ನವದೆಹಲಿ : ಇಂದು (ಡಿಸೆಂಬರ್ 08) ಗುರುವಾರದಂದು ಗುಜರಾತ್ ವಿಧಾನಸಭಾ ಚುನಾವಣೆ 2022ರ ಫಲಿತಾಂಶ ಹೊರಬೀಳಲಿದೆ. ಬಹುತೇಕ ಎಕ್ಸಿಟ್ ಪೋಲ್ ಫಲಿತಾಂಶಗಳು ಗುಜರಾತ್‌ನಲ್ಲಿ ಮತ್ತೆ ಭಾರತೀಯ ಜನತಾ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದಿವೆ. ಆದಾಗ್ಯೂ, ಗುಜರಾತ್ ಅಸೆಂಬ್ಲಿ ಚುನಾವಣೆಯ ಫಲಿತಾಂಶಗಳು ನಿರ್ಗಮನ ಸಮೀಕ್ಷೆಗಳನ್ನು ಹುಸಿಗೊಳಿಸಲಿವೆ ಎಂದು ಪ್ರತಿಪಕ್ಷಗಳು ವಿಶ್ವಾಸ ವ್ಯಕ್ತಪಡಿಸಿವೆ. ಇನ್ನು ಗುಜರಾತ್ ಅಸೆಂಬ್ಲಿ ಚುನಾವಣಾ ಫಲಿತಾಂಶವನ್ನು ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನುಡಿ ಎಂದೇ ಬಿಂಬಿಸಲಾಗುತ್ತಿದ್ದು ಇದೀಗ ಎಲ್ಲರ ಚಿತ್ತ ಗುಜರಾತ್‌ನತ್ತ ನೆಟ್ಟಿದೆ.
ಗುಜರಾತ್‌ನ 182 ವಿಧಾನಸಭಾ ಕ್ಷೇತ್ರಗಳಿಗೆ ನಡೆದಿರುವ ಚುನಾವಣೆಗಾಗಿ 37 ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಇಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು ಇದಕ್ಕಾಗಿ ಎಲ್ಲಾ ಮತ ಎಣಿಕೆ ಕೇಂದ್ರಗಳಲ್ಲೂ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ಹಿಮಾಚಲ ಪ್ರದೇಶದಲ್ಲಿ 68 ಸ್ಥಾನಗಳಿಗೆ ನವೆಂಬರ್ 12ರಂದು ಮತದಾನ ನಡೆದಿದ್ದು, ಶೇ.75ರಷ್ಟು ಮತ ಚಲಾವಣೆಯಾಗಿದೆ. ಇಲ್ಲಿ ಒಟ್ಟಾರೆ 412 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ವಿಶೇಷ ಎಂದರೆ ಈ ಮೊದಲೇ ಹೇಳಿದಂತೆ ಹಿಮಾಚಲದಲ್ಲಿ ಸರ್ಕಾರಗಳನ್ನು ಬದಲಾಯಿಸುವುದು ಸಂಪ್ರದಾಯವಾಗಿದ್ದರಿಂದ ಕಾಂಗ್ರೆಸ್ ಈ ಬಾರಿ ತನ್ನ ಅಧಿಕಾರದ ಸರದಿ ಬಂದಿದೆ ಎಂಬ ವಿಶ್ವಾಸದಲ್ಲಿದೆ.
ಗುಜರಾತ್ ನಲ್ಲಿ ಬಿಜೆಪಿ ಆರಂಭಿಕ ಮುನ್ನಡೆ ಕಾಯ್ದುಕೊಂಡಿದೆ. 135 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದ್ದರೆ ಕಾಂಗ್ರೆಸ್ 42 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ 35 ಸ್ಥಾನಗಳಲ್ಲಿ ಮುನ್ನಡೆಯಿದ್ದು, ಕಾಂಗ್ರೆಸ್ 29 ಸ್ಥಾನಗಳಲ್ಲಿ ಮುನ್ನಡೆಯ ಮೂಲಕ ಸಮಬಲ ಕಾಯ್ದು ಕೊಂಡಿದೆ.