ಕೆ.ಎಸ್.ರವಿಕುಮಾರ್, ಹಾಸನ
ನೀರು, ಬೆಂಕಿ, ಬರಗಾಲಗಳು ಅಂಕೆ ಮೀರಿದರೆ ಮನುಷ್ಯರ ಪಾಡು ಕಂಗೆಟ್ಟು ಅಲೆಯುವ ನಾಯಿಪಾಡೇ ಹೌದು. ನಿಸರ್ಗದೆದುರು ನಮ್ಮ ಇರುವಿಕೆ ಬಹಳ ನಾಜೂಕಿನದು ಎಂದು ನೆನಪಿಸುವ ಬರಹವಿದು. ಮಳೆ
ಫ್ರಾಂಕ್‌ಫರ್ಟ್ ಜರ್ಮನಿಯ ವಾಣಿಜ್ಯ ನಗರಿ. ಹಣಕಾಸು ವಹಿವಾಟು ಮತ್ತು ನೌಕರಿ ಅವಕಾಶಗಳ ಕನಸಿನ ನಗರಿ. ಯೂರೊ ಕರೆನ್ಸಿಯನ್ನು ನಿರ್ವಹಿಸುವ ಯೂರೋಪಿಯನ್ ಸೆಂಟ್ರಲ್ ಬ್ಯಾಂಕ್(ECB)ನ ಕೇಂದ್ರ ಕಚೇರಿ ಇಲ್ಲೇ ಇದೆ. ಪ್ರತೀ ವರುಷ ಇಲ್ಲಿ ಜರುಗುವ ‘ಫ್ರಾಂಕ್‌ಫರ್ಟ್ ಪುಸ್ತಕ ಜಾತ್ರೆ’ ಬಹಳ ಸುದ್ದಿ ಮಾಡುತ್ತದೆ. ಎರಡನೇ ಜಾಗತಿಕ ಯುದ್ಧದಲ್ಲಿ ಶೇಕಡಾ ನೂರರ ಹತ್ತಿರ ನಾಶವಾಗಿದ್ದ ಈ ನಗರ ನಂತರ ತನ್ನನ್ನು ಬಹಳ ಆಧುನಿಕವಾಗಿ ನಿರ್ಮಿಸಿಕೊಂಡಿತು. ಜರ್ಮನಿಯ ಪ್ರಗತಿಯ ಸಂಕೇತವಾಗಿ ಮಾರ್ಪಟ್ಟಿತು. ಆಧುನಿಕವೆಂದಾಕ್ಷಣ ಬರಿಯ ಕಾಂಕ್ರೀಟ್ ಕಾಡಿನ ಚಿತ್ರಣ ನಿಮ್ಮ ಕಲ್ಪನೆಯಲ್ಲಿ ಕೊನರಬಹುದು. ಹಾಗೇನಿಲ್ಲ, ಫ್ರಾಂಕ್‌ಫರ್ಟ್ ನಗರದ ಅರ್ಧದಷ್ಟು ಪ್ರದೇಶ ದಟ್ಟ ನೈಸರ್ಗಿಕ ಕಾಡುಗಳಿಂದ ತುಂಬಿ ಹೋಗಿದೆ.
ನಗರದ ಒಟ್ಟಾರೆ ಕಾರ್ಬನ್ ಡೈಆಕ್ಸೈಡಿನ ಪ್ರಮಾಣವನ್ನು ತಗ್ಗಿಸುವಲ್ಲಿ ಈ ಕಾಡುಗಳು ಗಮನಾರ್ಹ ಪಾತ್ರ ನಿರ್ವಹಿಸುತ್ತವೆ. ಫ್ರಾಂಕ್‌ಫರ್ಟಿನ ಶೇಕಡಾ 80ರಷ್ಟು ನಿವಾಸಿಗಳು ತಮ್ಮ ಮನೆಬಾಗಿಲಿನಿಂದ 300 ಮೀಟರ್ ನಡೆದರೆ ಸಾಕು ಕಾಡಿನ ಅಂಚನ್ನು ತಲುಪುತ್ತಾರೆ. ಇವೇನು ನಿನ್ನೆ ಮೊನ್ನೆ ಬೆಳೆಸಿದ ಕಾಡುಗಳಲ್ಲ. ಅವುಗಳ ಚರಿತ್ರೆ ಕ್ರಿ.ಶ. 1221ರಷ್ಟು ಹಿಂದಕ್ಕೆ ಸರಿಯುತ್ತದೆ. ಜಗತ್ತಿನ ಅತಿದೊಡ್ಡ ಹೊಳಲುಗಾಡು(Urban Forest)ಗಳಲ್ಲಿ ಫ್ರಾಂಕ್‌ಫರ್ಟಿನ ಹೊಳಲುಗಾಡೂ ಒಂದು. ಫ್ರಾಂಕ್‌ಫರ್ಟಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೇ ನಿಬಿಡ ಕಾಡಿನಿಂದ ಸುತ್ತುವರೆದಿದೆ.
ಫ್ರಾಂಕ್‌ಫರ್ಟಿನ ವಿಮಾನ ನಿಲ್ದಾಣ ಜರ್ಮನಿಯಲ್ಲೆ ದೊಡ್ಡದಾದುದು. ಈಗಾಗಲೆ ಈ ವರುಷದ (Brand value ranking) ರೇಟಿಂಗ್‌ನಲ್ಲಿ ಜಗತ್ತಿನ 5ನೇ ಅತ್ಯುತ್ತಮ ವಿಮಾನ ನಿಲ್ದಾಣ ಎಂಬ ಮನ್ನಣೆ ಪಡೆದಿದೆೆ. ಅಂತರರಾಷ್ಟ್ರೀಯ ಪ್ರಯಾಣಿಕರ ಸಂಖ್ಯಾದಟ್ಟಣೆಯನ್ನು ಪರಿಗಣಿಸಿದರೆ 2022ರ ಮಾಹಿತಿಯ ಪ್ರಕಾರ ಯೂರೋಪಿನಲ್ಲಿ 6ನೇ ತೀರ ಬಿಡುವಿರದ (the busiest) ವಿಮಾನ ನಿಲ್ದಾಣವೆಂತಲೂ ಹೆಸರಾಗಿದೆ. ಸರಕು ಸಾಗಣೆಯ ಪ್ರಮಾಣವನ್ನು ಪರಿಗಣಿಸಿದರೆ ಯೂರೋಪಿನಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಕಳೆದ ವರುಷ ಸುಮಾರು 20 ಲಕ್ಷ ಟನ್ನುಗಳಷ್ಟು ಸರಕು ಈ ವಿಮಾನ ನಿಲ್ದಾಣದ ಮೂಲಕ ಸಾಗಣೆಯಾಗಿದೆ. 200 ಕಿ.ಮೀ. ಪಾಸಲೆಯಲ್ಲಿ 4 ಕೋಟಿ ಜನ ಭಾರೀ ಸುಸಜ್ಜಿತ ಮತ್ತು ಸುವ್ಯವಸ್ಥಿತ ರೈಲು ಹಾಗೂ ಹೆದ್ದಾರಿ ರಸ್ತೆಗಳ ಮೂಲಕ ಸುಲಭದಲ್ಲಿ ಫ್ರಾಂಕ್‌ಫರ್ಟ್ ವಿಮಾನವನ್ನು ತಲುಪಬಹುದಾಗಿದೆ.
ಇದು 2022ರ ಮಾಹಿತಿ ಪ್ರಕಾರ ಜರ್ಮನಿಯ ಒಟ್ಟು ಜನಸಂಖ್ಯೆಯಾದ 8.44 ಕೋಟಿಗಳಲ್ಲಿ ಅರ್ಧಕ್ಕಿಂತ ಸ್ವಲ್ಪ ಕಮ್ಮಿ ಅಷ್ಟೆ! 98 ದೇಶಗಳ 3೦೦ ಊರುಗಳಿಗೆ ಫ್ರಾಂಕ್‌ಫರ್ಟಿನಿಂದ ವಿಮಾನಗಳು ಹಾರುತ್ತವೆ. ಜಗತ್ತಿನ ಮೊದಲ ವಿಮಾನಯಾನ ಸಂಸ್ಥೆ DELAG ಶುರುವಾದದ್ದೆ (1909 ರ ನವೆಂಬರ್ 16ರಂದು) ಫ್ರಾಂಕ್‌ಫರ್ಟಿನಲ್ಲಿ. ಅಂದು ರೆಕ್ಕೆಯ ವಿಮಾನಗಳು ಕಂಡುಹಿಡಿಯಲ್ಪಟ್ಟಿರಲಿಲ್ಲ. ಬದಲಾಗಿ ತೇಲುವ ಟೊಣಪ ‘ಗಾಳಿಹಡಗು’ ಅಥವಾ Airshipಗಳು ಬಳಕೆಯಲ್ಲಿದ್ದವು. ಹೀಗೆ ತನ್ನ ಬೆನ್ನಿಗೆ ಹಲವು ಅಗ್ಗಳಿಕೆಗಳನ್ನು ಸಿಕ್ಕಿಸಿಕೊಂಡಿರುವ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣ ಮೊನ್ನೆ ಮೊನ್ನೆ ಆಗಸ್ಟ್ 16ರ ಸಂಜೆ ಹಿಂದೆಂದೂ ಹೊಂದದ ನಿಸರ್ಗದ ನಾಟಕೀಯ ಅನುಭವವೊಂದಕ್ಕೆ ಪಕ್ಕಾಯಿತು. ಆ ದಿನ ಆದದ್ದೇನು?
