ಗುರುರಾಜ ದೇಸಾಯಿ
ಕೊರೊನಾ ಬಳಿಕ ರಾಜ್ಯದಲ್ಲಿ 50 ಸಾವಿರ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಶಾಲೆ ಆರಂಭವಾಗಿ ತಿಂಗಳು ಕಳೆಯುತ್ತಿದ್ದರೂ ಮಕ್ಕಳು ಶಾಲೆಗೆ ಬರುತ್ತಿಲ್ಲ ಎಂಬ ಆತಂಕಕಾರಿ ವಿಚಾರ ಬಯಲಾಗಿದೆ.
ಶಿಕ್ಷಣ ಇಲಾಖೆಯ ಸಮೀಕ್ಷೆಯಿಂದಲೆ ಈ ಅಂಶ ಬೆಳಕಿಗೆ ಬಂದಿದೆ. 2020-21ನೇ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆ ಜಂಟಿಯಾಗಿ ಮನೆ ಮನೆ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗುಳಿದು ಕೆಲಸದಲ್ಲಿ ತೊಡಗಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಕೋವಿಡ್‌ನಿಂದ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಕೆಲವು ಕುಟುಂಬಗಳಿಗೆ ಮಕ್ಕಳ ದುಡಿಮೆ ಕೂಡ ಜೀವನಾಧಾರವಾಗಿದೆ. ಕೆಲ ಮಕ್ಕಳು ಶಾಲೆಯನ್ನು ಮರೆತುಬಿಟ್ಟಿದ್ದಾರೆ. ಮಕ್ಕಳು ಹಾಗೂ ಪಾಲಕರ ನಿರಾಸಕ್ತಿಯೂ ಶಾಲೆಯಿಂದ ಮಕ್ಕಳು ಹೊರಗುಳಿಯಲು ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ.
ಸ್ಥಳೀಯ ಸಂಸ್ಥೆಗಳ ಮೂಲಕ ನಡೆಸಿದ ಮನೆ ಮನೆ ಸಮೀಕ್ಷೆಯಲ್ಲಿ ರಾಜ್ಯದಲ್ಲಿ 56605 ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಪತ್ತೆಯಾಗಿದೆ. ಇವರಲ್ಲಿ 22,194 ಮಕ್ಕಳು ಶಾಲೆಗೆ ನೋಂದಣಿ ಮಾಡಿಲ್ಲ. 34411 ಮಕ್ಕಳು ಅರ್ಧಕ್ಕೆ ಶಾಲೆ ಬಿಟ್ಟಿದ್ದಾರೆ. ಈ ಪೈಕಿ 19,336 ಮಕ್ಕಳು 6ರಿಂದ 14 ವರ್ಷದವರಾಗಿದ್ದರೆ 15,075 ಮಕ್ಕಳು 14ರಿಂದ 16 ವರ್ಷದವರು. ಮಕ್ಕಳು ಶಾಲೆಯಿಂದ ಹೊರ ಗುಳಿಯಲು ವೈದ್ಯಕೀಯ, ಆರ್ಥಿಕ, ಕೌಟುಂಬಿಕ ಸಮಸ್ಯೆಗಳೇ ಕಾರಣ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.
ಶಾಲೆಯಿಂದ ಹೊರಗುಳಿದವರು : ಬಾಗಲಕೋಟೆ-763, ಬಳ್ಳಾರಿ-1,279, ಬಿಬಿಎಂಪಿ-6,608, ಬೆಳಗಾವಿ-1,265, ಬೆಂಗಳೂರು-527, ಬೆಂಗಳೂರು ಗ್ರಾಮಾಂತರ – 489, ಬೀದರ್- 2,609, ಚಾಮರಾಜ ನಗರ-481, ಚಿಕ್ಕಬಳ್ಳಾಪುರ- 441, ಚಿಕ್ಕಮಗ ಳೂರು-534, ಚಿತ್ರದುರ್ಗ-1,587, ದಕ್ಷಿಣ ಕನ್ನಡ-195, ದಾವಣಗೆರೆ-790, ಧಾರವಾಡ-1,463, ಗದಗ- 505, ಹಾಸನ- 772, ಹಾವೇರಿ-753, ಕಲಬುರಗಿ-2,129, ಕೊಡಗು-311, ಕೋಲಾರ- 338, ಕೊಪ್ಪಳ- 1,159, ಮಂಡ್ಯ-779, ಮೈಸೂರು-751, ರಾಯಚೂರು-1,966, ರಾಮನಗರ-540, ಶಿವಮೊಗ್ಗ-1,046, ತುಮಕೂರು-890, ಉಡುಪಿ-172, ಉತ್ತರ ಕನ್ನಡ-509, ವಿಜಯಪುರ-1,152, ಯಾದಗಿರಿ-1,608 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.
ಎಲ್ಲಿದೆ ಶಿಕ್ಷಣ ಹಕ್ಕು ಕಾಯ್ದೆ : ಸಂವಿಧಾನದ ಪ್ರಕಾರ 6-14 ವರ್ಷದೊಳಗಿನ ಎಲ್ಲ ಮಕ್ಕಳು ಶಾಲಾಶಿಕ್ಷಣ ಪಡೆಯುವುದು ಮೂಲ ಹಕ್ಕು. ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಟಿಇ) ನಿಯಮ 6ರ ಪ್ರಕಾರ ಸ್ಥಳೀಯ ಪ್ರಾಧಿಕಾರಗಳು ತಮ್ಮ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಿ 0–14 ವಯಸ್ಸಿನ ಮಕ್ಕಳ ದಾಖಲೆಯನ್ನು ನಿರ್ವಹಿಸಬೇಕು. ಅದರಲ್ಲಿ 6 ರಿಂದ 14 ವರ್ಷದೊಳಗಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು.
ಈಗಾಗಲೇ ಚರ್ಚಿಸಿದಂತೆ ರಾಷ್ಟ್ರದ ಸುಸ್ಥಿರ ಅಭಿವೃದ್ದಿ, ವೈಯಕ್ತಿಕ ಪ್ರಗತಿ, ನಿಸರ್ಗ ಪೂರಕ ಜೀವನಕ್ಕೆ ಶಿಕ್ಷಣವೇ ತಳಹದಿಯಾದ್ದರಿಂದ ಯಾವ ಮಗುವೂ ಶಾಲೆಯಿಂದ ಹೊರಗಿದ್ದು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ನಮ್ಮ ನೈತಿಕ, ವೃತ್ತಿಪರ ಹಾಗೂ ಮೂಲಭೂತ ಕರ್ತವ್ಯವಾಗಿದೆ. ಆದರೆ ಈಗಲೂ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಗಣನೀಯವಾಗಿದೆ ಕುಸಿಯುತ್ತಿದೆ. ಶಾಲೆಯಿಂದ ಹೊರಗುಳಿದ ಮಕ್ಕಳ ಅಂಕಿ ಅಂಶಗಳು ಮತ್ತು ಅವುಗಳ ಗಂಭೀರತೆಯನ್ನು ಸೂಚಿಸುತ್ತದೆ.
ನೀತಿ, ಕಾನೂನು ಮತ್ತು ಕಾರ್ಯಕ್ರಮಗಳು ಮಕ್ಕಳ ಪರವಾಗಿದ್ದರೆ ಸಾಕು ಅದು ಮಕ್ಕಳಿಗೆ ದಕ್ಕುತ್ತದೆ ಎಂದು ಹೇಳುವುದು ಕಷ್ಟಸಾಧ್ಯ. ಸಂವಿಧಾನ ಮಕ್ಕಳಿಗೆ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಕೊಡಮಾಡಿದರು, ಅದನ್ನು ಜಾರಿಗೊಳಿಸಬೇಕಾದ ಅಧಿಕಾರಶಾಹಿ ಮತ್ತು ಸಂಬಂಧಿಸಿದ ಇಲಾಖೆಗಳು ಹಕ್ಕನ್ನು ಸಾಕಾರಗೊಳಿಸುವ ಬದ್ಧತೆ ಮತ್ತು ಇಚ್ಛಾಶಕ್ತಿ ಪ್ರದರ್ಶಿಸದಿದ್ದರೆ, ಅದು ಕೇವಲ ಸಂವಿಧಾನ ಮತ್ತು ಕಾನೂನಿನ ಪುಸ್ತಕದಲ್ಲಿ ಮಾತ್ರ ಹಕ್ಕಾಗಿ ಉಳಿದುಬಿಡುತ್ತದೆ ಎಂಬುದು ಅಕ್ಷರಶಃ ನಿಜ. ಈಗ ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಶಿಕ್ಷಣ ಇಲಾಖೆ ತೋರುತ್ತಿರುವ ಕಾಳಜಿ ನೋಡಿದರೆ ಅದು ನಮಗೆ ಗೊತ್ತಗುತ್ತದೆ.
ಈ ದೇಶದ ಪ್ರತಿಯೊಬ್ಬ ನಾಗರೀಕನಿಗೂ ಜೀವಿಸುವ ಮೂಲಭೂತ ಹಕ್ಕಿದೆ. ಹಾಗೆ ಜೀವಿಸಿದ್ದಾರೆಂದರೆ ಅವರಿಗೆ ಶಿಕ್ಷಣವನ್ನು ಒದಗಿಸಲೇ ಬೇಕಾದ ಜವಾಬ್ದಾರಿ ಸಮಾಜದ, ಕಾರ್ಯಾಂಗದ ಮೇಲಿದೆ. ಆದ್ದರಿಂದಲೇ ಶಿಕ್ಷಣ ಜೀವಿಸುವ ಹಕ್ಕಿನ ಅವಿಭಾಜ್ಯ ಅಂಗವಾಗಿದೆ. ಜೀವಿಸುವ ಹಕ್ಕು ಮೂಲಭೂತ ಹಕ್ಕಾದರೆ ಶಿಕ್ಷಣ ಪಡೆಯುವ ಹಕ್ಕು ಕೂಡ ಪ್ರತಿ ನಾಗರೀಕರ ಮೂಲಭೂತ ಹಕ್ಕು. 1950 ರಲ್ಲಿ ಅಳವಡಿಸಿಕೊಳ್ಳಲಾದ ಭಾರತದ ಸಂವಿಧಾನದಲ್ಲಿ ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣವು ರಾಜ್ಯ ನಿರ್ದೇಶಕ ತತ್ವದ ಭಾಗವಾಗಿತ್ತು. ಸಂವಿಧಾನದ 45 ನೇ ವಿಧಿಯ ಪ್ರಕಾರ ದೇಶದ ಸಂವಿಧಾನ ಜಾರಿಯಾದ 10 ವರ್ಷದ ಅವಧಿಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು 14 ವರ್ಷದ ವಯೋಮಾನದವರೆಗಿನ ಎಲ್ಲ ಮಕ್ಕಳಿಗೂ ನೀಡಬೇಕೆಂಬ ಆಶಯವನ್ನು ಹೊಂದಲಾಗಿತ್ತಾದರೂ ಈ ಪ್ರಯತ್ನದಲ್ಲಿ ಇದುವರೆಗೂ ಪರಿಪೂರ್ಣವಾದ ಯಶಸ್ಸು ಸಾಧ್ಯವಾಗಿರಲಿಲ್ಲ. ಸಂವಿಧಾನದ 4ನೇ ಭಾಗದಲ್ಲಿ ಅನುಚ್ಛೇದ 45ನ್ನು ರಾಜ್ಯ ನಿರ್ದೇಶಕ ತತ್ವಗಳನ್ನಾಗಿ ಪರಿಗಣಿಸಿರುವುದರಿಂದ ಇವುಗಳಿಗೆ ಕಾನೂನಿನ ಮನ್ನಣೆ ನೀಡಲು ಸಂವಿಧಾನಾತ್ಮಕವಾಗಿ ಅವಕಾಶವಿರಲಿಲ್ಲ. ವಿಶ್ವಸಂಸ್ಥೆಯ ಅಂಗವಾದ ಯುನೆಸ್ಕೋ ತನ್ನ ಸದಸ್ಯ ರಾಷ್ಟ್ರಗಳಲ್ಲಿ ಶಿಕ್ಷಣದ ಹಕ್ಕಿಗಾಗಿ ಕೆಲವು ನಿಯಮಗಳನ್ನು ಹಾಕಿದೆ. ಇದರಲ್ಲಿ ಪರಿಚ್ಛೇದ 4ರ ಪ್ರಕಾರ ಪ್ರಾಥಮಿಕ ಶಿಕ್ಷಣವು ಉಚಿತ ಹಾಗು ಕಡ್ಡಾಯವಾಗಿರಬೇಕೆಂದು ಒತ್ತಿ ಹೇಳಿದೆ. ಅದೇ ರೀತಿ ಪರಿಚ್ಛೇದ 13 ಮತ್ತು 28 ಕೂಡ ಪ್ರಾಥಮಿಕ ಶಿಕ್ಷಣವು ಒಂದು ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿವೆ.
ಮಗು ಶಾಲೆ ದೂರ ಅಥವಾ ತನ್ನ ವಾಸಸ್ಥಳದ ನೆರೆಹೊರೆಯಲ್ಲಿ ಶಾಲೆ ಲಭ್ಯವಿಲ್ಲವೆಂಬ ಕಾರಣಕ್ಕೆ ಪ್ರಾಥಮಿಕ ಶಿಕ್ಷಣದಿಂದ ವಂಚಿತವಾಗದಂತೆ ಮಾಡುವುದು ಆಯಾ ಸರ್ಕಾರಗಳ ಆದ್ಯ ಕರ್ತವ್ಯವೆಂದು ಯುನೆಸ್ಕೋ ಹೇಳಿದೆ. ವರ್ಣ, ಜಾತಿ, ಧರ್ಮ, ಲಿಂಗ, ಭಾಷೆ, ರಾಜಕೀಯ ಅಥವಾ ಬೇರೆ ಯಾವುದೇ ತಾರತಮ್ಯವಿಲ್ಲದಂತೆ ಮಗುವಿಗೆ ವಿದ್ಯಾಭ್ಯಾಸವನ್ನು ಒದಗಿಸಬೇಕೆಂದು ಯುನೆಸ್ಕೋ ಒತ್ತಿ ಹೇಳಿದೆ. ಈ ಹಿನ್ನೆಲೆಯಲ್ಲಿ ವಯಸ್ಕರಿಗೆ ಮಕ್ಕಳ ಶಿಕ್ಷಣದ ಹಕ್ಕುಗಳ ಬಗ್ಗೆ ಸಾಮಾನ್ಯ ಜ್ಞಾನವಿದೆ ಎಂದಿಟ್ಟುಕೊಳ್ಳೋಣ. ಆದರೆ ಮಕ್ಕಳಿಗೆ ತಮ್ಮ ಹಕ್ಕುಗಳ ಬಗ್ಗೆ ತಿಳಿದಿಲ್ಲ. ಮಕ್ಕಳ ಹಕ್ಕುಗಳನ್ನು ನಿರ್ಲಕ್ಷಿಸುತ್ತಾ ಬದುಕುವವರೇ ಬಹಳ ಮಂದಿ. ಹೀಗಿರುವಾಗ ನಮ್ಮ ಸುತ್ತ-ಮುತ್ತ ಎಲ್ಲಿ ನೋಡಿದರೂ ಲಕ್ಷಾಂತರ ಸಂಖ್ಯೆಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶಾಲೆ ಕಾಣದ ಮಕ್ಕಳು ಯಾರದೋ ಒತ್ತಡದಿಂದಾಗಿ ಸಾಗಣೆ-ಮಾರಾಟಕ್ಕೀಡಾಗುವ, ಚಿಕ್ಕ ವಯಸ್ಸಿನಲ್ಲಿಯೇ ಬಾಲ್ಯ ಕಳೆದುಕೊಂಡು ವಯಸ್ಕರಂತೆ ಬಾಳುವುದು, ಪೋಷಕರ ನಿರ್ಲಕ್ಷ್ಯ, ಆರ್ಥಿಕ ದುರ್ಬಲತೆ, ಸಮುದಾಯದ ಅಸಡ್ಡೆ, ಹೀಗೆ ಯಾವುದೋ ಒಂದು ಕಾರಣದಿಂದ ಶಿಕ್ಷಣದ ಹಾದಿಯನ್ನೇ ತುಳಿಯದೆ ದೂರವಿರುವುದು ಕಟುಸತ್ಯ.
ಈ ಹಿಂದೆ ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ಅನುಷ್ಟಾನಗೊಳಿಸಲಾದ ಶಿಕ್ಷಣದ ನಿಲುವುಗಳು ಯಾವುದೇ ರೀತಿಯಲ್ಲಿ 6 ರಿಂದ 14 ವಯೋಮಾನದ ಮಕ್ಕಳ ಶೈಕ್ಷಣಿಕ ಹಿತಾಸಕ್ತಿಗೆ ದಕ್ಕೆಯುಂಟುಮಾಡುವ ವ್ಯಕ್ತಿ ಅಥವಾ ಸಮುದಾಯದ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸುವಂತಹ ಸ್ಪಷ್ಟ ನಿಯಮಗಳನ್ನು ರೂಪಿಸಿರಲಿಲ್ಲವೆಂಬುದೂ ಸಹ ಸತ್ಯ. ರಾಷ್ಟ್ರದ ಸುಸ್ಥಿರ ಅಭಿವೃದ್ದಿ, ವೈಯಕ್ತಿಕ ಪ್ರಗತಿ, ನಿಸರ್ಗ ಪೂರಕ ಜೀವನಕ್ಕೆ ಶಿಕ್ಷಣವೇ ತಳಹದಿಯಾದ್ದರಿಂದ ಯಾವ ಮಗುವೂ ಶಾಲೆಯಿಂದ ಹೊರಗಿದ್ದು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ನಮ್ಮ ನೈತಿಕ, ವೃತ್ತಿಪರ ಹಾಗೂ ಮೂಲಭೂತ ಕರ್ತವ್ಯವಾಗಿದೆ ವರ್ಷಗಳಿಗಿಂತ ಹೆಚ್ಚು ಕಾಲ ಮಕ್ಕಳು ಶಾಲೆಯಿಂದ ಹೊರಗುಳಿದಿರುವುದರಿಂದ, ಕೆಲವು ಮಕ್ಕಳು ಶಾಲೆಗೆ ಹಿಂತಿರುಗದಿರುವ ಬಗ್ಗೆ ಮತ್ತು ಸಂಭಾವ್ಯ ಕಲಿಕಾ ನಷ್ಟದ ಬಗ್ಗೆ ಆತಂಕ ಹೆಚ್ಚುತ್ತಿದೆ. ಓದುವಂತಹ ಮೂಲಭೂತ ಕೌಶಲ್ಯಗಳನ್ನು ಪಡೆಯಲು ಆರಂಭಿಸಿರುವ ಮತ್ತು ಆನ್‌ಲೈನ್ ಶಿಕ್ಷಣಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯವುಳ್ಳ ಚಿಕ್ಕ ಮಕ್ಕಳಿಗೆ ಈ ಆತಂಕ ನಿಜವಾಗಬಹುದು. ಇನ್ನು, ಓದುವಂತಹ ಮೂಲಭೂತ ಕೌಶಲ್ಯಗಳ ಕೊರತೆ ಉಂಟಾದರೆ, ಭವಿಷ್ಯದಲ್ಲಿ ಶಾಲಾ ಪಠ್ಯಕ್ರಮ ಓದುವ ಮಕ್ಕಳ ಸಾಮರ್ಥ್ಯದ ಮೇಲೂ ಪರಿಣಾಮ ಬೀರುತ್ತದೆ ಎಂಬುದನ್ನು ಮರೆಯಬಾರದು
Reality news …
ಶಾಲೆ ಬಿಟ್ಟ ಮಕ್ಕಳ ಬಗ್ಗೆ ಪರಿಣಾಮಗಳು