ಹೈದ್ರಾಬಾದ್: ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಪ್ಲ್ಯಾಟ್ಫಾರ್ಮ್ ಗಳ ಪ್ರಚಾರಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ವಿಜಯ್ ದೇವರಕೊಂಡ ಮತ್ತು ರಾಣಾ ದಗ್ಗುಬಾಟಿ ಸೇರಿದಂತೆ 29 ಸೆಲೆಬ್ರಿಟಿಗಳ ವಿರುದ್ಧ ಇ.ಡಿ ಪ್ರಕರಣ ದಾಖಲಿಸಿದೆ.
ಆನ್ ಲೈನ್ ಬೆಟ್ಟಿಂಗ್
29 ಆನ್‌ಲೈನ್ ಬೆಟ್ಟಿಂಗ್ ಪ್ಲ್ಯಾಟ್ಫಾರ್ಮ್ಸ್ ಮೂಲಕ ಅಕ್ರಮ ಹಣ ವರ್ಗಾವಣೆಯಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಜನಪ್ರಿಯ ಸೆಲೆಬ್ರಿಟಿಗಳಾದ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ ಮತ್ತು ಪ್ರಕಾಶ್ ರಾಜ್, ಪ್ರಣಿತಾ ಸುಭಾಷ್ ಸೇರಿದಂತೆ 29 ಮಂದಿ ವಿರುದ್ಧ ಜಾರಿ ನಿರ್ದೇಶನಾಲಯ (ED) ಪ್ರಕರಣ ದಾಖಲಿಸಿದೆ. ವಿಜಯ
ತೆಲಂಗಾಣ ಪೊಲೀಸರು, ವಿಶೇಷವಾಗಿ ಹೈದರಾಬಾದ್ ಪೊಲೀಸರು ಹಲವಾರು ಎಫ್‌ಐಆರ್‌ಗಳನ್ನು ದಾಖಲಿಸಿದ ನಂತರ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ತನಿಖೆ ಸಾಗಿದೆ.
ಇದನ್ನೂ ಓದಿ: ಟಿ. ರಾಜಾ ಸಿಂಗ್ ರಾಜೀನಾಮೆ ಅಂಗೀಕರಿಸಿದ ಜೆ.ಪಿ. ನಡ್ಡಾ
ಬಳಕೆದಾರರನ್ನು ವಂಚಿಸುವ ಮತ್ತು ಜೂಜಾಟಗಳ ಮೂಲಕ ಕೋಟಿ ಗಟ್ಟಲೆ ಹಣವನ್ನು ಅಕ್ರಮವಾಗಿ ವರ್ಗಾಯಿಸುವ ಆರೋಪ ಹೊತ್ತಿರುವ ಜಂಗ್ಲೀ ರಮ್ಮಿ, ಜೀಟ್‌ವಿನ್ ಮತ್ತು ಲೋಟಸ್365 ನಂತಹ ಬೆಟ್ಟಿಂಗ್ ಪ್ಲ್ಯಾಟ್ಫಾರ್ಮ್ ಗಳನ್ನು ಸೆಲೆಬ್ರಿಟಿಗಳು ಪ್ರಚಾರ ಮಾಡಿದ್ದಾರೆ ಎನ್ನುವ ಆರೋಪವಿದೆ.
ಇ ಡಿ ಮೂಲಗಳ ಪ್ರಕಾರ, ಈ ಸೆಲೆಬ್ರಿಟಿಗಳು ಮತ್ತು ಪ್ರಭಾವಿ ವ್ಯಕ್ತಿಗಳು ತಾವು ಪ್ರಚಾರ ಮಾಡಿದ ಆನ್ಲೈನ್ ಪ್ಲ್ಯಾಟ್ಫಾರ್ಮ್ಗಳ ಸಂಪೂರ್ಣ ಕಾನೂನುಬದ್ಧತೆಯನ್ನು ಅರ್ಥಮಾಡಿಕೊಳ್ಳದೇ ದೊಡ್ಡ ಪ್ರಮಾಣದ ಹಣ (ಅನುಮೋದನೆ ಶುಲ್ಕ) ಪಡೆದಿರಬಹುದು.
ಇಲ್ಲಿ ಉಲ್ಲೇಖಿಸಲಾದ ಕೆಲವು ಹೆಸರುಗಳಲ್ಲಿ ನಟಿಯರಾದ ನಿಧಿ ಅಗರ್ವಾಲ್, ಮಂಚು ಲಕ್ಷ್ಮಿ, ಪ್ರಣಿತಾ ಸುಭಾಷ್ ಮತ್ತು ಕಿರುತೆರೆ ನಿರೂಪಕಿ ಶ್ರೀಮುಖಿ ಹಾಗೂ ಹರ್ಷ ಸಾಯಿ ಅವರಂತಹ ಪ್ರಭಾವಿಗಳು ಸೇರಿದ್ದಾರೆ. ಸೆಲೆಬ್ರಿಟಿಗಳ ಜಾಹೀರಾತುಗಳು ಬಳಕೆದಾರರ ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ ಎಂದು ಆರೋಪಿಸಿ ಉದ್ಯಮಿ ಫಣೀಂದ್ರ ಶರ್ಮಾ ಅವರು ನೀಡಿದ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಕೆಲ ಆರೋಪಿಗಳು ಈ ವೇದಿಕೆಗಳು ಕಾನೂನುಬಾಹಿರವೆಂದು ತಮಗೆ ತಿಳಿದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಸಂಬಂಧಪಟ್ಟ ಸಂಸ್ಥೆಯು ಅವರ ಹಣಕಾಸಿನ ವಹಿವಾಟುಗಳನ್ನು ಪರಿಶೀಲಿಸುತ್ತಿರುವುದರಿಂದ ಮತ್ತು ಮುಂಬರುವ ದಿನಗಳಲ್ಲಿ ಎಲ್ಲಾ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡುವ ಸಾಧ್ಯತೆ ಇರುವುದರಿಂದ, ಉದ್ಯಮಿ ಫಣೀಂದ್ರ ಶರ್ಮಾ ಅವರ ದೂರು ತನಿಖೆಗೆ ಆಧಾರವಾಗಲಿದೆ. ಈ ಪ್ರಕರಣದಿಂದ, ಹಣಕಾಸು ಅಥವಾ ಗೇಮಿಂಗ್ ಉತ್ಪನ್ನಗಳನ್ನು ಅನುಮೋದಿಸುವ ಸೆಲೆಬ್ರಿಟಿಗಳು ಅಥವಾ ಹೆಸರಾಂತರ ಪಾತ್ರದ ಕುರಿತಾಗಿ ಚರ್ಚೆ ಜೋರಾಗಿದೆ.
ಈ ಅಪ್ಲಿಕೇಶನ್‌ಗಳಲ್ಲಿ “ಅಪರಾಧದ ಆದಾಯ”ದ ಪ್ರಮಾಣ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಗೆ ಸಹಾಯ ಮಾಡುವಲ್ಲಿ ಸೆಲೆಬ್ರಿಟಿಗಳ ಪಾತ್ರವನ್ನು ಖಚಿತಪಡಿಸಿಕೊಳ್ಳುವುದು ಇ.ಡಿಯ ಮುಂದಿನ ಕ್ರಮವಾಗಿದೆ.
ಇದನ್ನೂ ನೋಡಿ: ಸಾರ್ವತ್ರಿಕ ಮುಷ್ಕರ | ಕೇಂದ್ರ – ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ಸಿಡಿದೆದ್ದ ರೈತ – ಕಾರ್ಮಿಕರು Janashakthi