ನೀರೋ ನೀರು
ಸಿಡಿಲು ಗುಡುಗು ಮಿಂಚು ಬಿರುಗಾಳಿಗಳ ಜೊತೆ ವಾಯುವ್ಯ ಜರ್ಮನಿಯ ರಾಜ್ಯಗಳನ್ನು ಹೊರತುಪಡಿಸಿ ಉಳಿದೆಲ್ಲ ಕಡೆ ಬೀಳಬಹುದಾದ ಬಿರುಸು ಮಳೆಯ ಬಗ್ಗೆ ಜರ್ಮನಿಯ ಹವಾಮಾನ ಇಲಾಖೆ ಮುಂಚಿತವಾಗಿಯೇ ತಿಳಿಸಿತ್ತು. ‘ತಿಳಿಸಿತ್ತು’ ಎನ್ನುವುದಕ್ಕಿಂತ ಸುಮಾರಾಗಿ ಮುನ್ನೆಚ್ಚರಿಕೆ ನೀಡಿತ್ತು ಎನ್ನುವುದೇ ಸರಿಯಾದದ್ದು. ಕಳೆದೆರಡು ವರುಷಗಳಿಂದ ಜರ್ಮನಿ ವಿಪರೀತ ಮಳೆಗಳನ್ನು ಕಾಣುತ್ತಿದೆ. ಸಾಟಿಯಿಲ್ಲದ ನೆರೆಗಳ ಹೊಡೆತಕ್ಕೆ ಸಿಲುಕುತ್ತಿದೆ. ಈ ಹಿನ್ನೆಲೆಯಲ್ಲೆ ‘ಮುನ್ನೆಚ್ಚರಿಕೆ’ ಎಂದಿದ್ದು. ಆಗಸ್ಟ್ 19 ಮಾಮೂಲಿಗಿಂತ ಕಾರ್ಮೋಡಗಳು ಒಂದಿಷ್ಟು ಬಿರುಸು ಮಳೆಯನ್ನು ಫ್ರಾಂಕ್‌ಫರ್ಟಿನ ಮೇಲೆ ಹಾಗೆ ಸುಮ್ಮನೆ ಸುರಿದು ಹೋಗುವ ದಿನವಾದೀತು ಎಂದು ನಗರದ ಜನ ಭಾವಿಸಿದ್ದಿರಬೇಕು. ಸೂರ್ಯ ಮುಳುಗುತ್ತಿದ್ದಂತೆ ಮಳೆ ಶುರುವಾಯಿತು.
ಮೊದಮೊದಲು ಮಂದಗತಿಯಲ್ಲಿ ಬಿದ್ದು ಎಂಟು ಗಂಟೆಯ ನಂತರ ತೀವ್ರಗೊಂಡಿತು. ಜನರಿಗೆ ಏನು ಜರುಗುತ್ತಿದೆ ಎಂದು ಅರಿವಾಗುವ ಮುನ್ನವೇ ಫ್ರಾಂಕ್‌ಫರ್ಟ್ನ ಹಲವು ರಸ್ತೆ ಬೀದಿಗಳು ಹಠಾತ್ ನೆರೆಯಲ್ಲಿ ಕಣ್ಮರೆಯಾದವು. ಬೇಸ್‌ಮೆಂಟ್‌ಗಳು, ಅಂಡರ್‌ಗ್ರೌಂಡ್ ಪಾರ್ಕಿಂಗ್ ಗ್ಯಾರೇಜುಗಳು, ಸೆಲ್ಲಾರ್‌ಗಳು, ಅಂಡರ್‌ಪಾಸ್‌ಗಳಿಗೆಲ್ಲ ಕಣ್ಣೆವೆಯಿಕ್ಕುವುದರಲ್ಲಿ ನೀರು ನುಗ್ಗಿತು. ಹೇಗೂ ಸಜ್ಜಾಗಿದ್ದ ಅಗ್ನಿಶಾಮಕ ದಳಗಳು ನೂರಕ್ಕೂ ಹೆಚ್ಚು ರಕ್ಷಣಾ ಕಾರ್ಯಾಚರಣೆಗಳನ್ನು 24 ತಾಸಿನ ಒಳಗಾಗಿ ನಡೆಸುವ ಒತ್ತಡಕ್ಕೆ ಸಿಕ್ಕಿಕೊಂಡವು. ಹೇಳಬೇಕೆಂದರೆ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದ ಮೇಲೆ ಬಿದ್ದ ಮಳೆ ಈವರೆಗಿನ ಮಳೆಗಳಲ್ಲೆ ಅಂಜಿಕೆ ಹುಟ್ಟಿಸುವಷ್ಟು ವಿಶೇಷವಾಗಿತ್ತು, ವಿಪರೀತವಾಗಿತ್ತು.
5,681 ಎಕರೆಯ ಹರಹಿನಲ್ಲಿ ಹರಡಿಹೋಗಿರುವ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದ ಮೇಲೆಯೆ ಕವಿದಿದ್ದ ಕರಿಮೋಡಗಳ ದಟ್ಟಣೆ ಬರಿಯ ಕಣ್ಣೋಟಕ್ಕೆ ದಿಗಿಲು ಹುಟ್ಟಿಸುವಂತಿತ್ತು. ಹಿಂದೆಂದೂ ಕಾಣದಂತಹ ಕೋಲ್ಮಿಂಚುಗಳು ಕಣ್ಣು ಕುರುಡಾಗಿಸುವ ಹೊಳಪಿನಿಂದ ಕೊರೈಸಿದವು. ಫ್ರಾಂಕ್‌ಫರ್ಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಆಗಸದಲ್ಲಿ 16ರ ರಾತ್ರಿ ೦8.40ರಿಂದ ೦9.40ರ ಒಂದು ತಾಸಿನ ಗಡುವಿನಲ್ಲಿ 25,289 ಕೋಲ್ಮಿಂಚುಗಳು ಹುಚ್ಚುಕೆರಳಿ ನರ್ತಿಸಿದವು. ಮಳೆ ಜೋರಾಗುತ್ತಿದ್ದಂತೆ ಹಾರುವ ಇಳಿಯುವ ವಿಮಾನಗಳಿಗೆ ಓಡುದಾರಿ(Runway)ಗಳೇ ಕಾಣದಾದವು. ಅವೆಲ್ಲ ಈಜುಕೊಳಗಳಾಗಿಬಿಟ್ಟಿದ್ದವು. ವಿಮಾನಗಳು ಓಡಿದವು ಎನ್ನುವುದಕ್ಕಿಂತ ತೇಲಿದವು ಎನ್ನುವುದೇ ಸರಿ. ಅರೆಮುಳುಗಿ ನಿಂತ ವಿಮಾನಗಳಿಂದ ಇಳಿದು ಬರಲು ಪ್ರಯಾಣಿಕರಿಗೆ ಸಾಧ್ಯವಾಗಲಿಲ್ಲ. ಏರಲು ಹೊರಟವರಿಗೆ ಟರ್ಮಿನಲ್‌ನಿಂದ ಹೊರಬರಲಾಗಲಿಲ್ಲ. ಹೊರಹಾರಬೇಕಿದ್ದ 90ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ಅತಿ ಕಡಿಮೆ ಸಮಯದಲ್ಲಿ ರದ್ದುಗೊಳಿಸಲಾಯಿತು. ಬರಬೇಕಿದ್ದ 23 ವಿಮಾನಗಳನ್ನು ಜರ್ಮನಿಯಲ್ಲೆ ಬೇರೆ ವಿಮಾನ ನಿಲ್ದಾಣಗಳ ಕಡೆಗೆ ನಿರ್ದೇಶಿಸಲಾಯಿತು. ವಿಮಾನಗಳ ಒಟ್ಟಾರೆ ಹಾರಾಟ ನಿಯಂತ್ರಣವನ್ನು ಎರಡು ತಾಸುಗಳ ಕಾಲ ತಡೆಹಿಡಿಯಬೇಕಾಯಿತು.
ಇದನ್ನೂ ಓದಿ: ರೈತರ ಪ್ರತಿಭಟನೆ ಆಹಾರ ಬೆಲೆಗಳ ನಾಗಾಲೋಟದಿಂದ ದೇಶವನ್ನು ಉಳಿಸಿದೆ
ಹುಚ್ಚು ಮಳೆ ಹೆಚ್ಚುತ್ತಲೇ ಹೋಯಿತು. ವಿಮಾನಗಳು ನಿಲ್ಲುವ ಏಪ್ರನ್ ಪ್ರದೇಶದಲ್ಲಿ ತುಂಬಿದ ನೀರು ಏರುತ್ತ ಸಾಗಿ ‘ನಾ ಬಂದೆ’ ಎಂದು ಟರ್ಮಿನಲ್‌ಗಳಿಗೆ ನುಗ್ಗಿತು. ಅಲ್ಲಿ ನೆರೆದಿದ್ದ ಸಾವಿರಾರು ಪ್ರಯಾಣಿಕರು ಬೆಬ್ಬಳಿಸಿಹೋದರು. ಒಡೆದ ಟೈಟಾನಿಕ್ ಹಡಗಿಗೆ ಕಡಲ ನೀರು ನುಗ್ಗಿದ ಹಾಗೆ ಟರ್ಮಿನಲ್‌ಗಳು ತುಂಬಿಕೊಂಡರೆ ಮುಳುಗುವ ಹೆದರಿಕೆ ಪ್ರಯಾಣಿಕರ ಎದೆಯಲ್ಲಿ ಹೆಪ್ಪುಗಟ್ಟಿತು. ಟರ್ಮಿನಲ್‌ಗಳಿಂದ ನೀರು ಸಬ್‌ವೇಗೆ ಎಲಿವೇಟರ್‌ಗಳ ಮೂಲಕವೇ ಇಳಿಯಿತು! ಎಲಿವೇಟರ್‌ಗಳು ಕೆಲವು ಕಾಲ ತಡಸಲುಗಳಂತೆ ಕಂಗೊಳಿಸಿದವು. ಸಬ್‌ವೇ ರೈಲು ಬೋಗಿಗಳ ಬಾಗಿಲು, ಕಿಟಕಿ ಸಂದುಗಳಿಂದ ನೀರು ಹೊರಕ್ಕೆ ಸುರಿಯಿತು.
ಎಲ್ಲೆಲ್ಲೋ ನೀರು ಪುರುಸೊತ್ತಿಲ್ಲದೆ ಹರಿಯಿತು. ಹೊಟ್ಟೆಗೇನೂ ಸಿಕ್ಕದೆ ಪ್ರಯಾಣಿಕರು ಸಿಕ್ಕಸಿಕ್ಕ ಕಡೆ ಒರಗಿಕೊಂಡರು. ರಕ್ಷಿಸುವವರಂತೆ ನಟಿಸಿ ಮೋಟಾರ್‌ಬೋಟುಗಳಲ್ಲಿ ಯಾರು ಬೇಕಾದರು ಕಾವಲಿನ ಎಲ್ಲ ವ್ಯವಸ್ಥೆಗಳನ್ನು ಮುರಿದು ವಿಮಾನ ನಿಲ್ದಾಣಕ್ಕೆ ನುಗ್ಗಬಹುದಾಗಿತ್ತು. ರಕ್ಷಣಾ ಸಿಬ್ಬಂದಿ ಪ್ರಯಾಣಿಕರಷ್ಟೆ ಗೊಂದಲಕ್ಕೊಳಗಾಗಿದ್ದರು. ಎಲ್ಲಿ ಏನು ಮಾಡಬೇಕು ಎಂಬ ಗಲಿಬಿಲಿಯಲ್ಲಿ ಅತ್ತಿತ್ತ ಎಡತಾಕುತ್ತಿದ್ದರು. ಮಳೆಯ ನೀರು ತರಬಹುದಾದ ಎಲ್ಲ ಬಗೆಯ ಅಂಜಿಕೆಗಳು ನೆರೆಯ ರೂಪದಲ್ಲಿ ಒಗ್ಗೂಡಿಬಂದು ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣವನ್ನು ತಮ್ಮ ಹಿಡಿತಕ್ಕೆ ಪಡೆದಿದ್ದವು. ಜರ್ಮನಿ ಕಂಗಾಲಾಗಿ ಹೋಯಿತು.
ರಾತ್ರಿ 8 ರಿಂದ 10ರವರೆಗಿನ ಎರಡು ತಾಸುಗಳಲ್ಲಿ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದ ಪ್ರತೀ ಚದರ ಮೀಟರ್ ನೆಲದ ಮೇಲೆ 60 ಲೀಟರಿನಷ್ಟು ಮಳೆ ಸುರಿದಿತ್ತು. ಮಳೆ ನಿಲುಗಡೆಗೆ ಬಂದಾಗ ಒಟ್ಟು 58 ಮೀಟರಿನಷ್ಟು ಮಳೆ ಬಿದ್ದಿತ್ತು. ವರುಷಕ್ಕೆ ವಾಡಿಕೆಯ ಸರಾಸರಿ 727 ಮಿ.ಮೀ. ಅಥವಾ 28.6 ಇಂಚು ಮಳೆ ಪಡೆಯುವ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣವೆಲ್ಲಿ, 58 ಮೀಟರ್ ಮಳೆ ಪಡೆದ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣವೆಲ್ಲಿ! 80 ವರುಷಗಳ ಕಾಲ ಬೀಳಬೇಕಿದ್ದ ಮಳೆ ಎರಡು ತಾಸಿನಲ್ಲಿ ಶೇಕಡಾ 7,978 ರಷ್ಟು ಹೆಚ್ಚುವರಿಯಾಗಿ ಬಿದ್ದಿತ್ತು! ಮೋಡಗಳ ಅಣೆಕಟ್ಟು ಒಡೆದು ಧುಮ್ಮಿಕ್ಕಿದ ಮಳೆಯನ್ನು ಫ್ರಾಂಕ್‌ಫರ್ಟಿನಲ್ಲಿ ಹಿಂದೆಂದು ಯಾರೂ ಕಂಡಿರಲಿಲ್ಲ, ಕೇಳಿಯೂ ಇರಲಿಲ್ಲ. ಸುಸಜ್ಜಿತಗೊಂಡಿದ್ದ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣವನ್ನು ಸದ್ಯಕ್ಕೆ ಸರಿಪಡಿಸಲಾಗದಂತೆ ಸಾಧ್ಯವಿರುವ ಎಲ್ಲ ಹಾವಳಿಯನ್ನು ತಂದು ಸುರಿದ ಮಳೆ ಮಾರನೇ ಬೆಳಿಗ್ಗೆ ತಹಬಂದಿಗೆ ಬಂದರೂ ನೀರುಮಯ ನಿಲ್ದಾಣದಲ್ಲಿ ಸಿಕ್ಕಿಹಾಕಿಕೊಂಡು ಇಡೀ ರಾತ್ರಿಯನ್ನು ಕಳೆದ ಪ್ರಯಾಣಿಕರ ಗುಂಡಿಗೆ ಬಡಿತ ಮಾತ್ರ ಬಹುಕಾಲ ತಹಬಂದಿಗೆ ಬಂದಿರಲಿಲ್ಲ. ತಂತ್ರಜ್ಞಾನ ಮತ್ತು ತಂತ್ರಗಾರಿಕೆಗಳನ್ನು ಅವುಗಳ ತುಟ್ಟತುದಿಯವರೆಗೆ ಬಳಸಿಕೊಂಡು ವಿಮಾನ ನಿಲ್ದಾಣವನ್ನೇನೊ ವೈರಿದೇಶಗಳ ಮಿಲಿಟರಿ ಪಡೆಗಳು ಮತ್ತು ಭಯೋತ್ಪಾದಕರ ದಾಳಿಗಳಿಂದ ಕಾಪಾಡಿಕೊಳ್ಳುವುದು ತೊಡಕಲ್ಲ. ಆದರೆ ಊಹೆಗೂ ನಿಲುಕದ ಮಳೆಯ ಬಿರುಸು, ಹೆಗ್ಗೂಳಿಗಳು ಗುಂಪುಗೂಡಿದಂತೆ ನುಗ್ಗಿ ಬರುವ ನೆರೆಯನ್ನು ತಡೆಯಲು ಯಾರಿಗೆ ಸಾಧ್ಯವಿದೆ? ನೆನಪಿರಲಿ, ಜಗತ್ತಿನಲ್ಲಿ ಈಗ ಸುರಕ್ಷಿತವೆನ್ನಬಹುದಾದ ಯಾವ ತಾಣವೂ ಉಳಿದಿಲ್ಲ.
ವಿಮಾನ ನಿಲ್ದಾಣಗಳಲ್ಲಿ ಸಾವಿರಾರು ಜೀವರಕ್ಷಕ ದೋಣಿಗಳು, ತೆಪ್ಪಗಳು ಮತ್ತು ಲೈಫ್ ಜಾಕೆಟ್ಟುಗಳನ್ನು ಆಪತ್ತಿಗಿರಲಿ ಎಂದು ಕೂಡಿಡುವ ಪರಿಪಾಟ ಇನ್ನುಮುಂದೆ ಶುರುವಾಗಬೇಕೇನೊ.
ಬೆಂಕಿಯೆ, ಕಾರಣ ಹೇಳಿ ಹೋಗು
ನಾವೀಗ ಅಮೆರಿಕಾದ ಆಡಳಿತಕ್ಕೆ ಐವತ್ತನೇ ರಾಜ್ಯವಾಗಿ ಸೇರ್ಪಡೆಗೊಂಡ ಹವಾಯಿಗೆ ತೆರಳೋಣ. ಹವಾಯಿ ಅಮೆರಿಕಾದ ಏಕೈಕ ನಡುಗಡ್ಡೆಗಳ ರಾಜ್ಯ. ಉಷ್ಣವಲಯವನ್ನು ಪ್ರತಿನಿಧಿಸುವ ಏಕೈಕ ರಾಜ್ಯ ಕೂಡಾ. ಉತ್ತರ ಅಮೆರಿಕಾ ಖಂಡದಿಂದ ಹೊರಗಿರುವ ರಾಜ್ಯವೂ ಹೌದು. ಅಮೆರಿಕಾದ ರಾಜಧಾನಿ ವಾಷಿಂಗ್‌ಟನ್ ಡಿ.ಸಿ.ಯಿಂದ ಬಹಳ ದೂರದಲ್ಲಿರುವ ರಾಜ್ಯವೂ ಹೌದು. ವಾಷಿಂಗ್‌ಟನ್ ಡಿ.ಸಿ. ಮತ್ತು ಹವಾಯಿಯ ರಾಜಧಾನಿ ಹೊನಲುಲು ನಡುವಿನ ಅಂತರ 7,752 ಕಿಲೊಮೀಟರ್‌ಗಳು. ಹವಾಯಿ ಎಂದರೆ ಮಳೆ ಬಿಸಿಲುಗಳ ನಡುವೆ ಕಂಗೊಳಿಸುವ ಹೇರಳ ಕಾಮನಬಿಲ್ಲುಗಳು, ಹಳದಿ ಬಿಳಿ ಪಾಟಲ ಬಣ್ಣಗಳ ಕಣಗಿಲೆ ಹೂಗಳ ಹಾರ, ಅನಾನಸ್ ಹಣ್ಣುಗಳು, ಹೆಂಗಳೆಯರ ಹುಲಾ ನಾಟ್ಯ, ಗಂಡಸರ ಅಲೋಹ ಅಂಗಿಗಳು, ಬಗೆಬಗೆ ಬಣ್ಣದ ಮರಳಿನ ಕಡಲ ತೀರಗಳು, ಕಡಲಿಗೆ ಲಾವಾ ಉಗುಳುವ ಬೆಂಕಿಬೆಟ್ಟಗಳು, ಹಿತವಾದ ಹವೆ ಹೀಗೆಲ್ಲ ನೆನಪಿಗೆ ಬರುತ್ತವೆ. ಹವಾಯಿಯ ನಡುಗಡ್ಡೆಗಳು ವರುಷದ ಎಲ್ಲ ಕಾಲದಲ್ಲೂ ಪ್ರವಾಸಿಗಳಿಂದ ಕಿಕ್ಕಿರಿದಿರುತ್ತವೆ. ಹಸಿರ ಚೆಲುವು, ನೆಮ್ಮದಿಗಳನ್ನು ಮೊಗೆದುಕೊಂಡು ಮಧುಚಂದ್ರದ ದಂಪತಿಗಳಿಗೆ ಅಚ್ಚುಮೆಚ್ಚು ಎನಿಸಿರುವ ಹವಾಯಿಗೂ ಹವಾಮಾನ ಬದಲಾವಣೆ ಈಗ ಹಲವು ಕಿರಿಕಿರಿಗಳನ್ನು ತಂದಿದೆ. ಈಗೀಗ ಬೇಸಗೆ ಸಹಿಸಲಾಗದಷ್ಟು ತಾಪ ದಾಖಲಿಸುವುದೂ ಅವುಗಳಲ್ಲಿ ಒಂದಾಗಿದೆ. ಮೆಲ್ಲಮೆಲ್ಲನೆ ಹವಾಯಿಯ ನಡುಗಡ್ಡೆಗಳಲ್ಲಿ ಬರಗಾಲ ಇಣುಕತೊಡಗಿದೆ.
ಹವಾಯಿಯ ಎರಡನೇ ದೊಡ್ಡ ನಡುಗಡ್ಡೆಯಾದ ಮಾವಿ ಆಗಸ್ಟ್ 8ನೇ ತಾರೀಕು ಇಡೀ ಜಗತ್ತಿನ ಗಮನವನ್ನು ತನ್ನೆಡೆಗೆ ಸೆಳೆದುಕೊಂಡಿತು. ಆ ದಿವಸ ಅಲ್ಲಿ ಉಲ್ಬಣಿಸಿದ ಕಾಡ್ಗಿಚ್ಚು ಹವಾಯಿಯ ಚರಿತ್ರೆಗೆ ಹೊಸ ಪಸುಗೆ ಬರೆಯಿತು. ಹಾಗೆ ನೋಡಿದರೆ ಒಮ್ಮೊಮ್ಮೆ ಬೇಸಗೆಯಲ್ಲಿ ಸಣ್ಣಪುಟ್ಟ ಕಾಡ್ಗಿಚ್ಚಿನ ಬೆಂಕಿ ಪ್ರಕರಣಗಳು ಹವಾಯಿಯಲ್ಲಿ ದಾಖಲಾಗುತ್ತವೆ. ಅವೆಲ್ಲವನ್ನು ಅಲ್ಲಿನ ಆಡಳಿತ ವ್ಯವಸ್ಥೆ ತಹಬಂದಿಗೆ ತರುತ್ತದೆ. ಹೆಚ್ಚೆಂದರೆ ಈ ಕಾಡ್ಗಿಚ್ಚುಗಳು ಒಣಹುಲ್ಲು ಮತ್ತು ಒಣಗಿದ ಪೊದೆಗಳನ್ನಷ್ಟೆ ಕಬಳಿಸುತ್ತವೆ. ಆದರೆ ಆಗಸ್ಟ್ 8ರಂದು ನಿಯಂತ್ರಣದ ಎಲ್ಲ ಮಿತಿಗಳನ್ನು ಮೀರಿ ಶುರುವಾದ ಕಾಡ್ಗಿಚ್ಚು ಇಷ್ಟಕ್ಕೆಲ್ಲ ಸೀಮಿತಗೊಂಡಿರಲಿಲ್ಲ. ಮನುಷ್ಯರನ್ನೂ ಒಳಗೊಂಡು ಅವರು ನಿರ್ಮಿಸಿದ್ದೆಲ್ಲವನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಮಾವಿ ನಡುಗಡ್ಡೆಯ ಮುಖ್ಯ ನಗರ ಲಹೈನಾವನ್ನು ಶೇಕಡಾ 95ರಷ್ಟು ಸುಟ್ಟುಹಾಕಿತು.
ಲಹೈನಾದ ಕಾಡ್ಗಿಚ್ಚಿಗೆ ಮುನ್ನ ‘ಡೋರಾ’ ಹೆಸರಿನ ನಾಲ್ಕನೇ ಪಂಗಡ(category 4)ದ ಉಷ್ಣವಲಯದ ಸೈಕ್ಲೋನ್ ಒಂದು ಹವಾಯಿಯ ದಕ್ಷಿಣಕ್ಕೆ 1,1೦೦ ಕಿ.ಮೀ. ದೂರದಲ್ಲಿ ಪಶ್ಚಿಮದೆಡೆಗೆ ಹಾದುಹೋಗುತ್ತಿತ್ತು. ಅದರ ಗಾಳಿತೋಳುಗಳು ಹವಾಯಿಯ ನಡುಗಡ್ಡೆಗಳ ಮೇಲೂ ಬೀಸಿ ಹೋದವು. ಆಗಸ್ಟ್ 7ರ ಸಂಜೆ ಹಾಗೆ ಹಾದು ಹೋಗುವಾಗ ಲಹೈನಾ ನಗರದ ಒಂದೆಡೆ ದೊಡ್ಡ ಮರವೊ ಮತ್ತೇನೊ ಪವರ್ ಲೈನ್ ಮೇಲೆ ಕುಸಿದು ಬಿದ್ದು ಕಣ್ಣು ಕುರುಡಾಗುವಂತೆ ಬೆಳಕು ಕೊರೈಸಿ ಬೆಂಕಿ ಹೊತ್ತಿಕೊಂಡಿತು. ಈ ಪ್ರಕರಣವನ್ನು ಸುತ್ತಮುತ್ತಲಿನವರಷ್ಟೆ ಗಮನಿಸಿದ್ದರು. ಇದು ಬರಿಯ ಬಿರುಗಾಳಿಯ ಕುಚೇಷ್ಟೆ ಎಂದು ಸುಮ್ಮನಾದರು. ಆದರೆ ಗಾಳಿ ಬಿರುಸಾದಂತೆ ಅದು ನಡುಗಡ್ಡೆಯ ಹಲವು ಕಡೆ ವಿದ್ಯುತ್ ಕಂಬಗಳನ್ನು ಮತ್ತು ಪವರ್‌ಗ್ರಿಡ್ ತಂತಿಗಳನ್ನು ನೆಲ ಕಚ್ಚಿಸಿತ್ತು.
