ಬಿಜೆಪಿ ಅಭ್ಯರ್ಥಿ ಕಾರಲ್ಲಿ ಇವಿಎಂ ಪತ್ತೆ: ನಾಲ್ಕು ಅಧಿಕಾರಿಗಳ ಅಮಾನತು

ನವದೆಹಲಿ: ನೆನ್ನೆ ಅಸ್ಸಾಂನಲ್ಲಿ ಎರಡನೇ ಹಂತದ ಮತದಾನ ಮುಕ್ತಾಯವಾದ ಕೆಲವೇ ಗಂಟೆಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿ ವಿದ್ಯುನ್ಮಾನ ಮತ ಯಂತ್ರ(ಇವಿಎಂ)ಗಳನ್ನು ಸಾಗಿಸುತ್ತಿದ್ದ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಚುನಾವಣಾ ಆಯೋಗವು ನಾಲ್ಕು ಜನ ಪೋಲಿಂಗ್‌ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಬಿಜೆಪಿ ಶಾಸಕ ಕೃಷ್ಣೆಂದು ಪೌಲ್‌ ಅವರಿಗೆ ಸೇರಿದ ವಾಹನದಲ್ಲಿ ಇವಿಎಂ ಸಾಗಿಸುತ್ತಿರುವುದು ಕಂಡುಬಂದಿದೆ. ಕರೀಂ ಗಂಜ್‌ ನಲ್ಲಿ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಮರು ಮತದಾನಕ್ಕೆ ಆದೇಶಿಸಲಾಗಿದೆ ಮತ್ತು ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸುವ ಸಾಧ್ಯತೆಯಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಮತಗಟ್ಟೆ 149–ಇಂದಿರಾ ಎಂವಿ ಸ್ಕೂಲ್‌ ಎಲ್‌ಎಸಿ 1 ರತಾಬಾರಿ (ಎಸ್‌ಸಿ) ವಲಯದಲ್ಲಿ ನಿಯೋಜನೆಯಾಗಿದ್ದ ಅಧಿಕಾರಿಗಳು ಅಮಾನತಗೊಂಡಿದ್ದಾರೆ. ಮತಗಟ್ಟೆ ಅಧಿಕಾರಿ ಮತ್ತು ಮೂವರು ಮತಗಟ್ಟೆ ಸಿಬ್ಬಂದಿ ಜೊತೆಗೆ ಪೊಲೀಸ್‌ ಕಾನ್‌ಸ್ಟೆಬಲ್‌ ಮತ್ತು ಹೋಂಗಾರ್ಡ್‌ ಇದ್ದರು ಎಂದು ಚುನಾವಣಾ ಆಯೋಗ ತಿಳಿಸಿದೆ.

‘ಸಾರಿಗೆ ಶಿಷ್ಟಾಚಾರದ ಉಲ್ಲಂಘನೆಗಾಗಿ ಮತಗಟ್ಟೆ ಅಧಿಕಾರಿಗೆ ಷೊಕಾಸ್‌ ನೋಟಿಸ್‌ ಜಾರಿ ಮಾಡಲಾಗಿದೆ. ಮತಗಟ್ಟೆ ಅಧಿಕಾರಿ ಮತ್ತು ಇತರೆ ಮೂವರು ಸಿಬ್ಬಂದಿಯನ್ನು ಅಮಾನತಿನಲ್ಲಿಡಲಾಗಿದೆ. ಇವಿಎಂಗಳಿಗೆ ಯಾವುದೇ ಹಾನಿಯಾಗದಿದ್ದರೂ, ಮತಗಟ್ಟ ಸಂಖ್ಯೆ 149ರಲ್ಲಿ ಮರುಮತದಾನ ನಡೆಸಲಾಗುತ್ತದೆ’ ಎಂದು ಚುನಾವಣಾ ಆಯೋಗ ಹೇಳಿದೆ.

