ಅನ್ನ-ನೀರಿಗಾಗಿ ಪರದಾಡಿದ ಚುನಾವಣಾ ನಿಯೋಜಿತ ಸಿಬ್ಬಂದಿ : ಅಧಿಕಾರಿಗಳ ವಿರುದ್ಧ ಪ್ರತಿಭಟನೆ

ತುಮಕೂರು : ಚುನಾವಣಾ ಕೆಲಸಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿ ಅನ್ನ-ನೀರು ಇಲ್ಲದೆ ಪರದಾಟ ನಡೆಸಿ ಪ್ರತಿಭಟನೆ ನಡೆಸಿದ ಘಟನೆ ಜರುಗಿದೆ. ತುಮಕೂರು ಜಿಲ್ಲೆಯಲ್ಲಿ ಪಾವಗಡದಲ್ಲಿ ಈ ಪ್ರಕರಣ ನಡೆದಿದೆ.

ಚುನಾವಣಾ ಪೂರ್ವ ತರಬೇತಿಗೆ ಬಂದಿದ್ದ ಸಿಬ್ಬಂದಿಗೆ ಸರಿಯಾದ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಕಳೆದ ಎರಡು ಮೂರು ದಿನಗಳಿಂದ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗದ ಹಿನ್ನಲೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಳಗ್ಗೆ 9 ಗಂಟೆಗೆ ತರಬೇತಿಗೆ ಆಗಮಿಸಿದ್ದ ನೂರಾರು ಚುನಾವಣಾ ನಿಯೋಜಿತ ಸಿಬ್ಬಂದಿಗೆ ಮಧ್ಯಾಹ್ನದ ಊಟ ಹಾಗೂ ನೀರಿನ ವ್ಯವಸ್ಥೆ ಮಾಡದೇ ನಿರ್ಲಕ್ಷ್ಯ ವಹಿಸಲಾಗಿದೆ. ಅಧಿಕಾರಿಗಳ ವಿರುದ್ಧ ಅಸಮಾಧಾನಗೊಂಡ ನೂರಾರು ಸಿಬ್ಬಂದಿ ಸರ್ಕಾರಿ ಪದವಿಪೂರ್ವ ಕಾಲೇಜು ಬಳಿ ಚುನಾವಣಾ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿ, ಘೋಷಣೆಗಳನ್ನು ಕೂಗಿದ ಘಟನೆ ನಡೆಯಿತು. ಅಧಿಕಾರಿಗಳ ಭರವಸೆಯ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಚುನಾವಣಾ ಕೆಲಸಕ್ಕೆ ಆಗಮಿಸಿರುವ ಸಿಬ್ಬಂದಿಗಳಿಗೆ ಸರಿಯಾದ ಸೌಲಭ್ಯಗಳನ್ನು ನೀಡದಿರುವುದು ಸರಿಯಾದ ಕ್ರಮವಲ್ಲ, ಮೇಲಾಧಿಕಾರಿಗಳು ಈ ಕುರಿತು ಗಮನ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *