ಈ ಶತಮಾನದ ಕವಿಗಳು

(ಮನು ವಿ. ದೇವದೇವನ್)

ಇತಿಹಾಸ ಪ್ರಾಧ್ಯಾಪಕರು. ಐಐಟಿ ಮಂಡಿ, ಹಿಮಾಚಲ ಪ್ರದೇಶ

 

11 ಜನವರಿ 2022ರಂದು ಕೇರಳದ ಕಣ್ಣೂರು ಜಿಲ್ಲೆಯ ಇರಟ್ಟಿಯಲ್ಲಿ ವಿಶಿಷ್ಟ ಸಮಾರಂಭವೊಂದು ನಡೆಯಿತು. ಗಾರೆಗೆಲಸಕ್ಕೆ ಬಳಕೆಯಾಗುವ ಕೆಂಗಲ್ಲು ಕಡಿಯುವ ಕಾಯಕದ ಜಸ್ಟಿನ್ ಜೆಬಿನ್ ಎಂಬ ನಲವತ್ತು ವರ್ಷದ ಕಾರ್ಮಿಕನ ಕವನ ಸಂಕಲನ ಪ್ರಕಟವಾಯಿತು. ಕೋಝಿಕ್ಕೋಡಿನ ಧ್ವನಿ ಬುಕ್ಸ್ ಹೊರತಂದ “ಮುರಿವುಗಳುಡೆ ಪೋಷಕಂ” (ಗಾಯಗಳ ಪೋಷಣೆ) ಎಂಬ ಮಲಯಾಳಂ ಭಾಷೆಯ ಸಂಕಲನದ ಬಿಡುಗಡೆ ಜಸ್ಟಿನ್‌ರ ಮನೆಯಲ್ಲೇ ನಡೆಯಿತು. ಮಲಯಾಳಂನ ಹಿರಿಯ ಕವಿ ಪವಿತ್ರನ್ ತೀಕ್ಕುನಿ ಕೃತಿಯನ್ನು ಬಿಡುಗಡೆ ಮಾಡಿದರು. ಮೊದಲ ಪ್ರತಿಯನ್ನು ತೀಕ್ಕುನಿಯವರ ಕೈಯಿಂದ ಮೊದಲ ಪ್ರತಿ ಸ್ವೀಕರಿಸಿದ್ದು ಕವಿಯ ಮಗ ಜಸ್ಟಿನ್ ಜೈಸನ್ ಎಂಬ ಶಾಲಾ ವಿದ್ಯಾರ್ಥಿ. ಕುಟುಂಬದ ಸದಸ್ಯರಲ್ಲದೆ ತಮ್ಮ ಬಳಗದ ಏಳೆಂಟು ಮಂದಿ ಕವಿಗಳು ಮಾತ್ರ ಉಪಸ್ಥಿತರಿದ್ದ ಸಮಾರಂಭ ಇದಾಗಿತ್ತು. ಎಲ್ಲರ ಕಣ್ಣುಗಳೂ ತುಂಬಿಬಂದು ಮಾತುಹೊರಡದೆ ಹೋದ ಮುಹೂರ್ತ.

1990ರ ದಶಕದಿಂದ ಈಚೆಗೆ ಭಾರತದ ವಿವಿಧ ಭಾಷೆಗಳ ಸಾರಸ್ವತ ಲೋಕಗಳಲ್ಲಿ ಜರುಗಿದ ಮಹತ್ವದ ಕ್ರಾಂತಿಯೊಂದರ ಸ್ಥಳೀಯ ಅಭಿವ್ಯಕ್ತಿಗಳಲ್ಲಿ ಒಂದು ಇದಾಗಿದೆ. ತಮಿಳು ಮುದ್ರಣಲೋಕದ ಚರಿತ್ರೆಯನ್ನು ಕಳೆದ ನಾಲ್ಕು ದಶಕಗಳಿಂದ ಸಮೀಕ್ಷಿಸುತ್ತ ಬಂದಿರುವ ಖ್ಯಾತ ಇತಿಹಾಸಕಾರ ಎ.ಆರ್. ವೆಂಕಟಾಚಲಪತಿಯವರು ಆಧುನೀಕ ತಮಿಳು ಸಾಹಿತ್ಯ ಕುರಿತು ಅನೇಕ ಸಂದರ್ಭದಲ್ಲಿ ಹೇಳಿರುವ ಮಾತೊಂದಿದೆ. ತಮಿಳಿನ ಸೃಜನಶೀಲ ಸಾಹಿತ್ಯವು ಮುದ್ರಣ ತಂತ್ರಜ್ಞಾನದ ಪ್ರವೇಶವಾದಾಗಿನಿಂದಲೂ ಬ್ರಾಹ್ಮಣ ಹಾಗೂ ಪುರುಷಕೇಂದ್ರಿತವಾಗಿತ್ತು. ಅಲ್ಲಿನ ದೊಡ್ಡ ಬರಹಗಾರರು ಬಹುತೇಕ ಬ್ರಾಹ್ಮಣರು ಹಾಗೂ ಗಂಡಸರು. ತಮಿಳಿನ ನವೋದಯ, ಪ್ರಗತಿಶೀಲ, ನವ್ಯಸಾಹಿತ್ಯಗಳ ರೂವಾರಿಗಳೆಲ್ಲರೂ ಇಂಥ ಹಿನ್ನೆಲೆಯಿಂದಲೇ ಬಂದವರು. ಈ ಅವಸ್ಥೆಯಲ್ಲಿ 1990ರ ನಂತರ ದೂರಗಾಮಿಯಾದ ಪಲ್ಲಟವುಂಟಾಗಿ ಬ್ರಾಹ್ಮಣೇತರ, ಅದರಲ್ಲೂ ವಿಶೇಷವಾಗಿ ದಲಿತ, ಬುಡಕಟ್ಟು, ಕ್ರೈಸ್ತ, ಮುಸ್ಲಿಮ್, ಮಹಿಳಾ ಹಾಗೂ ಲೈಂಗಿಕ ಅಲ್ಪಸಂಖ್ಯಾತ ಲೇಖಕರ ಪ್ರವೇಶವಾಯಿತು. ಆವರೆಗೆ ಮಧ್ಯಮವರ್ಗದ ಓದುಗರಿಗೆ ಅಪರಿಚಿತವಾಗಿದ್ದ ಬದುಕಿನ ಅನುಭವಗಳ ಹೊಸ ಪ್ರಪಂಚಗಳು ತೆರೆದುಕೊಳ್ಳಲು ಇದು ಕಾರಣವಾಯಿತು. ವೆಂಕಟಾಚಲಪತಿ ಹೇಳುವಂತೆ ತಮಿಳು ಸಾಹಿತ್ಯ ವೈವಿದ್ಯಮಯ ಹಾಗೂ ಪ್ರಾತಿನಿಧಿಕವಾಗಿ ಮಾರ್ಪಟ್ಟಿತು.

ಮಲಯಾಳಂನಲ್ಲಿ ತಮಿಳಿನ ಹಾಗೆ ಬ್ರಾಹ್ಮಣರ ಮೇಲುಗೈ ಇರಲಿಲ್ಲ. ಆದರೆ ಅಲ್ಲಿಯೂ ಸಾಹಿತ್ಯವು ದೊಡ್ಡ ಪ್ರಮಾಣದಲ್ಲಿ ನಾಯರ್, ಈಳವ, ಸಿರಿಯನ್ ಕ್ರೈಸ್ತ ಲೇಖಕರ ನಿಯಂತ್ರಣದಲ್ಲಿದ್ದದ್ದು ವಾಸ್ತವ. ಕನ್ನಡ ಹಾಗೂ ಮರಾಠಿ ಭಾಷೆಗಳಲ್ಲಿ ಸಾಹಿತ್ಯವು 1970ರ ದಶಕದಲ್ಲಿಯೇ ಇಂಥ ಹಳೆಯ ಕಟ್ಟಳೆಗಳನ್ನು ಒಡೆಯುವಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯಾಗಿದ್ದವು. ಆದರೆ ಇತರ ಭಾರತೀಯ ಭಾಷೆಗಳಲ್ಲಿ ಈ ಕ್ರಾಂತಿ ಉಂಟಾದದ್ದು 1990ರಿಂದ ಈಚೆಗೆ. ಜಸ್ಟಿನ್ ಜೇಬಿನ್‌ರ ಕವನಸಂಕಲನ ಈ ಐತಿಹಾಸಿಕ ಹಿನ್ನೆಲೆಯಲ್ಲಿ ಪ್ರಕಟವಾಗುತ್ತಿದೆ.

ಪುಸ್ತಕದ ಕವಿ ಜಸ್ಟಿನ್ ಜೆಬಿನ್ ಹಾಗೂ ಕುಟುಂಬದೊಂದಿಗೆ ಹಿರಿಯ ಕವಿ ಪವಿತ್ರನ್ ತೀಕ್ಕುನಿ

ಜಸ್ಟಿನ್ ತಮ್ಮ ಹನ್ನೆರಡನೆಯ ವಯಸ್ಸಿನಲ್ಲೇ ಕಾವ್ಯ ರಚನೆ ಆರಂಭಿಸಿದ್ದರು. ತಮ್ಮ ಶಾಲಾ ದಿನಗಳಲ್ಲಿ ತೀವ್ರ ಬಡತನವನ್ನು ಅನುಭವಿಸಿದವರು ಜಸ್ಟಿನ್. ತಂದೆಯದು ಕೆಂಗಲ್ಲು ಕಡಿಯುವ ಕೆಲಸ. ಇರಟ್ಟಿ ಸುತ್ತಮುತ್ತ ಅಂದು ಹೆಚ್ಚಿನ ಉದ್ಯೋಗಾವಕಾಶಗಳು ಇರಲಿಲ್ಲ. ಈಗಿನಂತೆ ಆಗಲೂ ಒಬ್ಬಾತ ಕೆಂಗಲ್ಲಿನ ಕೆಲಸದಿಂದ ಸಂಸಾರ ನಡೆಸುವುದು ಅಸಾಧ್ಯವೇ ಆಗಿತ್ತು. ಹೀಗಾಗಿ ಪ್ರತಿನಿತ್ಯ ಶಾಲೆ ಬಿಟ್ಟ ಕೂಡಲೆ ಹಾಗೂ ರಜಾದಿನಗಳಲ್ಲಿ ಜಸ್ಟಿನ್ ತಂದೆಯ ಜೊತೆ ಕಲ್ಲು ಕಡಿಯಲು ಹೋಗುತ್ತಿದ್ದರು. ಹೀಗಾಗಿ ಬಾಲ್ಯ ಹಾಗೂ ತಾರುಣ್ಯದ ಗೆಳೆತನಗಳಿಂದ ವಂಚಿತರಾದರು. ಇದರಿಂದ ಉಂಟಾದ ಒಂಟಿತನ ಅವರ ಬದುಕಿನ ಅನಿವಾರ್ಯ ಕೊಂಡಿಗಳಲ್ಲಿ ಒಂದಾಯಿತು. ಸಾಧ್ಯವಾದಾಗಲೆಲ್ಲಾ ಈ ವ್ಯಥೆಯಿಂದ ಪಾರಾಗಲು ಪುಸ್ತಕಗಳನ್ನು ಎರವಲು ಪಡೆದು ಓದತೊಡಗಿದರು. ತನ್ನ ಚಿಕ್ಕಂದಿನ ಬಡತನ ಹಾಗೂ ಒಂಟಿತನವೇ ಹರಳುಗಟ್ಟಿ ಕವಿತೆಯಾದದ್ದು ಎನ್ನುತ್ತಾರೆ ಜಸ್ಟಿನ್.

ಸಣ್ಣಂದಿನಲ್ಲೇ ಬರೆಯತೊಡಗಿದರೂ ಕಾವ್ಯರಚನೆ ನಿರ್ದಿಷ್ಟವಾದ ಗುರಿಯೊಂದನ್ನು ಪಡೆದುಕೊಂಡದ್ದೂ ಬರಹದ ತಂತ್ರ ತಮಗೆ ಸ್ವಾಯತ್ತವಾದದ್ದೂ ಪವಿತ್ರನ್ ತೀಕ್ಕುನಿಯವರ ಕಾವ್ಯವನ್ನು ಓದಿ ಅಧ್ಯಯನ ಮಾಡಿದ ಬಳಿಕ ಮಾತ್ರ ಎಂದು ಜಸ್ಟಿನ್ ಹೇಳುತ್ತಾರೆ. ಜಸ್ಟಿನ್‌ರಂತೆಯೇ ಅಪಾರ ಬಡತನ ಹಾಗೂ ನೋವುಗಳನ್ನು ಅನುಭವಿಸಿದ ಕವಿ ಪವಿತ್ರನ್. ಶಾಲೆಯ ದಿನಗಳಲ್ಲೇ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಪವಿತ್ರನ್ ಸ್ನಾತಕ ಶಿಕ್ಷಣವನ್ನು ಪೂರ್ಣಗೊಳಿಸದೆ ತಂಗಿಯ ಮದುವೆಗೆ ವರದಕ್ಷಿಣೆ ನೀಡಲು ಹಣಕ್ಕೆಂದು ಸ್ವತಃ ವರದಕ್ಷಿಣೆ ಪಡೆದು ವಿವಾಹವಾದರೂ. ಕೊನೆಗೂ ತಂಗಿಯ ವಿವಾಹಜೀವನ ಅತೃಪ್ತಿಕರವಾಗಿಯೇ ಉಳಿಯಿತು. ಪವಿತ್ರನ್ ಮೂರು ದಶಕಗಳ ಕಾಲ ಗಾರೆಗೆಲಸ, ಮೀನು ಮಾರಾಟ, ಹೆಂಡದಂಗಡಿಯ ಮಾಣಿ ಮೊದಲಾದ ಅನೇಕ ವೃತ್ತಿಗಳಲ್ಲಿ ನಿರತರಾಗಿ ಇದೀಗ ಕ್ಯಾಂಟೀನೊಂದರಲ್ಲಿ ಅಡಿಗೆಗೆಲಸಕ್ಕೆ ನಿಂತಿದ್ದಾರೆ. 1999ರ ಓಣಂ ಹಬ್ಬದಂದು ಹೆಂಡತಿ ಹಾಗೂ ಇಬ್ಬರು ಮಕ್ಕಳಿಗೆ ಊಟಕ್ಕಿಲ್ಲದ ಸ್ಥಿತಿ ಉಂಟಾದದ್ದನ್ನು ಪವಿತ್ರನ್ ಸದಾ ನೆನೆಯುತ್ತಾರೆ. ಅಂದು ಸಕುಟುಂಬ ರೈಲಿಗೆ ತಲೆಯಿಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ನಡೆಸಿ ವಿಫಲರಾದರು. ಬದುಕಿನ ತುಂಬ ಇಂಥ ಸಂಘರ್ಷಗಳು ಇದಿರಾದಾಗಲೂ ಕಾವ್ಯರಚನೆಯಲ್ಲಿ ಅದಮ್ಯ ಹುಮ್ಮಸ್ಸನ್ನು ತೋರುತ್ತ ಬಂದಿದ್ದಾರೆ. “ಮುರಿವುಗಳುಡೆ ವಸಂತಂ” (ಗಾಯಗಳ ವಸಂತ), “ರಕ್ತಕಾಂಡಂ” (ರಕ್ತಕಾಂಡ), “ಕತ್ತುನ್ನ ಪಚ್ಚಮರಂಗಳ್ಕಿಡಯಿಲ್” (ಉರಿವ ಹಸಿರು ಮರಗಳ ನಡುವೆ), “ಭೂಪಟಂಗಳಿಲ್ ಚೋರ ಪೆಯ್ಯುನ್ನು” (ಭೂಪಟಗಳಲ್ಲಿ ರಕ್ತ ಸುರಿದಿದೆ), “ವೀಟ್ಟಿಲೇಕ್ಕುಳ್ಳ ವಳಿಗಳ್” (ಮನೆಗೆ ಹೋಗುವ ದಾರಿಗಳು) ಮೊದಲಾದ ಅನೇಕ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಕೃತಿಗಳು ತಮ್ಮ ಪ್ರಾಮಾಣಿಕತೆ ಹಾಗೂ ಅನುಭವಗಳ ತೀವ್ರತೆಯಿಂದಾಗಿ ಮಲಯಾಳಂ ಸಾಹಿತ್ಯದ ದೊಡ್ಡ ಮೈಲಿಗಲ್ಲುಗಳಾಗಿವೆ. ಕೇರಳದ ಕಾವ್ಯಪ್ರಜ್ಞೆಯ ಮೇಲೆ ನಿರ್ಣಾಯಕವಾದ ಪ್ರಭಾವ ಬೀರಿದೆ.

ಇತ್ತೀಚಿನ ವರ್ಷಗಳಲ್ಲಿ ಪ್ರೋತ್ಸಾಹ ಸಿಗದ ಕಾರಣ ಇನ್ನೂ ಬೆಳಕಿಗೆ ಬಾರದೆ ಉಳಿದಿರುವ ಕವಿಗಳನ್ನು ಗುರುತಿಸಿ ಅವರ ಕೃತಿಗಳನ್ನು ಪ್ರಕಟಪಡಿಸುವ ಕಾರ್ಯವನ್ನು ತಮ್ಮ ಬದುಕಿನ ಗುರಿಯಾಗಿಸಿಕೊಂಡಿದ್ದಾರೆ ಪವಿತ್ರನ್. ಈ ರೀತಿ ಅವರ ಪ್ರಯತ್ನದಿಂದ ಓದುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾದ ಕವಿಗಳಲ್ಲಿ ಒಬ್ಬರು ಶರತ್ ಬಾಬು ಪೇರಾವೂರ್. “ಪರದೇಶಿಯುಡೆ ಸುವಿಶೇಷಂಗಳ್” (ಪರದೇಶಿಯ ಸುವಾರ್ತೆಗಳು), “ಉನ್ಮಾದಂಗಳಿಲೇಕ್ಕು ತುರನ್ನಿಟ್ಟ ವಾದಿಲುಗಳ್” (ಉನ್ಮಾದಗಳ ಕಡೆಗೆ ತೆರೆದಿಟ್ಟ ಬಾಗಿಲುಗಳು) ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ ಶರತ್ ಬಾಬು. ಪವಿತ್ರನ್ 2021ರಲ್ಲಿ ಆರಂಭಿಸಿದ ಎರಡು ವಾಟ್ಸ್ ಆಪ್ ಗ್ರೂಪ್‌ಗಳಲ್ಲಿ ತಮ್ಮ ಕಾವ್ಯ ಎಂದಾದರೊಮ್ಮೆ ಪ್ರಕಟವಾಗಬಹುದೆಂಬ ಅಭಿಲಾಶೆ ಹೊಂದಿರುವ ನಾನೂರಕ್ಕೂ ಹೆಚ್ಚು ಕವಿಗಳಿದ್ದಾರೆ. ದುಡಿಯುವ ವರ್ಗದಿಂದ ಬಂದ ಕಾರಣವೋ ಏನೋ, ಇವರೆಲ್ಲ ಪ್ರಗತಿಶೀಲ ಹಾಗೂ ಎಡಪಂಥಿ ವಿಚಾರಧಾರೆಯ ಜೊತೆ ತಮ್ಮನ್ನು ಗುರುತಿಸಿಕೊಂಡವರು. ಶರತ್ ಬಾಬುವಿನಂತ ಕೆಲವರು ಸಿಪಿಐ(ಎಂ) ಪಕ್ಷದ ಸದಸ್ಯರೂ ಆಗಿದ್ದಾರೆ.

ಪುಸ್ತಕ ಪ್ರಕಟಣೆಗೆ ಬೇಕಾದ ಹಣವನ್ನು ಪವಿತ್ರನ್ ಸ್ನೇಹಿತರಿಂದ ಹಾಗೂ ಹಿತೈಷಿಗಳಿಂದ ಸಂಗ್ರಹಿಸುತ್ತಾರೆ. ಜಸ್ಟಿನ್‌ರ ಪುಸ್ತಕ ಪ್ರಕಟವಾದದ್ದೂ ಈ ರೀತಿಯಲ್ಲಿಯೇ. ಸಹೃದಯರಾದ ಸ್ನೇಹಿತರು ತಮ್ಮ ಶಕ್ತ್ಯಾನುಸಾರ ನೀಡಿದ ಹಣದಿಂದ ಮುದ್ರಣಕ್ಕೆ ಖರ್ಚಾದ 18,000 ರೂಗಳನ್ನು ಸಂಗ್ರಹಿಸಲಾಯಿತು. ಪವಿತ್ರನ್ ಪತ್ತೆ ಹಚ್ಚಿದ ಕವಿಗಳ ಪೈಕಿ ಬಹುಶಃ ಅತ್ಯಂತ ಸೃಜನಶೀಲ ಹಾಗೂ ಪ್ರಭಾವಶಾಲಿಯಾದ ಶಬ್ದ ಜಸ್ಟಿನ್‌ರದು. ಮುಂದಿನ ದಿನಮಾನಗಳಲ್ಲಿ ಪವಿತ್ರನ್‌ರ ಹಾಗೆ ಮಲಯಾಳಂ ಕಾವ್ಯದಲ್ಲಿ ಹೊಸ ಸೌಂದರ್ಯಪ್ರಜ್ಞೆಯನ್ನು ಕಟ್ಟಿಕೊಡಬಲ್ಲ ಸಾಮರ್ಥ್ಯ ಹೊಂದಿರುವ ಕವಿ ಇವರು ಎಂದರೆ ಅತಿಶಯೋಕ್ತಿಯಾಗಲಾರದು.

ಇರಟ್ಟಿಯಲ್ಲಿ ನಡೆದ ಪುಸ್ತಕಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದವರ ಸಂಖ್ಯೆ ಹದಿನೈದಕ್ಕೂ ಕಡಿಮೆ. ಆದರೆ ಅಲ್ಲಿ ಅನಾವರಣಗೊಂಡದ್ದು ನಮ್ಮ ಯುಗದ ಸಾರಭೂತ ಚಾರಿತ್ರಿಕ ಪಲ್ಲಟವೊಂದರ ಮಹತ್ವದ ದೃಶ್ಯಗಳಲ್ಲಿ ಒಂದು.

Donate Janashakthi Media

Leave a Reply

Your email address will not be published. Required fields are marked *