೊರೇಟ್ ಪ್ರಾಯೋಜಿತ ಸ್ವಯಂಸೇವಾ ಸಂಸ್ಥೆಗಳಿಗೆ ಮತ್ತು ಖಾಸಗಿಯವರಿಗೆ ವಹಿಸಿಕೊಡುವ ಹುನ್ನಾರೆಂದು ಸ್ಪಷ್ಟವಾಗಿದೆ ಎಂದು AIDWA ಹೇಳಿದೆ.
ಪ್ರದಾನ ಮಂತ್ರಿ ಆವಾಸ ಯೋಜನೆಯ ಫಲಾನುಭವಿಗಳಲ್ಲಿ 70% ಮಹಿಳೆಯರು ಎಂದು ಹೊಗಳಿಸಿಕೊಳ್ಳಲಾಗುತ್ತಿದೆ. ಆದರೆ ಪರಿಷ್ಕೃತ ಅಂದಾಜಿನಲ್ಲಿ 2022-23 ರ ಬಜೆಟ್‌ನ ವೆಚ್ಚದ 26.5% ಕಡಿತಗೊಳಿಸಲಾಗಿದೆ. ಸರಕಾರವೇ ಒಪ್ಪಿಕೊಂಡಂತೆ 53 ಲಕ್ಷ ಮನೆ ನಿರ್ಮಾಣದ ಉದ್ದೇಶಿತ ಗುರಿಗೆ ಬದಲಾಗಿ ಕೇವಲ 13 ಲಕ್ಷ ಮನೆಗಳಷ್ಟೇ ಪೂರ್ಣಗೊಂಡಿವೆ. ‘ಲಕಪತಿದೀದೀʼ ಹೆಸರಿನಲ್ಲಿ ಎನ್. ಆರ್. ಎಲ್. ಎಮ್ ಯೋಜನೆ ಯನ್ನು ಕೊಂಡಾಡಲಾಗುತ್ತಿದೆ. ಆದರೆ ಅದಕ್ಕೆ ವಿನಿಯೋಗಿಸುವ ಹಣ ಅತ್ಯಂತ ಕನಿಷ್ಟ ಮಟ್ಟದ್ದಾಗಿದ್ದು, ಈ ಬಜೆಟ್ ನಲ್ಲಿ ಕೂಡಾ ಅದರಲ್ಲಿ ಏರಿಕೆಯಾಗಿಲ್ಲ ಎಂದು ಸಂಘಟನೆ ಹೇಳಿದೆ.
ಸ್ವಾತಂತ್ಯ್ರ ದಿನಾಚರಣೆ ದಿನ ಪ್ರಧಾನ ಮಂತ್ರಿಯ ಭಾಷಣದಲ್ಲಿ ಘೋಷಿಸಿದಂತೆ 1261 ಕೋಟಿ ನೀಡುವ ಘೋಷಣೆ ಮಾಡಿ ಮಹಿಳೆಯರನ್ನು ಉತ್ಪಾದನಾ ಕ್ಷೇತ್ರಕ್ಕೆ ಸೆಳೆಯುವ ಯೋಜನೆಯೆಂದು ಹೇಳಲಾಗಿತ್ತು. ಎಂದರೆ ಈ ಯೋಜನೆಯ ಮೂಲಕ ಕೃಷಿ ಉದ್ಯಮಿಗಳ ಜೊತೆ ಗ್ರಾಮೀಣ ಮಹಿಳೆಯರ ಕೊಂಡಿ ಬೆಸೆಯುವ ಯೋಜನೆ ಇದಾಗಿದ್ದು ನಮೋ ದೀದಿ ಯೋಜನೆ ಎನ್ನಬಹುದಾಗಿದೆ ಎಂದು ಸಂಘಟನೆ ವ್ಯಂಗ್ಯವಾಡಿದೆ.
