ಡಿ ರೂಪಾ, ರೋಹಿಣಿ ಸಿಂಧೂರಿ ವಿರುದ್ಧ ಇಲಾಖೆ ಮಟ್ಟದಲ್ಲಿ ವಿಚಾರಣೆಗೆ ಸರ್ಕಾರ ಆದೇಶ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಸೂಚನೆ ಮೇರೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಬಹಿರಂಗವಾಗಿ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿರುವ ಐಪಿಎಸ್ ಅಧಿಕಾರಿ ಡಿ. ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಇಲಾಖಾ ವಿಚಾರಣೆಗೆ ಆದೇಶ ಹೊರಡಿಸಿದ್ದಾರೆ. ಶಿಸ್ತು ಉಲ್ಲಂಘಿಸಿದ ಅಧಿಕಾರಿಗಳ ನಡೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಇಬ್ಬರನ್ನು ಸ್ಥಳ ನಿಗದಿಪಡಿಸದೇ ವರ್ಗಾವಣೆ ಮಾಡಲಾಗಿದೆ. ಇದೀಗ ಮಹಿಳಾ ಅಧಿಕಾರಿಗಳಿಗೆ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿದ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆಗೆ ಒಳಪಡಲಿದ್ದಾರೆ.

ಇದನ್ನು ಓದಿ: ರೋಹಿಣಿ ಸಿಂಧೂರಿ ವಿರುದ್ಧ 1200 ಪುಟಗಳ ದಾಖಲೆ ಸಲ್ಲಿಸಿದ ಸಾ ರಾ ಮಹೇಶ್

ನೋಟಿಸು ವಿಚಾರವಾಗಿ ಪರಸ್ಪರ ಆರೋಪಗಳಿಗಾಗಿ ಮಾಧ್ಯಮದ ಮುಂದೆ ಹೋಗಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. ತಮ್ಮ ಆಕ್ಷೇಪ, ದೂರುಗಳನ್ನು ನೀಡಲು ಸೂಕ್ತ ವೇದಿಕೆ ಇದ್ದರೂ ನೇರವಾಗಿ ಮಾಧ್ಯಮಗಳ ಮುಂದೆ ಹೋಗಿದ್ದೀರಿ. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಹಾಗೂ ಮುಜುಗರ ಉಂಟಾಗಿದೆ. ಸರ್ಕಾರಿ ಅಧಿಕಾರಿಯಾಗಿ ಈ ರೀತಿಯ ವರ್ತನೆ ಸಮಂಜಸವಲ್ಲ. ಇದು ಸೇವಾ ನಿಯಮದ ವಿರುದ್ಧವಾಗಿದೆ ಎಂದು ವರದಿಯಾಗಿದೆ.

ಡಿ.ರೂಪಾ ವಿರುದ್ಧ ಮಾಧ್ಯಮ ಮುಂದೆ ಬಹಿರಂಗ ಹೇಳಿಕೆ, ಸಾಮಾಜಿಕ‌ ಜಾಲತಾಣದಲ್ಲಿ ಛಾಯಾಚಿತ್ರಗಳ ಬಿಡುಗಡೆ ಮಾಡಿರುವ ಬಗ್ಗೆ ತನಿಖೆಗೆ ಒಳಪಡಿಸಲಾಗುವುದು. ರೋಹಿಣಿ ಸಿಂಧೂರಿ ವಿರುದ್ದ ಈಜುಕೊಳ ನಿರ್ಮಾಣ, ಪಾರಂಪರಿಕ ಕಟ್ಟಡ ನಿಯಮಾವಳಿ ಉಲ್ಲಂಘನೆ ಆರೋಪ ಹಾಗೂ ಬ್ಯಾಗ್ ಖರೀದಿ ಪ್ರಕರಣಗಳು ತನಿಖಾ ವ್ಯಾಪ್ತಿಗೆ ಒಳಪಡಲಿದೆ. ಇಬ್ಬರು ಅಧಿಕಾರಿಗಳ ವಿರುದ್ಧ ಸಿವಿಲ್‌ ಸೇವಾ ನಿಯಮಾವಳಿ ಉಲ್ಲಂಘನೆಯಾಗಿದೆ.

ಡಿ. ರೂಪಾ ಹಾಗೂ ರೋಹಿಣಿ ಸಿಂಧೂರಿ ಫೆಬ್ರವರಿ 20ರಂದು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಭೇಟಿಯಾಗಿ ದಾಖಲೆಗಳೊಂದಿಗೆ ಪರಸ್ಪರ ದೂರು ನೀಡಿದ್ದರು. ಬಳಿಕ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ನೋಟಿಸ್ ನೀಡಿದೆ.

ಇಲಾಖೆ ಮಟ್ಟದಲ್ಲಿ ತನಿಖೆಗೆ ಆದೇಶಕ್ಕೂ ಮೊದಲು ಸಿಬ್ಬಂದಿ ಮತ್ತು ಆಡಳಿತ ಇಲಾಖೆಯಿಂದ ಇಬ್ಬರಿಗೂ ನೋಟಿಸು ಜಾರಿಯಾಗಿತ್ತು. ಸರ್ಕಾರದ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್ ನೋಟಿಸು ನೀಡಿದ್ದರು.

ಇದುವರೆಗೆ ರೋಹಿಣಿ ಸಿಂಧೂರಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಡಿ‌. ರೂಪಾ ಅಧಿಕಾರ ನಿರ್ವಹಿಸುತ್ತಿದ್ದರು. ಸದ್ಯ ಇಬ್ಬರನ್ನು ಸ್ಥಳ ನಿಗದಿ ಮಾಡದೇ ವರ್ಗಾವಣೆ ಮಾಡಲಾಗಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *