ಸಿದ್ದಯ್ಯ ಸಿ.
`2022ರಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ, ಇನ್ನು ಮುಂದೆ ರೈತರು ನೆಮ್ಮದಿಯಿಂದ ಬದುಕುತ್ತಾರೆ’ ಇದು 2016ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ ಮಾತು. ಆದರೆ ಈಗ ದೇಶದ ರೈತರ ಪರಿಸ್ಥಿತಿ ಏನಾಗಿದೆ? ಮಹಾರಾಷ್ಟ್ರದ ಬಾರ್ಶಿ ಪ್ರದೇಶದಲ್ಲಿ ವಾಸ ಮಾಡುತ್ತಿರುವ ರಾಜೇಂದ್ರ ತುಕಾರಾಂ ಚವಾಣ್ ಈರುಳ್ಳಿ ಬೆಳೆಯುತ್ತಾರೆ. ಅವರು, ಫೆಬ್ರವರಿ ಕೊನೆಯ ವಾರದ ಒಂದು ದಿನ ತಮ್ಮ ಜಮೀನಿನಲ್ಲಿ ಬೆಳೆದ 512 ಕೆಜಿ ಈರುಳ್ಳಿಯನ್ನು ಮಾರಾಟ ಮಾಡಲು ಕೃಷಿ ಉತ್ಪನ್ನ ಮಾರುಕಟ್ಟೆಗೆ ಕೊಂಡೊಯ್ದಿದ್ದಾರೆ. ಈ ವೇಳೆ ತೀವ್ರ ಬೆಲೆ ಕುಸಿತದಿಂದ ಕ್ವಿಂಟಲ್ ಈರುಳ್ಳಿ ಬೆಲೆ 100 ರೂ.ಗೆ ಇಳಿದಿದೆ. ಅಂದರೆ ಒಂದು ಕೆಜಿ ಈರುಳ್ಳಿಯನ್ನು ಕೇವಲ ಒಂದು ರೂಪಾಯಿಗೆ ಖರೀದಿಸಲಾಗಿದೆ. ಒಟ್ಟು 512 ಕೆಜಿ ಈರುಳ್ಳಿ ಮಾರಾಟ ಮಾಡಿದ್ದು ಕೇವಲ 512 ರೂ. ಅದರಲ್ಲಿ ಲಾರಿ ಬಾಡಿಗೆ ಮತ್ತು ಈರುಳ್ಳಿಯನ್ನು ಅನ್‌ಲೋಡ್ ಶುಲ್ಕ ಮತ್ತು ಇತರೆ ಶುಲ್ಕ 510 ರೂ. ಕಳೆದು, ರೈತನಿಗೆ ಉಳಿದದ್ದು ಎರಡು ರೂಪಾಯಿ ಮಾತ್ರ. ಈರುಳ್ಳಿ ಖರೀದಿಸಿದ ಅಂಗಡಿಯವನು ರೈತನಿಗೆ 2 ರೂಪಾಯಿ 49 ಪೈಸೆ ಚೆಕ್ ಬರೆದು ಕೊಟ್ಟಿದ್ದಾನೆ. ಈ ಹಣವನ್ನೂ ಆ ರೈತ ಬ್ಯಾಂಕ್ ನಿಂದ ಪಡೆಯಬೇಕು. ಇದರಿಂದ ರೈತ ತುಕಾರಾಂ ಸಾಕಷ್ಟು ನಷ್ಟ ಅನುಭವಿಸಿದರು.
ರಾಜ್ಯದಲ್ಲೂ ಬೆಲೆ ಕುಸಿತ
ಗದಗ ಜಿಲ್ಲೆಯ ರೈತರೊಬ್ಬರು ನವೆಂಬರ್ 12, 2022ರಂದು ತಾನು ಬೆಳೆದ ಈರುಳ್ಳಿಯನ್ನು ಬೆಂಗಳೂರಿನ ಎಪಿಎಂಸಿ ಮಾರುಕಟ್ಟೆಗೆ ತಂದ್ದಿದ್ದರು. ಅವರು ತಂದ 205 ಕೆಜಿ ಈರುಳ್ಳಿಗೆ ಕೆಜಿ ಒಂದಕ್ಕೆ 2 ರೂಪಾಯಿ ಲೆಕ್ಕದಲ್ಲಿ 410 ರೂ. ಮಾತ್ರ ಸಿಕ್ಕಿತ್ತು. ಇದರಲ್ಲಿ 401.64 ರೂಪಾಯಿಗಳನ್ನು ಸಾಗಣೆ ವೆಚ್ಚ, ಅನ್‌ಲೋಡ್ ಶುಲ್ಕ ನೀಡಿ ರೈತನಿಗೆ ಉಳಿದದ್ದು ಕೇವಲ 8.36 ರೂಪಾಯಿ ಮಾತ್ರ. ಇದು ಒಂದೆರಡು ಉದಾಹರಣೆಗಳಷ್ಟೆ. ರೈತರು ನಷ್ಟ ಅನುಭವಿಸಿದ ಇಂತಹ ಬಹಳಷ್ಟು ಉದಾಹರಣೆಗಳಿವೆ.
ಈ ಬೆಲೆ ಇಳಿಕೆ ಈರುಳ್ಳಿಗೆ ಮಾತ್ರ ಸೀಮಿತವಾಗಿಲ್ಲ. ಆಲೂಗೆಡ್ಡೆ ಸೇರಿದಂತೆ ಎಲ್ಲ ಬೆಳೆಗಳ ಬೆಲೆ ಕುಸಿದಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತೊಗರಿ, ಸೇಂಗಾ, ಕಡಲೆ, ಸೂರ್ಯಕಾಂತಿ, ಹತ್ತಿ, ಬತ್ತ, ಕಬ್ಬು, ಕೊಬ್ಬರಿ ಸೇರಿದಂತೆ ಇತರೆ ಬೆಳೆಗಾರರ ಸ್ಥಿತಿ ಇದಕ್ಕಿಂತ ಬಿನ್ನವಾಗೇನೂ ಇಲ್ಲ. ಡಾ. ಎಂ.ಎಸ್. ಸ್ವಾಮಿನಾಥನ್ ವರದಿ ಅನ್ವಯ ಕೃಷಿ ಉತ್ಪನ್ನಗಳಿಗೆ ಉತ್ಪಾದನ ವೆಚ್ಚದ ಮೇಲೆ ಶೇ.50ರಷ್ಟು (ಸಿ2+50) ಲಾಭವನ್ನು ಸೇರಿಸಿ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂಬ ರೈತರ ಬೇಡಿಕೆಯನ್ನು ಸರ್ಕಾರ ಪರಿಗಣಿಸುತ್ತಿಲ್ಲ. ರಾಷ್ಟ್ರದ ರಾಜಧಾನಿ ದೆಹಲಿಯ ಗಡಿಗಳಲ್ಲಿ ರೈತರು ಒಂದು ವರ್ಷ ನಿರಂತರವಾಗಿ ನಡೆಸಿದ ಹೋರಾಟದ ಸಂದರ್ಭದಲ್ಲಿ ಬೆಂಬಲ ಬೆಲೆ ಬೇಡಿಕೆ ಈಡೇರಿಸಲು ಕ್ರಮಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ಭರವಸೆ ಕೊಟ್ಟಿತ್ತು. ಆದರೆ, ವರ್ಷ ಕಳೆದರೂ ತಾನು ಕೊಟ್ಟ ಭರವಸೆ ಈಡೇರಿಸುವ ಪ್ರಯತ್ನವನ್ನೇ ಮಾಡುತ್ತಿಲ್ಲ. ಮತ್ತೊಂದೆಡೆ ಕೃಷಿ ಉತ್ಪಾದನೆಗಾಗಿ ಖರೀದಿಸುವ ಗೊಬ್ಬರ, ಬಿತ್ತನೆ ಬೀಜಗಳು, ಔಷಧ, ಕೃಷಿ ಕೆಲಸಗಳು, ಕಳೆ ಕೀಳಲು, ಸಾಲದ ಬಡ್ಡಿಕಟ್ಟಲು, ಕೃಷಿ ಕಾರ್ಮಿಕರ ಕೂಲಿ, ನೈಸರ್ಗಿಕ ಅಪಾಯಗಳಿಂದ ಎದುರಾಗುವ ಸಮಸ್ಯೆಗಳು ಇತ್ಯಾದಿಗಳಿಗೆ ಹೆಚ್ಚುವರಿ ಖರ್ಚು ಇದ್ದೇ ಇದೆ. ಇದು ರೈತರನ್ನು ಕಂಗೆಡಿಸುವಂತೆ ಮಾಡಿದೆ. ಇದರಿಂದ ಮನನೊಂದ ಹಲವು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಅವಧಿಯಲ್ಲಿ ರೈತರ ಆತ್ಮಹತ್ಯೆಗಳೂ ಹೆಚ್ಚಿವೆ. ರೈತರು ಬಳಸುವ ರಸಗೊಬ್ಬರದ ಬೆಲೆ ಹಲವು ಪಟ್ಟು ಹೆಚ್ಚಾಗಿದೆ. ಕಳೆದ ವರ್ಷ 2010-11 ರ ರಸಗೊಬ್ಬರ ಬೆಲೆ ವಿವರಗಳು ಮತ್ತು 28 ಫೆಬ್ರವರಿ 2023 ರ ರಸಗೊಬ್ಬರ ಬೆಲೆ ವಿವರಗಳು ಕೋಷ್ಟಕದಲ್ಲಿವೆ.
ರೈತರು 2010ರಲ್ಲಿ ಇಲ್ಲಿ ಹೆಸರಿಸಿರುವ ಐದೂ ಗೊಬ್ಬರವನ್ನು ಒಂದೊಂದು ಚೀಲದ ದರದಲ್ಲಿ ಖರೀದಿಸಿದರೆ ಒಟ್ಟು 1540 ರೂ. ಆಗುತ್ತಿತ್ತು. ಫೆಬ್ರವರಿ 28, 2023 ರಂದು, ಈ ಐದು ರಸಗೊಬ್ಬರಗಳ ಒಂದೊಂದು ಚೀಲ ಖರೀದಿಸಿದರೆ, ರೈತರು ರೂ. 5281.50 ಪಾವತಿಸಬೇಕಾಗುತ್ತದೆ. ಈಗ 3741.50 ರೂಪಾಯಿಗಳ ಹೆಚ್ಚುವರಿ ಹಣ ಕೊಟ್ಟು ಖರೀದಿಸಬೇಕು. ಅಂದರೆ ಅದನ್ನು ರೈತರು ಖರೀದಿಸಲು 3.5 ಪಟ್ಟು ಹೆಚ್ಚು ಹಣವನ್ನು ಕೊಡಬೇಕಾಗುತ್ತದೆ.
ತೈಲೋದ್ಯಮಿಗಳ ಉತ್ಪನ್ನಗಳಿಗೆ ಅಂತರಾಷ್ಟ್ರೀಯ ದರ! ಆದರೆ
ಟಾಟಾ, ರಿಲಯನ್ಸ್, ಎಸ್ಸಾರ್, ನಂತಹ ಖಾಸಗಿ ಕಂಪನಿಗಳು ಮತ್ತು ಒಎನ್‌ಜಿಸಿ, ಇಂಡಿಯನ್ ಆಯಿಲ್ ನಂತಹ ಸಾರ್ವಜನಿಕ ಕಂಪನಿಗಳು ಭಾರತದ ಸಮುದ್ರದಾಳದಿಂದ ಪೆಟ್ರೋಲಿಯಂ ಹೊರತೆಗೆದು ಮಾರಾಟ ಮಾಡುತ್ತವೆ. ಈ ದೇಶೀಯ ಪೆಟ್ರೋಲಿಯಂ ಉತ್ಪನ್ನಗಳಿಗೆ ಅಂತರಾಷ್ಟ್ರೀಯ ಮಾರುಕಟ್ಟೆ ದರ ನಿಗಧಿ ಮಾಡುತ್ತಾರೆ. ತೈಲ ಕಂಪನಿಗಳು ಹೊರದೇಶದಿಂದ ಕಡಿಮೆ ದರದಲ್ಲಿ ಕಚ್ಚಾ ತೈಲ ತಂದು ಅದರ ಉತ್ಪನ್ನಗಳನ್ನು ಅಧಿಕ ಬೆಲೆಗೆ ಮಾರುತ್ತಿವೆ. ಕೃಷಿಗೆ ಬಳಸುವ ರಾಸಾಯನಿಕ ಗೊಬ್ಬರ, ರೋಗನಿರೋಧಕ ಔಷಧ, ಪೆಟ್ರೋಲ್ ಮತ್ತು ಡೀಸೆಲ್ ಗೆ ರೈತರು ಜಾಗತಿಕ ಮಾರುಕಟ್ಟೆ ಬೆಲೆ ನೀಡಬೇಕು. ಆದರೆ, ರೈತರ ಉತ್ಪನ್ನಗಳಿಗೆ ಇಂತಹ ಜಾಗತಿಕ ಮಾರುಕಟ್ಟೆ ದರ ಸಿಗುವ ವ್ಯವಸ್ಥೆ ಇಲ್ಲ. ರೈತರ ಉತ್ಪನ್ನಗಳನ್ನು ಭಾರತೀಯ ಮಾರುಕಟ್ಟೆ ದರದಲ್ಲಿ, ಅದರಲ್ಲೂ ವ್ಯಾಪಾರಿಗಳು ನಿಗಧಿಮಾಡುವ ದರದಲ್ಲಿ ಮಾರಬೇಕು.
ಇದನ್ನು ಓದಿ: ಈರುಳ್ಳಿ – ಕೊಬ್ಬರಿಯನ್ನು ಬೆಂಬಲ ಬೆಲೆಗೆ ಖರೀದಿಸುವಂತೆ ಕೆಪಿಆರ್‌ಎಸ್ ಆಗ್ರಹ
ಮಾತ್ರವಲ್ಲ ಕೃಷಿ ಉತ್ಪನ್ನಗಳಿಗೆ ಅವುಗಳಿಗೆ ಮಾಡುವ ವೆಚ್ಚ ಮತ್ತು ನಿರ್ಧಿಷ್ಟ ಲಾಭ ಸಿಗುವಂತಹ ಬೆಲೆ ನಿಗಧಿಪಡಿಸಿ ಎಂದು ಹೋರಾಡುವ ಪರಿಸ್ಥಿತಿ ರೈತರದು. ಖಾಸಗಿ ಉದ್ಯಮಿಗಳ ವಿಷಯದಲ್ಲಿ ಧಾರಾಳವಾಗಿರುವ ಸರ್ಕಾರ, ರೈತರ ವಿಷಯದಲ್ಲಿಅಂತಹ ಧಾರಾಳತನ ತೋರುವುದಿಲ್ಲ.
ಮಹಾರಾಷ್ಟ್ರ ರೈತರ ಬೃಹತ್ ಪಾದಯಾತ್ರೆ
ಕೂಡಲೇ ರೈತರಿಗೆ ಪ್ರತಿ ಕ್ವಿಂಟಾಲ್ ಈರುಳ್ಳಿಗೆ 1500 ರೂ.ವರೆಗೆ ಪರಿಹಾರ ನೀಡಬೇಕು ಮತ್ತು ಅವರ ಉತ್ಪನ್ನವನ್ನು ಕೆಜಿಗೆ 15 ರಿಂದ 20 ರೂ.ಗೆ ಖರೀದಿಸಬೇಕು ಎಂದು ಒತ್ತಾಯಿಸಿ, ಮಹಾರಾಷ್ಟ್ರದ ರೈತರು ಇದೇ ಮಾರ್ಚ್ ತಿಂಗಳಲ್ಲಿ ನಾಸಿಕ್ ನಿಂದ ಮುಂಬೈಗೆ 200 ಕಿ.ಮೀ. ದೂರ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದ್ದರು. ರೈತರ ಪಾದಯಾತ್ರೆ ಮುಂಬೈಗೆ ಕೇವಲ 80 ಕಿ.ಮೀ. ದೂರದಲ್ಲಿ ಬರುತ್ತಿರುವಾಗಲೇ ಅಲ್ಲಿ ರಾಜ್ಯ ಸರ್ಕಾರ ರೈತರ ಹಲವು ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ಕಾರಣ ಪಾದಯಾತ್ರೆಯನ್ನು ಸ್ಥಗಿತಗೊಳಿಸಲಾಯಿತು.
