ಕೋಲ್ಕತ್ತಾ: ವಿದ್ಯಾರ್ಥಿ ಸಂಘಗಳ ಚುನಾವಣೆಯನ್ನು ತಕ್ಷಣ ನಡೆಸುವಂತೆ ಒತ್ತಾಯಿಸಿ ಎಸ್‌ಎಫ್‌ಐ ಪಶ್ಚಿಮ ಬಂಗಾಳ ರಾಜ್ಯ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶನಿವಾರ ಇಲ್ಲಿನ ಜಾದವ್‌ಪುರ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿ, ಪಶ್ಚಿಮ ಬಂಗಾಳ ಕಾಲೇಜು ಮತ್ತು ವಿಶ್ವವಿದ್ಯಾಲಯ ಪ್ರಾಧ್ಯಾಪಕರ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಅಲ್ಲಿಗೆ ಹೋದ ಶಿಕ್ಷಣ ಸಚಿವ ಬ್ರಾತ್ಯ ಬಸು ಅವರನ್ನು ಘೇರಾವ್ ಹಾಕಿದ ಘಟನೆ ಜರುಗಿದೆ.
ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಮಾತನಾಡಲು ಪ್ರಯತ್ನಿಸಿದ ಮತ್ತು ಅವರ ಮನವಿ ಪತ್ರವನ್ನು ಸ್ವೀಕರಿಸಿದ ಬಸು ಅವರನ್ನು ಪ್ರತಿಭಟನಾಕಾರರು ಘೇರಾವ್ ಹಾಕಿದರು. ಆದರೆ ಪರಿಸ್ಥಿತಿ ಕೈಮೀರಿ ವಿದ್ಯಾರ್ಥಿಗಳು ಸಚಿವರ ಕಾರಿಗೆ ಮುತ್ತಿಗೆ ಹಾಕಿ ಘೋಷಣೆಗಳನ್ನು ಕೂಗಲಾರಂಭಿಸಿದರು.
ಇದನ್ನೂ ಓದಿ: ಕುಡಿದ ಅಮಲಿನಲ್ಲಿ ತನ್ನ ಮನೆಗೆ ತಾನೇ ಬೆಂಕಿಯಿಟ್ಟ ವ್ಯಕ್ತಿ: ಇಡೀ ಮನೆ ಬೆಂಕಿಗಾಹುತಿ
ವಿದ್ಯಾರ್ಥಿ ಸಂಘದ ಚುನಾವಣೆಯನ್ನು ಆದಷ್ಟು ಬೇಗ ನಡೆಸಬೇಕೆಂಬ ಏಕೈಕ ಬೇಡಿಕೆಯೊಂದಿಗೆ ವಿದ್ಯಾರ್ಥಿಗಳು ಬಸು ಅವರೊಂದಿಗೆ ಚರ್ಚೆ ನಡೆಸಲು ಬಯಸಿದ್ದಾರೆ ಎಂದು ಎಸ್‌ಎಫ್‌ಐ ನಾಯಕಿ ಕೌಶಿಕಿ ಭಟ್ಟಾಚಾರ್ಯ ಹೇಳಿದರು.
“ನಾವು ಹಿಂಸೆಯನ್ನು ನಡೆಸಿಲ್ಲ. ಟಿಎಂಸಿಯ ಹೊರಗಿನವರು ಕ್ಯಾಂಪಸ್‌ನಲ್ಲಿರುವ ಅವರ ಕೆಲವು ಸಹಾನುಭೂತಿಗಾರರೊಂದಿಗೆ ಸೇರಿಕೊಂಡು ನಮ್ಮ ಕಾರ್ಯಕರ್ತರ ಮೇಲೆ ದಾಳಿ ಮಾಡಿ ನಮ್ಮ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ” ಎಂದು ಅವರು ಹೇಳಿದರು.
ಇದನ್ನೂ ನೋಡಿ: ವಿಶ್ವವಿದ್ಯಾಲಯಗಳ ಸ್ಥಾಪನೆ, ಮುಚ್ಚುವಿಕೆಯ ರಾಜಕೀಯ ಮೇಲಾಟ, ಬಲಿಪಶುಗಳಾದ ವಿದ್ಯಾರ್ಥಿಗಳು….