ಏಕಾಏಕಿ 12 ಸಾವಿರ ಬಿಸಿಯೂಟ ನೌಕರರ ವಜಾ ವಿರೋಧಿಸಿ ಏ. 11ರಂದು ರಾಜ್ಯವ್ಯಾಪಿ ಪ್ರತಿಭಟನೆ

ಕಲಬುರಗಿ: 60 ವರ್ಷ ಪೂರ್ಣಗೊಂಡಿದೆ ಎಂಬ ನೆಪವೊಡ್ಡಿ 19 ವರ್ಷ ಸೇವೆ ಸಲ್ಲಿಸಿದ ಬಡ ಮಹಿಳೆಯರನ್ನು ನಿವೃತ್ತಿ ಹೆಸರಿನಲ್ಲಿ ರಾಜ್ಯದಲ್ಲಿನ ಸುಮಾರು 12000  ಬಿಸಿಯೂಟ ನೌಕರರನ್ನು ಸೇವೆಯಿಂದ ಅಮಾನವೀಯವಾಗಿ ಬಿಡುಗಡೆ ಮಾಡಿದ್ದನ್ನು ವಿರೋಧಿಸಿ ಏಪ್ರಿಲ್ 11ರಂದು ರಾಜ್ಯವ್ಯಾಪಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಸಿಐಟಿಯು ಜಿಲ್ಲಾ ಸಂಚಾಲಕಿ ಶ್ರೀಮತಿ ಶಾಂತಾ ಘಂಟೆ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವೇಳೆ ಪ್ರತಿಭಟನೆಗೆ ಸರ್ಕಾರ ಒಪ್ಪದೇ ಹೋದಲ್ಲಿ ಬೇಡಿಕೆಗಳ ಜಾರಿಗಾಗಿ ಏಪ್ರಿಲ್ 18ರಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭವಾದಗಿನಿಂದಲೂ ಮಕ್ಕಳ ಶೈಕ್ಷಣಿಕದ ಉನ್ನತಿಗೆ, ಮಕ್ಕಳು ಶಾಲೆಗಳಲ್ಲಿ ಗೈರುಹಾಜರಿ ತಡೆಗಟ್ಟಲು ಶಿಕ್ಷಣ ಇಲಾಖೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುವ ಬಿಸಿಯೂಟ ನೌಕರರು 60 ವರ್ಷ ವಯೋಮಾನದ ನೆಪವೊಡ್ಡಿ 19 ವರ್ಷ ಸೇವೆ ಸಲ್ಲಿಸಿದ ಬಡ ಮಹಿಳೆಯರನ್ನು ನಿವೃತ್ತಿ ಹೆಸರಿನಲ್ಲಿ ಬಿಡುಗಡೆ ಮಾಡಿರುವ ಕ್ರಮ ಖಂಡನೀಯ ಎಂದರು.

ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸುವುದರ ಜೊತೆಗೆ ಮಕ್ಕಳಲ್ಲಿ ಏಕಾಗ್ರತೆ ಮತ್ತು ಉತ್ತಮ ಫಲಿತಾಂಶ ಹೊರಹೊಮ್ಮಲು ಈ ತಾಯಂದಿರು ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದಲ್ಲಿ ಸುಮಾರು 50 ಲಕ್ಷ ಮಕ್ಕಳಿಗೆ ದಿನನಿತ್ಯ ಬಿಸಿ ಆಹಾರ ಬೇಯಿಸಿ ಉಣಬಡಿಸುತ್ತಿದ್ದಾರೆ. ಮಕ್ಕಳಲ್ಲಿ ಶೈಕ್ಷಣಿಕ ಆಸಕ್ತಿ ಮೂಡಿಸುವಲ್ಲಿ ಈ ಮಹಿಳೆಯರ ತಾಯ್ತನದ ಶ್ರಮವಿದೆ ಎಂದು ಅವರು ಹೇಳಿದರು.