ಇದನ್ನು ಓದಿ: ಮಹಾರಾಷ್ಟ್ರದ ರೈತರ ಮತ್ತೊಂದು ಲಾಂಗ್ ಮಾರ್ಚ್-ಮತ್ತೊಂದು ಮಹತ್ವದ ವಿಜಯ
ರಸಗೊಬ್ಬರದ ಬೆಲೆ ಮೂರೂವರೆ ಪಟ್ಟು ಏರಿಕೆ
2010ರಲ್ಲಿ 50 ಕೆಜಿ ಯೂರಿಯಾ ಚೀಲದ ಬೆಲೆ 220 ರೂ. ಇದ್ದದ್ದು, 28 ಫೆಬ್ರವರಿ 2023 ರಂದು 45 ಕೆಜಿ ಯೂರಿಯಾ ಚೀಲಕ್ಕೆ 266.50.ರೂ. ಆಗಿದೆ. ಯೂರಿಯಾ ಬೆಲೆ ರೂ. 46.50 ಏರಿಕೆಯಾಗಿದೆ. ತೂಕ ಕೂಡ 5 ಕೆಜಿ ಕಡಿಮೆಯಾಗಿದೆ. ಅದೇ ರೀತಿ ಡಿ ಅಮೋನಿಯಂ ಫಾಸ್ಫೇಟ್ (ಡಿಎಪಿ) ಬೆಲೆ ರೂ.450ರಿಂದ ರೂ.1350ಕ್ಕೆ ಏರಿಕೆಯಾಗಿದೆ. ಈಗ ಹೆಚ್ಚುವರಿಯಾಗಿ 900 ರೂ. ಪೊಟ್ಯಾಷ್ ರೂ.280ರಿಂದ ರೂ.1700ಕ್ಕೆ ಏರಿಕೆಯಾಗಿದೆ. ಅಂದರೆ ಪೊಟ್ಯಾಷ್ ಬೆಲೆಯಲ್ಲಿ ರೂ.1420 ಏರಿಸಲಾಗಿದೆ. ಕಾಂಪ್ಲೆಕ್ಸ್ 17-17-17 ರೂ. 450ರಿಂದ ರೂ.1470ಕ್ಕೆ ಏರಿಕೆಯಾಗಿದೆ. ರೈತರು ಇದಕ್ಕೆ ರೂ.1020 ಹೆಚ್ಚು ಪಾವತಿಸಬೇಕು. 2010ರಲ್ಲಿ ಐದೂ ಗೊಬ್ಬರದ ಮೂಟೆ ಖರೀದಿಸಿದರೆ ಒಟ್ಟು 1540 ರೂ.ಗಳಿಗೆ ದೊರಕುತ್ತಿತ್ತು. ಫೆಬ್ರವರಿ 28, 2023 ರಂದು, ಈ ಐದು ರಸಗೊಬ್ಬರಗಳ ಒಂದೊಂದು ಚೀಲ ಖರೀದಿಸಿದರೆ, ರೈತರು ರೂ.5281.50 ಪಾವತಿಸಬೇಕಾಗುತ್ತದೆ. ಅಂದರೆ, ರೂ.3741.50 ಹೆಚ್ಚುವರಿ ಹಣ ಕೊಟ್ಟು ಈಗ ಖರೀದಿಸಬೇಕು.. ಅಂದರೆ ಅದನ್ನು ಖರೀದಿಸಲು ರೈತರು 3.5 ಪಟ್ಟು ಹೆಚ್ಚು ಹಣವನ್ನು ಕೊಡಬೇಕಾಗುತ್ತದೆ. ಇದು ಸರಕಾರ ನಿಗದಿಪಡಿಸಿದ ದರವಾಗಿದ್ದರೆ, ಕಾಳಸಂತೆಯಲ್ಲಿ ಹಾಗೂ ರಸಗೊಬ್ಬರದ ಕೊರತೆಯಿಂದಾಗಿ ಖಾಸಗಿ ಗೊಬ್ಬರದ ಅಂಗಡಿಗಳಿಂದ ಗೊಬ್ಬರದ ನಿಗದಿತ ಬೆಲೆಗಿಂತ 5ರಿಂದ 6 ಪಟ್ಟು ಹೆಚ್ಚು ಹಣ ನೀಡಬೇಕಾಗಿದೆ. ಇದನ್ನು ತಡೆಯುವ ಬದಲು ಒಂದೇ ಹೆಸರಿನಲ್ಲಿ ದೇಶಾದ್ಯಂತ ರಸಗೊಬ್ಬರ ದೊರೆಯುವಂತೆ ಮಾಡುವ ವಿನೂತನ(!) ಯೋಜನೆಯನ್ನು ಪ್ರಧಾನಿ ಘೋಷಿಸಿದ್ದಾರೆ. ನಂತರವೂ ರಸಗೊಬ್ಬರಗಳ ಕೊರತೆ ಎದುರಾಗಿದೆ. ಬೆಲೆಯೂ ಏರಿಕೆಯಾಗಿದೆ.
ಇದನ್ನು ಓದಿ: 500 ಕೆಜಿ ಈರುಳ್ಳಿಗೆ ಸಿಕ್ಕಿದ್ದು ಬರೇ 2 ರೂಪಾಯಿ ಚೆಕ್! ಬೆಲೆ ಕುಸಿತದಿಂದ ತತ್ತರಿಸಿದ ರೈತ
ಮಾತಿನಲ್ಲೇ ಸ್ವರ್ಗ ತೋರಿಸುವ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ಕಾರ್ಯಕ್ರಮದಲ್ಲೂ ರೈತರ ಹೊಸ ಬದುಕಿನ ಬಗ್ಗೆ ಮಾತನಾಡುತ್ತಿರುತ್ತಾರೆ. ಮಾತಿನಲ್ಲೇ ರೈತರಿಗೆ ಸ್ವರ್ಗ ತೋರಿಸುತ್ತಾರೆ. ಮೂರು ಕೃಷಿ ಕಾಯ್ದೆಗಳನ್ನು ತಂದಾಗಲೂ ಅವರು ಇದೇ ರೀತಿ ಮಾತನಾಡಿದ್ದರು. ಒಂಬತ್ತು ವರ್ಷಗಳ ಬಿಜೆಪಿ ಆಡಳಿತದಲ್ಲಿ ಕೃಷಿ ವೆಚ್ಚ ಎಷ್ಟೊಂದು ಹೆಚ್ಚಾಗಿದೆ, ರೈತರು ಕೃಷಿಗೆ ಎಷ್ಟು ಹಣ ವೆಚ್ಚ ಮಾಡಬೇಕು ಎಂಬುದಕ್ಕೆ ರಸಗೊಬ್ಬರ ಬೆಲೆ ಹೆಚ್ಚಳ ಒಂದು ಉದಾಹರಣೆ.
ಇದನ್ನು ಓದಿ: 205 ಕೆಜಿ ಈರುಳ್ಳಿಗೆ ರೈತ ಪಡೆದದ್ದು 8.36 ರೂಪಾಯಿ!
ಏಪ್ರಿಲ್ 5, 2023 ರಂದು ಕಾರ್ಮಿಕರು-ರೈತರ ಬೃಹತ್ ರ‍್ಯಾಲಿ
ರೈತರ ಉತ್ಪನ್ನಗಳಿಗೆ ಅಗತ್ಯವಾದ ಪರಿಕರಗಳು ಕೈಗೆಟಕುವ ಬೆಲೆಗೆ ಸಿಗುತ್ತಿಲ್ಲ. ಕೇಂದ್ರ ಸರ್ಕಾರ ಸೂಚಿಸಿರುವ ಕನಿಷ್ಠ ಬೆಂಬಲ ಬೆಲೆಯಲ್ಲಾದರೂ ಖರೀದಿ ನಡೆಯುತ್ತಿಲ್ಲ. ಸರ್ಕಾರ ಘೋಷಿಸಿದ ಬೆಲೆಯಲ್ಲಿ ಅಕ್ಕಿ ಮತ್ತು ಗೋಧಿಯನ್ನು ಮಾತ್ರ ಕಡಿಮೆ ಪ್ರಮಾಣದಲ್ಲಿ ಖರೀದಿಸಲಾಗುತ್ತದೆ. ಅಕ್ಕಿ, ಗೋಧಿ ಸೇರಿದಂತೆ ಎಲ್ಲ 23 ಬಗೆಯ ಕೃಷಿ ಉತ್ಪನ್ನಗಳನ್ನು ಖಾಸಗಿ ವ್ಯಕ್ತಿಗಳು ತಮ್ಮ ಇಚ್ಛೆಯಂತೆ ಖರೀದಿಸಿ ರೈತರ ಹೊಟ್ಟೆಗೆ ಹೊಡೆಯುತ್ತಿದ್ದಾರೆ. ಕೇಂದ್ರ ಸರ್ಕಾರ ಇದನ್ನು ತಮಾಷೆಯೆಂಬಂತೆ ನೋಡುತ್ತಿದೆ. 2010ರಲ್ಲಿ ಒಂದು ಕೆ.ಜಿ. ಈರುಳ್ಳಿಯನ್ನು ರೂ. 60ಕ್ಕೆ ಖರೀದಿಸಲಾಗುತ್ತಿತ್ತು. ಈಗ 1 ಮತ್ತು 2 ರೂ.ನಲ್ಲಿ ಖರೀದಿ ಮಾಡಲಾಗುತ್ತಿದೆ. ಕೃಷಿ ಉತ್ಪನ್ನಗಳಿಗೆ ರೈತರು ಮಾಡುವ ವೆಚ್ಚವೂ ಅವರಿಗೆ ಸಿಗುತ್ತಿಲ್ಲ. ಆದರೆ ಕೇಂದ್ರ ಸರ್ಕಾರ ಇನ್ನೂ ಇತ್ತ ಗಮನ ನೀಡುತ್ತಿಲ್ಲ. ರೈತರು ಉತ್ಪಾದಿಸುವ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗಲು ಮತ್ತು ರೈತರು ಕೃಷಿಗೆ ಬಳಕೆ ಮಾಡುವ ಪದಾರ್ಥಗಳ ಬೆಲೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಕಾನೂನು ರಚಿಸಬೇಕು ಎಂದು ಒತ್ತಾಯಿಸಿ, ದೇಶದಲ್ಲಿ ರೈತರ ಮತ್ತೊಂದು ಹೋರಾಟ ನಡೆಯುವ ಸಮಯ ದೂರವಿಲ್ಲ. ಅದಕ್ಕೆ ಪೂರ್ವಭಾವಿಯಾಗಿ ಏಪ್ರಿಲ್ 5, 2023 ರಂದು ದೆಹಲಿಯಲ್ಲಿ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ 10 ಲಕ್ಷ ರೈತರು-ಕಾರ್ಮಿಕರು ಪ್ರತಿಭಟನೆ ನಡೆಸಲಿದ್ದಾರೆ. ಈ ಪ್ರತಿಭಟನೆಗೆ ದೇಶದ ಎಲ್ಲ ಭಾಗದ ರೈತರು ಬೆಂಬಲಿಸಬೇಕಾದ ಅಗತ್ಯವಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