ಮತದಾನ ನಡೆದ ಮರು ದಿನ ಹಿಂಸಾಚಾರ ಸಂಭವಿಸಿದ್ದು, ಸ್ಥಳೀಯರು ಚುನಾವಣಾಧಿಕಾರಿಗಳು ಶಾಸಕರ ಕಾರಿನಲ್ಲಿ ಪ್ರಯಾಣಿಸುತ್ತಿರುವುದನ್ನು ಕಂಡಿದ್ದಾರೆ. ಶಾಸಕರಿಗೆ ಸೇರಿದ್ದ ಮಹೀಂದ್ರಾ ಬೊಲೆರೋ ಕಾರಿನಲ್ಲಿ ಇವಿಎಂ ಮತಯಂತ್ರಗಳನ್ನು ಮತದಾನ ನಡೆದ ನಂತರ ಭದ್ರತಾ ಕೋಣೆಗಳಿಗೆ ಸಾಗಿಸಲಾಗಿದೆ. ಅಸ್ಸಾಂ ಮೂಲದ ಪತ್ರಕರ್ತ ಅತಾನು ಭುಯಾನ್‌ ಮತಯಂತ್ರಗಳು ಇರುವ ಕಾರಿನ ವಿಡಿಯೊವೊಂದನ್ನು ಟ್ವೀಟ್‌ ಮಾಡಿದ್ದಾರೆ. ‘ಈ ಘಟನೆಯ ಬಳಿಕ ಪಥರ್‌ಕಾಂಡಿ ಕ್ಷೇತ್ರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ’ ಎಂದಿದ್ದಾರೆ.

ಸ್ಥಳೀಯರು ಕಾರನ್ನು ತಡೆದು ವಾಹನದಲ್ಲಿ ಇದ್ದವರೊಂದಿಗೆ ತೀವ್ರವಾದ ವಾಗ್ವಾದ ನಡೆಸಿದ್ದಾರೆ. ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದರಿಂದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗುಂಪನ್ನು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಕಾರಿನ ಮೇಲೆ ದಾಳಿ ನಡೆದಿರುವ ಬಗ್ಗೆ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಬಿಜೆಪಿಯ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸುತ್ತಿವೆ.

ಕಾಂಗ್ರೆಸ್‌ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ಅವರು ‘ಇಂಥ ದೂರುಗಳ ಬಗ್ಗೆ ಚುನಾವಣಾ ಆಯೋಗ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಇವಿಎಂಗಳ ಬಳಕೆಗೆ ಸಂಬಂಧಿಸಿದಂತೆ ಎಲ್ಲ ರಾಷ್ಟ್ರೀಯ ಪಕ್ಷಗಳು ಮತ್ತೆ ಪರಿಶೀಲನೆ ನಡೆಸಬೇಕಾದ ಅಗತ್ಯವಿದೆ’ ಎಂದು ಒತ್ತಾಯಿಸಿದ್ದಾರೆ.

‘ಪ್ರತಿ ಬಾರಿಯೂ ಚುನಾವಣೆಯ ಸಂದರ್ಭದಲ್ಲಿ ಇವಿಎಂಗಳನ್ನು ಸಾಗಿಸುತ್ತಿರುವ ಖಾಸಗಿ ವಾಹನಗಳ ಕುರಿತು ವಿಡಿಯೊಗಳು ಲಭ್ಯವಾಗುತ್ತವೆ.

  1. ಸೆರೆಹಿಡಿಯಲಾಗಿರುವ ವಿಡಿಯೊದಲ್ಲಿ ಕಾಣುವ ವಾಹನಗಳು ಸಾಮಾನ್ಯವಾಗಿ ಬಿಜೆಪಿ ಅಭ್ಯರ್ಥಿ ಅಥವಾ ಅವರ ಸಹಚರರದ್ದಾಗಿರುತ್ತವೆ.
  2. ಇಂಥ ಘಟನೆಗಳಿಗೆ ಸಂಬಂಧಿಸಿದ ವಿಡಿಯೊಗಳನ್ನು ನಿರ್ಲಕ್ಷಿಸಲಾಗುತ್ತದೆ.
  3. ಸೋಲಿನ ಭಯದಿಂದ ವಿಡಿಯೊ ಬಹಿರಂಗ ಪಡಿಸಿದ್ದಾರೆ ಎಂದು ಬಿಜೆಪಿ ತನ್ನ ಮಾಧ್ಯಮಗಳ ಮೂಲಕ ಆರೋಪಿಸುತ್ತದೆ’ ಎಂದು ಪ್ರಿಯಾಂಕಾ ಗಾಂಧಿ ಟ್ವೀಟಿಸಿದ್ದಾರೆ.

ಅಸ್ಸಾಂನಲ್ಲಿ ಗುರುವಾರ ನಡೆದ ಎರಡನೇ ಹಂತದಲ್ಲಿ 39 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆಯಿತು. ಸಂಜೆ 6ರ ಹೊತ್ತಿಗೆ ಒಟ್ಟು ಶೇ 73.03ರಷ್ಟು ಮತದಾನ ದಾಖಲಾಗಿದೆ.

Donate Janashakthi Media

Leave a Reply

Your email address will not be published. Required fields are marked *