ದೆಹಲಿ ಅಬಕಾರಿ ನೀತಿ ಹಗರಣ: ಮೊದಲ ಆರೋಪಪಟ್ಟಿ ಸಲ್ಲಿಸಿದ ಜಾರಿ ನಿರ್ದೇಶನಾಲಯ

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಮೊದಲ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ.

3000 ಪುಟಗಳ ದೋಷಾರೋಪ ಪಟ್ಟಿಯನ್ನು ಸಿದ್ದಪಡಿಸಿರುವ ಇಡಿ ಸಂಸ್ಥೆಯು ಆರೋಪಿಗಳ ಹೇಳಿಕೆಗಳು, ದಾಳಿ ವಿವರಗಳು ಮುಂತಾದ ಮಾಹಿತಿಯನ್ನು ನೀಡಲಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ವಿವಿಧ ಸೆಕ್ಷನ್‌ಗಳನ್ನು ಉಲ್ಲೇಖಿಸಲಾಗಿದೆ.

ಪ್ರಮುಖ ಆರೋಪಿಗಳಲ್ಲಿ ಮದ್ಯದ ಉದ್ಯಮಿ ಸಮೀರ್ ಮಹೇಂದ್ರು ಅವರನ್ನು ಹೆಸರಿಸಲಾಗಿದೆ. ಇಂಡೋ ಸ್ಪಿರಿಟ್ ಪ್ರವರ್ತಕ ಮಹೇಂದ್ರು ಜೊತೆಗೆ ಇನ್ನು ಇಬ್ಬರನ್ನೂ ಆರೋಪಿಗಳೆಂದು ಇಡಿ ಸಂಸ್ಥೆ ಉಲ್ಲೇಖಿಸಿದೆ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಇದುವರೆಗೆ ಒಟ್ಟು ಐವರನ್ನು ಬಂಧಿಸಿದೆ. ವಿಚಾರಣೆಯ ನಂತರ ಸೆಪ್ಟೆಂಬರ್ 27 ರಂದು ಮಹೇಂದ್ರು ಅವರನ್ನು ಬಂಧಿಸಿತ್ತು.

ದೆಹಲಿ ಅಬಕಾರಿ ನೀತಿ ನಿರೂಪಣೆಯಲ್ಲಿ ಜಿಎನ್‌ಸಿಟಿಡಿ (ದೆಹಲಿಯ ರಾಷ್ಟ್ರೀಯ ರಾಜಧಾನಿ ಸರ್ಕಾರದ ತಿದ್ದುಪಡಿ ಕಾಯ್ದೆ) 1991, ಉದ್ಯಮಗಳ ವಹಿವಾಟು ಕಾಯ್ದೆ-1993, ದೆಹಲಿ ಅಬಕಾರಿ ಕಾಯಿದೆ-2009 ಮತ್ತು 2010ರ ದೆಹಲಿ ಅಬಕಾರಿ ನಿಯಮಗಳ ಕಾಯ್ದೆಯ ನಿಯಮಗಳ ಉಲ್ಲಂಘನೆ ಮೇಲ್ನೋಟಕ್ಕೆ ಕಂಡುಬಂದಿರುವ ಬಗ್ಗೆ ದೆಹಲಿ ಮುಖ್ಯ ಕಾರ್ಯದರ್ಶಿ ನೀಡಿದ್ದ ವರದಿಯ ಆಧಾರದ ಮೇಲೆ ಸಿಬಿಐ ತನಿಖೆಗೆ ಶಿಫಾರಸು ಮಾಡಲಾಗಿತ್ತು.

ದೆಹಲಿ ಲೆಫ್ಟಿನೆಂಟ್ ಗವರ್ನರ್ ಅವರ ಶಿಫಾರಸಿನ ಮೇರೆಗೆ ದಾಖಲಾಗಿರುವ ಸಿಬಿಐ ಎಫ್‌ಐಆರ್‌ನ ನಂತರ ದಾಖಲಾದ ಈ ಪ್ರಕರಣದಲ್ಲಿ ಇದುವರೆಗೆ 169 ಶೋಧ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *