ಶಿಕ್ಷಣವನ್ನೂ ಗ್ಯಾರಂಟಿ ಯೋಜನೆಗೆ ಸೇರಿಸಿ – ಸರ್ಕಾರಕ್ಕೆ ಪ್ರೊ. ಬರಗೂರು ಸಲಹೆ

ಕೋಲಾರ: ಶಿಕ್ಷಣವನ್ನು ಆದ್ಯತೆಯನ್ನಾಗಿ ಪರಿಗಣಿಸಿ ಅದನ್ನು ಕೂಡಾ ಗ್ಯಾರಂಟಿ ಯೋಜನೆಗಳ ಪಟ್ಟಿಗೆ ಸೇರಿಸಬೇಕಾಗಿದೆ ಎಂದು ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ರಾಜ್ಯ ಸರ್ಕಾರವನ್ನು ಮಂಗಳವಾರ ಒತ್ತಾಯಿಸಿದರು. ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ, ಜಿಲ್ಲೆಯ ಪ್ರೌಢಶಾಲೆಗಳಲ್ಲಿ ಕನ್ನಡ ಭಾಷೆ ಬೋಧಿಸುವ ಶಿಕ್ಷಕರಿಗೆ ಒಂದು ದಿನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯವನ್ನು ಹಸಿವು ಮುಕ್ತ ಮಾಡಿದಂತೆ ಅನಕ್ಷರಸ್ಥ ‌ಮುಕ್ತ‌ ರಾಜ್ಯವಾಗಿ ಮಾಡಬೇಕು ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದರು.

ಕಾರ್ಯಗಾರದಲ್ಲಿ ಮಾತನಾಡಿದ ಅವರು, “ಸರಕಾರವು ಬಡವರ ಅಭಿವೃದ್ಧಿಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ಅದರ ಬಗ್ಗೆ ನಮ್ಮ ವಿರೋಧವಿಲ್ಲ. ಆದರೆ ಅವುಗಳಿಂದ ಶಿಕ್ಷಣ ಕ್ಷೇತ್ರವನ್ನು ಅನಾಥ ಮಾಡಲಾಗುತ್ತಿದ್ದು, ಮೂಲಸೌಕರ್ಯ ಕೊರತೆಗಳು ಇದೆ. ಸರಕಾರ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮುಂದಿನ ಎರಡು ವರ್ಷಗಳ ಸಮಯ ಬೇಕಿದ್ದರೆ ತೆಗೆದುಕೊಳ್ಳಲಿ, ಆದರೆ ಕ್ರಮಬದ್ದವಾದ ಕ್ರಿಯಾ ಯೋಜನೆ ರೂಪಿಸಿಕೊಂಡು ಶಿಕ್ಷಣ ಕ್ಷೇತ್ರದ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ ನೀಡಬೇಕಾಗಿದೆ” ಎಂದು ಹೇಳಿದರು.

ಇದನ್ನೂ ಓದಿ: ಮನುಷ್ಯತ್ವ ಇಲ್ಲದವರು ಸಾರ್ವಜನಿಕ ಸೇವೆಗೆ ಬರಬಾರದು: ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ

“ರಾಜ್ಯಾದ್ಯಂತ ಶಿಕ್ಷಣ ಇಲಾಖೆಯಲ್ಲಿ ಒಂದನೇ ತರಗತಿಯಿಂದ ಪಿಯುಸಿವರೆಗೆ ಸುಮಾರು 52,700 ಹುದ್ದೆ ಖಾಲಿ ಇವೆ. ಶಿಕ್ಷಣ ಇಲಾಖೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಪರಿಹಾರ ಹುಡುಕಬೇಕು. ರಾಜ್ಯದಲ್ಲಿ ಹಸಿವು ಮುಕ್ತ ಮಾಡಿದಂತೆ ಅನಕ್ಷರಸ್ಥ ‌ಮುಕ್ತ‌ ರಾಜ್ಯವಾಗಿ ಮಾಡಬೇಕು. ಕಾಯಂ ಅಧ್ಯಾಪಕರನ್ನು ನೇಮಿಸಿಕೊಳ್ಳಬೇಕು. ಈಗಿರುವ ಅತಿಥಿ ಶಿಕ್ಷಕರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಸರ್ಕಾರಿ ಶಾಲೆಗೆ ಮಕ್ಕಳು ಹುಡುಕಿಕೊಂಡು ಬರಬೇಕು. ಇದನ್ನು ಯಾವುದೇ ಸರ್ಕಾರ‌ಗಳು ಕೂಡ ಇದುವರೆಗೂ ಆದ್ಯತವಾಗಿ ಪರಿಗಣಿಸಿಲ್ಲ. ಕೂಡಲೇ ಸಿದ್ದರಾಮಯ್ಯ ಸರಕಾರ ಶಿಕ್ಷಣ ಕ್ಷೇತ್ರವನ್ನು ಆಧ್ಯತೆಯಾಗಿ ಪರಿಗಣಿಸಬೇಕು” ಎಂದು ಬರಗೂರು ಆಗ್ರಹಿಸಿದರು.

“ಹಿಂದೆ ಶಿಕ್ಷಣ ಸೇವಾ ಕ್ಷೇತ್ರ ಎಂದು ಆರಂಭಿಸಲಾಗಿತ್ತು. ಈಗ ಶಿಕ್ಷಣ ಸೇವಾ ಕ್ಷೇತ್ರ ಆಗಿಲ್ಲ. ಈಗ ಶಿಕ್ಷಣ ಉದ್ಯಮವಾಗಿದೆ. ಶಿಕ್ಷಣ ತಜ್ಞರ ಸಂಖ್ಯೆ ಹೆಚ್ಚಿದೆ. ಆದರೆ ಶಿಕ್ಷಣ ಸಂಸ್ಥೆ ನಡೆಸುವವರೇ ಶಿಕ್ಷಣ ತಜ್ಞರಾಗಿರುವುದು ವಿಪರ್ಯಾಸವಾಗಿದೆ. ಶಿಕ್ಷಣ ಪರಿಭಾಷೆ ಗ್ಯಾಟ್‌ ಒಪ್ಪಂದದಿಂದಾಗಿ ಬದಲಾಗಿದೆ. ಮೌಲ್ಯ ಹೇಳುವುದು‌ ನಿಜವಾದ ಶಿಕ್ಷಣ. ಪ್ರಾಧ್ಯಾಪಕರು ಹೆಚ್ಚಿದ್ದು,‌ ಮೇಷ್ಟ್ರು ಗಳು ಕಡಿಮೆ ಆಗಿದ್ದಾರೆ. ಕಲಿಸುತ್ತಾ ಕಲಿಯುವವನು ನಿಜವಾದ ಶಿಕ್ಷಕ. ಅದು ಎಲ್ಲಾ ಮೇಷ್ಟ್ರು ಗಳ ಜವಾಬ್ದಾರಿಯಾಗಿದೆ” ಎಂದು ಬರಗೂರು ಹೇಳಿದರು.

“ಕನ್ನಡ ಮೇಷ್ಟ್ರ ಗಳ ಜವಾಬ್ದಾರಿ ಅದಕ್ಕಿಂತ ಅಧಿಕವಾಗಿದ್ದು, ಆರ್ಥಿಕ ಭ್ರಷ್ಟಾಚಾರದಂತೆ ಭಾಷಿಕ ಭ್ರಷ್ಟಾಚಾರ ನಡೆಯುತ್ತಿದೆ. ಭಾಷಿಕ ಹಿಂಸೆ ನಡೆಯುತ್ತಿದೆ, ಕನ್ನಡ ಭಾಷೆ ಉಳಿಸುವ ಜೊತೆಗೆ ಮನುಷ್ಯನಿಗೆ ಮೌಲ್ಯ ತಿಳಿಸುವುದು ಶಿಕ್ಷಣದಿಂದ ಮಾತ್ರ ಸಾಧ್ಯ. ಆ ಜವಾಬ್ದಾರಿ ಮೇಷ್ಟ್ರು ಗಳ ಮೇಲಿದೆ” ಎಂದು ಬರಗೂರು ಅವರು ತಿಳಿಸಿದರು.

ಇದನ್ನೂ ಓದಿ: ಅದಾನಿ ಕುರಿತ ರಾಹುಲ್ ಪತ್ರಿಕಾಗೋಷ್ಠಿಯಲ್ಲಿ ‘ಗಲಾಟೆ ಸೃಷ್ಟಿಸಲು’ ಪತ್ರಕರ್ತನಿಗೆ ಒತ್ತಡ ಹೇರಿದ ಎನ್‌ಡಿಟಿವಿ!: ರಾಜೀನಾಮೆ

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಎನ್.ಬಿ.ಗೋಪಾಲಗೌಡ ಮಾತನಾಡಿ, “ಮೊಬೈಲ್ ರೀತಿಯಲ್ಲಿ ಎಲ್ಲರೂ ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗುತ್ತಿರಬೇಕು. ಪಠ್ಯಪುಸ್ತಕಗಳು ಹೊರತು ಪಡಿಸಿದ ಸಾಹಿತ್ಯದ ಅಂಶಗಳನ್ನು ತಿಳಿಸಿದಾಗ ಮಾತ್ರವೇ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಮೇಲೆ ಆಸಕ್ತಿ ಬೆಳೆಯಲು ಸಾಧ್ಯ. ಮಕ್ಕಳಿಗೆ ಒಳ್ಳೆಯ ಮೌಲ್ಯಗಳನ್ನು ತಿಳಿಸಬೇಕು. ಅಂಕ ಗಳಿಸುವುದು ಅಷ್ಟೇ ಬದುಕು ಅಲ್ಲ ಅದನ್ನು ಮೀರಿದ ಬದುಕು ಇದೆ ಎಂಬುದನ್ನು ಶಿಕ್ಷಕರು ಮಕ್ಕಳಲ್ಲಿ ತುಂಬಬೇಕು‌” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಜೆ.ಜಿ.ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶಿವಣ್ಣ, ಎ.ರಾಜಾ, ಚಿಕ್ಕದೇವೇಗೌಡ ಅವರು ಕಾರ್ಯಾಗಾರ ನಡೆಸಿಕೊಟ್ಟರು.

ಜಿಪಂ ಉಪ ಕಾರ್ಯದರ್ಶಿ ಶಿವಕುಮಾರ್, ಡಿಡಿಪಿಐ ಕೃಷ್ಣಮೂರ್ತಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಡಾ.ಆರ್.ಶಂಕರಪ್ಪ, ಪತ್ರಕರ್ತ ಕೆ.ಎಸ್.ಗಣೇಶ್, ಜಿಲ್ಲಾ ಕೋಶಾಧ್ಯಕ್ಷ ವಿನಯ್ ಗಂಗಾಪುರ್, ಶಂಕರೇಗೌಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವೆಂಕಟೇಶ್ ಮತ್ತು ತಂಡದವರು ಪ್ರಾರ್ಥಿಸಿದರು. ವಿಷಯ ಪರಿವೀಕ್ಷಕಿ ಪಿ.ವಿ.ಗಾಯತ್ರಿ ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು.

ವಿಡಿಯೊ ನೋಡಿ: ಗೌರಿ ಕೊಂದವರು ಯಾರು? ಕೇಸ್ ಎಲ್ಲಿಗೆ ಬಂತು? – ವಿಶ್ಲೇಷಣೆ : ಕೆ.ನೀಲಾ Janashakthi Media

Donate Janashakthi Media

Leave a Reply

Your email address will not be published. Required fields are marked *