ಜುಲೈ 11, 2023 ರಂದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ಬಿಡುಗಡೆ ಮಾಡಿದ “ನೋಂದಾಯಿತ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ದೇಣಿಗೆಗಳ ವಿಶ್ಲೇಷಣೆ, ಹಣಕಾಸು ವರ್ಷ 2016-17ರಿಂದ 2021-22: ಪ್ರವೃತ್ತಿಯ ವಿಶ್ಲೇಷಣೆ ಮತ್ತು ತುಲನಾತ್ಮಕ ವಿಶ್ಲೇಷಣೆ” ವರದಿಯಲ್ಲಿ ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದಂತೆ ಒಂದು ದೋಷ ಕಂಡು ಬಂದಿದೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿಯ ಕಚೇರಿ ತಿಳಿಸಿದೆ.
ಈ ಬಾಂಡ್‌ಗಳ ಮೂಲಕ ಸಿಪಿಐ(ಎಂ) ಈ ಅವಧಿಯಲ್ಲಿ 63.75 ಕೋಟಿ ರೂಪಾಯಿಗಳನ್ನು ಪಡೆದಿದೆ ಎಂದು ವರದಿಯ ಪುಟ 6 ರ ಗ್ರಾಫ್ ತೋರಿಸುತ್ತದೆ. ಇದು ಸಂಪೂರ್ಣವಾಗಿ ಸುಳ್ಳು. ಸಿಪಿಐ(ಎಂ) ಇಲ್ಲಿಯವರೆಗೆ ಚುನಾವಣಾ ಬಾಂಡ್‌ಗಳ ಮೂಲಕ ಯಾವುದೇ ದೇಣಿಗೆ ಪಡೆದಿಲ್ಲ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಕಛೇರಿಯು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್, ನವದೆಹಲಿಯ ಮುಖ್ಯಸ್ಥ ಮೇಜರ್ ಜನರಲ್ ಅನಿಲ್ ವರ್ಮಾ (ನಿವೃತ್ತ) ಅವರಿಗೆ ಜುಲೈ 18, 2023 ರಂದು ಬರೆದ ಪತ್ರದಲ್ಲಿ ಸ್ಪಷ್ಟಪಡಿಸಿದೆ. ಕೂಡಲೇ ಈ ತಪ್ಪನ್ನು ಸರಿಪಡಿಸುವಂತೆ ಅದು ಒತ್ತಾಯಿಸಿದೆ.
ಇದನ್ನೂ ಓದಿ:ಇನ್ಮುಂದೆ ಜನನ ಪ್ರಮಾಣಪತ್ರವೇ ಎಲ್ಲದಕ್ಕೂ ಆಧಾರ: ಮಸೂದೆ ಮಂಡನೆ
ಚುನಾವಣಾ ಬಾಂಡ್ ಯೋಜನೆಯ ಆರಂಭದಿಂದಲೂ ಸಿಪಿಐ(ಎಂ) ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದೆ. ಸುಪ್ರೀಂ ಕೋರ್ಟ್‌ನ ಮುಂದೆ ಈಗಲೂ ಇರುವ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಪ್ರಶ್ನಿಸುವ ಮೂರು ಪ್ರಕರಣಗಳಲ್ಲಿ ಒಂದು ಸಿಪಿಐ(ಎಂ) ನದ್ದು ಎಂಬ ಸಂಗತಿ ಎಡಿಆರ್‌ಗೂ ತಿಳಿದಿರುವ ಸಂಗತಿಯೇ ಆಗಿದೆ ಎಂದು ಪತ್ರದಲ್ಲಿ ನೆನಪಿಸಲಾಗಿದೆ. ಇದಲ್ಲದೆ, ಇಂತಹ ಯಾವುದೇ ಬಾಂಡ್‌ಗಳನ್ನು ನಗದೀಕರಿಸಲು ಯಾವುದೇ ಬ್ಯಾಂಕ್ ಖಾತೆಯನ್ನು ಸಿಪಿಐ(ಎಂ) ಗೊತ್ತುಪಡಿಸಿಲ್ಲ.
ಎಡಿಆರ್ ವರದಿಯಲ್ಲಿ ಸಿಪಿಐ(ಎಂ) ಚುನಾವಣಾ ಬಾಂಡ್‌ಗಳ ಮೂಲಕ 63.75 ಕೋಟಿ ರೂಪಾಯಿ ಹಣವನ್ನು ಪಡೆದಿದೆ ಎಂದು ಸೂಚಿಸುವ ಈ ದೋಷವು ಪಕ್ಷಕ್ಕೆ ಮತ್ತು ಅದರ ಪ್ರತಿಷ್ಠೆಗೆ ಹಾನಿಯನ್ನುಂಟುಮಾಡುತ್ತಿದೆ. ಈಗಾಗಲೇ ಪಿಟಿಐ ನಿಂದ ಹೊರಟಿರುವ ವರದಿಯು ಚುನಾವಣಾ ಬಾಂಡ್‌ಗಳ ಮೂಲಕ ಹಣವನ್ನು ಪಡೆದವರಲ್ಲಿ ಸಿಪಿಐ(ಎಂ) ಹೆಸರನ್ನೂ ತೋರಿಸುತ್ತಿದೆ. ಆದ್ದರಿಂದ ಎಡಿಆರ್ ಕೂಡಲೇ ದೋಷವನ್ನು ಸರಿಪಡಿಸಬೇಕು ಮತ್ತು ತನ್ನ ವೆಬ್‌ಸೈಟ್‌ನಲ್ಲಿ ಈ ಕುರಿತು ಹೇಳಿಕೆಯನ್ನು ನೀಡಬೇಕು ಎಂದು ಸಿಪಿಐ(ಎಂ) ಕೇಳಿದೆ.