ಚೆನ್ನೈ: ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿ ಎಂದು ಹೇಳಿಕೊಂಡಿದ್ದ ವ್ಯಕ್ತಿಯನ್ನು ಲಂಚದ ಆರೋಪದ ಮೇಲೆ ದಿಂಡಿಗಲ್‌ನಲ್ಲಿ ಶುಕ್ರವಾರ ಬಂಧಿಸಲಾಗಿದೆ. ವ್ಯಕ್ತಿಯನ್ನು ಅಂಕಿತ್ ತಿವಾರಿ ಎಂದು ಗುರುತಿಸಲಾಗಿದ್ದು, ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ (ಡಿವಿಎಸಿ) ಈಗ ಈ ವ್ಯಕ್ತಿ ನಿಜವಾಗಿಯೂ ಇಡಿ ಅಧಿಕಾರಿಯೇ ಎಂದು ತನಿಖೆ ನಡೆಸುತ್ತಿದೆ ಎಂದು ಆರಂಭಿಕ ವರದಿಗಳು ಹೇಳಿವೆ.
ಆರೋಪಿಯಿಂದ 20 ಲಕ್ಷ ರೂಪಾಯಿ ಮೌಲ್ಯದ ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ದಿಂಡಿಗಲ್‌ನಲ್ಲಿ ವೈದ್ಯರೊಬ್ಬರಿಂದ 20 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ. ಆರೋಪಿಯ ರುಜುವಾತುಗಳನ್ನು ದೃಢೀಕರಿಸುವ ಅಧಿಕೃತ ಹೇಳಿಕೆಯನ್ನು DVAC ಇನ್ನಷ್ಟೆ ನೀಡಬೇಕಿದೆ. “ಅಂಕಿತ್ ಮತ್ತು ಅವರ ಆರೋಪಿತ ತಂಡವು ಲಂಚ ನೀಡಿದರೆ ಪ್ರಕರಣಗಳನ್ನು ಮುಕ್ತಾಯಗೊಳಿಸುವುದಾಗಿ ಹೇಳಿ ಅನೇಕ ವ್ಯಕ್ತಿಗಳಿಂದ ಬೆದರಿಸಿ ಲಂಚ ಪಡೆದಿದ್ದಾರೆ” ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ಗ್ರಾಮ ಪಂಚಾಯತ್ ಮುಖ್ಯ ಪುಸ್ತಕ ಬರಹಗಾರರ ಪ್ರತಿಭಟನೆ
ಡಿವಿಎಸಿ ಅಧಿಕಾರಿಗಳು ದಿಂಡಿಗಲ್-ಮದುರೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಕಿತ್ ಅವರ ಕಾರನ್ನು ತಡೆದು, ಅಲ್ಲಿಯೆ ಅವರನ್ನು ಬಂಧಿಸಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ. ಅಂಕಿತ್ ಅವರನ್ನು ತಡೆದು ನಗದು ಪತ್ತೆ ಮಾಡುವ ಮೊದಲೆ DVAC ಗೆ ಅವರ ಬಗ್ಗೆ ಸುಳಿವು ಸಿಕ್ಕಿತ್ತು ಎಂದು ತಮಿಳು ಸುದ್ದಿ ವಾಹಿನಿ ಪುಥಿಯಾತಲೈಮುರೈ ವರದಿ ಹೇಳಿದೆ. ದಿಂಡಿಗಲ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮತ್ತು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಪ್ರಸ್ತುತ ದಿಂಡಿಗಲ್‌ನಲ್ಲಿರುವ ಇಡಿ ಪ್ರಾದೇಶಿಕ ಕಚೇರಿಯಲ್ಲಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಾಯಕರು ಮತ್ತು ಅವರ ವೈಯಕ್ತಿಕ ಸಹಚರರ ಮೇಲೆ ಇಡಿ ದಾಳಿ ನಡೆಸಿದ ತಿಂಗಳ ನಂತರ ಆಪಾದಿತ ಲಂಚದ ದಂಧೆ ಪತ್ತೆಯಾಗಿದೆ ಎಂಬುದು ಗಮನಾರ್ಹವಾಗಿದೆ. ಉದ್ಯೋಗಕ್ಕಾಗಿ ಲಂಚ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಮಾಜಿ ಸಚಿವ ವಿ. ಸೆಂಥಿಲ್ ಬಾಲಾಜಿ ಅವರನ್ನು ಈ ವರ್ಷದ ಆರಂಭದಲ್ಲಿ ಇಡಿ ಬಂಧಿಸಿತ್ತು.
ಇದನ್ನೂ ಓದಿ: ಗಂಗಾವತಿ | ಅಂಧ ಮುಸ್ಲಿಂ ವೃದ್ಧನಿಗೆ ಜೈ ಶ್ರೀರಾಮ್ ಹೇಳುವಂತೆ ಒತ್ತಾಯಿಸಿ ಗಡ್ಡಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಜುಲೈನಲ್ಲಿ ಉನ್ನತ ಶಿಕ್ಷಣ ಸಚಿವ ಕೆ. ಪೊನ್ಮುಡಿ ಅವರ ವಿಲ್ಲುಪುರಂ ಮನೆಯಲ್ಲಿ ಇಡಿ ದಾಳಿ ನಡೆಸಿತ್ತು. ಪೊನ್ಮುಡಿ ಅವರು ಆದಾಯಕ್ಕೆ ಮೀರಿದ ಆಸ್ತಿಗಳನ್ನು ಹೊಂದಿದ್ದ ಕಾರಣಕ್ಕೆ ಅವರ ವಿರುದ್ಧದ ಮೊಕದ್ದಮೆಯನ್ನು ಮದ್ರಾಸ್ ಹೈಕೋರ್ಟ್ ಪುನಃ ತೆರೆದ ನಂತರ ಪೊನ್ಮುಡಿ ಮತ್ತಷ್ಟು ಪರಿಶೀಲನೆಗೆ ಒಳಗಾಗಿದ್ದರು.
ಈ ವರ್ಷದ ನವೆಂಬರ್‌ನಲ್ಲಿ, ರಾಜಸ್ಥಾನ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಸ್ರಾ ಅವರ ಪುತ್ರರಿಗೆ ಇಡಿ ಸಮನ್ಸ್ ನೀಡಿದ ಒಂದು ದಿನದ ನಂತರ, ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಇಬ್ಬರು ಇಡಿ ಅಧಿಕಾರಿಗಳನ್ನು ಲಂಚದ ಆರೋಪದ ಮೇಲೆ ಬಂಧಿಸಿತ್ತು. ಪರೀಕ್ಷಾ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಗೋವಿಂದ್ ಅವರ ಮಕ್ಕಳಾದ ಅಭಿಲಾಷ್ ಮತ್ತು ಅವಿನಾಶ್ ಅವರಿಗೆ ಇಡಿ ಸಮನ್ಸ್ ನೀಡಿತ್ತು.
ವಿಡಿಯೊ ನೋಡಿ: ‘ತಪ್ಪುಗಳನ್ನುಪ್ರಶ್ನಿಸಿದವರನ್ನು ಭಯೋತ್ಪದಕ’, ಎಂದು ಹೇಳುವ ಸರ್ಕಾರವನ್ನು ಕಿತ್ತೆಸೆಯಬೇಕು – ಕೆ.ಎನ್. ಉಮೇಶ್