ಬೆಂಗಳೂರು: ಚುನಾವಣಾ ಆಯೋಗ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಹೆಸರಿನಲ್ಲಿ ಧರ್ಮ, ಸಮುದಾಯಗಳನ್ನು ಗುರಿಯಾಗಿ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಡಾ.ಕೆ. ಪ್ರಕಾಶ್ ಆರೋಪಿಸಿದ್ದಾರೆ.
ಸಿಪಿಐ(ಎಂ) ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಜಿಲ್ಲಾ ಸಮಿತಿಗಳು ಆಯೋಜಿಸಿದ್ದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಸಾಧಕ – ಬಾಧಕಗಳ ಕುರಿತು ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ಮತದಾರರ ಪಟ್ಟಿ ಸಿದ್ದ ಪಡಿಸುವುದು ಚುನಾವಣಾ ಆಯೋಗದ ಕೆಲಸ. ಇದು ಪ್ರತಿವರ್ಷವೂ ನಡೆಯುತ್ತದೆ. ಆಗ ಹೊಸ ಸೇರ್ಪಡೆ, ಮರಣ ಹೊಂದಿದವರ ಹೆಸರನ್ನು ತೆಗೆಯುವುದು, ವಲಸೆ ಹೋಗಿದ್ದರೆ ಆ ಹೆಸರನ್ನು ತೆಗೆದು ಹಾಕುವುದು ಈ ಹಿಂದೆಯೂ ನಡೆದಿತ್ತು. ಆದರೆ ಈಗ ವಿಶೇಷ ಸಮಗ್ರ ತೀವ್ರ ಪರಿಷ್ಕರಣೆ ನಡೆಸುತ್ತಿದೆ.
ಬಿಹಾರದ SIR ವಿಧಾನ ಕಣ್ಮುಂದೆ ಇದೆ. ಅಲ್ಲಿ 65 ಲಕ್ಷ ಮತದಾರರನ್ನು ತೆಗೆದುಹಾಕಲಾಗಿದೆ. ಧರ್ಮ, ಸಮುದಾಯಗಳನ್ನು ಗುರಿಯಾಗಿಸಿಕೊಂಡು ಅವರನ್ನು ತೆಗೆದು ಹಾಕಲಾಗಿದೆ ಎಂಬ ಆರೋಪಗಳಿವೆ. SIR ಗೆ ಕೇಳುತ್ತಿರುವ 11 ದಾಖಲೆಗಳು ಅನಗತ್ಯ ವಿವಾದ ಸೃಷ್ಟಿಸಿವೆ. ಇದು ಮತದಾರರ ಪರಿಷ್ಕರಣೆಯೋ ಅಥವಾ ಪೌರತ್ವ ಪರಿಷ್ಕರಣೆಯೋ ಎಂಬ ಅನುಮಾನ ಎದ್ದು ಕಾಣುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಾರಿಗೆ ನೌಕರರ ಶೇ.17 ರಷ್ಟು ವೇತನ ಪರಿಷ್ಕರಣೆಗೆ ಸರ್ಕಾರ ಒಪ್ಪಿಗೆ : ಪೂರ್ಣ ಬೇಡಿಕೆಗೆ ಪಟ್ಟು
ಪೌರತ್ವ ಇಲ್ಲದವರು ಮತಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ. ಅವರನ್ನು ತೆಗೆದು ಹಾಕುವುದಕ್ಕಾಗಿ ಇದನ್ನು ಮಾಡಲಾಗಿದೆ ಎಂದು ಚುನಾವಣಾ ಆಯೋಗ SIRನ್ನು ಸಮರ್ಥಿಸಿಕೊಳ್ಳಿತ್ತಿದೆ. ಜನರ ಮಾತನ್ನು, ವಿರೋಧ ಪಕ್ಷಗಳ ಮಾತನ್ನು ಚುನಾವಣಾ ಆಯೋಗ ಕೇಳಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಆದಿವಾಸಿ, ದಲಿತ, ಅಲ್ಪಸಂಖ್ಯಾತ ಹಾಗೂ ಬಡಜನರನ್ನು ಮತದಾನದ ಹಕ್ಕಿನಿಂದ ಹೊರಗಿಡುವ ಹುನ್ನಾರ SIR ನಲ್ಲಿ ಇದೆ. ರೇಷನ್ ಕಾರ್ಡ್, ಆಧಾರ ಕಾರ್ಡ್ ಗಳನ್ನು ವಿಶೇಷ ಪರಿಷ್ಕರಣೆಗೆ ಪರಿಣಿಸುತ್ತಿಲ್ಲ. ಇದು ಎಲ್ಲ ಜನರಲ್ಲಿಯೂ ಸುಲಭವಾಗಿ ಸಿಗುತ್ತವೆ. ಈ ದಸಖಲೆಗಳನ್ನು ಯಾಕೆ ಪರಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂಬ ಪ್ರಶ್ನೆಗೆ ಆಯೋಗದ ಬಳಿ ಉತ್ತರವಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ನಾವೇ ಪೌರರು ಎಂದು ಸಾಬೀತು ಪಡಿಸಲು ಚುನಾವಣಾ ಆಯೋಗದ ಮೂಲಕ ನಡೆಸುತ್ತಿರುವುದು ಇದು ಅತ್ಯಂತ ಅಪಾಯಕಾರಿ. ಕೇಂದ್ರ ಸರಕಾರ ತನ್ನ ಅಜೆಂಡಾವನ್ನು ಜಾರಿಗಾಗಿ ಚುನಾವಣಾ ಆಯೋಗವನ್ನು ದುರ್ಬಳಿಕೆ ಮಾಡಿಕೊಳ್ಳುತ್ತಿದೆ. ಪೌರತ್ವ ಪರಿಷ್ಕರಣೆ ಚುನಾವಣಾ ಆಯೋಗದ ಕೆಲಸವಲ್ಲ. ಕೇಂದ್ರದಲ್ಲಿ ಎನ್ ಡಿಎ ಮೂಲಕ ಅಧಿಕಾರ ನಡೆಸುತ್ತಿರುವ ಬಿಜೆಪಿ ‘ಹಿಂದೂ ರಾಷ್ಟ್ರ’ ಎಂಬ ತನ್ನ ಕುತಂತ್ರದ ಅಜೆಂಡಾವನ್ನು ಜಾರಿ ಮಾಡುವುದಕ್ಕಾಗಿ SIR ಜಾರಿ ಮಾಡಲಾಗುತ್ತದೆ ಎಂದರು.
ಸಿಪಿಐ(ಎಂಎಲ್) ಲಿಬರೇಷನ್ ರಾಜ್ಯ ಕಾರ್ಯದರ್ಶಿ ಕ್ಲಿಫ್ಟನ್ ಡಿ ರೊಜಾರಿಯೊ ಮಾತನಾಡಿ, ಈ ಹಿಂದೆ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲು ಪ್ರಚಾರ ಮಾಡುತ್ತಿದ್ದರು. ಮನೆ ಮನೆಗೆ ಬಂದು 18ವರ್ಷ ಆದವರು ಯಾರಿದ್ದಾರೆ ಎಂದು ಕೇಳುತ್ತಿದ್ದರು. ಆದರೆ ಈಗ ಚುನಾವಣಾ ಆಯೋಗ ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸಲು ಆಸಕ್ತಿ ತೋರಿಸುತ್ತಿಲ್ಲ. ಹತ್ತಾರು ದಾಖಲೆಗಳ ಮೂಲಕ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ ಎಂದರು.
ಬಿಹಾರ ಚುನಾವಣೆಯ ಅನುಭವ ಈಗ ಕಣ್ಮುಂದೆ ಇದೆ. ಅನೇಕ ರಾಜ್ಯಗಳಲ್ಲಿ ಬಿಎಲ್ಓ ಗಳೇ ಹೇಳುತ್ತಿದ್ದಾರೆ. SIR ಮಾಡಲು ಕಷ್ಟ ಆಗುತ್ತಿದೆ. ಒಂದು ತಿಂಗಳಲ್ಲಿ ಹೇಗೆ ಮುಗಿಸಬೇಕು ಎಂದು ಪ್ರಶ್ನಿಸುತ್ತಿದ್ದಾರೆ. ಕೆಲವೆಡೆ ಪ್ರತಿಭಟನೆಗಳನ್ನು ಕೂಡಾ ನಡೆಸುತ್ತಿದ್ದಾರೆ ಎಂದರು.