ಅಕ್ಷರ ದಾಸೋಹ ಸಂಘ 2016ರಿಂದಲೂ ವಯೋಮಿತಿ ಆಧಾರದ ಮೇಲೆ ನಿವೃತ್ತಿ ಸೌಲಭ್ಯ ನೀಡಬೇಕೆಂದು ಸರ್ಕಾರಕ್ಕೆ ಮತ್ತು ಶಿಕ್ಷಣ ಇಲಾಖೆಗೆ ಹಲವಾರು ಬಾರಿ ಮನವಿ ಮಾಡಿಕೊಂಡಿದೆ. ಆದರೆ, ಸರ್ಕಾರವಾಗಲಿ, ಶಿಕ್ಷಣ ಇಲಾಖೆಯಾಗಲಿ ಹೆಚ್ಚಿನ ಮುತುವರ್ಜಿ ವಹಿಸಿಲ್ಲ. ಆದಾಗ್ಯೂ, ಬಿಸಿಯೂಟ ನೌಕರರ ನಿವೃತ್ತಿ ವೇತನಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಸಚಿವರೊಂದಿಗೆ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಆಯುಕ್ತರೊಂದಿಗೆ, ಎಲ್‍ಐಸಿಯ ಎಲ್ಲ ವಿಭಾಗದ ಮುಖ್ಯಸ್ಥರು ಮತ್ತು ಸಂಘಟನೆಯ ಮುಖಂಡರೊಂದಿಗೆ ಜಂಟಿಯಾಗಿ ಹಲವು ಸಭೆಗಳಾಗಿವೆ.

ಸಭೆಗಳಲ್ಲಿ ಬಿಸಿಯೂಟ ನೌಕರರ ವೇತನದಲ್ಲಿ 100 ರೂ.ಗಳು ಹಾಗೂ ಸರ್ಕಾರ ನೀಡಿ, ಎಲ್‍ಐಸಿ ಮುಖಾಂತರ ವಿಶೇಷ ಪಿಂಚಣಿ ಯೋಜನೆ ಜಾರಿಗೊಳಿಸಲು ಸೂಚಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ವಯಸ್ಸಿನ ಮಾಹಿತಿಯನ್ನೂ ಸಂಗ್ರಹಣೆ ಮಾಡಲಾಗಿತ್ತು. ಇಲಾಖೆಯ ಅಧಿಕಾರಿಗಳು ಹಾಗೂ ಸಂಘಟನೆಯ ಮುಖಂಡರನ್ನು ಒಳಗೊಂಡ ಸಮಿತಿಯೊಂದನ್ನೂ ರಚಿಸಲಾಗಿತ್ತು. ಆದಾಗ್ಯೂ, ಎಲ್ಲ ಕ್ರಮಗಳು ಜಾರಿಯಾಗುವ ಮೊದಲೇ ಏಕಾಏಕಿ ಬಿಸಿಯೂಟ ನೌಕರರನ್ನು ಕೆಲಸದಿಂದ ನಿವೃತ್ತಿ ಮಾಡುತ್ತಿರುವುದು ಅಮಾನವೀಯ ಎಂದು ಶಾಂತಾ ಎನ್‌ ಘಂಟೆ ಆಕ್ರೋಶ ಹೊರಹಾಕಿದರು.

ಮಹಿಳಾ ವಿರೋಧಿ ಧೋರಣೆಯಿಂದ ಈಗ ರಾಜ್ಯದ ಸುಮಾರು 12 ಸಾವಿರ ಬಿಸಿಯೂಟ ನೌಕರರ ಭವಿಷ್ಯಕ್ಕೆ ಕುತ್ತಾಗಿದೆ. ಕೂಡಲೇ ಆದೇಶವನ್ನು ಹಿಂಪಡೆಯಬೇಕು ಹಾಗೂ ಬಡ, ವಿಧವಾ, ಅಲ್ಪಸಂಖ್ಯಾತ, ದಲಿತ, ಕೂಲಿಕಾರ ಮಹಿಳೆಯರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ ಅವರು, ಸರ್ಕಾರ ನಿವೃತ್ತಿ ವೇತನ ನಿಗದಿ ಮಾಡುವವರಿಗೆ ತಕ್ಷಣದಲ್ಲಿ ಬಿಡುಗಡೆಯಾದ ಬಿಸಿಯೂಟ ನೌಕರರಿಗೆ ಇಡಿಗಂಟು ಒಂದು ಲಕ್ಷ ರೂ.ಗಳ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

Donate Janashakthi Media

Leave a Reply

Your email address will not be published. Required fields are marked *