ಕಲಬುರಗಿ : ನಾವು ಮಕ್ಕಳು ನಾಡಿನ ಪ್ರಜೆಗಳು ಮತ್ತು ನಾಳಿನ ಭವಿಷ್ಯವು ಆಗಿದ್ದೇವೆ. ಕ್ರಿಯಾಶೀಲ ಮೆದುಳಿನೊಂದಿಗೆ ಗುಣಾತ್ಮಕವಾಗಿ ಕಲಿಯಲು ನಮಗೆ ಮೊಟ್ಟೆ ಮತ್ತು ಬಾಳೆಹಣ್ಣನ್ನು ವಿತರಿಸಿ ಎಂದು ಮಕ್ಕಳ ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ಕಲಬುರ್ಗಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಕ್ಕಳ ಕೂಟ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಪ್ರಿಯಾಂಕ ಮಾವಿನಕರ್ ಮಾತನಾಡುತ್ತಾ, ನಮ್ಮ ನಾಡಿನಲ್ಲಿ ತೀವ್ರ ಬಡತನ ನಿರುದ್ಯೋಗ ಅಪೌಷ್ಟಿಕತೆ ತಾಂಡವಾಡುತ್ತಿದೆ. ಕಲ್ಬುರ್ಗಿ ಜಿಲ್ಲೆಯಲ್ಲಿ ಮಕ್ಕಳಲ್ಲಿ ಶೇಕಡಾ 74ಕ್ಕಿಂತಲೂ ಹೆಚ್ಚು ಅಪೌಷ್ಟಿಕತೆ ಇದೆ. ಇದು ಅತ್ಯಂತ ತಲ್ಲಣದ ಮತ್ತು ಚಿಂತೆಯ ವಿಷಯ ಎಂಬುದು ಅನೇಕರಿಗೆ ಹಿರಿಯರಿಗೆ ಅರ್ಥವಾಗುತ್ತಿಲ್ಲ. ಅದರಲ್ಲೂ ಮಠಾಧೀಶರಿಗೆ ಗಂಭೀರವಾಗಿ ಕಾಡುತ್ತಿಲ್ಲ. ಮತ್ತು ಇವರೆಲ್ಲ ಅವೈಜ್ಞಾನಿಕ ಚಿಂತನೆಗಳನ್ನು ಸಮಾಜದಲ್ಲಿ ಹರಡುತ್ತಿದ್ದಾರೆ. ತಮ್ಮ ಮತಿಯ ಆಲೋಚನೆಗಳನ್ನು ನಮ್ಮ ಆಹಾರದ ಜೊತೆಗೆ ಸೇರಿಸುತ್ತಿದ್ದಾರೆ. ಮಕ್ಕಳಿಗೆ ಮೊಟ್ಟೆ ಬೇಡ ಎಂಬುದನ್ನು ಒಂದು ಆಂದೋಲನವಾಗಿ ಮಾಡುತ್ತಿದ್ದಾರೆ. ಇದು ಎಷ್ಟು ಸರಿ? ಇವರಿಗೆ ಏಕೆ ಅರ್ಥವಾಗುತ್ತಿಲ್ಲ? ಮೊಟ್ಟೆ ಬೇಕಾದವರು ಮೊಟ್ಟೆ ತಿಂದರೆ ಇವರಿಗೆ ಏನು ಕಷ್ಟ? ಎಂದು ಪ್ರಶ್ನಿಸಿದರು.
ಮಕ್ಕಳ ಕೂಟದ ಸಂಚಾಲಕಿ ಮದಿಹಾ ಪಟೇಲ್ ಮಾತನಾಡಿ, ಸಸ್ಯದಲ್ಲಿವು ಜೀವವಿದೆ ಎಂಬುವುದು ನಮ್ಮ ದೇಶದ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಇವರು ಜಗತ್ತಿಗೆ ತಿಳಿಸಿಕೊಟ್ಟಿದ್ದಾರೆ. ಆದರೆ ನಮ್ಮ ಮಠಾಧೀಶರಿಗೆ ಅರಿವಿಗೆ ಬರುತ್ತಿಲ್ಲ. ಮಕ್ಕಳು ಹಸಿವಿನಿಂದ ನರಳಿ ಸತ್ತರು ಚಿಂತೆ ಇಲ್ಲ ಆದರೆ ಮೊಟ್ಟೆ ಮಾತ್ರ ಕೊಡಬೇಡಿ ಎನ್ನುವಂತಹ ಕ್ರೂರ ಅಮಾನವೀಯ ಆಲೋಚನೆಗಳನ್ನು ಸರ್ಕಾರದ ಮೇಲೆ ಹೇರುತ್ತಿದ್ದಾರೆ ಇದು ಎಷ್ಟು ಸರಿ ?
ಇಷ್ಟಕ್ಕೂ ಮೊಟ್ಟೆ ಬೇಡವಾದವರಿಗೆ ಬಾಳೆಹಣ್ಣು ಸರ್ಕಾರ ಕೊಡುತ್ತಿದೆ ಆದರೂ ಈ ಮಠಾಧೀಶರು ಒತ್ತಾಯದ ಆಹಾರ ಪದ್ಧತಿಯನ್ನು ಮಕ್ಕಳ ತಲೆ ಮೇಲೆ ಹೇರುತ್ತಿದ್ದಾರೆ ಮತ್ತು ಮೊಟ್ಟೆ ಉಣ್ಣುವ ಮಕ್ಕಳ ತಟ್ಟೆಯಿಂದ ಆಹಾರ ಕಿತ್ತುಕೊಳ್ಳುತ್ತಿದ್ದಾರೆ. ಇದರಿಂದಾಗಿ ನಮ್ಮ ಪ್ರದೇಶದಲ್ಲಿ ಇನ್ನಷ್ಟು ಅಪೌಷ್ಟಿಕತೆ ಹೆಚ್ಚಾಗುತ್ತದೆ ಮತ್ತು ಸರಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಆಹಾರದಿಂದ ವಂಚಿತರಾಗುತ್ತಾರೆ. ಅಪೌಷ್ಟಿಕತೆಯಿಂದ ನರಳುತ್ತಾರೆ. ಸರ್ಕಾರಿ ಶಾಲೆಗೆ ಹೋಗುವವರು ಗ್ರಾಮೀಣ ಪ್ರದೇಶದ ಮಕ್ಕಳು ಹಿಂದುಳಿದವರು ದಲಿತ ದಮನಿತ ಮತ್ತು ಬಡತನದಲ್ಲಿರುವ ಮಕ್ಕಳೇ ಜಾಸ್ತಿ. ಈ ಮಕ್ಕಳಿಂದ ಪೌಷ್ಠಿಕ ಆಹಾರ ಕಿತ್ತುಕೊಳ್ಳುವುದು ಎಂದರೆ ಈ ಸಮುದಾಯದ ಎಲ್ಲಾ ಮಕ್ಕಳಿಗೂ ಪೌಷ್ಟಿಕ ಆಹಾರ ದೊರೆಯದಂತೆ ಮಾಡುವ ಬಹುದೊಡ್ಡ ಮನುವಾದಿ ಷಡ್ಯಂತ್ರವೆ ಆಗಿದೆ ಎಂದು ಆರೋಪಿಸಿದರು.
ನಮಗೆ ಮೊಟ್ಟೆಯೂ ಕೊಡಿ ಬಾಳೆಹಣ್ಣು ಕೊಡಿ ಒಟ್ಟಾರೆ ಅವರವರ ಆಹಾರ ಪದ್ಧತಿ ಅವರವರ ಆಯ್ಕೆ ಆಗಿರುತ್ತದೆ. ನಿಮ್ಮ ಮತಿಯ ಮನಸ್ಸಿನಿಂದ ನಮ್ಮ ಆಹಾರ ಕಿತ್ತುಕೊಳ್ಳುವ ಪ್ರಯತ್ನ ಮಾಡಬೇಡಿ ಮನುಷ್ಯತ್ವ ಇದ್ದರೆ, ಸಾರಾಯಿ ಬಂದು ಮಾಡಲು ಮುಂದಾಗಿ ಮತ್ತು ಅಮಾನವೀಯ ಪದ್ಧತಿ ಅಸ್ಪೃಶ್ಯತೆ ಮೂಢನಂಬಿಕೆಯನ್ನು ಸಮಾಜದಿಂದ ಕಿತ್ತುಹಾಕಲು ಶ್ರಮಿಸಿ ಇದನ್ನು ಬಿಟ್ಟು ಮಕ್ಕಳ ತಟ್ಟೆಯಿಂದ ಆಹಾರ ಕಿತ್ತುಕೊಳ್ಳುವ ಕ್ರೌರ್ಯದ ದುರ್ಗುಣ ಬಿಟ್ಟುಬಿಡಿ ಎಂದು ಮಕ್ಕಳು ಆಗ್ರಹಿಸಿದರು.