ಗಾಳಿಯ ಹುಯಿಲಿನ ವೇಳೆ ವಿದ್ಯುತ್ ಸಂಪರ್ಕವನ್ನು ಕಡಿದಿರಲಿಲ್ಲವಾದ್ದರಿಂದ ಷಾರ್ಟ್ ಸರ್ಕ್ಯೂಟ್ ಆಗಿ ಹಲವು ಕಡೆ ಬೆಂಕಿ ಹೊತ್ತಿಕೊಂಡಿತು. ಒಂದು ರಾತ್ರಿ ಕಳೆಯುವುದರೊಳಗಾಗಿ ಸಾಕಷ್ಟು ವ್ಯಾಪಿಸಿ ಕಾಡ್ಗಿಚ್ಚಿನ ಸ್ವರೂಪ ಪಡೆದ ಬೆಂಕಿ ಆಗಸ್ಟ್ 8ರ ಮುಂಜಾನೆ ಲಹೈನಾ ನಗರದ ಮೇಲೆ ಅಗತುಕೊಂಡಿತು. ನಡುಹಗಲಿನ ಹೊತ್ತಿಗೆ ದಟ್ಟ ಹೊಗೆ ಕವಿದು, ಉರಿಯ ಕಾವು ತಟ್ಟಿದಾಗಲಷ್ಟೆ ಜನರಿಗೆ ಪರಿಸ್ಥಿತಿಯ ಗಂಭೀರತೆ ಅರಿವಾದದ್ದು. ಆದರೆ ಸ್ಥಳೀಯ ಆಡಳಿತ ವ್ಯವಸ್ಥೆ ಕಾರ್ಯಾಚರಣೆಗೆ ಇಳಿಯಲು ತಡವಾಗಿ ಹೀಗಿತ್ತು. ಬೆಂಕಿ ಹರಡುವ ವೇಗ ಕಂಡು ಜನ ಬೆಕ್ಕಸಬೆರಗಾದರು.
ಇದನ್ನೂ ಓದಿ: ಆಮೆಯೆಂಬ ಅದ್ಭುತ ಪ್ರಾಣಿ !
ಬಿರುಸು ಗಾಳಿಯ ನೆರವು ಪಡೆದು ನಿಮಿಷಕ್ಕೆ ಒಂದೂವರೆ ಕಿ.ಮೀ.ನಷ್ಟು ವೇಗದಲ್ಲಿ ಬೆಂಕಿ ಹಬ್ಬಿಹೋದುದನ್ನು ಲೆಕ್ಕಾಚಾರವೊಂದು ದಾಖಲಿಸಿದೆ. ಬೆಂಕಿಯ ತಾಪ ಸಾವಿರ ಡಿಗ್ರಿ ಸೆಲ್ಸಿಯಸ್ಸಿಗೇರಿತ್ತು! ಕಾಂಕ್ರಿಟ್, ಆಸ್ಬೆಸ್ಟಾಸ್ ಮತ್ತು ಲೋಹದ ವಸ್ತುಗಳ ಹೊರತಾಗಿ ಉಳಿದೆಲ್ಲವೂ ಈ ತಾಪದಲ್ಲಿ ಉರಿದು ಹೋದವು. ಗ್ಯಾಸ್ ಸ್ಟೇಷನ್‌ಗಳು ಮತ್ತು ರಸ್ತೆಗಳಲ್ಲಿ ನಿಲ್ಲಿಸಿದ್ದ ಕಾರುಗಳು ಪುಟ್ಟ ಬಾಂಬ್‌ಗಳು ಸಿಡಿದಂತೆ ಸಿಡಿದವು. ಮುನ್ಸೂಚನೆ ಮತ್ತು ಮುನ್ನೆಚ್ಚರಿಕೆ ಇರಲಿಲ್ಲವಾದ್ದರಿಂದ ಜನರಿಗೆ ಹೊಗೆ ಮತ್ತು ಕಾವಿಲ್ಲದ ತಾವುಗಳಿಗೆ ಓಡಿಹೋಗಿ ಜೀವ ಉಳಿಸಿಕೊಳ್ಳಲು ಸಮಯವೇ ಸಿಗಲಿಲ್ಲ. ನೂರಕ್ಕೂ ಹೆಚ್ಚು ಮಂದಿ ನಿವಾಸಿಗಳು ಮತ್ತು ಪ್ರವಾಸಿಗರು ಸತ್ತರು. ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆಯಾದರು. ಗಳಿಗೆಗಳಿಗೆಗೂ ಏರುತ್ತಿದ್ದ ಕಾವಿನಿಂದ ಮತ್ತು ಗಾಳಿ ಹೊತ್ತು ತರುತ್ತಿದ್ದ ಕಿಡಿ ಹಾಗೂ ಕೆಂಡಗಳ ಹೊನಲಿನಿಂದ ಬಚಾವಾಗಲು ಸಾವಿರಾರು ಮಂದಿ ಕಡಲ ತಡಿಗೆ ಓಡಿ ನೀರಿಗೆ ಜಿಗಿದರು. ನೀರಿನಲ್ಲಿ ಮುಳಗೇಳುತ್ತ ಜೀವ ಉಳಿಸಿಕೊಂಡರು.
ಕಡಲಿಗೂ ಕೆನ್ನಾಲಿಗೆಗಳು ಬೀಸಿಬರತೊಡಗಿದಾಗ ಕರಾವಳಿ ಕಾವಲುಪಡೆಗಳು ಜನರನ್ನು ದೂರ ಒಯ್ಯಬೇಕಾಯಿತು. ಇತ್ತ ಕಾರುಗಳಲ್ಲಿ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದವರು ತಾಸುಗಟ್ಟಲೆ ಟ್ರಾಫಿಕ್ ಜಾಮ್‌ನಲ್ಲಿ ಸೆರೆಯಾದರು. ಹೊರವಲಯದಲ್ಲಿ ಚೊಕ್ಕಟವಾದ ಗಾಳಿ ಅರಸಿ ಕಾರಿನಿಂದ ಹೊರಗೋಡಿದವರು ಹೇಗೋ ಬದುಕಿದರು. ಕಾರಲ್ಲೇ ಉಳಿದವರು ಉಸಿರುಗಟ್ಟಿ ಅಸುನೀಗಿದರು. ಕಡುಗಪ್ಪು ಹೊಗೆಯಲ್ಲಿ ಮುಖಗಳನ್ನು ಗುರುತಿಸುವುದೇ ತ್ರಾಸವಾಗಿತ್ತು. ಮುಂದಿನ ಹಲವು ದಿನಗಳವರೆಗೂ ಬೆಂಕಿಯ ಆಟಾಟೋಪ ಜರುಗಿಯೇ ಇತ್ತು. 2,200ಕ್ಕೂ ಹೆಚ್ಚು ಕಟ್ಟಡಗಳು ಕರಕಲಾದವು. ಸುಟ್ಟಕಾರುಗಳ ಸಂಖ್ಯೆಯೇನು ಕಮ್ಮಿಯಿರಲಿಲ್ಲ. ಸಾಕುಪ್ರಾಣಿಗಳಿಗೇನಾಯಿತು ಎಂದು ನೋಡುವಷ್ಟು ಪುರುಸೊತ್ತು ಬಹಳಷ್ಟು ಜನಕ್ಕೆ ಸಿಗಲೇ ಇಲ್ಲ. ಅಮೆರಿಕಾ ಮಿಲಿಟರಿಯಲ್ಲಿ ಹಲವು ವರುಷ ಸೇವೆ ಸಲ್ಲಿಸಿ ಜಗತ್ತಿನ ಹಲವೆಡೆ ಯುದ್ಧಗಳಲ್ಲಿ ಪಾಲ್ಗೊಂಡು ನಿವೃತ್ತಿಯ ನಂತರ ಲಹೈನಾದಲ್ಲಿ ನೆಲೆಸಿರುವ ಡೇವಿಡ್ ತಾನು ಯುದ್ಧಭೂಮಿಯಲ್ಲೂ ಈಪಾಟಿ ಭಯಾನಕ ನೋಟಗಳನ್ನು ಕಂಡಿಲ್ಲವೆಂದರು.