ಇದನ್ನೂ ಓದಿ: ಬಡ ಕುಟುಂಬಕ್ಕೆ ಸಬ್ಸಿಡಿ ದರದಲ್ಲಿ ಸಕ್ಕರೆ | ಯೋಜನೆ ಮತ್ತೆ 2 ವರ್ಷ ವಿಸ್ತರಣೆ
ಹಿಂಧಿನ ಬಜೆಟ್ ನಲ್ಲಿ ಘೋಷಿಸಿದ ಹೆಣ್ಣುಮಗುವಿನ ಉಳಿತಾಯ ಯೋಜನೆ ಬೆಳಕೇ ಕಾಣಲಿಲ್ಲ. ಜನ್ ಧನ್ ಯೋಜನೆಯಲ್ಲಿ ನಡೆದ ಅವ್ಯವಹಾರಗಳನ್ನು ಸಿ.ಏ.ಜಿ ಬಯಲಿಗೆಳೆದಿದೆ. 2026ರ ಡಿಸೆಂಬರ್‌ವರೆಗೆ ನಿರ್ಭಯಾ ನಿಧಿಯಲ್ಲಿ ಕೇವಲ 70% ಮಾತ್ರ ವೆಚ್ಚ ಮಾಡಲಗಿದೆ. ಅದೇ ರೀತಿ ಮಿಷನ್ ಶಕ್ತಿ ಯೋಜನೆಯೂ ಬಹುತೇಕ ಸ್ಥಗಿತಗೊಂಡಿದೆ. ಯೋಜನಾ ಕಾರ್ಯಕರ್ತರೆಂದು ಕರೆಯಲ್ಪಡುವ ಆಶಾ, ಅಂಗನವಾಡಿ ನೌಕರರು ಖಾಯಮಾತಿಯ ಬೇಡಿಕೆಯನ್ನಿಟ್ಟು ಬಹಳ ಕಾಲವಾಗಿದೆ. ಅದನ್ನು ನಿರ್ಲಕ್ಷಿಸಿ ಆಯುಷ್ಮಾನ್ ಯೋಜನೆಗೆ ಅವರನ್ನು ಒಳಪಡಿಸುತ್ತೇವೆನ್ನಲಾಗಿದೆ ಎಂದು ಸಂಘಟನೆ ಅಸಮಾಧಾನ ವ್ಯಕ್ತಪಡಿಸಿದೆ.
ಅಂಚಿಗೆ ತಳ್ಳಲ್ಪಟ್ಟ ವಿಭಾಗದ ಹೆಣ್ಣುಮಕ್ಕಳ ಸ್ಕಾಲರ್ ಷಿಪ್, ಅಲ್ಪಸಂಖ್ಯಾತರ ಕಲ್ಯಾಣ ವೆಚ್ಚಗಳು, ಎಸ್‌ಸಿ,ಎಸ್‌ಟಿ ಅಭಿವೃದ್ದಿ ಯೋಜನೆಗಳಿಗೆ ಹೆಚ್ಚು ಗಮನ ಕೊಟ್ಟಿಲ್ಲ. ಇದು ಅವರ ಘೋಷವಾಕ್ಯ ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಯಾವ ರೀತಿಯಲ್ಲಿಯೂ ಜಾರಿಗೆ ಬರಲಾರದೆಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಜನವಾದಿ ಮಹಿಳಾ ಸಂಘಟನೆ ಹೇಳಿದೆ.
ಇದೆಲ್ಲದರ ಜೊತೆ ತ್ರಿವಳಿ ತಲಾಕ್ ಅನ್ನು ರದ್ದು ಮಾಡಿದೆ ಎಂದು ಹೊಗಳಿಕೊಂಡಿದ್ದು, ಹಾಗೆಯೇ 33% ಮಹಿಳಾ ಮೀಸಲಾತಿ ಮಸೂದೆಯ ಅಂಗೀಕಾರಗಳನ್ನು ಮಹಿಳಾ ಪ್ರಗತಿಯ ಹೆಜ್ಜೆಗಳ ಸಾಕ್ಷಿ ಎಂದು ಸರ್ಕಾರ ಹೇಳಿದೆ. ಆದರೆ ಇವೆರಡೂ ವಿಷಯಗಳ ಬಗ್ಗೆ ಸಂಘಟನೆಯು ಈ ಮೊದಲೇ ಗಂಭೀರ ವಿಮರ್ಶೆಯನ್ನು ಮಾಡಿದ್ದು ಈ ಸರಕಾರದ ಗೋಸುಂಬೆ ರಾಜಕಾರಣವನ್ನು ಬಯಲು ಮಾಡುತ್ತಲೇ ಇರುತ್ತದೆ. ಇಂತಹ ಪ್ರಗತಿ ವಿರೋಧೀ, ಸರ್ವಾಧಿಕಾರಿ, ಮನುವಾದೀ ಮೋದಿ ಸರಕಾರವನ್ನು 2024ರ ಚುನಾವಣೆಯಲ್ಲಿ ಕಿತ್ತೊಗೆಯಲು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ಎಲ್ಲರೂ ಶ್ರಮಿಸಬೇಕು ಎಂದು ಜನವಾದಿ ಮಹಿಳಾ ಸಂಘಟನೆ ಕರೆ ನೀಡಿದೆ.
ವಿಡಿಯೊ ನೋಡಿ: ಏನಿದು ಮಧ್ಯಂತರ ಬಜೆಟ್ ? ಚುನಾವಣಾ ರಾಮನ ಮುಂದೆ ಸಪ್ಪೆಯಾದ ಬಜೆಟ್ Janashakthi Media