ಇವಿಎಂ ವಿವಾದ: ಚುನಾವಣಾ ಆಯೋಗ  ಸುಪ್ರೀಂಗೆ ಅರ್ಜಿ

ನವದೆಹಲಿ: ಏಪ್ರಿಲ್‍ನಿಂದ ಮೇ ತಿಂಗಳಿನಲ್ಲಿ ನಡೆದ ಅಸ್ಸಾಂ, ಕೇರಳ, ದೆಹಲಿ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಸೇರಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಮತಯಂತ್ರಗಳನ್ನು ಹಾಗೂ ವಿವಿಪ್ಯಾಟ್‌ಗಳನ್ನು ತಕರಾರು ಅರ್ಜಿಗಳ ಕಾರಣಗಳಿಂದಾಗಿ ಪುನಃ ಬಳಕೆ ಮಾಡಲು ಆಗುತ್ತಿಲ್ಲ. ಇವುಗಳ ಬಳಕೆಗೆ ಅನುಕೂಲವಾಗುವಂತೆ ವಿಚಾರಣೆ ಕೈಗೊಂಡು ತ್ವರಿತಗೊಳಿಸುವಂತೆ ಕೋರಿ ಚುನಾವಣಾ ಆಯೋಗವು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಚುನಾವಣಾ ಆಯೋಗದ ಅರ್ಜಿಯನ್ನು ಪುರಸ್ಕರಿಸಿರುವ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ ಹಾಗೂ ಎ.ಎಸ್‌.ಬೋಪಣ್ಣ ಅವರಿದ್ದ ವಿಭಾಗೀಯ ನ್ಯಾಯಪೀಠವು ಮುಂದಿನ ವಾರ ವಿಚಾರಣೆ ನಡೆಸುವುದಾಗಿ ಹೇಳಿದೆ.

ಇದನ್ನು ಓದಿ: ಬಿ.ವಿ.ನಾಗರತ್ನ ಸೇರಿ ಒಂಬತ್ತು ಮಂದಿ ನೂತನ ಸುಪ್ರೀಂ ನ್ಯಾಯಮೂರ್ತಿಗಳ ಪ್ರಮಾಣ ವಚನ ಸ್ವೀಕಾರ

‘ಚುನಾವಣಾ ತಕರಾರು ಅರ್ಜಿಗಳ ಹಿನ್ನೆಲೆಯಲ್ಲಿ ಭಾರಿ ಸಂಖ್ಯೆಯಲ್ಲಿ ಇವಿಎಂಗಳು ಹಾಗು ವಿವಿಪ್ಯಾಟ್‌ಗಳನ್ನು ಸಂರಕ್ಷಿಸಿ ಇಡಲಾಗಿದೆ. ತಕರಾರು ಅರ್ಜಿಗಳ ವಿಲೇವಾರಿಯಾಗದೇ ಇವುಗಳನ್ನು ಬಳಕೆ ಮಾಡುವಂತಿಲ್ಲ. ಹೀಗಾಗಿ ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದು ಆಯೋಗದ ಪರವಾಗಿ ಹಿರಿಯ ವಕೀಲ ವಿಕಾಸ್‌ ಸಿಂಗ್ ನ್ಯಾಯಾಲಯಕ್ಕೆ ಮನವಿ ಮಾಡಿದರು.

‘ಈಗಾಗಲೇ ಚುನಾವಣೆಗಳು ನಡೆದಿರುವ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣಾ ಸಂಬಂಧಿಸಿ ತಕರಾರು ಅರ್ಜಿಗಳನ್ನು ಸಲ್ಲಿಸಲು ಕಾಲಮಿತಿ ನಿಗದಿ ಮಾಡಬೇಕು ಎಂದೂ ಅವರು ಮನವಿ ಮಾಡಿದರು.

‘ಮುಂದಿನ ವರ್ಷ ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ಪಂಜಾಬ್‌ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದ್ದು, ಈ ಮತಯಂತ್ರಗಳು, ವಿವಿಪ್ಯಾಟ್‌ಗಳ ಅಗತ್ಯವಿದೆ’ ಎಂದು ಅವರು ಕೋರ್ಟ್‌ ಗಮನಕ್ಕೆ ತಂದರು.

Donate Janashakthi Media

Leave a Reply

Your email address will not be published. Required fields are marked *