ಬೆಂಕಿಯಿಂದ ಬದುಕುಳಿದವರ ಒಂದೇ ದೂರೆಂದರೆ ಬೆಂಕಿ ಹಬ್ಬುವ ಮುನ್ನ ಸ್ಥಳೀಯ ಆಡಳಿತಕ್ಕೆ ಸಂಬಂಧಸಿದವರು ಯಾವುದೇ ‘ಫೈರ್ ಅಲಾರಂ’ ಅಥವಾ ಸೈರೆನ್ ಅನ್ನು ಕೂಗಿಸದೆ ಇದ್ದದ್ದು. ಹವಾಯಿಯಲ್ಲಿ ಜಗತ್ತಿನಲ್ಲೆ ಅತ್ಯುತ್ತಮ ಎನ್ನಬಹುದಾದ ಕಾಡ್ಗಿಚ್ಚೂ ಸೇರಿದಂತೆ ನೈಸರ್ಗಿಕ ವಿಪತ್ತುಗಳ ಬಗ್ಗೆ ಮುನ್ನೆಚ್ಚರಿಕೆ ನೀಡಬಲ್ಲ, ಕೆಲವೇ ವರುಷಗಳ ಹಿಂದೆ ಅಳವಡಿಸಿದ ತಾಂತ್ರಿಕ ವ್ಯವಸ್ಥೆ ಚಾಲ್ತಿಯಲ್ಲಿದೆ. ಹಲವರ ಅಭಿಪ್ರಾಯದಂತೆ ಚುರುಕು ಕ್ರಮ ಕೈಗೊಳ್ಳಬೇಕಿದ್ದ ಆಡಳಿತದ ಮಂದಿಯೆ ಸ್ವತಃ ಬೆಂಕಿಯ ಹಬ್ಬುವ ವೇಗ ಮತ್ತು ತೀವ್ರತೆಯನ್ನು ಕಂಡು ದಂಗುಬಡಿದು ಹೋಗಿದ್ದರು. ಬೆಂಕಿ ಆರಿಸುವ ತಂಡಗಳಲ್ಲಿದ್ದವರಲ್ಲೆ ಹಲವರು ಆಘಾತಕ್ಕೆ ಒಳಗಾಗಿದ್ದರು. ಹವಾಮಾನ ಬದಲಾವಣೆಯ ಈ ದಿನಗಳಲ್ಲಿ ನಿಸರ್ಗದ ಶಕ್ತಿಗಳನ್ನು ನಾವಿನ್ನೂ ಪೂರ್ತಿ ಗ್ರಹಿಸಿಲ್ಲವೆಂಬುದನ್ನು ಈ ಬೆಳವಣಿಗೆಯಿಂದ ತಿಳಿಯಬಹುದಾಗಿದೆ. ಹವಾಯಿಯಲ್ಲಿ ಅಮೆರಿಕಾ ನೌಕಾಪಡೆಯ ಹದಿನಾಲ್ಕು ನೆಲೆಗಳಿವೆ. ಅವುಗಳ ಹೆಲಿಕಾಪ್ಟರ್‌ಗಳು ದೊಡ್ಡ ಪ್ರಮಾಣದಲ್ಲಿ ಬೆಂಕಿ ಆರಿಸುವ ಕಾರ್ಯಾಚರಣೆಗೆ ಇಳಿದರೂ ಕಡೆಗೆ ಅವೂ ಸೋಲೊಪ್ಪಬೇಕಾಯಿತು. ಎಂತಹ ಶಕ್ತಿಶಾಲಿ ಮಿಲಿಟರಿಯೂ ನಿಸರ್ಗದೆದುರು ನಿರುಪಯೋಗಿ ಅನ್ನುವುದನ್ನು ಮತ್ತೆ ಮತ್ತೆ ಹೇಳಲು ಬಯಸುವೆ.
ಆಗಸ್ಟ್ ಬೇಸಗೆಯ ತಿಂಗಳು. ಹಲವು ವರುಷಗಳಿಂದ ಆಗಸ್ಟಿನಲ್ಲಿ ತಾಪ ಹೆಚ್ಚಿ ಹಠಾತ್ ಬರಗಾಲಗಳು ಹವಾಯಿಯಲ್ಲಿ ಕಾಣಿಸಿಕೊಳ್ಳುತ್ತವೆ. ಒಣಗಿದ ದಟ್ಟ ಪೊದೆ ಹುಲ್ಲುಗಳು, ಗಿಡಗಳು ಹೊತ್ತಿ ಉರಿಯಲು ಬೇಕಾದ ಉರುವಲಾಗುತ್ತವೆ. ವಾತಾವರಣದ ಅಸಹಜ ತಾಪ ಮತ್ತು ನೆಲದ ಒಣತನ ಬೆಂಕಿಯ ಆಡುಂಬೊಲಕ್ಕೆ ಈ ಬಾರಿ ಹೇಳಿಮಾಡಿಸಿದಂತಿತ್ತು. ಸಾಲದ್ದಕ್ಕೆ ಹವಾಮಾನ ಬದಲಾವಣೆಯ ಒಂದು ಪರಿಣಾಮವಾದ ಡೋರಾ ಸೈಕ್ಲೋನ್ ಹವಾಯಿಯ ಮೇಲೆ ಬೀಸಿ ಹೋಗುವಾಗ ಗಾಳಿಯ ತೇವಾಂಶವನ್ನು ತನ್ನೊಂದಿಗೆ ಒಯ್ದು ಮಾವಿ ನಡುಗಡ್ಡೆಯ ವಾತಾವರಣವನ್ನು ಮತ್ತಷ್ಟು ಒಣಗಿಸಿತ್ತು. ಬೆಂಕಿಗೆ ಹೀಗೊಂದು ಕಣವನ್ನು ನಿಸರ್ಗ ಸಜ್ಜುಗೊಳಿಸಿಟ್ಟಿತ್ತು. ಈ ಸಜ್ಜಿಕೆಗೆ ಮನುಷ್ಯರ ಮೈಮರೆವಿನ ಅಸಡ್ಡೆಯು ಸೇರಿತು.
‘ಡೋರಾ’ ಬಿರುಗಾಳಿಗೆ ಸಿಕ್ಕಿ ವಿದ್ಯುತ್ ತಂತಿಗಳು ನೆಲಕ್ಕೆ ಕಂಬದೊಂದಿಗೆ ಬಿದ್ದಾಗ ಇಲ್ಲವೆ ವಿದ್ಯುತ್ ತಂತಿಗಳ ಮೇಲೆ ಮರಗಿಡಗಳು ಬೇರುಕಿತ್ತು ಮಲಗಿದಾಗಲೆ ವಿದ್ಯುತ್ ಸರಬರಾಜು ಮಾಡುವ ‘ಹವಾಯಿ ಎಲೆಕ್ಟ್ರಿಕ್ ಕಂಪೆನಿ’ ಪವರ್‌ಗ್ರಿಡ್‌ನ ವಿದ್ಯುತ್ ಸಂಪರ್ಕವನ್ನು ಕಡಿದಿದ್ದರೆ ಮಾವಿ ಕಾಡ್ಗಿಚ್ಚನ್ನು ತಪ್ಪಿಸಬಹುದಾಗಿತ್ತು ಎಂಬ ವಾದವೂ ಇದೆ. ಯಾರಿಗೆ ಗೊತ್ತು, ಕಂಪೆನಿಯ ಸಿಬ್ಬಂದಿಯೂ ಬೆಂಕಿಯ ‘ದೆಯ್ಯಗುಣಿತ’ವನ್ನು ಕಂಡು ಕೈಕಾಲಾಡದಂತೆ ಕಂಗೆಟ್ಟುಹೋಗಿರಬೇಕು. ಅಂತೂ ಬೆಂಕಿ ತೊಡೆತಟ್ಟಿತು. ಗೆದ್ದು ಗಹಗಹಿಸಿ ತೆರಳಿತು. ಈ ಬರಹ ಕೊನೆಗೊಳ್ಳುವವರೆಗೂ ಹವಾಯಿಯ ಕಾಡ್ಗಿಚ್ಚಿಗೆ ನಿರ್ದಿಷ್ಟ ಕಾರಣವನ್ನು ಅಲ್ಲಿನ ಆಡಳಿತಗಳು ಇನ್ನೂ ಹುಡುಕುತ್ತಲೇ ಇರುವ ಸುದ್ದಿ ಬಂದಿದೆ. ಮರೆಯಬಾರದ್ದು, ಮಾವಿಯ ಕಾಡ್ಗಿಚ್ಚಿನಲ್ಲಿ ಕಳೆದುಕೊಂಡದ್ದನ್ನೆಲ್ಲ ಮತ್ತೆ ನಿರ್ಮಿಸಲು ಅಮೆರಿಕಾ ಸರ್ಕಾರ 55,೦೦೦ ಕೋಟಿ ಡಾಲರುಗಳನ್ನು ವೆಚ್ಚಮಾಡಬೇಕಿದೆಯಂತೆ.
