ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಆಹಾರ ಧಾನ್ಯಗಳ ಬೆಲೆಗಳ ಏರಿಕೆಯನ್ನು ತಡೆಯಲು ಪ್ರಯತ್ನಿಸುತ್ತಿರುವ ಸರ್ಕಾರವು ಈರುಳ್ಳಿ ರಫ್ತುಗಳನ್ನು ನಿಷೇಧಿಸಿದ್ದು, ಗೋಧಿ ಸಂಗ್ರಹಣೆಗೆ ಹೆಚ್ಚುವರಿ ಮಿತಿಗಳನ್ನು ವಿಧಿಸಿದೆ. ಈರುಳ್ಳಿ ದುಬಾರಿಯಾದರೆ ರಾಜಕೀಯವಾಗಿ ತೀವ್ರ ಹೊಡೆತ ಬೀಳುವುದರಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಮಾರ್ಚ್ ವರೆಗೆ ಈರುಳ್ಳಿಯನ್ನು ‘ನಿಷೇಧಿತ’ ವರ್ಗದ ಅಡಿಯಲ್ಲಿ ಇರಿಸಲಾಗಿದ್ದು, ಈ ಬಗ್ಗೆ ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ(ಡಿಜಿಟಿಎಫ್)ವು ತನ್ನ ರಫ್ತು ನೀತಿಯನ್ನು ತಿದ್ದುಪಡಿ ಮಾಡುವ ಅಧಿಸೂಚನೆಯಲ್ಲಿ ತಿಳಿಸಿದೆ.
“ಈರುಳ್ಳಿ ರಫ್ತು ನೀತಿಯನ್ನು ಮಾರ್ಚ್ 31, 2024 ರವರೆಗೆ ನಿಷೇಧಿಸಲಾಗಿದೆ” ಎಂದು ವಿದೇಶಿ ವ್ಯಾಪಾರದ ಡಿಜಿಟಿಎಫ್ ಅಧಿಸೂಚನೆಯಲ್ಲಿ ತಿಳಿಸಿದೆ. ಆದಾಗ್ಯೂ, ಇತರ ದೇಶಗಳಿಗೆ ಅವರ ಕೋರಿಕೆಯ ಆಧಾರದ ಮೇಲೆ ಸರ್ಕಾರವು ನೀಡುವ ಅನುಮತಿಯ ಆಧಾರದ ಮೇಲೆ ಈರುಳ್ಳಿ ರಫ್ತು ಮಾಡಲು ಅನುಮತಿಸಲಾಗುವುದು ಎಂದು ಡಿಜಿಟಿಎಫ್ ಹೇಳಿದೆ.
ಇದನ್ನೂ ಓದಿ: ಅಶೋಕ ಅವರೇ, ವಿಪಕ್ಷ ನಾಯಕನ ಸ್ಥಾನಕ್ಕೆ ಯಾರಿಗೆ ಬಕೆಟ್ ಹಿಡಿದಿದ್ದೀರಿ | ಕಾಂಗ್ರೆಸ್ ಪ್ರಶ್ನೆ
ಅಲ್ಲದೆ, ಅಧಿಸೂಚನೆಯ ಮೊದಲು ಲೋಡಿಂಗ್ ಪ್ರಾರಂಭವಾದ ಈರುಳ್ಳಿಯ ಸಾಗಣೆಯನ್ನು ರಫ್ತು ಮಾಡಲು ಅನುಮತಿಸಲಾಗಿದೆ ಎಂದು ಅದು ತಿಳಿಸಿದೆ. ಜೊತೆಗೆ ಶಿಪ್ಪಿಂಗ್ ಬಿಲ್ ಸಲ್ಲಿಸಿದ ಸಂದರ್ಭಗಳಲ್ಲಿ ಮತ್ತು ಈರುಳ್ಳಿಯನ್ನು ಲೋಡ್ ಮಾಡಲು ಭಾರತೀಯ ಬಂದರುಗಳಲ್ಲಿ ಹಡಗುಗಳು ಈಗಾಗಲೇ ಲಂಗರು ಹಾಕಿದ್ದರೆ ಮತ್ತು ಈ ಅಧಿಸೂಚನೆಯ ಮೊದಲು ಅವುಗಳ ವಾಪಾಸಾತಿ ಸಂಖ್ಯೆಯನ್ನು ನಿಗದಿಪಡಿಸಿರಿವ ರಫ್ತಿಗೆ ಕೂಡಾ ಅನುಮತಿಸಲಾಗಿದೆ.
ಈರಳ್ಳಿಯ ಬೆಲೆಗಳನ್ನು ನಿಗ್ರಹಿಸುವ ಪ್ರಯತ್ನ ಮಾಡಿದ್ದ ಸರ್ಕಾರವು ರಫ್ತುಗಳನ್ನು ನಿರುತ್ಸಾಹಗೊಳಿಸಲು ಡಿಸೆಂಬರ್ 31, 2023 ರವರೆಗೆ ಪ್ರತಿ ಮೆಟ್ರಿಕ್ ಟನ್‌ಗೆ 800 ಡಾಲರ್ ಕನಿಷ್ಠ ರಫ್ತು ಬೆಲೆಯನ್ನು ವಿಧಿಸಿತ್ತು.
ಗೋಧಿಗೆ ಸಂಬಂಧಿಸಿದಂತೆ, ಸರ್ಕಾರವು ಸಗಟು ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು ಮತ್ತು ಸಂಸ್ಕಾರಕರಿಗೆ ತಕ್ಷಣವೇ ಜಾರಿಗೆ ಬರುವಂತೆ ಸ್ಟಾಕ್ ಹಿಡುವಳಿ ಮಿತಿಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. “ಕೃತಕ ಕೊರತೆಯನ್ನು ತಡೆಗಟ್ಟಲು ಮತ್ತು ಸಂಗ್ರಹಣೆಯನ್ನು ತಡೆಯಲು ಇದನ್ನು ಮಾಡಲಾಗಿದೆ” ಎಂದು ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಿಡಿಯೊ ನೋಡಿ: ಸಂವಿಧಾನ ಉಳಿದರೆ, ಬಡವರು ರೈತರು ಉಳಿಯುತ್ತಾರೆ – ಸಾಹಿತಿ ಇಂದೂಧರ ಹೊನ್ನಾಪುರ Janashakthi Media