SUCI ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಶ್ರೀರಾಮ್ ಮಾತನಾಡಿ, ಚುನಾವಣಾ ಆಯೋಗ ಸುಳ್ಳು ಹೇಳಿಕೆಗಳ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಪೌರತ್ವ ಚುನಾವಣಾ ಆಯೋಗದ ಕೆಲಸ ಅಲ್ಲ ಎಂದು 2003ರಲ್ಲಿ ಸುಪ್ರೀಂಕೋರ್ಟ್ ಹೇಳಿದೆ. ಆದರೆ ಹಾಗೇ ಹೇಳಿಯೇ ಇಲ್ಲ, ಆ ರೀತಿಯ ಮಾರ್ಗಸೂಚಿಗಳು ಇಲ್ಲ ಎಂದು ಚುನಾವಣಾ ಆಯೋಗ ಹೇಳುತ್ತಿರುವುದರ ಹುನ್ನಾರವನ್ನು ದೇಶದ ಜನ ಅರಿಯಬೇಕು ಎಂದರು.
ಸಿಪಿಐ ಮುಖಂಡ ಹರೀಶ್ ಬಾಲಾ ಮಾತನಾಡಿ, ಚುನಾವಣೆ ನಡೆಸುವುದು, ಮತಾದರರನ್ನು ಸೇರಿಸುವುದು, ತೆಗೆಯುವುದು ಚುನಾವಣಾ ಆಯೋಗದ ಕೆಲಸವಾಗಬೇಕಿತ್ತು. ಆದರೆ ಆದ ಕೇಂದ್ರ ಸರಕಾರದ ಅಣತಿಯಿಂತೆ ಕುಣಿಯುತ್ತಿರುವುದು ಈ ದೇಶದ ದುರಂತ, ಇದರ ವಿರುದ್ಧ ಜನಚಳುವಳಿ ರೂಪಗೊಳ್ಳಬೇಕು ಎಂದರು.
ಬಿಎಸ್ಪಿ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ಮಾತನಾಡಿ, ದಲಿತರನ್ನು ಮತದಾನದಿಂದ ದೂರು ಉಳಿಯುವಂತೆ ಬಿಜೆಪಿ ಮಾಡುತ್ತಿದೆ. ಅದಕ್ಕಾಗಿ ಚುನಾವಣಾ ಆಯೋಗವನ್ನು ದುರ್ಬಳಿಕೆ ಮಾಡಿಕೊಳ್ಳುತ್ತಿದೆ. ಮತದಾನ ಕಳ್ಳತನದ ಮೂಲಕ ಈಗಾಗಲೇ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಈಗ ಎಸ್ಐಆರ್ ಮೂಲಕ ಎಲ್ಲಾ ರಾಜ್ಯಗಳಲ್ಲೂ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. ಇದರ ವಿರುದ್ಧ ವಿಪಕ್ಷಗಳು ಗಟ್ಟಿಯಾದ ಹೋರಾಟ ಕಟ್ಟಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಪಿಐ(ಎಂ) ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಗೋಪಾಲಕೃಷ್ಣ ಹರಳಹಳ್ಳಿ ವಹಿಸಿದ್ದರು, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ.ಎಸ್.ವಿಮಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾತ್ಯಾಯಿನಿ ಚಾಮರಾಜ್, ಬಿ.ಶ್ರೀಪಾದ್ ಭಟ್, ಡಿ.ಶಿವಶಂಕರ್ ಸಂವಾದದಲ್ಲಿ ಭಾಗವಹಿಸಿದ್ದರು. ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ಎನ್.ಪ್ರತಾಪಸಿಂಹ, ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಬಿ.ಎನ್ ಮಂಜುನಾಥ್ ಇದ್ದರು.
ಇದನ್ನೂ ನೋಡಿ:SIR – ಸಾಧಕ – ಬಾಧಕಗಳು ವಿಚಾರ ಮಂಡನೆ – ಸಂವಾದ