ಸದ್ಯ ಮಾವಿಯ ಕೌಂಟಿ ಆಡಳಿತ ‘ಹವಾಯಿ ಎಲೆಕ್ಟ್ರಿಕ್ ಕಂಪೆನಿ’ಯ ಅಸಡ್ಡೆಯ ವಿರುದ್ಧ ಕೋರ್ಟಿನಲ್ಲಿ ಮೊಕದ್ದಮೆ ಹೂಡಿದೆ. ಈ ಮೊಕದ್ದಮೆ ತರ್ಕದ ಒಂದು ತುದಿಯನ್ನು ತಲುಪುವ ಹೊತ್ತಿಗೆ ಹವಾಯಿಯ ಮೇಲೆ ಅದೆಷ್ಟು ಬಿರುಗಾಳಿಗಳು ಬೀಸಿಹೋಗುತ್ತವೆಯೊ, ಅದೆಷ್ಟು ಬರಗಾಲಗಳು ಕವುಚಿಕೊಳ್ಳುತ್ತವೆಯೊ ಗೊತ್ತಿಲ್ಲ. ಅಧಿಕಾರದಲ್ಲಿರುವವರಿಗೆ ಯಾವ ಕಾಲಕ್ಕೆ ಹವಾಮಾನ ಬದಲಾವಣೆ ಅರಿವಾದೀತು ಎಂದು ಯಾವ ಕೋರ್ಟು ಮುಂದೆ ಕೇಳಬೇಕಿದೆಯೊ ಗೊತ್ತಿಲ್ಲ. ಆಗಸ್ಟ್ 21ರಂದು ಅಮೆರಿಕಾದ ಅಧ್ಯಕ್ಷ ಜೋಬಿಡೆನ್ ಅದಾಗಲೆ ತಡವಾಗಿದ್ದರೂ ಮಾವಿಗೆ ಭೇಟಿಕೊಟ್ಟರು. ಕಾಡ್ಗಿಚ್ಚಿನ ಸಂತ್ರಸ್ತರನ್ನು ಸಂತೈಸುವ ಭಾಷಣದಲ್ಲಿ 2004ರಲ್ಲಿ ತಮ್ಮ ಮನೆ kitchen fireನಲ್ಲಿ ಸುಟ್ಟುಹೋದುದನ್ನು ನೆನೆಸಿಕೊಂಡಂರು. ಬೆಂಕಿ ಅನಾಹುತದ ಅರಿವು ತನಗೂ ಇದೆ ಎಂಬುದನ್ನು ತೋಡಿಕೊಳ್ಳುವ ಭರದಲ್ಲಿ ಮಾವಿಯ ಕಾಡ್ಗಿಚ್ಚಿನ ಸ್ವರೂಪವನ್ನು ತಮ್ಮನುಭವದ ಪುಟ್ಟ ಬೆಂಕಿ ಪ್ರಕರಣವೊಂದಕ್ಕೆ ತಳುಕು ಹಾಕಿದರು. ಅವರ ಈ ಮಾತುಗಳನ್ನು ಕೇಳಿದ ಲಹೈನಾದ ಸಂತ್ರಸ್ತರು ‘ಬಿಡೆನ್ ಅವರಿಗೆ ಹಾಸ್ಯಪ್ರಜ್ಞೆ ಕಮ್ಮಿ’ ಎಂದರು. ಎಲ್ಲ ದೇಶಗಳ ನಾಯಕರ ಆಲೋಚನಾ ಲಹರಿ ಹೀಗೆಯೆ ಸಾಗುವುದೇನೊ ಎಂಬ ಅನುಮಾನ ನನಗೆ. ಸರ್ಕಾರಗಳಿಗೆ ಹವಾಮಾನ ಬದಲಾವಣೆಯ ಬಿಸಿ ಇನ್ನೂ ತಗುಲಿಲ್ಲವೆಂದರೆ ಏನನ್ನುವುದು? ಇವರೆಲ್ಲ ಎಚ್ಚೆತ್ತು ಜಗತ್ತನ್ನು ಯಾವಾಗ ಕಾಪಾಡುತ್ತಾರೆ?
ಭಾರತದ ಬಿಸಿಗೊಂಡ ತಿಂಗಳು : ಆಗಸ್ಟ್, 2023
ನಮ್ಮ ಒಕ್ಕೂಟ ಸರ್ಕಾರ ಕಳೆದ ಕೆಲವು ದಿನಗಳಲ್ಲಿ ತೆಗೆದುಕೊಂಡ ತೀರ್ಮಾನಗಳ ಕಡೆ ಗಮನ ಹರಿಸೋಣ. ಜಗತ್ತಿನಲ್ಲಿ ಅತಿಹೆಚ್ಚು ಅಕ್ಕಿ ರಫ್ತು ಮಾಡುವ ದೇಶ ನಮ್ಮದಾಗಿದ್ದರೂ ಸರ್ಕಾರ ಈಗ ಅಕ್ಕಿ ರಫ್ತನ್ನು ಕಡಿತಗೊಳಿಸಿದೆ. ಈರುಳ್ಳಿ ರಫ್ತಿನ ಮೇಲೆ ಶೇಕಡಾ 40ರಷ್ಟು ಸುಂಕ ಏರಿಸಿದೆ. ಬೇಳೆಕಾಳುಗಳ ಆಮದಿನ ಮೇಲೆ ಸುಂಕವನ್ನು ತೆರವುಗೊಳಿಸಿದೆ. ಸದ್ಯದಲ್ಲೆ ಸಕ್ಕರೆಯ ರಫ್ತನ್ನೂ ನಿಷೇಧಿಸುವ ಸಾಧ್ಯತೆ ಇದೆ. ಯಾಕೆ ಒಕ್ಕೂಟ ಸರ್ಕಾರ ಹೀಗೆಲ್ಲ ಮಾಡಿದೆ ಅಥವಾ ಮಾಡಹೊರಟಿದೆ. ಉತ್ತರ ಸರಳ, ಮಾನ್ಸೂನ್ ಮಳೆಯ ತೀವ್ರತೆ ತುಟ್ಟತುದಿ ತಲುಪಬೇಕಿದ್ದ ಆಗಸ್ಟ್ ತಿಂಗಳು ಈ ವರುಷ ಬಹಳ ಬಿಸಿಯಾದ ಒಣ ತಿಂಗಳೆಂದು ಸೆಪ್ಟೆಂಬರ್ ಬರುವ ಮುನ್ನವೆ ದಾಖಲಾಗಿದೆ. ಕಳೆದ 123 ವರುಷಗಳಲ್ಲಿ, 1901ರಲ್ಲಿ ದೇಶದಾದ್ಯಂತ ಮಳೆಯ ದಾಖಲಾತಿ (nation-wide recording) ಮೊದಲ ಬಾರಿ ಶುರುವಾದ ನಂತರ ಆಗಸ್ಟ್ ಇಷ್ಟೊಂದು ಒಣಗಿದ ದಿನಗಳನ್ನು ಕಂಡದ್ದು ದಾಖಲೆಯ ಕಡತಕ್ಕೆ ಬಂದಿರಲಿಲ್ಲ.
ಮಾನ್ಸೂನ್ ಆಗಸ್ಟಿನಲ್ಲಿ ಪಲಾಯನ ಮಾಡುತ್ತಿದ್ದಂತೆ ಮುಂಬರುವ ದಿನಗಳಲ್ಲಿ ಫಸಲಿಲ್ಲದೆ ಕೊರತೆ ಎದುರಿಸಬಹುದಾದ ಆಹಾರಧಾನ್ಯ, ಬೇಳೆಕಾಳು, ಅಡುಗೆಎಣ್ಣೆ ಮತ್ತಿತರ ಅತ್ಯಗತ್ಯ ಅಡುಗೆಮನೆ ಪದಾರ್ಥಗಳ ಆಮದು ರಫ್ತುಗಳನ್ನು ಒಕ್ಕೂಟ ಸರ್ಕಾರವು ತನ್ನ ಹಿಡಿತಕ್ಕೆ ತೆಗೆದುಕೊಂಡು ಅವುಗಳ ಸುಲಭ ಲಭ್ಯತೆಗೆ ಮತ್ತು ಖರೀದಿದರ ಮಿತಿಮೀರಿ ಏರದಂತೆ ತಡೆಯುವ ಪೂರಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೆಲ್ಲ ಸರಿಯೆ. ಆದರೆ ಸಾಗುವಳಿ ಕೆಲಸಗಳು ಹವಾಮಾನದ ಅತಿರೇಕಗಳಿಗೆ ಸಿಲುಕದಂತೆ ತಡೆಯಲು ಅದು ಏನು ಮಾಡಬಹುದು, ಬಹುಶಃ ಏನೂ ಇಲ್ಲ!ಈ ವರುಷದ ಆಗಸ್ಟ್ ಮಾನ್ಸೂನಿನ ಆಗಸ್ಟ್ ಅಂತ ಅನಿಸಲೇ ಇಲ್ಲ. ಇನ್ನೊಂದು ಬಾರಿ ಮೇ ತಿಂಗಳೇ ಬಂತೇನೊ ಎಂದೆನಿಸಿತು. ಭಾರತೀಯ ಹವಾಮಾನ ಇಲಾಖೆ, IMD ಈ ವರುಷದ ಮಾನ್ಸೂನ್ ವಾಡಿಕೆಯ ಮಳೆಯನ್ನೆ ತರುತ್ತದೆ ಎಂದೇ ಮುನ್ಸೂಚಿಸಿತ್ತು. ವಿಷಯ ನವಿರಾದುದಾದ್ದರಿಂದ ಹೆಸರು ಹೊರಗೆಡಹಬಾರದು ಎಂಬ ಕೋರಿಕೆಯ ಮೇರೆಗೆ ಹವಾಮಾನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ನಾವು ನಿರೀಕ್ಷಿಸಿದಂತೆ ಮಾನ್ಸೂನ್ ಚುರುಕಾಗಲಿಲ್ಲ. ದಕ್ಷಿಣ, ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ಮಳೆಯ ಭಾರೀ ಕೊರತೆಯೊಂದಿಗೆ ಈ ವರುಷದ ಆಗಸ್ಟ್ ಕೊನೆಗೊಳ್ಳಲಿದೆ’ ಎಂಬ ಕಳವಳವನ್ನು ಹೊರಗೆಡಹಿದ್ದಾರೆ. ನಿಜ, ಆಗಸ್ಟ್ ತಿಂಗಳ ಮಾನ್ಸೂನ್ ಮಳೆಯ ಹೆಗ್ಗೊರತೆ ಭಾರತದ ‘3 ಟ್ರಿಲಿಯನ್ ಎಕಾನಮಿ’ಯ ಮೇಲೆ ಭಾರೀ ಪರಿಣಾಮ ಬೀರಲಿದೆಯೆಂದು ಅಂದಾಜು ಮಾಡಲಾಗಿದೆ. ಹಾಗೆಯೆ ಇನ್ನುಮುಂದೆ ನಿಸರ್ಗದ ಆಗುಹೋಗುಗಳು ಮುನ್ಸೂಚನೆಯ ವಿವರಣೆಗೆ ದಕ್ಕುವುದು ಅನುಮಾನ ಎನ್ನಬಹುದಾಗಿದೆ.
‘ಮಾನ್ಸೂನಿನ ಹೆಬ್ಬಾಗಿಲು’ ಅಂದರೆ ಮಾನ್ಸೂನಿಗೆ ಮೊದಲು ದಿಡ್ಡಿಬಾಗಿಲು ತೆರೆಯುವ ಕೇರಳ ಒಂದರಲ್ಲೆ ಜೂನ್ 1ರಿಂದ ಆಗಸ್ಟ್ 25ರವರೆಗೆ ಬಿದ್ದ ಮಳೆಯ ಪ್ರಮಾಣವನ್ನು ಅಳೆದರೆ ಆ ಗಡುವಿನಲ್ಲಿ ವಾಡಿಕೆಗಿಂತ ಶೇಕಡಾ 47ರಷ್ಟು ಕೊರತೆ ಕಂಡುಬಂದಿದೆ. ಮುಚ್ಚುಮರೆಯಿಲ್ಲದೆ ಹೇಳಬೇಕೆಂದರೆ ಕೇರಳ ರಾಜ್ಯವೆ ಈ ವರುಷ ಬರಗಾಲಕ್ಕೆ ತುತ್ತಾಗಿದೆ. ಇನ್ನು ದೇಶದ ಕತೆ ಬಿಡಿಸಿ ಹೇಳಬೇಕೆ. ಮಾನ್ಸೂನ್ ಮಳೆ ಸಾಕಷ್ಟಾದರೆ ಬೇಸಗೆಯ ಧಗೆ ತಾನಾಗೆ ತಹಬಂದಿಗೆ ಬರುತ್ತದೆ. ಆದರೆ ಈ ಬಾರಿ ಹಾಗಾಗಿಲ್ಲ. ಈ ಕುರಿತು ಹೆಚ್ಚು ಚರ್ಚಿಸಿದರೆ ಜನರಲ್ಲಿ ಬೆಲೆಏರಿಕೆಯ ತಲ್ಲಣ ಮತ್ತು ಒಕ್ಕೂಟ ಸರ್ಕಾರಕ್ಕೆ ಮುಜುಗರ ಎರಡೂ ಒಟ್ಟಿಗೆ ಆಗುವುದರಿಂದ ಹವಾಮಾನ ಇಲಾಖೆಯ ಹಿರಿಯ ಅಧಿಕಾರಿ ತಮ್ಮ ಹೆಸರನ್ನು ಮುಚ್ಚಿಡಲು ಮಾಧ್ಯಮವನ್ನು ಕೋರಿದ್ದು (ನೋಡಿ, ಆಗಸ್ಟ್ 18ರ NDTV ವರದಿ. ತಲೆಬರಹವನ್ನು India Witnesses Driest August In 100 Years, Threatening Summer Crops ಎಂದು ಮಿಂದಾಣದಲ್ಲಿ ಅಚ್ಚಿಸಿ. ಅಂದಹಾಗೆ ನಿಸರ್ಗದ ಸತ್ಯಗಳನ್ನು ನಾವು ಮುಚ್ಚಿಟ್ಟಷ್ಟೂ ಜನರಲ್ಲಿ ಹವಾಮಾನ ಬದಲಾವಣೆಯ ಕುರಿತ ಅಗತ್ಯದ ಅರಿವನ್ನು ಮೂಡಿಸುವಲ್ಲಿ ಹಿಂದೆಬೀಳುತ್ತೇವೆ. ಇರಲಿ ಇದು ಬೇರೆ ವಿಚಾರ).
ಇದನ್ನೂ ಓದಿ: ಕೊನೆ ಕ್ಷಣದಲ್ಲಿ ಮಹಿಳಾ ಮೀಸಲಾತಿ ಮಸೂದೆಗಾಗಿ ಮೋದಿಯವರಿಗೆ ಮಹಿಳೆಯರು ಕೃತಜ್ಞರಾಗಿರಬೇಕೇ?
ಭಾರತದ ನೀರಿನ ಆಸರೆಗಳು ಭರ್ತಿಯಾಗಲು ಶೇಕಡಾ 70ರಷ್ಟು ಆಗಸ್ಟಿನ ಮಾನ್ಸೂನ್ ಮಳೆಗಳೇ ನೆರವಾಗುವುದು. ಆದರೆ ಈ ಬಾರಿ…!? IMD ಈ ವರುಷ ಆಗಸ್ಟ್‌ನಲ್ಲಿ ಕೇವಲ ಶೇಕಡಾ 8ರಷ್ಟು ಮಳೆಯ ಕೊರತೆಯನ್ನು ಲೆಕ್ಕಿಸಿತ್ತು. ಆದರೆ ಆಗಸ್ಟ್ ಅರ್ಧ ಕಳೆಯುವ ಹೊತ್ತಿಗೇ ಶೇಕಡಾ 40ರಷ್ಟು ಕೊರತೆ ದಾಖಲಾಗಿತ್ತು. ಬೇಸಗೆಯ ಬೆಳೆಗಳಾದ ಭತ್ತ, ಜೋಳ, ಹತ್ತಿ, ಸೋಯಾ, ಕಬ್ಬು, ಕಡಲೆಬೀಜ ಮುಂತಾದವಕ್ಕೆ ಮಾನ್ಸೂನ್ ಮಳೆ ಬಹಳ ನೆರವಾಗುತ್ತಿತ್ತು. ಈ ವರುಷ ಈ ಬೆಳೆಗಳಲ್ಲಿ ಬಿತ್ತನೆಯಾದದ್ದಷ್ಟಾದರೂ ಕೈಗೆ ಹತ್ತುವ ಬಗ್ಗೆ ಅನುಮಾನವಿದೆ. ಹಿಂದೆಲ್ಲ ಆಗಸ್ಟ್ ತಿಂಗಳಲ್ಲಿ ಭಾರತ ಐದರಿಂದ ಏಳು ದಿನಗಳು ಮಾತ್ರ ಮಳೆಯನ್ನು ಪಡೆಯುತ್ತಿರಲಿಲ್ಲ. ಈ ವರುಷ ಈ ಬೆಳವಣಿಗೆ ತಿರುಗುಮುರುಗಾದಂತಿದೆ. ಸದ್ಯ ಭಾರತದ ಶೇಕಡಾ 50ರಷ್ಟು ಬಿತ್ತನೆಗೊಂಡ ಸಾಗುವಳಿಯ ಜಮೀನು ಮಳೆಗೆ ಬಾಯ್ದೆಗೆದುಕೊಂಡು ಮಲಗಿದೆ. ಮಳೆ ಇನ್ನೂ ತಡವಾದರೆ ಒಟ್ಟಾರೆ ಇಳುವರಿ 50ರಷ್ಟು ಕಡಿತಗೊಳ್ಳಲಿದೆ ಎಂದೆ ಅರ್ಥ. ಆಗಸ್ಟ್ 26ನೇ ತಾರೀಕಿನ ಹೊತ್ತಿಗೆ ದೇಶದ ಶೇಕಡಾ 39ರಷ್ಟು ಪ್ರದೇಶ ಸಾಮಾನ್ಯದಿಂದ ಅತಿಯಾದ ಒಣಹವೆಯನ್ನು ಪಡೆದಿತ್ತು. ಈ ಒಣಹವೆಯನ್ನು IMD ಬರ ಎಂದು ಕರೆಯಲು ಹಿಂದೇಟು ಹಾಕಿದರೂ ಅದು ಮಾನ್ಸೂನ್ ಕಾಲದ ಬರ(Monsoon drought)ವೇ ಆಗಿದೆ. ಸೆಪ್ಟೆಂಬರ್ 15ರ ಒಳಗಾಗಿ ಆಗುವ ಮಳೆಗಳು ಭಾರತದ ಆರ್ಥಿಕ ಭವಿಷ್ಯವನ್ನು ತೀರ್ಮಾನಿಸಲಿವೆ.
ವಿಡಿಯೋ ನೋಡಿ: ಇದು ಶಾಲೆಯಾ? ಅಥವಾ ಸ್ವಿಮ್ಮಿಂಗ್ ಫೂಲ್! ಶಾಸಕರೆ ಉತ್ತರಿಸಿ Janashakthi Media